An unconventional News Portal.

ಟಿ-20 ವಿಶ್ವಕಪ್: ಕ್ರಿಕೆಟ್ ಸೋತಾಗ ಗೆದ್ದಿದ್ದು ವೆಸ್ಟ್ ಇಂಡೀಸ್!

ಟಿ-20 ವಿಶ್ವಕಪ್: ಕ್ರಿಕೆಟ್ ಸೋತಾಗ ಗೆದ್ದಿದ್ದು ವೆಸ್ಟ್ ಇಂಡೀಸ್!

ನಾನು ದೇವರಿಗೆ ಕೃತಜ್ಞತೆ ಸಲ್ಲಿಸಲು ಇಷ್ಟಪಡುತ್ತೇನೆ, ಯಾಕೆಂದರೆ ಅವನಿಲ್ಲದಿದ್ದರೆ ಯಾವುದೂ ಸಾಧ್ಯವಿಲ್ಲ. ನಮ್ಮ ತಂಡ ಜತೆ ಪಾಸ್ಟರ್ ಒಬ್ಬರು ಇದ್ದಾರೆ; ಅವರು ನಮಗಾಗಿ ಪ್ರಾರ್ಥನೆ ಸಲ್ಲಿಸುತ್ತಲೇ ಬಂದರು. ಇವತ್ತಿನ ಪ್ರದರ್ಶನ ನೋಡುತ್ತಿದ್ದರೆ, ಟಿ-20 ವಿಚಾರದಲ್ಲಿ ಕೆರೆಬಿಯನ್ ದೇಶದ ಸಾಮರ್ಥ್ಯ ಏನು ಎಂಬುದು ಗೊತ್ತಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಏಕ ದಿನ ಹಾಗೂ ಟೆಸ್ಟ್ ಆಟದಲ್ಲೂ ಸುಧಾರಣೆ ಕಾಣಲಿದ್ದೇವೆ. ನಾವು ಈ ಪಂದ್ಯಾವಳಿಯನ್ನು ಆಡುವುದರ ಬಗ್ಗೆಯೇ ಅನುಮಾನಗಳಿದ್ದವು. ಅದಕ್ಕೂ ನಮ್ಮ ಕ್ರಿಕೆಟ್ ಮಂಡಳಿಯಿಂದ ಅವಮರ್ಯಾದೆ ಅನುಭವಿಸಿದೆವು. ಬುದ್ದಿ ಇಲ್ಲದ ತಂಡ ಎಂದು ಹೀಯಾಳಿಸಿದ್ದರು. ಇಂತಹ ಹಲವು ವಿಷಯಗಳ ನಡುವೆಯೇ ಪಂದ್ಯಾವಳಿಗೂ ಮುನ್ನ ಈ 15 ಜನ ಒಟ್ಟಾದೆವು. ನಾವು ದುಬೈ ಕ್ಯಾಂಪಿನಲ್ಲಿ ಇರುವಾಗ ನಮ್ಮ ಬಳಿ ಯೂನಿಫಾಂ ಕೂಡ ಇರಲಿಲ್ಲ. ಈ ತಂಡ ಮತ್ತೆ ಒಟ್ಟಾಗುತ್ತೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ನಾವು ಏಕದಿನ ಪಂದ್ಯಗಳಿಗೆ ಆಯ್ಕೆಯಾಗಿಲ್ಲ. ಮತ್ತೆಲ್ಲಿ ಟಿ- 20 ಪಂದ್ಯವನ್ನು ಆಡುತ್ತೇವೋ ಗೊತ್ತಿಲ್ಲ…

ಇದು ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಭಾನುವಾರ ರಾತ್ರಿ ಟಿ- 20 ವಿಶ್ವಕಪ್ ಕ್ರಿಕೆಟ್ ಫೈನಲ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಡೆರೆನ್ ಸಮಿಯ ಭಾವನಾತ್ಮಕ ಮಾತುಗಳ ಸಂಗ್ರಹ ರೂಪ. ಬಹುಶಃ ಟಿ-20 ಎಂದರೆ ಹುಚ್ಚೆದ್ದು ಕುಣಿಯುತ್ತಿರುವ ತಲೆಮಾರಿಗೆ ಒಂದು ಕಾಲದಲ್ಲಿ ಕ್ರಿಕೆಟ್ ಲೋಕದ ದಿಗ್ಗಜ ಎಂದು ಅನ್ನಿಸಿಕೊಂಡಿದ್ದ ಕೆರೆಬಿಯನ್ ರಾಷ್ಟ್ರದ ನಾಯಕನೊಬ್ಬ ಗೆದ್ದ ನಂತರವೂ ಹೀಗ್ಯಾಕೆ ಮಾತನಾಡಿದ ಎಂಬ ಪ್ರಶ್ನೆ ಮೂಡದೇ ಹೋಗಬಹುದು. ಜನಪ್ರಿಯತೆ ಮೂಡಿಸುವ ಕುರುಡುತನ ಹೀಗೆಯೇ ಇರುತ್ತದೆ. ಭಾರತದ ಇವತ್ತಿನ ಮಾರುಕಟ್ಟೆಯಲ್ಲಿ ಕ್ರಿಕೆಟ್ ಕೂಡ ಒಂದು ಜನಪ್ರಿಯ ಸರಕು. ಇವತ್ತಿನ ಜನಪ್ರಿಯತೆಯ ಮಾನದಂಡಗಳನ್ನು ಒಂದು ಕ್ಷಣ ಮರೆತು, 140 ವರ್ಷಗಳ ಇತಿಹಾಸ ಇರುವ ಕ್ರಿಕೆಟ್ ಎಂಬ ಕ್ರೀಡೆ ಸಾಗಿ ಬಂದ ಹಾದಿಯನ್ನೊಮ್ಮೆ ಮುಕ್ತ ಮನಸ್ಸಿನಿಂದ ನೋಡಬೇಕು. ಆಗ ಮಾತ್ರವೇ ಗೆದ್ದ ಹುಮ್ಮಸ್ಸಿನಲ್ಲಿ ಇರಬೇಕಾದ ನಾಯಕನೊಬ್ಬನ ಬಾಯಿಂದ ಇಂತಹ ಮಾತುಗಳು ಯಾಕೆ ಹೊರಬಂದವು ಎಂಬುದಕ್ಕೆ ಸುಳಿವು ಸಿಗುತ್ತದೆ.

ಟಿ-20 ಎಂಬ ಕಾಕ್ಟೇಲ್:

ಅದು 2012. ಅವತ್ತಿಗೆ ಟೆಸ್ಟ್ ಕ್ರಿಕೆಟ್ ನಿಧಾನವಾಗಿ ತನ್ನ ಪ್ರಭೆಯನ್ನು ಕಳೆದುಕೊಳ್ಳುತ್ತಿತ್ತು. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಅವರ ತವರು ನೆಲದಲ್ಲಿಯೇ ಮೂರು ಟೆಸ್ಟ್ಗಳನ್ನು ಸೋಲುವ ಮೂಲಕ ಸರಣಿಯನ್ನು ಬಿಟ್ಟು ಕೊಟ್ಟು ಬಂದಿತು. ಅದಾದ ಮೇಲೆ ಮತ್ತೆ ಭಾರತದ ಆಗಾಗ ಟೆಸ್ಟ್ ಕ್ರಿಕೆಟ್ ಆಡಿತಾದರೂ, ಭಾರತೀಯರು ಟೆಸ್ಟ್ ಕ್ರಿಕೆಟ್ ಮರೆತೇ ಹೋಗುವಂತ ವಾತಾವರಣವೊಂದನ್ನು ಸೃಷ್ಟಿಸಲಾಯಿತು. ಗ್ಲಾಮರಸ್ ಆಗಿರುವ, ಯುವ ತಲೆಮಾರಿನ ಉದ್ರೇಕಗಳನ್ನು ಇನ್ನಷ್ಟು ಮೀಟುವಂತಹ, ಬಾಲಿವುಡ್, ರಾಜಕಾರಣ ಹಾಗೂ ಕ್ರಿಕೆಟ್ ಬೆರೆಸಿದ ಕಾಕ್ಟೇಲ್ ಒಂದು ಮಾರುಕಟ್ಟೆಯಲ್ಲಿ ಬಿಕರಿಯಾಗತೊಡಗಿತ್ತು. ಅದರ ಹೆಸರೇ ಈ ಟಿ- 20.

ನಿಮಗೆ ಐಸಿಸಿ ಎಂಬ ಸಂಸ್ಥೆಯ ಬಗ್ಗೆ ಮಾಹಿತಿ ಇರಬಹುದು. ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಎಂದು ಕರೆಸಿಕೊಳ್ಳುವ ಅದರ ಕೇಂದ್ರ ಕಚೇರಿ ಮೊನ್ನೆ ಮೊನ್ನೆವರೆಗೂ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿತ್ತು. ಇತ್ತೀಚೆಗೆ ಅದು ದುಬೈಗೆ ಸ್ಥಳಾಂತರಗೊಂಡಿದೆ. ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುವ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆ. ಒಂದು ಕಾಲದಲ್ಲಿ ಟೆಸ್ಟ್ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವುದು, ಕ್ರಿಕೆಟ್ ಆಡುವ ದೇಶಗಳ ನಡುವೆ ಅನುದಾನವನ್ನು ಹಂಚಿಕೆ ಮಾಡುವುದು ಹಾಗೂ ಕ್ರಿಕೆಟ್ ಬಗ್ಗೆ ಆಸಕ್ತಿ ತೋರಿಸುವ ರಾಷ್ಟ್ರಗಳಿಗೆ ಅನುದಾನ ಹಂಚಿಕೆ ಮಾಡುವ ಕೆಲಸವನ್ನು ಐಸಿಸಿ ಮಾಡುತ್ತಿತ್ತು.

ಹೀಗಿರುವಾಗಲೇ ಭಾರತದಲ್ಲಿ ಟಿ-20 ಕ್ರಿಕೆಟ್ 2008ರಲ್ಲಿ ಜನ್ಮ ತಾಳಿತು. ಅದಕ್ಕೆ ಪ್ರೇರಣೆಯಾಗಿದ್ದು ಇಂಗ್ಲೆಂಡ್ ಮತ್ತು ವೇಲ್ಸ್ ನಡುವೆ 2003ರಲ್ಲಿ ನಡೆದ ಚುಟುಕು ಕ್ರಿಕೆಟ್ ಪಂದ್ಯಗಳು. ಭಾರತದಲ್ಲಿ ಲಲಿತ್ ಮೋದಿ ಎಂಬ ವ್ಯಕ್ತಿ ಅಗತ್ಯವಾದ ಎಲ್ಲವನ್ನೂ ಬೆರೆಸಿ ಟಿ- 20ಯನ್ನು ತೆರೆಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದರು. ಬಹಿರಂಗವಾಗಿಯೇ ನಡೆದ ಈ ಬೆಳವಣಿಗೆ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಆದರೆ ತೆರೆ ಮರೆಯಲ್ಲಿ ಶುರುವಾಗಿದ್ದು ಟೆಸ್ಟ್ ಕ್ರಿಕೆಟ್ಗೆ ಐಸಿಸಿ ಮಟ್ಟದಲ್ಲಿ ನೀಡುತ್ತಿದ್ದ ಮಹತ್ವವನ್ನು ಕಡಿಮೆ ಮಾಡುವ ಹಾಗೂ ಕ್ರಿಕೆಟ್ ಆದಾಯದಲ್ಲಿ ಸಿಂಹಪಾಲಿಗಾಗಿ ಭಾರತೀಯ ಕ್ರಿಕೆಟ್ ಸಂಸ್ಥೆ (ಬಿಸಿಸಿಐ), ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ನಡೆಸಿದ ತಂತ್ರಗಾರಿಕೆ. ಅದು ಇಡೀ ಕ್ರಿಕೆಟ್ ಚಹರೆಯನ್ನು ಬದಲಿಸಿ ಬಿಟ್ಟಿತು.

ದುಡ್ಡೇ ದೊಡ್ಡಪ್ಪ:

ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಕ್ರಿಕೆಟ್ ಆಟಕ್ಕೆ ಬರುತ್ತಿದ್ದ ಟಿವಿ ರೈಟ್ಸ್ ಹಣ. 1990ರಲ್ಲಿ 50 ಮಿಲಿಯನ್ ಇದ್ದ ಟಿವಿ ರೈಟ್ಸ್, 2000-07ರ ನಡುವೆ 550 ಮಿಲಿಯನ್ ಡಾಲರ್ಗಳಿಗೆ ಏರಿಕೆಯಾಯಿತು. ಇದರಿಂದ ದುರಾಸೆಗೆ ಬಿದ್ದಿದ್ದು ಬಿಸಿಸಿಐ. ಅಷ್ಟೊತ್ತಿಗಾಗಲೇ ಐಸಿಸಿ ಒಡೆದ ಮನೆಯಾಗಿತ್ತು. ಪಾರದರ್ಶಕತೆ ಕೊರತೆಯಿಂದ ಭಾರಿ ಟೀಕೆಗಳನ್ನು ಎದುರಿಸುತ್ತಿತ್ತು. ಇದೇ ಸಮಯದಲ್ಲಿ ಬಿಸಿಸಿಐನ ಅವತ್ತಿನ ಅಧ್ಯಕ್ಷ ನಾರಾಯಣಸ್ವಾಮಿ ಶ್ರೀನಿವಾಸನ್ ಭವಿಷ್ಯವನ್ನು ಬೇರೆಯೇ ರೀತಿಯಲ್ಲಿ ಕಲ್ಪಸಿಕೊಂಡಾಗಿತ್ತು. ಹೀಗಾಗಿ, ಲಲತ್ ಮೋದಿ ಎಂಬ ಮಾರ್ಕೆಟಿಂಗ್ ಮ್ಯಾನೇಜರ್ ಕರೆದುಕೊಂಡು ಬಂದು ಐಪಿಎಲ್ ಶುರು ಮಾಡಿಸಿದರು ಶ್ರೀನಿವಾಸನ್.

ಮುಂದೆ, ಅದೇ ಮೋದಿ ಬಿಸಿಸಿಐ ಹಾಗೂ ತಮ್ಮ ಹತೋಟಿ ಮೀರುತ್ತಿದ್ದಾನೆ ಎಂದು ಅರ್ಥವಾಗುತ್ತಿದ್ದಂತೆ ಉಚ್ಚಾಟನೆಯನ್ನೂ ಮಾಡಿ ಕೈ ತೊಳೆದುಕೊಂಡರು. ಇಂದು ಇಂಗ್ಲೆಂಡ್ನಲ್ಲಿ ನೆಲೆ ಕಂಡುಕೊಂಡಿರುವ ಮೋದಿ, ಅಂದು ನಡೆಸಿದ ಐಪಿಎಲ್ ಸಂಚನ್ನು ವಿವರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕೇಳಿಸಿಕೊಳ್ಳುವ ವ್ಯವಧಾನ ಯಾರಿಗೂ ಇಲ್ಲವಾಗಿದೆ.

ಐಪಿಎಲ್ ಮೂಲಕ ಎನ್. ಶ್ರೀನಿವಾಸನ್ ತಮ್ಮ ‘ಇಂಡಿಯಾ ಸಿಮೆಂಟ್ಸ್’ ಹೆಸರಿನಲ್ಲಿ ಭಾರಿ ಹೂಡಿಕೆಯನ್ನು ಕಂಡುಕೊಂಡರು. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇದೇ ‘ಇಂಡಿಯಾ ಸಿಮೆಂಟ್ಸ್’ನ ಉಪಾಧ್ಯಕ್ಷರಲ್ಲಿ ಒಬ್ಬರು. ಹೀಗಿರುವಾಗಲೇ ಶ್ರೀನಿವಾಸನ್ ಅಳಿಯ ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಜೈಲು ಪಾಲಾದರು. ಈ ಸಮಯದಲ್ಲಿ ಬಿಸಿಸಿಐನಿಂದ ಶ್ರೀನಿವಾಸನ್ ಕೆಳಕ್ಕಿಳಿಯಬೇಕು ಎಂಬ ಬೇಡಿಕೆ ಹುಟ್ಟಿಕೊಂಡಿತು. ಆದರೆ, ತಮ್ಮ ಎಲ್ಲಾ ಅಡೆತಡೆಗಳನ್ನು ಅನಾಯಾಸವಾಗಿ ದಾಟಿ ಬಂದ ಶ್ರೀನಿವಾಸನ್, ಕೊನೆಗೆ ಅದೇ ಐಸಿಸಿಯ ಮೊದಲ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ಬೆಳವಣಿಗೆಗಳ ನಡುವೆಯೇ, 2007-15ರ ಅವಧಿಯಲ್ಲಿ ಟಿವಿ ರೈಟ್ಸ್ನಿಂದ ಐಸಿಸಿ ಆದಾಯ 1.1 ಬಿಲಿಯನ್ ಡಾಲರ್ಗೆ ಏರಿಕೆಯಾಯಿತು. 2015- 23ರ ಹೊತ್ತಿಗೆ ಇದು 1.9 ಬಿಲಿಯನ್ ಡಾಲರ್ ಆಗಲಿದೆ ಎಂಬ ಅಂದಾಜಿದೆ.

ತ್ರಿಮೂರ್ತಿಗಳ ಸಂಚು:

ಇಷ್ಟೊಂದು ಭಾರಿ ಪ್ರಮಾಣದ ಆದಾಯದ ಸಿಂಹಪಾಲನ್ನು ಹಂಚಿಕೊಳ್ಳಲು ಭಾರತ- ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳ ನಡುವೆ ಗುಪ್ತ ಒಪ್ಪಂದಕ್ಕೆ ಬರಲಾಗಿತ್ತು. ಅಷ್ಟೊತ್ತಿಗಾಗಲೇ ಐಸಿಸಿಯನ್ನು ಹತೋಟಿಗೆ ತೆಗೆದುಕೊಂಡ ಈ ಮೂರೂ ರಾಷ್ಟ್ರಗಳು ಉಳಿದ ಟೆಸ್ಟ್ ಕ್ರಿಕೆಟ್ ದೇಶಗಳನ್ನು ಹೊರಗಿಟ್ಟವು. ಪರಿಣಾಮ ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತಿತರ ದೇಶಗಳ ಕ್ರಿಕೆಟ್ ಮಂಡಳಿಗಳು ದಿವಾಳಿ ಎದ್ದು ಹೋದವು. ಇದರ ಬಗ್ಗೆ ಬರೆಯಲು ಹೊರಟರೆ ಅದೇ ದೊಡ್ಡ ಕತೆ.

ಸದ್ಯಕ್ಕೆ ಇದನ್ನು ಇಲ್ಲಿಗೆ ಮುಗಿಸುವುದಾದರೆ, ಇವತ್ತು ಯೂನಿಫಾಂಗೂ ಕಾಸಿಲ್ಲದೆ ಟಿ-20 ಆಡಲು ಬಂದ ವೆಸ್ಟ್ ಇಂಡೀಸ್ ತಂಡ ಕ್ರಿಕೆಟ್ ಹಿಂದೆ ಜಾಗತಿಕವಾಗಿ ನಡೆದ ದೊಡ್ಡ ರಾಜಕೀಯ ಸಂಚಿನ ಬಲಿಪಶುಗಳು. ಹೀಗಾಗಿಯೇ, ಭಾನುವಾರದ ಐತಿಹಾಸಿಕ ಗೆಲುವೂ ಕೂಡ ಡೆರೆನ್ ಸಮಿಯಂತವರ ಬಾಯಿಂದ ಮೇಲಿನ ಮಾತುಗಳು ಹೊರಬೀಳುವಂತೆ ಮಾಡಿವೆ, ಅಷ್ಟೆ.

 

 

Top