An unconventional News Portal.

‘ವಿಕಿಲೀಕ್ಸ್’ ಸ್ಫೋಟಕ ಮಾಹಿತಿ: ಜನರ ಖಾಸಗಿ ಮಾಹಿತಿಗೆ ಅಮೆರಿಕಾ ಬೇಹುಗಾರಿಕಾ ಸಂಸ್ಥೆಯ ಕನ್ನ!

‘ವಿಕಿಲೀಕ್ಸ್’ ಸ್ಫೋಟಕ ಮಾಹಿತಿ: ಜನರ ಖಾಸಗಿ ಮಾಹಿತಿಗೆ ಅಮೆರಿಕಾ ಬೇಹುಗಾರಿಕಾ ಸಂಸ್ಥೆಯ ಕನ್ನ!

ಜಾಗತಿಕ ತನಿಖಾ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕನ್ನು ತೋರಿಸಿದ್ದ ‘ವಿಕಿಲೀಕ್ಸ್’ ಹೊಸತೊಂದು ಸ್ಫೋಟಕ ಮಾಹಿತಿಯೊಂದಿಗೆ ಹೊರಬಂದಿದೆ.

ಈ ಬಾರಿ ನಾವು ನಿತ್ಯ ಬಳಸುವ ಆಂಡ್ರೋಯ್ಡ್, ಆಪಲ್ ಫೋನ್‌ಗಳು ಮತ್ತು ಮನೆಯಲ್ಲಿರುವ ಟಿವಿ ಸೆಟ್‌ಗಳ ಮೂಲಕ ಅಮೆರಿಕಾದ ಬೇಹುಗಾರಿಕಾ ಸಂಸ್ಥೆ ‘ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ’ (ಸಿಐಎ) ಹೇಗೆ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿದೆ ಎಂಬುದನ್ನು ಜಾಲತಾಣ ಬಯಲು ಮಾಡಿದೆ.

ಸುಮಾರು 8 ಸಾವಿರ ಪುಟಗಳಷ್ಟಿರುವ ಮಾಹಿತಿಯನ್ನು, ‘ವಾಲ್ಟ್ 7’ ಎಂಬ ಹೆಸರಿನಲ್ಲಿ ಅದು ಸದ್ಯ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸಿಐಎ ಬೇಹುಗಾರಿಕೆ ಕುರಿತು ಇನ್ನಷ್ಟು ಮಾಹಿತಿ ಹೊರಹಾಕಲಾಗುವುದು ಎಂದು ‘ವಿಕಿಲೀಕ್ಸ್’ ಪತ್ರಿಕಾ ಹೇಳಿಕೆ ತಿಳಿಸಿದೆ.

ಸದ್ಯ ವಿಕಿಲೀಕ್ಸ್ ಬಿಡುಗಡೆ ಮಾಡಿರುವ ದಾಖಲೆಗಳು ಜಗತ್ತಿನಾದ್ಯಂತ ಸಂಚಲನ ಹುಟ್ಟುಹಾಕಿದ್ದು, ಅಮೆರಿಕಾ ಸರಕಾರಕ್ಕೆ ಹಾಗೂ ಸಿಐಎಗೆ ಮುಖಭಂಗವಾದಂತಾಗಿದೆ.

ಸಾವಿರಾರು ಪುಟಗಳ ದಾಖಲೆಗಳಲ್ಲಿ ‘ವಿಕಿಲೀಕ್ಸ್’ ಬಹಿರಂಗ ಪಡಿಸಿದ ಪ್ರಮುಖ ಅಂಶಗಳು ಇಲ್ಲಿದೆ:


1.ಫೋನ್‌ಗೆ ಲಗ್ಗೆ ಇಟ್ಟ ಬೇಹುಗಾರಿಕಾ ಸಂಸ್ಥೆ:

ಅಮೆರಿಕಾದ ಸಿಐಎ ಜನಸಾಮಾನ್ಯರು ಬಳಸುವ ಎಲೆಕ್ಟ್ರಾನಿಕ್ ಗಾಡ್ಜೆಟ್‌ಗಳ ಮೂಲಕ ವೈಯಕ್ತಿಕ ಮಾಹಿತಿ ಪಡೆಯಲು ಮಾಲ್‌ವೇರ್‌ಗಳನ್ನು ಸೃಷ್ಟಿಸಿದೆ. ಈ ಮೂಲಕ ಐಫೋನ್ ಸೇರಿದಂತೆ ಜಗತ್ತಿನ ಯಾವುದೇ ಫೋನ್‌ ಹಾಗೂ ಕಂಪ್ಯೂಟರ್‌ಗಳನ್ನು ಬಳಕೆದಾರರಿಗೆ ಗೊತ್ತೇ ಆಗದಂತೆ ಹ್ಯಾಕ್‌ ಮಾಡಬಹುದಾಗಿದೆ. ಇದು ಎಷ್ಟು ಪರಿಣಾಮಕಾರಿ ಯೋಜನೆ ಎಂದರೆ, ಬಳಸುವ ಜನರಿಗೆ ಗೊತ್ತೇ ಆಗದಂತೆ ಉಪಕರಣಗಳನ್ನು ದೂರದ ಅಮೆರಿಕಾದಲ್ಲಿ ಕುಳಿತೇ ಸಿಐಎ ಬಳಸಬಹುದಾಗಿದೆ.

ಈ ಮೂಲಕ ನಿಮ್ಮ ಫೋನ್‌ಗೆ ಬರುವ ಸಂದೇಶಗಳು, ಕಾಲ್‌ ವಿವರ, ನಿಮ್ಮ ಮೈಕ್ರೋಫೋನ್ ಮೂಲಕ ಧ್ವನಿ ಸಂಭಾಷಣೆಗಳು ಹಾಗೂ ಕ್ಯಾಮೆರಾ ಮೂಲಕ ದೃಶ್ಯಗಳು ಹಾಗೂ ಇರುವ ಸ್ಥಳವನ್ನು ನಿಖರವಾಗಿ ಸಿಐಎ ಪಡೆದುಕೊಳ್ಳುತ್ತಿದೆ.


 

2. ಟೆಲಿಗ್ರಾಮ್‌ನಿಂದ ಹಿಡಿದು ವಾಟ್ಸಾಪ್‌ವರೆಗೆ:

ಸದ್ಯ ಸಾಮಾನ್ಯವಾಗಿ ಬಳಕೆಯಲ್ಲಿರುವ ಟೆಲಿಗ್ರಾಮ್, ವಾಟ್ಸಾಪ್‌ ರೀತಿಯ ಮೆಸೇಜಿಂಗ್‌ ಆಪ್‌ಗಳಲ್ಲಿ ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಎಂದು ಕಂಪನಿಗಳು ಹೇಳುತ್ತವೆ. ಈ ಮೂಲಕ ಪ್ರತಿಯೊಬ್ಬರ ವೈಯಕ್ತಿಕ ಸಂದೇಶಗಳು ಇನ್ನೊಬ್ಬರಿಗೆ ಓದಲು ಅವಕಾಶ ಇರುವುದಿಲ್ಲ ಎಂದು ಸಾರಲಾಗಿದೆ. ಆದರೆ ಸಿಐಎ ಸಿದ್ಧಪಡಿಸಿಕೊಂಡಿರುವ ಉಪಕರಣಗಳ ಮೂಲಕ ಯಾವುದೇ ಸಂದೇಶವನ್ನು ಅವರು ಓದಬಹುದಾಗಿದೆ. ಹೀಗಾಗಿ, ವೈಯಕ್ತಿಕ ಸಂದೇಶಗಳು ಯಾವುದೇ ಕಾರಣಕ್ಕೂ ಸುರಕ್ಷಿತವಲ್ಲ ಎಂಬುದನ್ನು ದಾಖಲೆಗಳು ಬಹಿರಂಗಪಡಿಸಿವೆ.


3. ಮನೆಯ ಸ್ಮಾರ್ಟ್ ಟಿವಿ ಕೂಡ ಸೇಫ್ ಅಲ್ಲ:

ಇದಕ್ಕಿಂತಲೂ ಗಂಭೀರವಾದ, ಆತಂಕಕಾರಿ ವಿಚಾರ ಏನೆಂದರೆ, ಮನೆಯಲ್ಲಿರುವ ಸ್ಮಾರ್ಟ್ ಟಿವಿ ಕೂಡ ಸಿಐಎ ಗುಪ್ತ ಕಣ್ಣುಗಳನ್ನು ಒಳಗೊಂಡಿದೆ ಎಂಬುದನ್ನು ದಾಖಲೆಗಳು ಬಯಲಿಗೆಳೆದಿವೆ. ಟಿವಿ ಆಫ್‌ ಮಾಡಿದ ನಂತರವೂ ಸಿಐಎ ಅಳವಡಿಸಿರುವ ಗುಪ್ತ ಕೋಡಿಂಗ್‌ಗಳ ಮೂಲಕ ಮನೆಯಲ್ಲಿ ನಡೆಯುವ ಸಂಭಾಷಣೆಗಳು ಹಾಗೂ ದೃಶ್ಯಗಳನ್ನು ಈ ಟಿವಿಗಳು ಸಿಐಗೆ ರವಾನಿಸುತ್ತಿರುತ್ತವೆ.

ವಿಶೇಷವಾಗಿ ಸ್ಯಾಮ್ಸಂಗ್ ಸ್ಮಾರ್ಟ್‌ ಟಿವಿಗಳಿಗೆ ಸಿಐಎ ಕಡೆಯಿಂದಲೇ ಕೋಡಿಂಗ್‌ ಮಾಡಲಾಗಿದೆ.


4. ಬಳಸುವ ಕಾರ್‌ ಕೂಡ ಸಿಐಎ ಕೈಯಲ್ಲಿ:

ಜನ ಬಳಸುವ ಕಾರ್‌ಗಳು ಕೂಡ ಸೇಫ್ ಅಲ್ಲ ಎಂಬುದನ್ನು ‘ವಿಕಿಲೀಕ್ಸ್’ ದಾಖಲೆಗಳು ಹೇಳುತ್ತವೆ. ಸಿಐಎ ಕುಳಿತ ಜಾಗದಿಂದಲೇ ಕಾರ್‌ಗಳನ್ನು ಅಪಘಾತಕ್ಕೆ ಈಡು ಮಾಡುವಷ್ಟು ಪ್ರಬಲ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಹೊಸ ಮಾದರಿಯ ಕಾರ್‌ಗಳಲ್ಲಿ ಅಳವಡಿಸಿರುವ ತಂತ್ರಜ್ಞಾನದ ನೆರವನ್ನು ಸಿಐಎ ಪಡೆದುಕೊಳ್ಳುತ್ತಿದೆ.

ಒಮ್ಮೆ ಇಂತಹ ಅಪಘಾತಗಳು ಘಟಿಸಿದರೂ ಅದು ನಡೆದಿದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗಲಿದೆ.


ಸದ್ಯ ‘ವಾಲ್ಡ್ 7’ ಹೆಸರಿನಲ್ಲಿರುವ ಈ ದಾಖಲೆಗಳ ಮೊದಲ ಕಂತು ಮಾತ್ರವೇ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಸಮಾಜದಲ್ಲಿ ಈ ಕುರಿತು ಚರ್ಚೆ ಹುಟ್ಟು ಹಾಕುವ ಉದ್ದೇಶವನ್ನು ಮಾಹಿತಿ ನೀಡಿದವರು ಹೊಂದಿದ್ದಾರೆ ಎಂದು ‘ವಿಕಿಲೀಕ್ಸ್’ ಹೇಳಿದೆ.

ಬೇಹುಗಾರಿಕೆ ವಿಚಾರಕ್ಕೆ ಬಂದರೆ ಅಮೆರಿಕಾದ ಸಿಐಎ ಈ ಹಿಂದೆಯೂ ಸಾಕಷ್ಟು ಬಾರಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಅಪಖ್ಯಾತಿಗೆ ಒಳಗಾಗಿತ್ತು. ಈ ಹೊಸ ದಾಖಲೆಗಳು ಸಿಐಎ ಕಾರ್ಯಾಚರಣೆಯ ಇನ್ನೊಂದು ಮುಖವನ್ನು ಪರಿಚಯಿಸುತ್ತಿವೆ. ಮುಂದಿನ ದಿನಗಳಲ್ಲಿ ‘ವಿಕಿಲೀಕ್ಸ್’ ಬಿಡುಗಡೆ ಮಾಡಲಿರುವ ದಾಖಲೆಗಳು ಕುತೂಹಲಕ್ಕೆ ಕಾರಣವಾಗಿವೆ.

Top