An unconventional News Portal.

‘ಸ್ವಾತಂತ್ರ್ಯಕ್ಕೆ 70’: ಇಷ್ಟಕ್ಕೂ ಆಗಸ್ಟ್ 15 ರಂದೇ ಯಾಕೆ ನಮಗೆ ಸ್ವಾತಂತ್ರ್ಯ ಬಂತು?

‘ಸ್ವಾತಂತ್ರ್ಯಕ್ಕೆ 70’: ಇಷ್ಟಕ್ಕೂ ಆಗಸ್ಟ್ 15 ರಂದೇ ಯಾಕೆ ನಮಗೆ ಸ್ವಾತಂತ್ರ್ಯ ಬಂತು?

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!

ಇವತ್ತಿಗೆ ಸರಿಯಾಗಿ 70 ವರ್ಷಗಳ ಹಿಂದೆ ಬ್ರಿಟಿಷರಿಗೆ ವಸಹಾತು ದೇಶವಾಗಿದ್ದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಕಳೆದ ಇಷ್ಟು ವರ್ಷಗಳಲ್ಲಿ ಈ ದಿನವನ್ನು ದೇಶದ ಹಲವು ಆಂತರಿಕ ಪಲ್ಲಟಗಳ ಆಚೆಗೂ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಭಾವನೆಗಳನ್ನು ಪಕ್ಕಕ್ಕಿಟ್ಟು, ಆಗಸ್ಟ್ 15 ರಂದೇ ಯಾಕೆ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ? ಒಂದೇ ದಿನ ಸ್ವಾತಂತ್ರ್ಯ ಸಿಕ್ಕರೂ, ಭಾರತ ಆಗಸ್ಟ್ 15ರಂದು; ಪಾಕಿಸ್ತಾನ ಆಗಸ್ಟ್ 14ರಂದು ಯಾಕೆ ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿ ಮುಳುಗುತ್ತಿದೆ?

ಇಂತಹ ಕೆಲವು ಪ್ರಶ್ನೆಗಳನ್ನು ಇಟ್ಟುಕೊಂಡು ಇತಿಹಾಸವನ್ನು ಕೆದಕಿದರೆ ಕೆಲವೊಂದಿಷ್ಟು ಕುತೂಹಲಕಾರಿ ಮಾಹಿತಿ ಸಿಗುತ್ತವೆ.

ಅದು 1929, ಜನವರಿ 29ನೇ ತಾರೀಖು. ಅಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಜವಹರ್ ಲಾಲ್ ನೆಹರೂ ‘ಸಂಪೂರ್ಣ ಸ್ವರಾಜ್’ಗೆ ಕರೆನೀಡಿದರು. ಬ್ರಿಟಿಷರಿಂದ ಎಲ್ಲಾ ರೀತಿಯ ಸ್ವಾತಂತ್ರ್ಯ ಬೇಕು ಎಂದು ಅವರು ಘೋಷಿಸಿದರು. ಅವತ್ತಿಂದ ದೇಶಕ್ಕೆ ಸಂವಿಧಾನ ಬರೆಯುವವರೆಗೂ ಜನವರಿ 26ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿತ್ತು ಕಾಂಗ್ರೆಸ್.

ಇದಕ್ಕೂ ಮೊದಲೇ, ತಮ್ಮೆಲ್ಲಾ ಅಧಿಕಾರವನ್ನು ವರ್ಗಾಯಿಸಿ, ಭಾರತದಿಂದ ಹೊರ ಹೋಗಲು ಬ್ರಿಟಿಷರು ಗೊತ್ತುಮಾಡಿಕೊಂಡ ದಿನ ಜೂ. 30, 1948. ಕೊನೆಯ ಬ್ರಿಟಿಷ್ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಹೀಗೊಂದು ದಿನವನ್ನು ನಿಗದಿಪಡಿಸಿಕೊಂಡು ಕುಳಿತಿದ್ದ. ಆದರೆ, ಆತ ಅಂದುಕೊಂಡ ಮೊದಲೇ ಭಾರತಕ್ಕೆ ಎಲ್ಲಾ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ವರ್ಗಾಯಿಸುವ ಪ್ರಕ್ರಿಯೆಗಳು ಮುಗಿದು ಹೋಗಿದ್ದವು. ಹೀಗಾಗಿ, ಜೂ. 30ಕ್ಕೂ ಮೊದಲೇ ಭಾರತದ ಸ್ಥಳೀಯಾಡಳಿತಕ್ಕೆ ಅಧಿಕಾರವನ್ನು ನೀಡಲು ಆತ ತೀರ್ಮಾನಿಸಿದ್ದ.

ಮೌಂಟ್ಬ್ಯಾಟನ್ ನೀಡಿದ ವರದಿ ಆಧಾರದ ಮೇಲೆ ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ನಲ್ಲಿ ಜು. 4, 1947 ರಂದು ‘ಇಂಡಿಯಾ ಇಂಡಿಪೆಂಡೆನ್ಸ್ ಬಿಲ್’ನ್ನು ಸಲ್ಲಿಸಲಾಯಿತು. ಅದಕ್ಕೆ ಒಪ್ಪಿಗೆ ನೀಡಿದ ಹೌಸ್, ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಡೊಮಿನಿಯನ್ಗಳನ್ನು ರೂಪಿಸಲು ಅನುವು ಮಾಡಿಕೊಡುವುದರ ಜತೆಗೆ, ಬ್ರಿಟಿಷ್ ಕಾಮನ್ವೆಲ್ತ್‌ನಿಂದ ಅವುಗಳನ್ನು ಹೊರಗಿಡುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಅವತ್ತು ಆಗಸ್ಟ್ 15, 1947.

ಕೊನೆಗೆ, ಅಂದುಕೊಂಡ ದಿನಾಂಕಕ್ಕೆ ಮೊದಲೇ ಮೌಂಟ್ಬ್ಯಾಟನ್ ಭಾರತಕ್ಕೆ ಸಂಪೂರ್ಣ ಅಧಿಕಾರ ಹಸ್ತಾಂತರ ಪ್ರಕ್ರಿಯೆಗಳನ್ನು ಮುಗಿಸಿದ್ದ. ಅಷ್ಟಕ್ಕೂ ಅವತ್ತು ಆಗಸ್ಟ್ 15ನೇ ತಾರೀಖು ಯಾಕೆ ಆಗಿತ್ತು ಎಂಬುದಕ್ಕೆ ಮೌಂಟ್ಬ್ಯಾಟನ್ ನೀಡಿದ್ದ ಕಾರಣ ಹೀಗಿತ್ತು. ಅದೇ ದಿನ, ಎರಡು ವರ್ಷಗಳ ಹಿಂದಷ್ಟೆ ಜಪಾನ್ ಎರಡನೇ ಮಹಾಯುದ್ಧದಲ್ಲಿ ಶರಣಾಗತಿಯನ್ನು ಘೋಷಿಸಿತ್ತು. ಜಪಾನ್ ದೊರೆ ಆ. 15, 1945ರಂದು ರೇಡಿಯೋ ಸಂದೇಶವನ್ನು ನೀಡುವ ಮೂಲಕ ಮೈತ್ರಿಕೂಟಗಳ ಎದುರು ಸೋಲನ್ನು ಒಪ್ಪಿಕೊಂಡಿದ್ದ. ಮೌಂಟ್ಬ್ಯಾಟನ್ ಭಾರತ ಮತ್ತು ಪಾಕಿಸ್ತಾನಗಳಿಗೆ ಸ್ವಾತಂತ್ರ್ಯ ನೀಡಲು ಇದೇ ದಿನವನ್ನು ಆಯ್ದುಕೊಂಡ ಎನ್ನುತ್ತದೆ ಇತಿಹಾಸ.

ಹೀಗಿದ್ದೂ, ಪಾಕಿಸ್ತಾನ ಯಾಕೆ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ?

ಇಲ್ಲೊಂದು ಕುತೂಹಲಕಾರಿ ಮಾಹಿತಿ ಸಿಗುತ್ತದೆ. ಮೊದಲ ಬಾರಿಗೆ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದು ಆ. 15ರಂದೇ. ಮೊದಲ ಬಾರಿಗೆ ಪಾಕಿಸ್ತಾನವನ್ನು ಉದ್ದೇಶಿಸಿ ಮಾತನಾಡಿದ್ದ ಮಹಮದ್ ಅಲಿ ಜಿನ್ಹಾ ಕೂಡ, “ಆಗಸ್ಟ್ 15 ಸಾರ್ವಭೌಮ ಪಾಕಿಸ್ತಾನ ಹುಟ್ಟಿದ ದಿನ,” ಎಂದೇ ಘೋಷಿಸಿದ್ದರು. ಆದರೆ, ನಂತರ ದಿನಗಳಲ್ಲಿ ಆಗಸ್ಟ್ 15ರ ಬದಲಿಗೆ, ಆಗಸ್ಟ್ 14ರಂದು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಶುರುಮಾಡಿತು.

ಇದಕ್ಕೆ ಕಾರಣಗಳೇನಿರಬಹುದು ಎಂಬುದಕ್ಕೆ ಎರಡು ಪ್ರಮುಖ ಕಾರಣಗಳನ್ನು ಇತಿಹಾಸಕಾರರು ಮುಂದಿಡುತ್ತಾರೆ. ಒಂದು, ಆ. 14ರಂದು ಕರಾಚಿಯಲ್ಲಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ನಡೆಯಿತು ಎಂಬುದು. ಮತ್ತೊಂದು ಆ. 14, 1947 ರಂಜಾನ್ ಹಬ್ಬದ 27ನೇ ದಿನ ಬಂದಿತ್ತು. ಮುಸ್ಲಿಂರಿಗೆ ಪವಿತ್ರ ದಿನ ಎಂಬ ನಂಬಿಕೆ ಕಾರಣಕ್ಕೆ ಅದೇ ದಿನವನ್ನು ಸ್ವಾತಂತ್ರ್ಯ ದಿನಾಚರಣೆಗೆ ಆಯ್ಕೆ ಮಾಡಿಕೊಳ್ಳಲಾಯಿತು ಎನ್ನಲಾಗುತ್ತಿದೆ.

ಹೀಗೆ, ಒಂದು ದಿನ ಹೆಚ್ಚು ಕಡಿಮೆ ಅಂತರದಲ್ಲಿ ಅಕ್ಕ ಪಕ್ಕದ ರಾಷ್ಟ್ರಗಳು ತಮ್ಮ 70ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಆಚರಿಸಿಕೊಳ್ಳುತ್ತಿವೆ. ದಿನಾಂಕಕ್ಕಿಂತ ಎರಡೂ ದೇಶಗಳು ಸ್ವಾತಂತ್ರ್ಯದ ಹೆಸರಿನಲ್ಲಿ ಪಡೆದುಕೊಂಡು ಅಧಿಕಾರವನ್ನು ತಮ್ಮ ಜನರ ಒಳಿತಾಗಿ ಎಷ್ಟರ ಮಟ್ಟಿಗೆ ಬಳಿಸಿವೆ ಎಂಬುದು ಮುಖ್ಯ. ಅದೇ ನಿಜವಾದ ಸ್ವಾತಂತ್ರ್ಯದ ಆಚರಣೆ.

ಪೂರಕ ಮಾಹಿತಿ: ಇಂಡಿಯನ್ ಎಕ್ಸ್ಪ್ರೆಸ್.

Top