An unconventional News Portal.

‘ರಬ್ಬರ್ ಸ್ಟ್ಯಾಂಪ್’ ರಾಷ್ಟ್ರಪತಿ: ದೇಶದ ಪ್ರಥಮ ಪ್ರಜೆಯ ಹುದ್ದೆಗೆ ಹೀಗೊಂದು ಕಳಂಕ ಅಂಟಿದ್ಯಾಕೆ?

‘ರಬ್ಬರ್ ಸ್ಟ್ಯಾಂಪ್’ ರಾಷ್ಟ್ರಪತಿ: ದೇಶದ ಪ್ರಥಮ ಪ್ರಜೆಯ ಹುದ್ದೆಗೆ ಹೀಗೊಂದು ಕಳಂಕ ಅಂಟಿದ್ಯಾಕೆ?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ‘ಪ್ರಥಮ ಪ್ರಜೆ’ಯನ್ನು ಆಯ್ಕೆ ಮಾಡವ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಿದೆ. ಜುಲೈ 17ರಂದು ನಡೆಯುವ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಸಲು ಅವಕಾಶ ನೀಡಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಜು. 24ರಂದು ಪ್ರಣವ್ ಮುಖರ್ಜಿ ಅವರಿಂದ ತೆರವಾಗುವ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಆಡಳಿತ ಪಕ್ಷ ಬಿಜೆಪಿ ಅವಿರೋಧ ಆಯ್ಕೆ ಸಂಬಂಧ ಇತರೆ ಪ್ರತಿಪಕ್ಷಗಳ ಜತೆಯಲ್ಲಿ ಮಾತುಕತೆ ನಡೆಸುತ್ತಿದೆ. ಸಾಮಾನ್ಯವಾಗಿ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯೇ ರಾಷ್ಟ್ರಪತಿ ಸ್ಥಾನಕ್ಕೆ ಚುನಾಯಿತರಾಗುವುದು ಸಂಪ್ರದಾಯ. ಆದರೆ ಈ ಬಾರಿ, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಭರ್ಜರಿ ಜಯದ ನಂತರವೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ರಾಷ್ಟ್ರಪತಿಯನ್ನು ಸುಲಭವಾಗಿ ಆಯ್ಕೆ ಮಾಡಿ ಕಳುಹಿಸುವುದು ಕಷ್ಟ ಎನ್ನುತ್ತಿವೆ ಲೆಕ್ಕಾಚಾರಗಳು. ಒಂದು ವೇಳೆ ಎಲ್ಲಾ ವಿರೋಧ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಮತ ಚಲಾವಣೆ ಮಾಡಿದರೆ, ರಾಷ್ಟ್ರಪತಿ ಆಯ್ಕೆ ಮಾಡುವಷ್ಟು ಬಲ ಪಡೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಜುಲೈ. 17ರ ರಾಷ್ಟ್ರಪತಿ ಚುನಾವಣೆ ಕುತೂಹಲ ಮೂಡಿಸಿದೆ.

ಚುನಾವಣೆ ಹೇಗೆ?:

ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ? ಇದರಲ್ಲಿ ಮತಗಳ ಮೌಲ್ಯವನ್ನು ಹೇಗೆ ನಿರ್ಧರಿಸಲಾಗುತ್ತದೆ? ಎಂಬ ಕುರಿತು ಸಾಕಷ್ಟು ವರದಿಗಳು ಬಂದಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ; ಲೋಕಸಭೆಯ 551 ಮತ್ತು ರಾಜ್ಯಸಭೆಯ 225 ಮಂದಿ ಸದಸ್ಯರು; ಸೇರಿ ಒಟ್ಟು 776 ಮಂದಿ ಸಂಸದರು ಮತ ಚಲಾಯಿಸಲಿದ್ದಾರೆ. ಜತೆಗೆ, ದೇಶದ ಎಲ್ಲಾ ಶಾಸಕರಿಗೂ ಮತ ಚಲಾವಣೆ ಮಾಡುವ ಅವಕಾಶ ಇದೆ. ಶಾಸಕರ ಮತಗಳನ್ನು, ಅವರು ಪ್ರತಿನಿಧಿಸುವ ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ (1971 ಜನಗಣತಿ ಅನುಸಾರ) ನಿರ್ಧರಿಸಲಾಗುತ್ತದೆ. ಆಯಾ ರಾಜ್ಯದ ಜನಸಂಖ್ಯೆಯನ್ನು ಅಲ್ಲಿನ ಶಾಸಕರ ಸ್ಥಾನಗಳ ಸಂಖ್ಯೆಯಿಂದ ವಿಭಾಗಿಸಲಾಗುತ್ತದೆ. ನಂತರ ಅದನ್ನು 1000ದಿಂದ ಭಾಗಿಸಲಾಗುತ್ತದೆ. ಆಗ ಬರುವ ಮೊತ್ತವೇ ತಲಾ ಮತದ ಮೌಲ್ಯವಾಗಿ ಪರಿಗಣಿಸಲಾಗುತ್ತದೆ.

ಇದೇ ಮಾದರಿಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯ ಸ್ಥಾನಗಳಿಂದ ದೇಶದ ಜನಸಂಖ್ಯೆ ಜತೆಗೆ ಹೋಲಿಕೆ ಮಾಡಿ ಮತಗಳ ಮೌಲ್ಯ ನಿರ್ಧಾರ ಮಾಡಲಾಗುತ್ತದೆ. ಸದ್ಯದ ಲೆಕ್ಕಾಚಾರಗಳ ಪ್ರಕಾರ, ಎನ್‌ಡಿಎ ಮೈತ್ರಿಕೂಟದ ಮತಗಳ ಮೌಲ್ಯ ಶೇ. 47.5 ರಷ್ಟಾಗಲಿದೆ. ವಿರೋಧ ಪಕ್ಷಗಳು ಒಟ್ಟಾದರೆ, ಉಳಿದ ಶೇ. 52. 5ರಷ್ಟು ಮತಮೌಲ್ಯವನ್ನು ಹೊಂದುತ್ತವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಅವಿರೋಧ ಆಯ್ಕೆಯಾಗದೇ ಹೋದರೆ, ಜಿದ್ದಾಜಿದ್ದಿನ ಕಣವಾಗಿ ಬದಲಾಗುತ್ತದೆ.

ಇಷ್ಟೆಲ್ಲಾ ಸಂಕೀರ್ಣ ಲೆಕ್ಕಾಚಾರಗಳ ಮೂಲಕ ಚುನಾಯಿತರಾಗುವ ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆಯಾಗಲಿದ್ದಾರೆ. ದಿಲ್ಲಿಯ ‘ರಾಷ್ಟ್ರಪತಿ ಭವನ್‌’ ಭವ್ಯ ಬಂಗಲೆಯಲ್ಲಿ ಮುಂದಿನ ಐದು ವರ್ಷಗಳ ಕಾಲ ವಾಸ ಮಾಡಲಿದ್ದಾರೆ. ದೇಶದ ಭೂ ಸೇನೆ, ನೌಕಾ ಪಡೆ ಹಾಗೂ ವಾಯು ಸೇನೆಗಳ ಮಹಾ ದಂಡನಾಯಕರೂ ಆಗಿರುತ್ತಾರೆ.

ಹೀಗಿದ್ದೂ, ಭಾರತದ ಪ್ರಜಾಸತ್ತೆಯಲ್ಲಿ ರಾಷ್ಟ್ರಪತಿ ಹುದ್ದೆ ಎಂಬುದು ‘ರಬ್ಬರ್ ಸ್ಟ್ಯಾಂಪ್’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

‘ರಬ್ಬರ್ ಸ್ಟ್ಯಾಂಪ್’ ಯಾಕೆ?:

ಕನ್ನಡದಲ್ಲಿ ‘ಕೋಲೆ ಬಸವ’ ಎಂಬ ಪದವಿದೆ. ಹೇಳಿದ್ದೆಲ್ಲಕ್ಕೂ ಒಪ್ಪಿಗೆಯನ್ನು ಸೂಚಿಸುವುದಕ್ಕೆ ಇದನ್ನು ಅನ್ವರ್ಥನಾಮವಾಗಿ ಬಳಸುತ್ತಾರೆ. ಇದನ್ನೇ ಇಂಗ್ಲಿಷ್ ಪರಿಭಾಷೆಯಲ್ಲಿ ಬಳಸುವ ‘ರಬ್ಬರ್ ಸ್ಟ್ಯಾಂಪ್‌’ಗೆ ಸಮಾನವಾಗಿ ಪರಿಗಣಿಸಬಹುದು. ದೇಶದ ರಾಷ್ಟ್ರಪತಿ ಹುದ್ದೆಗೆ ಇರುವ ಸಾಂವಿಧಾನಿಕ ಹಕ್ಕುಗಳ ವಿಚಾರಕ್ಕೆ ಬಂದರೆ, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಅಂಗೀಕಾರವಾಗುವ ಕಾಯ್ದೆ- ಮಸೂದೆಗಳಿಗೆ ಅಂತಿಮ ಒಪ್ಪಿಗೆ ಸೂಚಿಸುವುದು ಇವರ ಕರ್ತವ್ಯವಾಗಿರುತ್ತದೆ. ಶಾಸನ ಸಭೆ ರೂಪಿಸುವ ಹೊಸ ಕಾನೂನನ್ನು ಅಥವಾ ಈಗಾಗಲೇ ಇರುವ ಕಾನೂನಿಗೆ ತರುವ ತಿದ್ದುಪಡಿಗಳಿಗೆ ಇವರು ಅಂಕಿತ ಹಾಕಬೇಕು ಅಥವಾ ವಾಪಾಸ್ ಕಳುಹಿಸಬೇಕು. ರಾಷ್ಟ್ರಪತಿ ಹುದ್ದೆಯಲ್ಲಿ ಇರುವವರು ಸಂಪುಟದ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದು ಅನಿವಾರ್ಯವಾದ್ದರಿಂದ, ಅದಕ್ಕಿಂತ ಹೆಚ್ಚಾಗಿ ಅವರಿಂದಲೇ ಚುನಾಯಿತರಾಗುವುದರಿಂದ ಬಹುಪಾಲು ಮಸೂದೆಗಳಿಗೆ ಒಪ್ಪಿಗೆ ಸೂಚಿಸುವ ಸಂಪ್ರದಾಯ ಜಾರಿಯಲ್ಲಿದೆ.

ರಾಷ್ಟ್ರಪತಿ ಹುದ್ದೆಯಲ್ಲಿ ಇರುವವರು ದೇಶದ ಮೂರು ಸಮರ ಪಡೆಗಳಿಗೆ ಮಹಾದಂಡನಾಯಕರಾಗಿರುತ್ತಾರೆ. ಆದರೆ ಯುದ್ಧದಂತಹ ಸನ್ನಿವೇಶಗಳು ಎದುರಾದರೆ, ಸಂಪುಟ ಸಭೆ ತೆಗೆದುಕೊಳ್ಳವು ನಿರ್ಣಯವನ್ನು ಅವರು ಬೆಂಬಲಿಸುವುದು ರೂಢಿಯಾಗಿದೆ.

“ರಾಷ್ಟ್ರಪತಿ ಹುದ್ದೆಗೆ ರಬ್ಬರ್ ಸ್ಟ್ಯಾಂಪ್ ಎಂಬ ಕಳಂಕ ಅಂಟಿಕೊಂಡಿದ್ದು 1975ರಲ್ಲಿ. ಅವತ್ತು ಇಂದಿರಾಗಾಂಧಿ ದೇಶದ ಪ್ರಧಾನಿ ಸ್ಥಾನದಲ್ಲಿದ್ದರು. ಅವರು ತುರ್ತು ಪರಿಸ್ಥಿತಿಯನ್ನು ಜಾರಿಗೆ ತರಲು ಮುಂದಾದರು. ಅದಕ್ಕೆ ಯಾವುದೇ ಮರುಪ್ರಶ್ನೆ ಇಲ್ಲದೆ ಒಪ್ಪಿಗೆ ಸೂಚಿಸಿದ್ದು ಅಂದಿನ ರಾಷ್ಟ್ರಪತಿ ಫಕ್ರುದ್ಧೀನ್ ಅಲಿ ಅಹಮದ್. ಆ ನಂತರ ದೇಶದ ಅತ್ಯುನ್ನತ ಹುದ್ದೆ ರಬ್ಬರ್ ಸ್ಟ್ಯಾಂಪ್ ಇದ್ದ ಹಾಗೆ ಎಂಬ ಮಾತು ಜೋರಾಗಿ ಕೇಳಿಬಂತು,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಇವುಗಳ ಆಚೆಗೆ: 

ಇಂತಹ ಕಳಂಕಗಳ ಆಚೆಗೂ ರಾಷ್ಟ್ರಪತಿ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ ಕೆಲವರು ಭಿನ್ನವಾಗಿ ಗುರುತಿಸಿಕೊಂಡ ಉದಾಹರಣೆಗಳೂ ಇವೆ. ಉದಾಹರಣೆಗೆ ಅಬ್ದುಲ್ ಕಲಾಂ, ಮಕ್ಕಳ ಜತೆ ಮಾತುಕತೆ ನಡೆಸುವ ಮೂಲಕವೇ ಸದಾ ಸುದ್ದಿಯಲ್ಲಿದ್ದ ರಾಷ್ಟ್ರಪತಿಯಾಗಿದ್ದರು. ನಂತರ ಬಂದ ಪ್ರತಿಭಾ ಪಾಟೀಲ್ ಅಷ್ಟೇನೂ ಸದ್ದು ಮಾಡದಿದ್ದರೂ, ಕೊನೆಯ ದಿನಗಳಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗಿದ್ದರು. ಸದ್ಯ ರಾಷ್ಟ್ರಪತಿಯಾಗಿರುವ ಪ್ರಣವ್ ಮುಖರ್ಜಿ ಕೂಡ ರೂಢಿಗತ ಭಾಷಣಗಳ ಆಚೆಗೆ ಹೆಚ್ಚು ಸದ್ದು ಮಾಡಲಿಲ್ಲ.

ಸದ್ಯ ರಾಷ್ಟ್ರಪತಿ ಹುದ್ದೆಗೆ ಚುನಾವಣೆಯ ದಿನಾಂಕ ನಿಗದಿಯಾಗಿದೆ. ಯಾರಾಗಲಿದ್ದಾರೆ ಭಾರತದ ಮುಂದಿನ ರಾಷ್ಟ್ರಪತಿ?; ಕಾದು ನೋಡಬೇಕಿದೆ. ಯಾರೇ ಆದರೂ, ಅವರ ಮೇಲೆ ಜನರ ನಿರೀಕ್ಷೆಗಳ ಭಾರವನ್ನು ಹೊರಿಸುವುದು ಕಷ್ಟ.

Leave a comment

Top