An unconventional News Portal.

‘ಪನಾಮ ಪೇಪರ್ಸ್’: ಕರ್ನಾಟಕದಲ್ಲಿರುವ ನಮಗ್ಯಾಕೆ ಮುಖ್ಯವಾಗಬೇಕು?

‘ಪನಾಮ ಪೇಪರ್ಸ್’: ಕರ್ನಾಟಕದಲ್ಲಿರುವ ನಮಗ್ಯಾಕೆ ಮುಖ್ಯವಾಗಬೇಕು?

‘ಪನಾಮ ಪೇಪರ್ಸ್’!

ಸೋಮವಾರ ಮುಂಜಾನೆ ಹೀಗೊಂದು ಶಬ್ಧ ಕಿವಿಗೆ ಬೀಳುತ್ತಲೇ ಒಂದಷ್ಟು ಜನರಾದರೂ, ‘ಇದೇನಿದು ಹೊಸ ಪದ?’ ಎಂದು ಅಚ್ಚರಿಗೊಂಡಿರಬಹುದು. ಆ ಸಾಲಿನಲ್ಲಿ ‘ಸಮಾಚಾರ’ ಕೂಡ ಇತ್ತು. ಇಲ್ಲೀವರೆಗೂ ನಾವು ಪನಾಮ ಕಾಲುವೆ ಬಗ್ಗೆ ಕೇಳಿದ್ದೆವು. ಅದನ್ನು ಈಜಿ ದಡ ಸೇರಿದವರ ಬಗ್ಗೆ ಓದಿದ್ದೆವು. ಜಗತ್ತಿನ ನಿಗೂಢಗಳು ಕುತೂಹಲ ಮೂಡಿಸುವಂತೆ ಈ ‘ಪನಾಮ ಕಾಲುವೆ’ ಕೂಡ ಯಾವತ್ತಿಗೂ ಕುತೂಹಲ ಮೂಡಿಸುವ ಅಂಶವಾಗಿತ್ತು. ಈಗ ‘ಪನಾಮ ಪೇಪರ್ಸ್’; ಹೀಗಂತ ಹೇಳಿಕೊಂಡು ಎಲ್ಲೋ ದೂರದ ಪತ್ರಕರ್ತರ ತಂಡವೊಂದು ಜಗತ್ತಿಗೆ ಹಂಚಿರುವ 11 ಮಿಲಿಯನ್ ದಾಖಲೆಗಳು, ಅವುಗಳಲ್ಲಿರುವ ರಾಜಕೀಯ ನಾಯಕರು, ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳ ಹೆಸರುಗಳು. ಆದರೆ, ಇದೆಲ್ಲಾ ಇಲ್ಲಿ ಕುಳಿತಿರುವ ನಮಗೆ ಯಾಕೆ ಮುಖ್ಯವಾಗಬೇಕು? ಈ ಬಗ್ಗೆ ಹೇಳುವ ಮುಂಚೆ ನಿಮಗೊಂದು ಚಿಕ್ಕ ಕತೆಯೊಂದನ್ನು ಹೇಳಬೇಕಿದೆ:  

ಇಲ್ಲೇ ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ಇದ್ದ. ಆತನ ಹೆಸರು ಕುಮಾರ್ ಎಂದಿಟ್ಟುಕೊಳ್ಳಿ. ಈತನ ಬಳಿ ಇದ್ದಕ್ಕಿದ್ದಂತೆ ಒಂದಷ್ಟು ಹಣ ಬಂತು. ಅದನ್ನು ಆತ ಮನೆಗೆ ತೆಗೆದುಕೊಂಡು ಹೋದರೆ, ಸುಮ್ನೆ ಹೆಂಡತಿ- ಮಕ್ಕಳು ಎಲ್ಲಿಂದ ಬಂತು? ಹೇಗೆ ಬಂತು ಎಂದು ಪ್ರಶ್ನೆ ಮಾಡುತ್ತಾರೆ. ಅವರಿಗೂ ಅದರಲ್ಲೂ ಪಾಲು ಕೊಡಬೇಕಾಗುತ್ತದೆ ಎಂದು ತನ್ನ ಗೆಳೆಯ ರವಿಯ ಮನೆಯಲ್ಲಿ ಇಟ್ಟು ಬಂದ. ಸ್ವಲ್ಪ ದಿನಗಳಲ್ಲಿ ರವಿ ಮನೆಯಲ್ಲಿ ತನ್ನ ಗಂಡ ಹಣ ಇಟ್ಟಿರುವ ವಿಚಾರ ಕುಮಾರನ ಹೆಂಡತಿಗೆ ಗೊತ್ತಾಗಿ ಹೋಯಿತು. ಆಕೆ ತನಗೊಂದು ಬಳೆ ಮಾಡಿಸಿಕೊಡುವಂತೆ ಬೇಡಿಕೆ ಇಟ್ಟಳು. ಕುಮಾರ ಬೇರೆ ದಾರಿ ಇಲ್ಲದ ಆಕೆ ಕೇಳಿದ್ದಕ್ಕೆಲ್ಲಾ ಓಕೆ ಅಂದ.

ಹೀಗಿರುವಾಗಲೇ, ಮತ್ತೊಂದು ಸಾರಿ ಇನ್ನೊಂದಿಷ್ಟು ಹಣ ಬಂತು. ಈ ಬಾರಿ ಮತ್ತದೇ ರಗಳೆಯೇ ಬೇಡ ಎಂದು ತನ್ನ ಊರನ್ನೇ ಬಿಟ್ಟು, ಪಕ್ಕದ ಊರಿನ ಇನ್ನೊಬ್ಬ ಸ್ನೇಹಿತ ಶಿವಪ್ರಸಾದನ ಮನೆಯಲ್ಲಿ ಇಟ್ಟು ಬಂದ. ಈ ಶಿವಪ್ರಸಾದನ ಮನೆ ಹೇಗೆ ಎಂದರೆ, ಅಲ್ಲಿ ಕೇಳುವವರೂ ಇಲ್ಲ; ಹೇಳುವವರೂ ಇಲ್ಲ. ಹೀಗಾಗಿ, ಕುಮಾರನ ಹಣಕ್ಕೆ ಮತ್ಯಾವ ಪಾಲುದಾರರೂ ಹುಟ್ಟಿಕೊಳ್ಳಲಿಲ್ಲ. ಈ ವಿಚಾರ ಹೇಗೋ, ಆತನ ಸ್ನೇಹಿತರಿಗೆ ಗೊತ್ತಾಗಿ ಹೋಯಿತು. ಅವರದ್ದೂ ಅದೇ ಸಮಸ್ಯೆ. ಹೀಗಾಗಿ, ಕುಮಾರನ ಮೂಲಕ ಪಕ್ಕದೂರಿನ ಸ್ನೇಹಿತ ಶಿವಪ್ರಸಾದನ ಮನೆಯಲ್ಲಿ ಎಲ್ಲರೂ ದುಡ್ಡು ತೆಗೆದುಕೊಂಡು ಹೋಗಿ ಇಟ್ಟು ಬರತೊಡಗಿದರು. ಇದು ಶುರುವಾಗಿ ಸುಮಾರು 40 ವರ್ಷ ಕಳೆದಿತ್ತು. ಇದ್ದಕ್ಕಿದ್ದ ಹಾಗೆ, ಅದು ದಾಖಲೆ ಸಮೇತ ಮಾಧ್ಯಮಗಳಿಗೆ ಸಿಕ್ಕು ಕುಮಾರ ಬಚ್ಚಿಟ್ಟ ವಿಚಾರ ಗುಲ್ಲಾಗಿ ಹೋಯಿತು…

ಇನ್ನು ಕತೆಯನ್ನು ಮುಂದುವರಿಸುವ ಅಗತ್ಯವಿಲ್ಲ ಅನ್ನಿಸುತ್ತದೆ. ನಿಮಗೆ ಈ ‘ಪನಾಮ ಪೇಪರ್ಸ್’ ಎಂದರೇನು ಎಂಬುದು ಅರ್ಥವಾಗಿ ಹೋಯಿತು. ದ್ವೀಪ ರಾಷ್ಟ್ರ ಪನಾಮದಿಂದ ಹಲವು ರಾಷ್ಟ್ರಗಳಲ್ಲಿ ತನ್ನ ಜಾಲವನ್ನು ಹರಡಿದ್ದ ‘ಮೊಸಾಕ್ ಫೋನ್ಸೆಕಾ’ ಎಂಬ ದಳ್ಳಾಳಿ ಕಂಪನಿ ಹಾಗೂ ಅದರ ಜತೆ ಹಣ ಹೂಡಿಕೆಯ ಸಂಬಂಧವನ್ನು ಇಟ್ಟುಕೊಂಡಿದ್ದ ಸುಮಾರು 1. 20 ಲಕ್ಷ ವ್ಯಕ್ತಿ, ಟ್ರಸ್ಟ್ ಹಾಗೂ ಸಂಸ್ಥೆಗಳ ನಡುವೆ ನಡೆದದ್ದು ಏನು ಎಂಬುದು ಈ ಕತೆಯಷ್ಟೆ ಸರಳವಾದದ್ದು.

ಆದ್ರೆ, ಇದು ನಮಗ್ಯಾಕೆ ಮುಖ್ಯವಾಗಬೇಕು? ಇದು ಸದ್ಯ ಕೇಳಿಕೊಳ್ಳಬೇಕಾಗಿರುವ ಪ್ರಶ್ನೆ. ‘ಟ್ಯಾಕ್ಸ್ ಜಸ್ಟೀಸ್ ನೆಟ್ವರ್ಕ್’ ಎಂಬ ಅಂತರಾಷ್ಟ್ರೀಯ ಸಂಸ್ಥೆ 2012ರಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಇಡೀ ಜಗತ್ತಿನಲ್ಲಿ ಸುಮಾರು 21 ಟ್ರಲಿಯನ್ ಡಾಲರ್ನಿಂದ 32 ಟ್ರಿಲಿಯನ್ ಡಾಲರ್ನಷ್ಟು ‘ಕಪ್ಪು ಹಣ’ ಹೇಳುವವರು ಕೇಳುವವರು ಇಲ್ಲದ ‘ಶಿವಪ್ರಸಾದನ ಮನೆ’ಯಲ್ಲಿ ಮುಚ್ಚಿಡಲಾಗಿದೆ. ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಪನಾಮ, ನ್ಯೂಯೆ, ಬಹಾಮ, ಕೋಸ್ಟರೀಕಾ ಮತ್ತಿತರ ರಾಷ್ಟ್ರಗಳೇ ಇಂತಹ ಮನೆಗಳು.

ಇಲ್ಲೆಲ್ಲಾ ಹಣ ಮುಚ್ಚಿಡಲು ಹೋದವರಲ್ಲಿ ಎಲ್ಲರೂ ಅದನ್ನು ಕೆಟ್ಟ ಕೆಲಸಕ್ಕೆ ಹಣವನ್ನು ಬಳಸುತ್ತಿದ್ದರು ಎಂದು ಹೇಳುವುದು ಕಷ್ಟ. ಅದೇ ವೇಳೆ, ಒಳ್ಳೆ ಕೆಲಸಕ್ಕೆ ಮಾತ್ರವೇ ಬಳಕೆ ಮಾಡುತ್ತಿದ್ದರು ಎಂಬುದೂ ಸುಳ್ಳು. ಹಣ ಮುಚ್ಚಿಟ್ಟ ಬಗ್ಗೆ ಮಾಹಿತಿ ಸಿಕ್ಕಿ ಆಗಿದೆ; ಉಳಿದದ್ದು, ಅದರಲ್ಲಿ ಎಷ್ಟು ಜನ ಅದನ್ನು ಶಸ್ತ್ರಾಸ್ತ್ರ ಖರೀದಿಗೆ, ಮಾದಕ ದ್ರವ್ಯ ಜಾಲಕ್ಕೆ ಮತ್ತಿತರ ಮನುಷ್ಯ ವಿರೋಧಿ ಕೆಲಸಗಳಿಗೆ ಯಾರ್ಯಾರು ಬಳಸಿದ್ದರು ಎಂಬ ಬಗ್ಗೆ ತನಿಖೆ ನಡೆಯಬೇಕು.

ಅದಕ್ಕೂ ಮೊದಲು, ಇವರಿಗೆಲ್ಲಾ ಇಷ್ಟು ಪ್ರಮಾಣದ ಹಣ ಬರಲು ನೈಸರ್ಗಿಕ ಸಂಪತ್ತಿನ ಲೂಟಿ ಹೊಡೆಯಬೇಕು, ಇಲ್ಲವೇ ಕಪಟ ಉದ್ಯಮ ನಡೆಸಿ ಜನರಿಂದ ಹಣವನ್ನು ಸುಲಿಗೆ ಮಾಡಿರಬೇಕು. ಒಂದು ಕ್ಷಣ ಬಳ್ಳಾರಿಯಲ್ಲಿ ಅವ್ಯಾಹತವಾಗಿ ನಡೆದ ಗಣಿಗಾರಿಕೆಯನ್ನು ನೆನಪು ಮಾಡಿಕೊಳ್ಳಿ. ನಮ್ಮದೇ ಕಬ್ಬಿಣದ ಅದಿರನ್ನು ದೋಚಿದ್ದರಿಂದ ಬಂದ ಹಣ ಯಾವ್ಯಾಯ ದೇಶಗಳಿಗೆ ರವಾನೆಯಾಗಿತ್ತು ಎಂಬ ವರದಿಗಳನ್ನು ನೀವೆಲ್ಲರೂ ಗಮನಿಯೇ ಇರುತ್ತೀರಿ. ಹೀಗಾಗಿ, ‘ಕಪ್ಪು ಹಣ’ ಯಾರ ಮನೆಯಲ್ಲಿ ಮುಚ್ಚಿಟ್ಟರೂ, ಅದು ನಿಜವಾಗಿಯೂ ಆಯಾ ದೇಶಗಳ ಜನರಿಗೆ ಸೇರಬೇಕಾದ ಸಂಪತ್ತು.

ಒಂದು ಕ್ಷಣ 21 ಟ್ರಿಲಿಯನ್ ಡಾಲರ್ ದುಡ್ಡು ಜಗತ್ತಿನ ಜನರಿಗೆ ವಾಪಾಸ್ ಬಂದರೆ ಏನೇನಾಗಬಹುದು ಎಂಬುದನ್ನು ಕಲ್ಪಿಸಿಕೊಂಡು ನೋಡಿ. ಅದರಿಂದ ಉತ್ತಮ ಆರೋಗ್ಯ ಸೇವೆ ಎಲ್ಲರಿಗೂ ಸಿಗುವಂತಾಗುತ್ತದೆ. ಉಚಿತ ಶಿಕ್ಷಣ ದೊರೆಯುತ್ತದೆ. ಪೆಟ್ರೋಲ್ ಮೇಲೆ ಹಾಕುವ ತೆರಿಗೆ ರದ್ದಾಗುತ್ತದೆ. ಕಡಿಮೆ ಬೆಲೆ ಅಡುಗೆ ಸಿಲಿಂಡರ್ ಸಿಗುತ್ತದೆ. ಬೇಳೆ ಕಾಳುಗಳು ಕೈಗೆಟುಕುವ ಬೆಲೆಗೆ ಸಿಗುತ್ತವೆ. ಒಟ್ಟಾರೆ, ಎಲ್ಲರೂ ನೆಮ್ಮದಿಯಾಗಿ ಬದುಕುವ ದೇಶಗಳು ರೂಪುಗೊಳ್ಳುತ್ತವೆ. ‘ಪನಾಮ ಪೇಪರ್ಸ್’ ಮೂಲಕ ಜನರಿಗೆ ಮಾಧ್ಯಮಗಳು ಹೇಳಲು ಹೊರಟಿರುವ ಆಶಯ ಇದು.

“ಮೊಸಾಕ್ ಫೋನ್ಸೆಕಾ ಕಂಪನಿಯ 40 ವರ್ಷಗಳ ದಾಖಲೆಗಳೇ ಇಷ್ಟು ಪ್ರಮಾಣದ ಕಪ್ಪು ಹಣದ ವಿಚಾರವನ್ನು ಬಲಿಗೆಳೆದಿವೆ. ಇಂತಹ ಲಕ್ಷಾಂತರ ದಳ್ಳಾಳಿ ಕಂಪನಿಗಳು ಜಗತ್ತಿನಾದ್ಯಂತ ಕಾರ್ಯಚರಣೆ ನಡೆಸುತ್ತಿವೆ.” ಎನ್ನುತ್ತಾರೆ ‘ಅಡ್ವೈಸರ್ ಆಫ್ ಗ್ಲೋಬಲ್ ಜಸ್ಟಿಸ್’ ಎಂಬ ಸರಕಾರೇತರ ಸಂಸ್ಥೆಯ ಮಾರ್ಕ್ ಹೇಯ್ಸ್. ಇದನ್ನು ನಾವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳಿಗೆ ಅರ್ಥವಾಗಬೇಕು. ನಮ್ಮ ಖಾತೆಗೆ 15 ಲಕ್ಷ ಬರುವ ಕನಸು ಬಿಟ್ಟಾಕೋಣ; ಬದಲಿಗೆ ಕಪ್ಪು ಹಣ ದೇಶಕ್ಕೆ ವಾಪಾಸ್ ಬರಲಿ, ಜನರ ಅಭಿವೃದ್ಧಿಗೆ ಬಳಕೆಯಾಗಲಿ ಎಂದು ಹಾರೈಸೋಣ. ನಾವಲ್ಲದಿದ್ದರೂ, ಮುಂದಿನ ಪೀಳಿಗೆ ನೆಮ್ಮದಿಯಾಗಿ ಬದುಕಲಿ ಎಂದು ಆಶಯ ವ್ಯಕ್ತಪಡಿಸೋಣ.

ಕೊನೆಯದಾಗಿ, ‘ಪನಾಮ ಪೇಪರ್ಸ್’ ಕರ್ನಾಟಕದಲ್ಲಿ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಇದನ್ನು ಓದುತ್ತಿರುವ ನಮಗೇಕೆ ಮುಖ್ಯವಾಗಬೇಕು? ಉತ್ತರ ನಿಮ್ಮ ಬಳಿಯೇ ಇದೆ!

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top