An unconventional News Portal.

ಪಶ್ಚಿಮ ಬಂಗಾಳದಲ್ಲಿ ಸೇನೆ ಜಮಾವಣೆ: ಮೋದಿ ಮೇಲೆ ಮಮತಾ ದೀದಿಗೆ ಯಾಕಿಷ್ಟು ಕೋಪ?

ಪಶ್ಚಿಮ ಬಂಗಾಳದಲ್ಲಿ ಸೇನೆ ಜಮಾವಣೆ: ಮೋದಿ ಮೇಲೆ ಮಮತಾ ದೀದಿಗೆ ಯಾಕಿಷ್ಟು ಕೋಪ?

ನೋಟು ಬದಲಾವಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಆರಂಭವಾಗಿರುವ ರಾಜಕೀಯ ಕದನ ಹೊಸ ತಿರುವು ಪಡೆದುಕೊಂಡಿದೆ.

ಕಳೆದ 24 ಗಂಟೆಗಳಿಂದ ಪಶ್ಚಿಮ ಬಂಗಾಳದ ಸೆಕ್ರೆಟರಿಯೇಟ್ ಬಿಲ್ಡಿಂಗ್ ಒಳಗಡೆ, ಭಾರತೀಯ ಸೇನೆಯ ಜಮಾವಣೆ ವಿರುದ್ಧ ಮಮತಾ ಧರಣಿ ಆರಂಭಿಸಿದ್ದಾರೆ. ಬಂಗಾಳ ಸರಕಾರದ ವಿರುದ್ಧ ಕೇಂದ್ರ ಸರಕಾರ ಮಿಲಿಟರಿ ಪಡೆಗಳನ್ನು ಬಳಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ‘ಇದೊಂದು ಮಿಲಿಟರಿ ಕ್ಷಿಪ್ರನಡೆ’ ಎಂದವರು ದೂರಿದ್ದಾರೆ.

ಶುಕ್ರವಾರ ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಟಿಎಂಸಿ ಸಂಸದ ಡೆರಿಕ್ ಓಬ್ರಿಯಾನ್ ಈ ವಿಚಾರವನ್ನು ಪ್ರಸ್ತಾಪಸಿ, ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದರು. ‘ಪಶ್ಚಿಮ ಬಂಗಾಳದ ನಾನಾ ಜಿಲ್ಲೆಗಳಲ್ಲಿ ಮಿಲಿಟರಿ ಪಡೆಗಳನ್ನು ಜಮಾವಣೆ ಮಾಡಲಾಗಿದೆ. ತಕ್ಷಣವೇ ವಾಪಾಸ್ ಕರೆಸಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ಉಬಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಸಮರ ಆರಂಭವಾಗುತ್ತಿದ್ದಂತೆ ಕಲಾಪವನ್ನು ಮುಂದೂಡಲಾಯಿತು.

ಆದರೆ, ಈ ಕುರಿತು ಸ್ವಷ್ಟೀಕರಣ ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, “ಪಶ್ಚಿಮ ಬಂಗಾಳ ಸರಕಾರ ಅನುಮತಿ ಮೇರೆಗೆ ಸೇನೆ ತನ್ನ ಕೆಲಸವನ್ನು ಆರಂಭಿಸಿದೆ,” ಎಂದಿದ್ದಾರೆ.

ಹೀಗೆ, ಪ್ರಧಾನಿ ಮೋದಿ ನ. 8ರಂದು ರಾತ್ರಿ 8 ಗಂಟೆಗೆ ‘ನೋಟು ಬದಲಾವಣೆ’ ಪ್ರಕ್ರಿಯೆಯನ್ನು ಘೋಷಿಸಿದ ನಂತರ ಆರಂಭವಾಗಿರುವ ರಾಜಕೀಯ ಕದನ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ವಿಶೇಷವಾಗಿ, ಮಮತಾ ಬ್ಯಾನರ್ಜಿ ಮತ್ತು ಮೋದಿ ನಡುವೆ ನೇರ ರಾಜಕೀಯ ಟೀಕಾ ಪ್ರಹಾರಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಮತಾ ಮೊದಲು:

ಮೋದಿ ನೋಟು ಬದಲಾವಣೆ ಘೋಷಣೆ ಮಾಡುತ್ತಿದ್ದಂತೆ, ಪ್ರತಿಪಕ್ಷಗಳಾದ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳು ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕು ಎಂಬ ಆಲೋಚನೆಯಲ್ಲಿದ್ದವು. ಆಗ ಮೊದಲ ಬಾರಿಗೆ ನೋಟು ಬದಲಾವಣೆ ಪ್ರಕ್ರಿಯೆಯನ್ನು ಜರಿದವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಮೋದಿ ಘೋಷಣೆ ಹೊರಬಿದ್ದ 2 ಗಂಟೆಯೊಳಗೆ, ‘ಇದೊಂದು ಕಠಿಣ ತೀರ್ಮಾನ’ ಎಂದು ಟ್ವೀಟ್ ಮಾಡಿದ್ದರು.

ಮಮತಾ ಬ್ಯಾನರ್ಜಿ ಟ್ವೀಟ್.

ಮಮತಾ ಬ್ಯಾನರ್ಜಿ ಟ್ವೀಟ್.

ಅಲ್ಲಿಂದ ಇವತ್ತಿನವರೆಗೂ ಮಮತಾ ನೋಟು ಬವಲಾವಣೆ ಪ್ರಕ್ರಿಯೆಯನ್ನು ವಿರೋಧಿಸಿಕೊಂಡೇ ಬಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದಲ್ಲಿ ರ್ಯಾಲಿಗಳನ್ನು ಅವರ ಪಕ್ಷ ಆಯೋಜಿಸುತ್ತಿದೆ. ಸಂಸತ್ತಿನ ಒಳಗೂ ಟಿಎಂಸಿ ಪ್ರಧಾನಿ ನಿರ್ಧಾರವನ್ನು ಜರಿಯುತ್ತಿದೆ. ಮಮತಾ ಕಳೆದ ಒಂದು ತಿಂಗಳ ಅಂತರದಲ್ಲಿ ನೋಟು ಬದಲಾವಣೆಯ ಕುರಿತು ಮಾಡಿರುವ ಸರಣಿ ಟ್ವೀಟ್ಗಳು, ಅವರ ಆಕ್ರೋಶಕ್ಕೆ ಕನ್ನಡಿ ಹಿಡಿಯುತ್ತಿದೆ.

ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ನೋಟು ಬದಲಾವಣೆ ಪ್ರಕ್ರಿಯೆಯನ್ನು ವಿರೋಧಿಸಲು ಹಿಂದೆ ಮುಂದೆ ನೋಡುತ್ತಿರುವಾಗ ಫೀಲ್ಡಿಗೆ ಇಳಿದವರು ಮಮತಾ. ನಂತರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಎಸ್ಪಿ ನಾಯಕಿ ಮಾಯಾವತಿ ಈ ಸಾಲಿನಲ್ಲಿ ಸೇರಿಕೊಂಡರು. ಇವತ್ತು ಮೋದಿ ನೋಟು ಬದಲಾವಣೆ ಪ್ರಕ್ರಿಯೆಗೆ ಎದುರಾಗುತ್ತಿರುವ ರಾಜಕೀಯ ವಿರೋಧದ ನಾಯಕತ್ವವನ್ನು ಮಮತಾ ವಹಿಸಿಕೊಂಡಿದ್ದಾರೆ. ಯಾಕೆ?

ವಿಶ್ಲೇಷಣೆಗಳ ಏಕಮುಖ:

ಈ ಕುರಿತು ಅಂಬಾನಿ ಒಡೆತನದ ‘ಫಸ್ಟ್ ಪೋಸ್ಟ್’ ಸೇರಿದಂತೆ ನಾನಾ ಮಾಧ್ಯಮಗಳು ಈ ಕುರಿತು ವಿಶ್ಲೇಷಣೆಗೆ ಇಳಿದಿವೆ. ಅಚ್ಚರಿ ಎಂದರೆ, ಈ ಎಲ್ಲಾ ವಿಶ್ಲೇಷಣೆಗಳು ಏಕಮುಖವಾಗಿವೆ. ನೋಟು ಬದಲಾವಣೆ ಪ್ರಕ್ರಿಯೆ ಘೋಷಣೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳದ ಸಹಕಾರಿ ಬ್ಯಾಂಕುಗಳಲ್ಲಿನ ಠೇವಣಿ ಹೆಚ್ಚಾಗಿದೆ. ಮಮತಾ ಪಕ್ಷವಾದ ಟಿಎಂಸಿಗೆ ವ್ಯಾಪಾರಿಗಳೇ ನಿಧಿ ಸಂಗ್ರಹದ ಮೂಲ. ಹೀಗಾಗಿ, ಮಮತಾ ನೋಟು ಬದಲಾವಣೆಯನ್ನು ವಿರೋಧಿಸುತ್ತಿದ್ದಾರೆ ಎಂಬುದು ಇವುಗಳ ಸಾರಾಂಶ. ವಾಸ್ತವದಲ್ಲಿ ಮಮತಾ ವೈಯುಕ್ತಿಕವಾಗಿ ಕಪ್ಪು ಹಣವನ್ನು ಹೊಂದಿರುವುದನ್ನು ಅವರ ವಿರೋಧಿಗಳೂ ಕೂಡ ಒಪ್ಪಿಕೊಳ್ಳುವುದಿಲ್ಲ.

ಅದಕ್ಕೆ ಕಾರಣ ಮಮತಾ ವ್ಯಕ್ತಿತ್ವ. ಇವತ್ತಿಗೂ ಚಿಕ್ಕದೊಂದು ಮನೆಯಲ್ಲಿ ವಾಸಿಸುವ ಮಮತಾ, ತಮ್ಮ ನಡೆ, ನುಡಿ ಮತ್ತು ಜೀವನಶೈಲಿಯನ್ನು ಅತ್ಯಂತ ಸರಳವಾಗಿ ಇಟ್ಟುಕೊಂಡಿದ್ದಾರೆ. ಎಡಪಕ್ಷಗಳ ಭದ್ರಕೋಟೆಯಂತಿದ್ದ ಪಶ್ಚಿಮ ಬಂಗಾಳದಲ್ಲಿ ಸತತ ಎರಡು ಬಾರಿ ಜನರಿಂದ ಆಯ್ಕೆಯಾಗುವ ಮೂಲಕ ಅವರು ಸರಳತೆಯನ್ನೇ ಅಸ್ತ್ರವನ್ನಾಗಿ ಪ್ರಯೋಗಿಸಿದ್ದಾರೆ. ಇದೀಗ, ನೋಟು ಬದಲಾವಣೆಯನ್ನು ವಿರೋಧಿಸುತ್ತಿರುವ ಅವರು ‘ಬಡವರ ಪರ’ ವ್ಯಕ್ತಪಡಿಸುತ್ತಿರುವ ಕಾಳಜಿಗಳನ್ನು ಅನುಮಾನದಿಂದ ನೋಡುವುದು ಈ ಕಾರಣಗಳಿಗಾಗಿ ಕಷ್ಟವಾಗುತ್ತಿದೆ.

ರಾಷ್ಟ್ರೀಯ ನಾಯಕತ್ವ:

mamata-protest-pti

ಇದರ ಜತೆಗೆ, ಮಮತಾ ಮೋದಿ ನಿರ್ಧಾರಕ್ಕೆ ವಿರುದ್ಧವಾಗಿ ಬೀದಿಗಳಿದ ಹಿನ್ನೆಲೆಯ ಕುರಿತು ಇನ್ನೊಂದಿಷ್ಟು ವಿಶ್ಲೇಷಣೆಗಳಿವೆ. ಅವುಗಳಲ್ಲಿ ಪ್ರಮುಖವಾದುದು ರಾಷ್ಟ್ರೀಯ ನಾಯಕತ್ವ. ನೋಟು ಬದಲಾವಣೆಯ ನಿರ್ಧಾರ ದೇಶದ ಮಟ್ಟದಲ್ಲಿ ಸಂಚಲನ ಮೂಡಿಸಲಿದೆ ಎಂಬುದನ್ನು ಉಳಿದವರಿಗಿಂತ ಮೊದಲು ಅರ್ಥಮಾಡಿಕೊಂಡವರು ಮಮತಾ ಬ್ಯಾನರ್ಜಿ. ಆ ಕಾರಣಕ್ಕೆ ಅವರು, ದಿಲ್ಲಿಯವರೆಗೂ ಬಂದ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ ಎನ್ನುತ್ತವೆ ರಾಜಕೀಯ ವಿಶ್ಲೇಷಣೆಗಳು.

ಈ ಹಿಂದೆ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಪುನರ್ ಆಯ್ಕೆ ಕಾರಣಕ್ಕೆ ಹೀಗೆ ದಿಲ್ಲಿ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದವರು. ಇದೀಗ ನೋಟು ಬದಲಾವಣೆಯನ್ನು ವಿರೋಧಿಸುವ ಮೂಲಕ ಅವರು ಮತ್ತೊಮ್ಮೆ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾಗಿದ್ದಾರೆ.

ಇದಕ್ಕೆ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ನೀಡುತ್ತಿರುವ ಪ್ರತಿಕ್ರಿಯೆಗಳು ರಾಜಕೀಯವಾಗಿ ಟಿಎಂಸಿಗೇ ಲಾಭ ಮಾಡಿಕೊಡುತ್ತಿವೆ. ಈಗ ಮಿಲಿಟರಿ ಜಮಾವಣೆ ಮಾಡುವ ಮೂಲಕ ಟಿಎಂಸಿ ಹಿಂದೆಂದಿಗಿಂತಲೂ ಹೆಚ್ಚು ಪಶ್ಚಿಮ ಬಂಗಾಳದಲ್ಲಿ ಜನಪ್ರಿಯಗೊಳ್ಳುತ್ತಿದೆ. ಸದ್ಯ ಅಲ್ಲಿನ ತಳಮಟ್ಟದ ಪರಿಸ್ಥಿತಿ ಮಮತಾಗೆ ಹೆಚ್ಚು ಲಾಭಕರವಾಗಿದೆ. ಏಕಮುಖ ವಿಶ್ಲೇಷಣೆಗಳನ್ನು ಇಟ್ಟುಕೊಂಡು ನೋಡುವುದಾದರೆ, ಮಮತಾ ಪಾಲಿಗೆ ಕೇಂದ್ರವನ್ನು ವಿರೋಧಿಸಿದ್ದು, ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಹಾಯ ಮಾಡುತ್ತಿದೆ. ನೋಟು ಬದಲಾವಣೆ ಪ್ರಕ್ರಿಯೆ ವಿಚಾರದಲ್ಲಿ ಮಮತಾ ಮುಂದಿನ ನಡೆಯ ಬಗ್ಗೆ ಅಷ್ಟೆ ಕುತೂಹಲವು ಮೂಡಿದೆ.

Leave a comment

Top