An unconventional News Portal.

ಜೈಲು ಸುಧಾರಣೆ ಮರೀಚಿಕೆ: ಕಾರಾಗೃಹ ಕ್ರಾಂತಿಯ ಸ್ವ’ರೂಪ’ ಮಕಾಡೆ ಮಲಗಿದ್ದು ಯಾಕೆ?

ಜೈಲು ಸುಧಾರಣೆ ಮರೀಚಿಕೆ: ಕಾರಾಗೃಹ ಕ್ರಾಂತಿಯ ಸ್ವ’ರೂಪ’ ಮಕಾಡೆ ಮಲಗಿದ್ದು ಯಾಕೆ?

ಆಗಸ್ಟ್‌ 31, 2013; ಶನಿವಾರ.

ಬೆಂಗಳೂರಿನ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿಯೊಬ್ಬರು ನಿವೃತ್ತರಾದ ದಿನ. ಅವತ್ತು ಜೈಲಿನ ಒಳಗಡೆಯೇ ‘ಪಾರ್ಟಿ’ಯೊಂದು ತಡರಾತ್ರಿವರೆಗೂ ನಡೆದಿತ್ತು. ಸಿಬ್ಬಂದಿಗಳು, ಕೈದಿಗಳು ಬೀಳ್ಕೊಡಿಗೆ ಮುಗಿಸಿ ತಮ್ಮ ಮನೆಗಳಿಗೆ, ಬ್ಯಾರಕ್‌ಗಳಿಗೆ ತೆರಳಿದ ನಂತರ ಸೈಕೋ ಕಿಲ್ಲರ್‌ ಎಂಬ ಆರೋಪಕ್ಕೆ ಗುರಿಯಾಗಿದ್ದ ಜೈ ಶಂಕರ್ ಜೈಲಿನಿಂದ ತಪ್ಪಿಸಿಕೊಂಡಿದ್ದ. ಮಾರನೇ ದಿನ ಸೆ. 1ರಂದು ಅದು ರಾಜ್ಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅವತ್ತಿನ ಸರಕಾರಕ್ಕೆ ಭಾರಿ ಮುಖಭಂಗವನ್ನೂ ಉಂಟು ಮಾಡಿತ್ತು. ಜತೆಗೆ, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ, ಅನಾಚಾರಗಳು ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದ್ದವು.

ಈ ಎಲ್ಲಾ ಬೆಳವಣಿಗೆಗಳಿಂದ ತಪ್ಪಿಸಿಕೊಳ್ಳಲು ಅಂದಿನ ಗೃಹ ಕಾರ್ಯದರ್ಶಿ ಪಟ್ಟನಾಯಕ್‌ ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ವರದಿಯೊಂದನ್ನು ನೀಡಲು ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಜೈಲಿನ ‘ಸುಧಾರಣೆ’ಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ‘ಸುರಕ್ಷತೆ’ಗೆ ಏನೇನು ಮಾಡಬೇಕು ಎಂದು ವರದಿ ನೀಡಿ ಕೈತೊಳೆದುಕೊಂಡಿತು.

ಇದಾದ ಎರಡು ವರ್ಷಗಳ ನಂತರ 2015ರಲ್ಲಿ ಹೊರಬಂದ ವರದಿಯೊಂದು ಕೈದಿಗಳು ತಪ್ಪಿಸಿಕೊಳ್ಳುವ ಪಟ್ಟಿಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನವನ್ನೂ ನೀಡಿತು. ಅತ್ತ ಜೈಲಿನ ಸುಧಾರಣೆಯೂ ಆಗಲಿಲ್ಲ, ಸುರಕ್ಷತೆಯೂ ಹೆಚ್ಚಲಿಲ್ಲ. ಬದಲಿಗೆ ಕಾರಾಗೃಹ ಇಲಾಖೆಯ ಬಜೆಟ್‌ ಏರಿತ್ತು ಅಷ್ಟೆ.

ಇವತ್ತು ಮತ್ತದೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಕಳೆದ ಒಂದು ವಾರದಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಇಬ್ಬರು ಐಪಿಎಸ್‌ ಅಧಿಕಾರಿಗಳ ನಡುವಿನ ಕಿತ್ತಾಟ ಈಗ ಜೈಲು ಎಂಬ ಪ್ರಪಂಚದಲ್ಲಿ ನಡೆಯುವ ಅಕ್ರಮ, ಅನಾಚಾರಗಳ ಮೇಲೆ ಬೆಳಕು ಚೆಲ್ಲುವಂತೆ ಮಾಡಿದೆ. ವಿಪರ್ಯಾಸ ಏನೆಂದರೆ, ಈ ಬಾರಿ ಕೂಡ ಜೈಲಿನ ಸುಧಾರಣೆಗಳು, ಕೈದಿಗಳ ಹಕ್ಕುಗಳ ಬದಲಿಗೆ, ಐಪಿಎಸ್‌ ಅಧಿಕಾರಿ ರೂಪ ಅವರ ಎತ್ತಂಗಡಿಯ ಸುತ್ತಲೇ ವರದಿಗಳು ಸುತ್ತಲಾರಂಭಿಸಿದೆ.

ಅಖಾಡಕ್ಕಿಳಿದ ರೂಪ: 

ಪರಪ್ಪನ ಅಗ್ರಹಾರವೂ ಸೇರಿದಂತೆ ದೇಶದ ಎಲ್ಲಾ ಜೈಲುಗಳಲ್ಲಿ ಅಕ್ರಮಗಳು ನಡೆಯುತ್ತವೆ ಎಂಬುದು ಹೊಸ ವಿಚಾರ ಏನಲ್ಲ. ಆದರೆ ಕರ್ನಾಟಕದ ಕಾರಾಗೃಹ ಇಲಾಖೆಗೆ ಡಿಐಜಿ ಆಗಿ ರೂಪ ಬಂದ ನಂತರ ನೀಡಿದ ವರದಿ ಮತ್ತು ಅದರ ಹಿಂದೆಯೇ ಹೊರಬಂದ ಸಿಸಿಟಿವಿ ದೃಶ್ಯಾವಳಿಗಳು ಜೈಲಿನ ಒಳಗೆ ನಡೆಯುವ ಅಕ್ರಮಗಳನ್ನು ಸಾಕ್ಷಿ ಸಮೇತ ಜನರ ಮುಂದಿಟ್ಟಿವೆ. ಅದರಲ್ಲೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಆಪ್ತೆ ಶಶಿಕಲಾ ಅವರೂ ಇದರ ಭಾಗವಾಗಿರುವುದರಿಂದ ಕರ್ನಾಟಕದ ಆಚೆಗೂ ಇದು ಸದ್ದು ಮಾಡುತ್ತಿದೆ.

ಜುಲೈ 12 ರಂದು ರೂಪ ತಮ್ಮ ಮೇಲಾಧಿಕಾರಿ, ಕಾರಾಗೃಹ ಇಲಾಖೆಯ ಡಿಜಿಪಿಯಾಗಿದ್ದ ಎನ್‌. ಎಸ್. ಸತ್ಯನಾರಾಯಣ್‌ ರಾವ್‌ ಅವರಿಗೆ ಸಲ್ಲಿಸಿದ ಮೊದಲ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ಇದರಲ್ಲಿ ಶಶಿಕಲಾ, ತೆಲಗಿ ವಿಚಾರಗಳ ಆಚೆಗೂ ಜೈಲಿನ ಆಸ್ಪತ್ರೆ, ಫಾರ್ಮಸಿಗಳ ಕುರಿತು ಪ್ರಸ್ತಾಪಗಳಿದ್ದವು. 18 ಜನ ಕೈದಿಗಳ ಮೂತ್ರ ಪರೀಕ್ಷೆಯ ವರದಿಯೂ ಇದರಲ್ಲಿತ್ತು.


RELATED: ಶಶಿಕಲಾ, ತೆಲಗಿ ಆಚೆಗೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಿಚ್ಚಿಟ್ಟ ರೂಪ ವರದಿ


ಇದು ಮಾಧ್ಯಮಗಳಿಗೆ ಸೋರಿಕೆಯಾದ ನಂತರ ಇಬ್ಬರು ಅಧಿಕಾರಿಗಳು ಮಾಧ್ಯಮಗಳ ಮೂಲಕವೇ ಆರೋಪ ಪ್ರತ್ಯಾರೋಪಕ್ಕೆ ಇಳಿದರು. ಈ ಸಮಯದಲ್ಲಿ ನಡಾವಳಿಗಳನ್ನು ಮೀರದಂತೆ ಖುದ್ದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆಯನ್ನೂ ನೀಡಿದರು. ಆದರೂ, ಶಿಷ್ಟಾಚಾರ ಮೀರುವ ಪ್ರಯತ್ನ ಮುಂದುವರಿಯಿತು. ಇದಾದ ನಂತರ ಜು. 15ರಂದು ರೂಪ ತಮ್ಮ ಎರಡನೇ ವರದಿಯನ್ನು ನೀಡಿದರು. ಇದು ಅಧಿಕೃತವಾಗಿ ಮಾಧ್ಯಮಗಳಿಗೆ ಸೋರಿಕೆಯಾಗದಿದ್ದರೂ, ಇದರ ಅಂಶಗಳು ಹೊರಬಿದ್ದವು.

ಎರಡನೇ ವರದಿಯಲ್ಲಿ ರೂಪ ಕೊಂಚ ಎಚ್ಚರಾದಂತೆ ಕಾಣಿಸುತ್ತಿದೆ. ಇದರಲ್ಲಿ ಒಟ್ಟು 11 ಅಂಶಗಳನ್ನು ಅವರು ಪಟ್ಟಿ ಮಾಡಿದ್ದರು. ಶಶಿಕಲಾಗೆ ನೀಡುವ ಪ್ರತ್ಯೇಕ ಸಂದರ್ಶಕರ ಕೊಠಡಿಯಿಂದ ಆರಂಭವಾಗುವ ವರದಿಯಲ್ಲಿ, ಸಿಸಿಟಿವಿ ನಿರ್ವಹಣೆ, ಮೊಬೈಲ್‌ ಜಾಮರ್ ಕೆಲಸ ಮಾಡದಿರುವುದು, ಕೈದಿಗಳಿಗೆ ಮಾಂಸಾಹಾರ ಸರಬರಾಜಿನ ತೂಕದಲ್ಲಿ ಆಗಿರುವ ವ್ಯತ್ಯಾಸಗಳು, ಜೈಲಿನ ಅಧೀಕ್ಷಕ ಕೃಷ್ಣಕುಮಾರ್‌ ಕೈದಿಗಳನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಿರುವ ವಿಚಾರಗಳನ್ನು ಉಲ್ಲೇಖಿಸಿದ್ದರು. ವಿಶೇಷ ಎಂದರೆ, ಅವರ ಬಹುತೇಕ ಆರೋಪಗಳಿಗೆ ಮೊದಲ ಹಾಗೂ ಎರಡನೇ ವರದಿಯಲ್ಲಿ ಸಾಕ್ಷಿಗಳನ್ನು ನೀಡುವ ಗೊಡವೆಗೆ ಹೋಗಲಿಲ್ಲ. ಬದಲಿಗೆ, ವದಂತಿ, ಹೇಳಿಕೆ, ಮೌಖಿಕವಾಗಿ ತಿಳಿದು ಬಂದಿದೆ ಎಂದು ವರದಿಗಳಲ್ಲಿ ಪ್ರಸ್ತಾಪಿಸಿದ್ದರು. ಇದನ್ನು ಡಿಐಜಿ ಮಟ್ಟದ ಅಧಿಕಾರಿಯಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ವಿಚಾರ.

ಸುಧಾರಣಾ ಕಾಂತ್ರಿ?:

roopa-sathyanarana-rao-1

ಕಾರಾಗೃಹ ಇಲಾಖೆಯ ಡಿಐಜಿಯಾಗಿ ಬಂದ ಮೊದಲ ದಿನದಿಂದಲೂ ರೂಪ ಕಾರ್ಯವೈಖರಿ ಗಮನ ಸೆಳೆಯುವಂತಿದೆ. ತುಮಕೂರು ಜೈಲಿಗೆ ಭೇಟಿ ನೀಡುವ ಅವರು ಕೈದಿಗಳ ಸುಧಾರಣೆ ಕುರಿತು ಕಾರ್ಯಕ್ರಮವೊಂದನ್ನು ನಡೆಸುತ್ತಾರೆ. ಆ ಕುರಿತಾದ ಮಾಧ್ಯಮ ವರದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲಿಂದ ನೇರವಾಗಿ ಸುದ್ದಿ ವಾಹಿನಿಯಲ್ಲಿ ಕುಳಿತು ಫೋನ್‌ ಇನ್‌ ಕಾರ್ಯಕ್ರಮ ನಡೆಸುತ್ತಾರೆ. ಹೀಗೆ, ಹೊಸ ಇಲಾಖೆಗೆ ಬಂದ 15 ದಿನಗಳ ಒಳಗಾಗಿ ‘ಕರ್ನಾಟಕದ ಕಿರಣ್‌ ಬೇಡಿ’ಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಾರೆ.

ಇದಾದ ನಂತರವೇ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುವ ಅವರು ಮೊದಲ ವರದಿಯನ್ನು ಮೇಲಾಧಿಕಾರಿ ಎಚ್‌. ಎನ್‌. ಎಸ್‌ ರಾವ್‌ಗೆ ನೀಡುತ್ತಾರೆ. ಅಲ್ಲಿಯೂ ಕೂಡ ಅವರ ವಿರುದ್ಧ ಗಾಳಿ ಸುದ್ದಿಯನ್ನು ಇಟ್ಟುಕೊಂಡು ಆರೋಪವನ್ನು ಮಾಡುತ್ತಾರೆ. ಎರಡೂ ವರದಿಗಳಲ್ಲಿ ಸಿದ್ಧತೆಯ ಕೊರತೆ, ಸಾಕ್ಷಿಗಳನ್ನು ಸಂಗ್ರಹಿಸಲು ಬೇಕಾದ ಬದ್ಧತೆಯ ಪ್ರದರ್ಶನವೇ ಕಾಣುವುದಿಲ್ಲ. ಐಪಿಎಸ್‌ ಅಧಿಕಾರಿಯೊಬ್ಬರು ಇಡಬೇಕಾದ ಎಚ್ಚರಿಕೆ ಹೆಜ್ಜೆಗಳನ್ನು ಅವರು ಮರೆತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅಂತಿಮವಾಗಿ, ಇದು ಜೈಲಿನ ಸುಧಾರಣೆಗಿಂತ ಹೆಚ್ಚಾಗಿ, ಪ್ರಚಾರಕ್ಕೆ ಮತ್ತು ಮೇಲಾಧಿಕಾರಿ ಮೇಲಿನ ಸಿಟ್ಟಿನ ‘ರೂಪಾಂತರ’ದಲ್ಲಿ ಕೊನೆಯಾಗಿದೆ.

ಮೊದಲ ಹೋರಾಟ:

ಕರ್ನಾಟಕದಲ್ಲಿ ಜೈಲಿನ ವ್ಯವಸ್ಥೆಯ ಕುರಿತು ಮೊದಲ ಹೋರಾಟ ನಡೆದಿದ್ದು ಫೆ. 14, 1978ರಲ್ಲಿ. ಇವತ್ತಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇದ್ದ ಅಂದಿನ ಜೈಲಿನ ಒಳಗೆ ಕೈದಿಗಳ ತಮಗೆ ನೀಡುತ್ತಿದ್ದ ಗಂಜಿ ಊಟದ ವಿರುದ್ಧ ಸಿಡಿದೆದ್ದಿದ್ದರು. ಈ ಕುರಿತು ವಿಧಾನಸಭೆಯಲ್ಲಿಯೂ ಚರ್ಚೆಯಾಗಿತ್ತು. ನಂತರ ದಿನಗಳಲ್ಲಿ ವಾರಕ್ಕೆರಡು ಬಾರಿ ಮಾಂಸಾಹಾರ, ಉಪ್ಪಿಟ್ಟು, ಕೇಸರಿ ಬಾತ್‌ಗಳು ಜೈಲಿನ ಮೆನ್ಯುನಲ್ಲಿ ಸೇರಿಕೊಂಡವು ಎನ್ನುತ್ತದೆ ಇತಿಹಾಸ. ಜೈಲು ಎಂಬುದು ಶಿಕ್ಷೆಯ ಕೇಂದ್ರಗಳು ಎಂಬುಕ್ಕಿಂತ ಸುಧಾರಣೆಯ ಸ್ಥಾನಗಳು ಎಂಬ ಪರಿಕಲ್ಪನೆ ನಿಧಾನವಾಗಿ ಬೆಳೆಯಲು ಈ ಘಟನೆ ಪ್ರೇರಣೆಯನ್ನೂ ನೀಡಿತ್ತು.

ಹಾಗಂತ, ಜೈಲುಗಳ ಅಕ್ರಮಗಳು ಕಡಿಮೆಯಾಗದ ಕುರಿತು ವರದಿಗಳಿಲ್ಲ. ಕರ್ನಾಟಕವೂ ಸೇರಿದಂತೆ, ದೇಶದ ಯಾವ ಜೈಲಿಗೆ ಕಾಲಿಟ್ಟರೂ ಅಕ್ರಮಗಳ ಸಾಲು ಸಿಗುತ್ತದೆ. ಇದು ಸಮಾಜದ ನಡುವೆಯೇ ಇರುವ ಜೈಲು ಎಂಬ ವಿಭಿನ್ನವಾದ ಪ್ರಪಂಚ. ಅದನ್ನು ಸುಧಾರಣೆ ಮಾಡಲು ಬದ್ಧತೆ, ಇಚ್ಚಾಶಕ್ತಿಗಳ ಜತೆಗೆ, ಆಳಕ್ಕಿಳದ ಭ್ರಷ್ಟಾಚಾರದ ಬೇರುಗಳನ್ನು ಕತ್ತರಿಸಿ ಹಾಕಲು ಕಾರ್ಯತಂತ್ರದ ಅಗತ್ಯವೂ ಇದೆ. ಕಾರಾಗೃಹ ಇಲಾಖೆಯ ಡಿಐಜಿ ಹುದ್ದೆಗೆ ಬಂದ ಡಿ. ರೂಪ ಅವರಿಗೆ ಪ್ರಾಮಾಣಿಕ ಕಾಳಜಿ ಇದ್ದಲ್ಲಿ, ಇಂತಹದೊಂದು ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವ ಅಗತ್ಯವಿತ್ತು. ಇತಿಹಾಸದ ಪಾಠಗಳಿದ್ದವು. ಕನಿಷ್ಟ ಇಷ್ಟನ್ನಾದರೂ ಅವರು ತಮಗಿರುವ ‘ಮಾಧ್ಯಮ ಸಲಹೆಗಾರ’ರಿಂದ ಪಡೆದುಕೊಳ್ಳಬಹುದಾಗಿತ್ತು. ಆದರೆ, ಅವೆಲ್ಲಕ್ಕೂ ತಿಲಾಂಜಿಲಿ ಇಡುವಂತೆ ತಮ್ಮ ವ್ಯಾಪ್ತಿ ಮೀರಿ ಸಾರ್ವಜನಿಕವಾಗಿ, ಮಾಧ್ಯಮಗಳ ಮೂಲಕವೇ ಮೇಲಾಧಿಕಾರಿ ವಿರುದ್ಧ ಹೋರಾಟಕ್ಕಿಳಿದರು ಮಹಿಳಾ ಅಧಿಕಾರಿ.

ಇವೆಲ್ಲವುಗಳ ಪರಿಣಾಮ, ರೂಪರಿಂದ ನ್ಯಾಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರ ಪರ ನಿಂತ 20 ಜನ ಕೈದಿಗಳ ದೈಹಿಕವಾಗಿಯೂ ಜರ್ಜರಿತಗೊಂಡು ಈ ಬೇರೆ ಜೈಲುಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಸರಕಾರ ಈಗ ರೂಪ ಮತ್ತು ರಾವ್‌ ಇಬ್ಬರನ್ನೂ ತಮ್ಮ ಸ್ಥಾನದಿಂದ ಬಿಡುಗಡೆ ಮಾಡಿದೆ. ಒಬ್ಬರು ಸಾಕ್ಷಿಗಳನ್ನು ಸೃಷ್ಟಿಸುವ ಹಾಗೂ ಇನ್ನೊಬ್ಬರು ಸಾಕ್ಷಿಗಳನ್ನು ನಾಶ ಮಾಡುವ ಸಾಧ್ಯತೆಗೆ ಕಡಿವಾಣ ಬಿದ್ದಿದೆ. ಮಾಜಿ ಐಎಎಸ್ ಅಧಿಕಾರಿ ವಿನಯ್‌ ಕುಮಾರ್ ಪ್ರಕರಣದ ತನಿಖೆ ನಡೆಸಿ ವರದಿ ನೀಡವ ಹೊಣೆ ಹೊತ್ತಿದ್ದಾರೆ. ರೂಪ, ರಾವ್‌ ಸುತ್ತ ಎದ್ದಿರುವ ಹೈಪ್‌ಗಳ ಆಚೆಗೆ, ವಿನಯ್‌ ಕುಮಾರ್ ಜೈಲುಗಳ ಸುಧಾರಣೆ ಕುರಿತು, ಅಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಸ್ತುನಿಷ್ಟವಾದ ವರದಿ ನೀಡುವ ಕೆಲಸ ಮಾಡಲಿ. ಅದಷ್ಟೆ ಜೈಲಿನ ಒಳಗಡೆಯೇ ಇದ್ದು, ತಮ್ಮ ಹಕ್ಕುಗಳಿಂದ ವಂಚಿತರಾಗಿರುವ ಸಾವಿರಾರು ಕೈದಿಗಳ ಪಾಲಿಗೆ ಸದ್ಯಕ್ಕಿರುವ ಆಶಾಕಿರಣ.

Leave a comment

Top