An unconventional News Portal.

ಡಿಯರ್ ಮೋದಿಜಿ, ಮಹಿಳಾ ಸಬಲೀಕರಣ ಓಕೆ; ಸ್ಯಾನಿಟರಿ ನ್ಯಾಪ್‌ಕಿನ್ ಮೇಲೆ ಜಿಎಸ್‌ಟಿ ಯಾಕೆ?

ಡಿಯರ್ ಮೋದಿಜಿ, ಮಹಿಳಾ ಸಬಲೀಕರಣ ಓಕೆ; ಸ್ಯಾನಿಟರಿ ನ್ಯಾಪ್‌ಕಿನ್ ಮೇಲೆ ಜಿಎಸ್‌ಟಿ ಯಾಕೆ?

“ಗ್ರಾಮೀಣ ಭಾರತದಲ್ಲಿ ಋತುಚಕ್ರ ಅಥವಾ ಮುಟ್ಟು ಎಂಬುದು ನಿಷೇಧಿತ ಪದದಂತೆ ಬಳಕೆಯಾಗುತ್ತದೆ. ಈ ಕುರಿತು ಮಾತನಾಡುವುದು, ಚರ್ಚೆ ಮಾಡುವುದು ಮತ್ತು ಮಾಹಿತಿ ವಿನಿಮಯ ಕಷ್ಟವಾಗಿದೆ. ಇದಕ್ಕೆ ಸಾಮಾಜಿಕ ಅಸಹ್ಯಭಾವವೊಂದು ಅಂಟಿಕೊಂಡಿದೆ…”

ಹೀಗಂತ ಹೇಳುತ್ತದೆ ಡಿಸೆಂಬರ್‌ 2015ರಲ್ಲಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ ‘ರಾಷ್ಟ್ರೀಯ ಋತುಚಕ್ರ ಸ್ವಚ್ಚತೆ ನಿರ್ವಹಣೆ ಮಾರ್ಗಸೂಚಿ’ ಕಡತದ ಮುನ್ನಡಿ. ಇದನ್ನು ಬಿಡುಗಡೆ ಮಾಡುವ ಮೂಲಕ ಮುಟ್ಟಿನ ಕುರಿತು ರಾಷ್ಟ್ರಮಟ್ಟದಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಕೂಡ ಸೇರಿಕೊಂಡಿತು. ಯುನಿಸೆಫ್ ಮಾರ್ಗದರ್ಶನದಲ್ಲಿ ಈ ಮಾರ್ಗಸೂಚಿಗಳನ್ನು ತಯಾರಿಸಲಾಗಿತ್ತು.

2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಷ್ಟ್ರೀಯ ಮಟ್ಟದಲ್ಲಿ ಸ್ವಚ್ಚತೆ ಕುರಿತು ದೊಡ್ಡಮಟ್ಟದಲ್ಲಿ ಧ್ವನಿಗಳು ಕೇಳಿಬಂದವು. ಅದರ ಜತೆಗೆ, ಮಹಿಳೆಯರ ತಿಂಗಳ ಮುಟ್ಟಿನ ಜೈವಿಕ ಪ್ರಕ್ರಿಯೆ ಕುರಿತು ಚರ್ಚೆಗಳು ಹುಟ್ಟಿಕೊಂಡವು. ತಮ್ಮ ಮೊದಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಹಿಳೆಯರು ಮತ್ತು ಬಾಲಕಿಯರು ಬಹಿರ್ದೆಸೆ ಹೋಗುವ ಪರಿಸ್ಥಿತಿ ಇನ್ನೂ ಇರುವುದನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಜತೆಗೆ, ಋತುಚಕ್ರ ಅಥವಾ ಮುಟ್ಟಿನ ಕಾರಣಕ್ಕೆ ಬಾಲಕಿಯರು ಹೋಗುವ ಶಾಲೆಗಳಲ್ಲಿ ಶೌಚಾಲಯಗಳ ಅಗತ್ಯತೆಯನ್ನು ಅವರು ಒತ್ತಿಹೇಳಿದರು. ಇದೀಗ ಅವರದ್ದೇ ಸರಕಾರ ಜಾರಿಗೊಳಿಸಿದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ‘ಸ್ಯಾನಿಟರಿ ನ್ಯಾಪ್‌ಕಿನ್‌’ಗಳಿಗೆ ತೆರಿಗೆ ಹೇರುವ ಮೂಲಕ ವಿರೋಧಕ್ಕೆ ಅನುವು ಮಾಡಿಕೊಟ್ಟಿದೆ. ತಾನೇ ಮುತುವರ್ಜಿತೋರಿಸಿದ ವಿಚಾರಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ.

ಜಿಎಸ್‌ಟಿ ಜಾರಿಗೂ ಮುನ್ನವೇ ಅದರಲ್ಲಿನ ಹಲವು ನ್ಯೂನತೆಗಳ ಬಗ್ಗೆ ಗಮನಸೆಳೆಯುವ ಕೆಲಸ ನಡೆದಿತ್ತು. ವಿಶೇಷವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ವಿಧಿಸುವ ವಿಚಾರಕ್ಕೆ ಮೊದಲು ಮಹರಾಷ್ಟ್ರ ನವನಿರ್ಮಾನ ಸೇನೆ (ಎಂಎನ್‌ಎಸ್) ವಿರೋಧ ವ್ಯಕ್ತಪಡಿಸಿತ್ತು. ಇದೀಗ ಹೊಸ ತೆರಿಗೆ ಪದ್ಧತಿ ಜಾರಿಗೆ ಬಂದ ನಂತರ, ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ತೆರಿಗೆ ವ್ಯಾಪ್ತಿಗೆ ತಂದಿದ್ದಕ್ಕೆ ಪ್ರತಿಭಟನೆಗಳು ಆರಂಭವಾಗಿವೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಕಳುಹಿಸುವ ಮೂಲಕ ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಬೇಡಿಕೆ ಮುಂದಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಸಮಾಚಾರ’ದ ಜತೆ ಮಾತನಾಡಿದ ವೈದ್ಯರು, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆಯರು ಹಾಗೂ ಮಹಿಳಾ ರಾಜಕಾರಣಿಗಳೂ ಕೂಡ ಕೇಂದ್ರ ಸರಕಾರ ತೆರಿಗೆ ವ್ಯಾಪ್ತಿಯಿಂದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಕೈಬಿಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆರೋಗ್ಯದ ಹಿನ್ನೆಲೆ: 

ಋತುಚಕ್ರ ಅಥವಾ ತಿಂಗಳ ಮುಟ್ಟು ಎಂದು ಕರೆಯುವ ಮಹಿಳೆಯಲ್ಲಿ ನಡೆಯುವ ಜೈವಿಕ ಪ್ರಕ್ರಿಯೆ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಾಮಾಜಿಕ ಹಾಗೂ ಆರೋಗ್ಯ ಸಮಸ್ಯೆಗಳ ಹಲವು ಆಯಾಮವನ್ನು ಹೊಂದಿದೆ. ಭಾರತದ ವಿಚಾರಕ್ಕೆ ಬರುವುದಾದರೆ, ಇವತ್ತಿಗೂ ಶೇ. 88ರಷ್ಟು ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿಲ್ಲ, ಬದಲಿಗೆ ಬಟ್ಟೆ, ಇದ್ದಿಲು ಹಾಗೂ ಮಣ್ಣನ್ನು ಬಳಸುತ್ತಾರೆ ಎಂಬ ಜನಪ್ರಿಯವಾಗಿ ಸಮೀಕ್ಷೆಯ ವರದಿಗಳು ಕಾಣಸಿಗುತ್ತವೆ.

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಬಳಕೆ ಮಾತ್ರವಲ್ಲ, ಪರಿಸರಕ್ಕೆ ಹಾನಿ ಮಾಡುತ್ತಿರುವ ನ್ಯಾಪ್‌ಕಿನ್‌ಗಳಿಗೆ ಪರ್ಯಾಯವನ್ನು ಆದಷ್ಟು ಬೇಗ ಕಂಡುಕೊಳ್ಳಬೇಕಿದೆ ಎಂಬ ಅಂಶಗಳ ಕುರಿತೂ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ಕೇಂದ್ರ ಸರಕಾರ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ಶೇ. 12ರಷ್ಟು ತೆರಿಗೆ ವಿಧಿಸಿದೆ.

“ಮುಟ್ಟಿನ ಸಮಯದಲ್ಲಿ ಮಹಿಳೆಯರು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಬಳಸುವ ಮೂಲಕ ಆರೋಗ್ಯದ ಸಮಸ್ಯೆಗಳಿಂದ ಪಾರಾಗುತ್ತಿದ್ದರು. ವಿಶೇಷವಾಗಿ ಹಳ್ಳಿಗಾಡಿನ ಮಹಿಳೆಯರು ರಕ್ತಸ್ರಾವವನ್ನು ತಡೆಯಲು ಬಟ್ಟೆಗಳನ್ನು ಬಳಸುವುದು ಜನನಾಂಗ ಮಾರ್ಗದ ಸೋಂಕಿನ ಕಾಯಿಲೆ ಹರಡುವಂತೆ ಮಾಡುತ್ತಿತ್ತು. ಅದರ ಬದಲಿಗೆ ನ್ಯಾಪ್‌ಕಿನ್ ಬಳಕೆ ಸ್ವಚ್ಚತೆಯನ್ನೂ, ಆರೋಗ್ಯವನ್ನೂ ನೀಡುತ್ತಿತ್ತು. ಗ್ರಾಮೀಣ ಭಾಗದಲ್ಲಿ ಕಡಿಮೆ ಬೆಲೆಗೆ ಸಿಗುವ ನ್ಯಾಪ್‌ಕಿನ್ ಬಳಕೆ ಇತ್ತೀಚೆಗೆ ಸಾಮಾನ್ಯವಾಗಿತ್ತು. ಈಗ ಸರಕಾರದ ಅದರ ಮೇಲೆ ತೆರಿಗೆ ವಿಧಿಸುವ ಮೂಲಕ ಎಷ್ಟೋ ಮಹಿಳೆಯರು ಅದನ್ನು ಬಳಸದೆ ದೂರ ಉಳಿಯುವ ಮತ್ತು ಹಳೆಯ ಪದ್ಧತಿಗೆ ಮರಳುವ ಸಾಧ್ಯತೆಗಳು ಹೆಚ್ಚಿವೆ. ಇದು ಅಪಾಯಕಾರಿ,” ಎನ್ನುತ್ತಾರೆ ಜನಾರೋಗ್ಯ ಚಳವಳಿಯ ಡಾ. ಅಖಿಲಾ.

“ಕೇಂದ್ರ ಸರಕಾರದ ಈ ನಿರ್ಧಾರ ಅತ್ಯಂತ ದುರಾದೃಷ್ಟಕರ. ಒಂದು ಕಡೆ ಮಹಿಳಾ ಸಬಲೀಕರಣದ ಮಾತನಾಡುವ ಸರಕಾರ ಇನ್ನೊಂದು ಕಡೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ವಿಧಿಸಲು ಹೊರಟಿದೆ. ಇದು ಸ್ವಚ್ಚ ಭಾರತದ ಕನಸನ್ನು ಇಟ್ಟುಕೊಂಡಿರುವ ಸರಕಾರದ ಆಶಯಕ್ಕೇ ವಿರುದ್ಧವಾದದ್ದು,” ಎನ್ನುತ್ತಾರೆ ಡಾ. ಕಾಮಿನಿ ರಾವ್‌.

“ಯಾವುದೇ ಸರಕಾರ ಇರಲಿ, ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಹಿಂಪಡೆಯಬೇಕಿದೆ. ಗ್ರಾಮೀಣ ಭಾಗದ ಮಹಿಳೆಯರನ್ನು ಗಮನದಲ್ಲಿ ಇಟ್ಟುಕೊಂಡು ಅವುಗಳನ್ನು ಉಚಿತವಾಗಿ ನೀಡುವ ಕೆಲಸ ಆಗಬೇಕಿದೆ,” ಎನ್ನುತ್ತಾರೆ ನಟಿ, ಬಿಜೆಪಿ ಸದಸ್ಯೆ ಶೃತಿ. “ನಮ್ಮ ಸಭೆಗಳಲ್ಲಿ ಈ ಕುರಿತು ಗಮನ ಸೆಳೆಯುವ ಪ್ರಯತ್ನವನ್ನು ನನ್ನ ಮಿತಿಯಲ್ಲಿಯೇ ಮಾಡುತ್ತೇನೆ. ನಮ್ಮ ಪಕ್ಷ ಇಂತಹ ವಿಚಾರದಲ್ಲಿ ಸೂಕ್ಷ್ಮತೆಯಿಂದ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಭರವಸೆ ಇದೆ,” ಎನ್ನುತ್ತಾರೆ ಅವರು.

ಪರ್ಯಾಯ ಅಗತ್ಯ:

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ದಶಕಗಳ ಹಿಂದೆ ಭಾರತದಲ್ಲಿ ಮಹಿಳೆಯರು ತಿಂಗಳ ಮುಟ್ಟಿನ ಸಮಯದಲ್ಲಿ ಸ್ವಚ್ಚತೆ ಇಲ್ಲದ ಬಟ್ಟೆ ಬಳಸುವುದನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳು ಸಾಮಾನ್ಯವಾಗಿದ್ದವು. ಇವತ್ತಿಗೆ ಆ ಜಾಗವನ್ನು ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಆವರಿಸಿಕೊಂಡ ಮೇಲೆ ಅವುಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಇದೇ ವೇಳೆಗೆ ಪಶ್ಚಿಮ ದೇಶಗಳಲ್ಲಿ ವಿಶೇಷವಾಗಿ ಅಮೆರಿಕಾದಲ್ಲಿ ಇದಕ್ಕೆ ಪರ್ಯಾಯದ ಅಗತ್ಯದ ಕುರಿತು ಅಭಿಯಾನಗಳು ಹುಟ್ಟಿಕೊಂಡಿವೆ. ‘ರೆಡ್‌ ಟೆಂಟ್‌’ ಹೆಸರಿನಲ್ಲಿ ನಡೆಯುತ್ತಿರುವ ಅಂತಹದೊಂದು ಅಭಿಯಾನ, ಮಾರುಕಟ್ಟೆಯಲ್ಲಿ ಲಭ್ಯ ಇರುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬದಲಿಗೆ ಬಟ್ಟೆಯಲ್ಲಿ ತಯಾರಿಸಿದ ನ್ಯಾಪ್‌ಕಿನ್‌ಗಳ ಬಳಕೆಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದೆ.

‘ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಕಸ ಪ್ರವಾಹದಂತೆ ಹರಿದು ಬರುತ್ತಿದೆ. ಭಾರತದಲ್ಲಿ ಪ್ರತಿ ತಿಂಗಳು ಲಕ್ಷಾಂತರ ಮಹಿಳೆಯರು ಪ್ಯಾಡ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಬಳಕೆ ನಂತರ ಅವು ಎಲ್ಲಿ ಹೋಗುತ್ತವೆ? ಬಿಹಾರದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಶೇ. 60ರಷ್ಟು ಮಹಿಳೆಯರು ಪ್ಯಾಡ್‌ಗಳನ್ನು ಬಳಸಿದ ನಂತರ ಹೊರಗೆ ಬಿಸಾಕುತ್ತಾರೆ. ನಗರ ಪ್ರದೇಶಗಳಲ್ಲಿ ಒಳಚರಂಡಿಗಳಿಗೆ ಅವು ಸೇರುತ್ತಿವೆ. ಇದರಿಂದ ದೊಡ್ಡ ಮಟ್ಟದಲ್ಲಿ ಪರಿಸರ ಮೇಲೆ, ಸ್ವಚ್ಚತೆಯ ಮೇಲೆ ಪರಿಣಾಮ ಬೀರುತ್ತಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿರುವ ಹೊತ್ತಿಗೇ, ಅವುಗಳ ವಿಲೇವಾರಿಯ ಬಗ್ಗೆ, ಅವುಗಳ ಬದಲಿಗೆ ಪರಿಸರ ಸ್ನೇಹಿ ಪರ್ಯಾಯಗಳನ್ನು ಹುಡುಕುವ ನಿಟ್ಟಿನಲ್ಲಿ ಅತಿ ಶೀಘ್ರವಾಗಿ ಆಲೋಚನೆ ಮಾಡುವ ಅಗತ್ಯ ಮೋದಿ ಸರಕಾರದ ಮುಂದಿದೆ,’ ಎಂಬ ಅಭಿಪ್ರಾಯವನ್ನು ‘ದಿ ಗಾರ್ಡಿಯನ್’ ಪ್ರಕಟಿಸಿದ ಲೇಖನವೊಂದು ಹಂಚಿಕೊಳ್ಳುತ್ತದೆ.

ಸದ್ಯ, ಕೇಂದ್ರ ಸರಕಾರ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಈ ಕುರಿತು ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಪರ್ಯಾಯಗಳ ಹುಡುಕಾಟದ ಜತೆಗೇ, ಗ್ರಾಮೀಣ ಭಾಗದ, ಆರ್ಥಿಕವಾಗಿ ಹಿಂದುಳಿದ ಪ್ರತಿ ಮಹಿಳೆಯೂ ತಿಂಗಳ ಮುಟ್ಟು ಎಂಬುದು ಸಮಸ್ಯೆ ಅಲ್ಲ ಎಂಬ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲಿನ ತೆರಿಗೆ ಹಿಂತೆಗೆದುಕೊಳ್ಳುವುದು ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಬೇಕಿದೆ.

Leave a comment

Top