An unconventional News Portal.

ಸೌರ ವಿದ್ಯುತ್ ಕಡೆಗೆ ಮುಖಮಾಡಿದ ಆಪಲ್, ಗೂಗಲ್: ಇಂಧನ ಕ್ಷೇತ್ರಕ್ಕೆ ಟೆಕ್ ಕಂಪನಿಗಳೇಕೆ ಲಗ್ಗೆ ಇಡುತ್ತಿವೆ?

ಸೌರ ವಿದ್ಯುತ್ ಕಡೆಗೆ ಮುಖಮಾಡಿದ ಆಪಲ್, ಗೂಗಲ್: ಇಂಧನ ಕ್ಷೇತ್ರಕ್ಕೆ ಟೆಕ್ ಕಂಪನಿಗಳೇಕೆ ಲಗ್ಗೆ ಇಡುತ್ತಿವೆ?

ಈವರೆಗೂ ಸ್ಮಾರ್ಟ್ ಫೋನ್, ಕಂಪ್ಯೂಟರ್ ಹಾಗೂ ಅಂತರ್ಜಾಲ ಸೇವೆಗೆ ಸೀಮಿತವಾಗಿದ್ದ ಕಂಪನಿಗಳು ಹೊಸ ಉದ್ಯಮದತ್ತ ಮುಖ ಮಾಡಿವೆ. ನವೀಕರಿಸಬಹುದಾದ ಇಂಧನ (ಪವನ ವಿದ್ಯುತ್, ಸೌರ ವಿದ್ಯುತ್) ಮೂಲಗಳನ್ನು ಅವು ನಿರ್ಮಿಸುವತ್ತ ದಾಪುಗಾಲು ಇಡುತ್ತಿವೆ. ಇದು ಪ್ರಪಂಚದಾದ್ಯಂತ ಹೊಸ ಅಲೆಯನ್ನು ಸೃಷ್ಟಿಸುವ ಸಾಧ್ಯತೆಗಳಿವೆ.

ಹೆಚ್ಚುತ್ತಿರುವ ಇಂಧನದ ಬೇಡಿಕೆ, ಬರಿದಾಗುತ್ತಿರುವ ಇಂಧನ ಮೂಲಗಳು ಹಾಗೂ ಅದರಿಂದಾಗುತ್ತಿರುವ ವಾಯು ಮಾಲಿನ್ಯದ ನಿಟ್ಟಿನಲ್ಲಿ ಜಗತ್ತಿನಲ್ಲಿ ಬಹಳ ಹಿಂದಿನಿಂದಲೇ ನವೀಕರಿಸಬಹುದಾದ ಮೂಲಗಳ ಅನ್ವೇಷಣೆ ನಡೆಯುತ್ತಿತ್ತು. ಆದರೆ, ಅದಕ್ಕಾಗಿ ದುಬಾರಿ ವೆಚ್ಚವನ್ನು ಮಾಡಬೇಕಾಗಿದ್ದ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಇಂಧನ ಮೂಲಗಳನ್ನೇ ಜಗತ್ತು ಈವರೆಗೂ ನೆಚ್ಚಿಕೊಂಡು ಕುಳಿತಿದೆ. ಹೀಗಿರುವಾಗಲೇ, ಅಮೆರಿಕಾ ಮೂಲದ ಟೆಕ್ ಕಂಪನಿಗಳಾದ ಆಪಲ್, ಗೂಗಲ್ ಹಾಗೂ ಅಮೆಝಾನ್ಗಳು ನವೀಕರಿಸಬಹುದಾದ ಇಂಧನ ಮೂಲವನ್ನು ಸೃಷ್ಟಿಸಿಕೊಳ್ಳುವುದಾಗಿ ಹೇಳಿಕೊಂಡಿರುವುದು ಗಮನಾರ್ಹ ಬೆಳವಣಿಗೆ.

ಏನಿದು ಹೊಸ ಬೆಳವಣಿಗೆ?:

ಸದ್ಯ ಬಹುತೇಕರಿಗೆ ಇರುವ ಮಾಹಿತಿ ಪ್ರಕಾರ, ಆಪಲ್ ಹಾಗೂ ಗೂಗಲ್ ಸಂಸ್ಥೆಗಳು ಸ್ಮಾರ್ಟ್ ಫೋನ್, ಕಂಪ್ಯೂಟರ್ ಹಾಗೂ ಅಂತರ್ಜಾಲ ಸೇವೆಗಳನ್ನು ನೀಡುತ್ತಿರುವ ಕಂಪನಿಗಳು. ಆದರೆ, ಆಗಸ್ಟ್ ತಿಂಗಳಿನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಕಳೆದ ವರ್ಷ ಕೊಂಡುಕೊಂಡ ‘ಸೋಲಾರ್ ಫಾರ್ಮ್‌’ನಿಂದ ಸೌರ ವಿದ್ಯುತ್ನ್ನು ಮಾರಾಟ ಮಾಡಲು ಸದರಿ ಕಂಪನಿಗಳು ಅನುಮತಿ ಪಡೆದುಕೊಂಡಿದೆ.

ಆಪಲ್ ಸಂಸ್ಥೆ ನವೀಕರಿಸಬಹುದಾದ ಇಂಧನ ಉತ್ಪಾದನೆಗಾಗಿ ಹಣ ಹೂಡಿದೆ. ಮುಂದಿನ ದಿನಗಳಲ್ಲಿ ತಮ್ಮ ಅಷ್ಟೂ ಕಾರ್ಯಾಚರಣೆಗಳಿಗೆ ಇದೇ ಇಂಧನ ಮೂಲವನ್ನು ನೆಚ್ಚಿಕೊಳ್ಳುವುದಾಗಿ ಕಂಪನಿ ಹೇಳಿಕೊಂಡಿದೆ. ಆನ್ಲೈನ್ ಶಾಪಿಂಗ್ ತಾಣ ಅಮೆಝಾನ್ ಕೂಡ ಪಶ್ಚಿಮ ಟೆಕ್ಸಾಸ್ನಲ್ಲಿ ಪವನ ವಿದ್ಯುತ್ ಉತ್ಪಾದನಾ ಘಕಟವನ್ನು ನಿರ್ಮಿಸುವುದಾಗಿ ಹೇಳಿದೆ. ಅಂತರ್ಜಾಲ ಸೇವಾ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್, ‘ಸನ್ ಪವರ್’ ಕಂಪನಿ ಜತೆಯನ್ನು ಕೈ ಜೋಡಿಸಿದ್ದು, ಐವಾನ್ಫಾ ಸೋಲಾರ್ ಎಲೆಕ್ಟ್ರಿಕಲ್ ಜೆನೆರೇಟಿಂಗ್‌ ಸಿಸ್ಟಂ ಹೆಸರಿನ ಯೋಜನೆಯನ್ನು ಅಭಿವೃದ್ಧಿ ಪಡಿಸುತ್ತಿದೆ.

ಹೀಗೆ, ಸಾಲು ಸಾಲು ಟೆಕ್ ಕಂಪನಿಗಳೇಕೆ ನವೀಕರಿಸಬಹುದಾದ ಇಂಧನ ಮೂಲಗಳ ಮೊರೆ ಹೋಗುತ್ತಿವೆ?

apple-google-logo

“ಬೃಹತ್ ಟೆಕ್ ಕಂಪನಿಗಳಿಗೆ ಇಂಧನಕ್ಕಾಗಿ ವಿನಿಯೋಗಿಸುವ ಮೊತ್ತವೇ ಅತಿ ದೊಡ್ಡ ಹೂಡಿಕೆಯಾಗಿದೆ,” ಎನ್ನುತ್ತಾರೆ ಇಂಧನ ಕ್ಷೇತ್ರದ ವಿಶ್ಲೇಷಕ ಆಶ್ ಶರ್ಮಾ. ಐಎಚ್ಎಸ್ ಟೆಕ್ನಾಲಜಿ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅವರು, “ಇಂಧನಕ್ಕೆ ಹೂಡಿಕೆ ಮಾಡುತ್ತಿರುವ ಹಣವನ್ನು ಕಡಿಮೆ ಮಾಡುವುದು ಅವುಗಳು ಪಾಲಿಗೆ ಸವಾಲಿನ ಕೆಲಸ,” ಎನ್ನುತ್ತಾರೆ.

ಆಧುನಿಕ ಯುಗದಲ್ಲಿ ಅತಿ ಮುಖ್ಯವಾದ ‘ಡಾಟಾ ಬ್ಯಾಂಕ್’ (ಮಾಹಿತಿ ಕೋಶಗಳು) ನಿರ್ವಹಿಸಲು ಹಾಗೂ 24/7 ಸರ್ವರ್ಗಳನ್ನು ಸದಾ ಕಾಲ ತಂಪಾಗಿಡಲು ಭಾರಿ ಪ್ರಮಾಣ ಇಂಧನ ಬಳಕೆಯಾಗುತ್ತದೆ. ಇದು ದೊಡ್ಡ ಮೊತ್ತ. ಹೀಗಾಗಿ ಗೂಗಲ್ ರೀತಿಯ ಸಂಸ್ಥೆಗಳು ಜನರ ಮನೆಯ ಮೇಲೆಯೇ ಸೋಲಾರ್ ಪ್ಯಾನೆಲ್ಗಳನ್ನು ಅವಳವಡಿಸಿ, ಇಂಧನ ಮೂಲವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚುಸುತ್ತಿವೆ.

ವೆಚ್ಚದಲ್ಲಿ ಭಾರಿ ಇಳಿಕೆ:

ನಿರೀಕ್ಷೆಗಿಂತಲೂ ವೇಗವಾಗಿ ಸೋಲಾರ್ ಇಂಧನ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತಿದೆ. ಕಳೆದ ತಿಂಗಳು ಯುಎಇನ ಅಬು ದುಬೈನಲ್ಲಿ ನಡೆದ ಇಂಧನ ಹರಾಜಿನಲ್ಲಿ, ಜಪಾನ್ ಮತ್ತು ಚೀನಾ ಮೂಲದ ಜಂಟಿ ಕಂಪನಿ ಈಗಿರುವ ಸೌರ ವಿದ್ಯುತ್ ಉತ್ಪಾದನಾ ವೆಚ್ಚಕ್ಕಿಂತ ಶೇ. 2. 5ರಷ್ಟು ಕಡಿಮೆ ಮೊತ್ತವನ್ನು ಬಿಡ್ ಮಾಡಿದ್ದವು. ಇದು ಅಮೆರಿಕಾದಲ್ಲಿ ಕಲ್ಲಿದ್ದಲ ಮೂಲದಿಂದ ತಯಾರಾಗುತ್ತಿರುವ ವಿದ್ಯುತ್ ಉತ್ಪಾದನೆಯ ವೆಚ್ಚಕ್ಕೆ ಹೋಲಿಸಿದರೆ, ಅತ್ಯಂತ ಕಡಿಮೆ ಮೊತ್ತದ ಹಣವಾಗಿತ್ತು. ಸಹಜವಾಗಿಯೇ ಸೌರ ವಿದ್ಯುತ್ ಉತ್ಪಾದನೆ ಕುರಿತು ಆಸಕ್ತಿ ಬೆಳೆಯಲು ಇದು ಕಾರಣವಾಗಿದೆ. ಈ ಬೆಳವಣಿಗೆ “ಸೌರ ವಿದ್ಯುತ್ ಉತ್ಪಾದನೆಗೆ ಬೇಕಾದ ತಟ್ಟೆಗಳನ್ನು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿದೆ,” ಎನ್ನುತ್ತಾರೆ ಶರ್ಮಾ.

“ಈ ವಿಚಾರದಲ್ಲಿ ಚೀನಾ ಮುಂದಿದೆ. ಇಡೀ ಪ್ರಪಂಚದಲ್ಲಿ ಉತ್ಪಾದನೆಯಾಗುತ್ತಿರುವ ಸೌರ ವಿದ್ಯುತ್ ಉತ್ಪಾದನಾ ತಟ್ಟೆಗಳಲ್ಲಿ ಶೇ. 80ರಷ್ಟನ್ನು ಚೀನಾ ಒಂದೇ ತಯಾರಿಸುತ್ತಿದೆ,” ಎಂದು ಅವರು ಹೇಳುತ್ತಾರೆ.

ಸೌರ ವಿದ್ಯುತ್ ತಟ್ಟೆಗಳು ಮಾತ್ರವಲ್ಲ, ಅದರ ಜೋಡಣೆ ವಿಚಾರದಲ್ಲಿಯೂ ವೆಚ್ಚದಲ್ಲಿ ಭಾರಿ ಕಡಿತವಾಗಿದೆ. ಕೆಲವೇ ವರ್ಷಗಳ ಹಿಂದೆ, 50 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡುವುದು ದೊಡ್ಡ ವಿಚಾರ ಎನ್ನಿಸಿಕೊಂಡಿತ್ತು. ಆದರೆ ಇವತ್ತು, ಕನಿಷ್ಟ 100 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡುವ ಹಲವು ಘಟಕಗಳು ನಿರ್ಮಾಣಗೊಳ್ಳುತ್ತಿವೆ. ಇದಕ್ಕೆ ನಮ್ಮದೇ ದೇಶದ ಮಧ್ಯಪ್ರದೇಶದಲ್ಲಿರುವ 750 ಮೆಗಾ ವ್ಯಾಟ್ ಉತ್ಪಾದನಾ ಘಟಕ ಒಂದು ಉದಾಹರಣೆ ಅಷ್ಟೆ. ಇದನ್ನು ‘ರೇವಾ ಅಲ್ಟ್ರಾ ಮೆಗಾ ಸೋಲಾರ್’ ಎಂದು ಕರೆಯುತ್ತಿದ್ದು, 2017ರ ಹೊತ್ತಿಗೆ ನಿರ್ಮಾಣ ಕಾರ್ಯಪೂರ್ಣಗೊಳ್ಳಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಮಧ್ಯಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಸೋಲಾರ್ ಪವರ್ ಪ್ಲಾಂಟ್.

ಮಧ್ಯಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಸೋಲಾರ್ ಪವರ್ ಪ್ಲಾಂಟ್.

ಈ ಬೆಳವಣಿಗೆಗಳ ನಡುವೆಯೇ, ಅತ್ಯುತ್ತಮ ಗುಣಮಟ್ಟದ ಸೌರ ವಿದ್ಯುತ್ ಉತ್ಪಾದನಾ ತಟ್ಟೆಗಳನ್ನು ತಯಾರಿಸಲು ಸಂಶೋಧನೆಗಳು ನಡೆಯುತ್ತಿವೆ. ಸದ್ಯ ಅದರಲ್ಲಿ ಬಳಸುತ್ತಿರುವ ಕಚ್ಚಾ ವಸ್ತುಗಳಿಂದಾಗಿ ಮುಂದಿನ ದಿನಗಳಲ್ಲಿ ಪ್ಯಾನಲ್ಗಳ ದರವೂ ಕುಸಿಯಬಹುದು ಎಂಬ ನಿರೀಕ್ಷೆ ಇದೆ.

ಸದ್ಯ ಇಡೀ ಪ್ರಪಂಚದಲ್ಲಿ ಬಳಕೆಯಾಗುತ್ತಿರುವ ಇಂಧನ ಪ್ರಮಾಣದಲ್ಲಿ ಸೌರ ವಿದ್ಯುತ್ ಮೂಲದ ಪಾಲು ಕೇವಲ ಶೇ. 1ರಷ್ಟಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚುವ ಸೂಚನೆಗಳು ಸಿಗುತ್ತಿವೆ. ಆಪಲ್, ಗೂಗಲ್ ಮತ್ತಿತರ ತಂತ್ರಜ್ಞಾನ ಆಧಾರಿತ ಬೃಹತ್ ಕಂಪನಿಗಳು ಸೌರ ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳ ಕಡೆಗೆ ಮುಖ ಮಾಡಿವೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಜಾಗದಲ್ಲಿ ಸೋಲಾರ್ ಎನರ್ಜಿಯನ್ನು ಅವು ಮಾರಾಟ ಮಾಡುವ ಮಳಿಗೆಗಳನ್ನು ತೆರೆದರೂ ಅಚ್ಚರಿ ಏನಿಲ್ಲ. ಪರಿಣಾಮ ಜಗತ್ತಿನ ಉದ್ಯಮದ ಸ್ವರೂಪ ಬದಲಾಗಬಹುದು. ಅದಕ್ಕಿಂತ ಪ್ರಮುಖವಾದುದು ಮಾಲಿನ್ಯ ಪ್ರಮಾಣ ಕಡಿಮೆಯಾಗುವ ಆಶಯಗಳು ವ್ಯಕ್ತವಾಗುತ್ತಿವೆ. 2030ರ ಸುಮಾರಿಗೆ ಭಾರತದಲ್ಲಿ ವಾಯು ಮಾಲಿನ್ಯದಿಂದಾಗಿಯೇ ಸಾಯುವವರ ಸಂಖ್ಯೆ 1 ಕೋಟಿ ಮೀರಲಿದೆ ಎಂಬ ಅಂದಾಜಿದೆ. ಅಂತಹ ಸಮಯದಲ್ಲಿ ಪರ್ಯಾಯವೊಂದನ್ನು ಸೃಷ್ಟಿಸುವ ಕೆಲಸ ಶುರುವಾಗಿರುವುದು ಆಶಾದಾಯಕ ಅಂಶವಾಗಿದೆ.

ಮಾಹಿತಿ ಕೃಪೆ: ಬಿಬಿಸಿ

 

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top