An unconventional News Portal.

ಅಖಾಡಕ್ಕೆ ಪ್ರಧಾನಿ ಮೋದಿ: ಈ ಬಾರಿಯೂ ‘ಕೈ’ ತಪ್ಪುತ್ತಾ ಬಾಪೂ ನಾಡು?

ಅಖಾಡಕ್ಕೆ ಪ್ರಧಾನಿ ಮೋದಿ: ಈ ಬಾರಿಯೂ ‘ಕೈ’ ತಪ್ಪುತ್ತಾ ಬಾಪೂ ನಾಡು?

ದೇಶದ ಗಮನ ಸೆಳೆಯುತ್ತಿರುವ ಗುಜರಾತ್‌ ಚುನಾವಣೆಯ ಫಲಿತಾಂಶ; ಪ್ರಚಾರದ ಕೊನೆಯ ಹಂತದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಗಳ ಮೇಲೆ ತೀರ್ಮಾನವಾಗಲಿದೆ…

ಹೀಗಂತ ನವೆಂಬರ್ ತಿಂಗಳ ಆರಂಭದಲ್ಲಿ ವರದಿ ಮಾಡಿತ್ತು; ‘ಸಮಾಚಾರ’.

ಇದೀಗ ಪ್ರಧಾನಿ ಮೋದಿ ರ‍್ಯಾಲಿಗಳಿಗೆ ಸೋಮವಾರ ಚಾಲನೆ ಸಿಕ್ಕಿದೆ. ಗುಜರಾತ್‌ ಚುನಾವಣೆ ದಿನಾಂಕಗಳು ಘೋಷಣೆಯಾದ ನಂತರ, ಇದೇ ಮೊದಲ ಬಾರಿಗೆ ಪ್ರಧಾನಿ ಮತಪ್ರಚಾರಕ್ಕೆ ಇಳಿದಿದ್ದಾರೆ. ಕೇಂದ್ರ ಸಚಿವರು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ನಂತರ ತಾರಾ ಪ್ರಚಾರಕರಾಗಿ ಮೋದಿ ಗುಜರಾತ್‌ ಅಖಾಡಕ್ಕೆ ಆಗಮಿಸಿದ್ದಾರೆ.

ಮೋದಿ ಆಗಮನಕ್ಕೂ ಮುನ್ನವೇ ಗುಜರಾತ್‌ ಚುನಾವಣಾ ಕಣ ಸಾಕಷ್ಟು ಮತಪ್ರಚಾರದ ಕಸರತ್ತುಗಳಿಗೆ ಸಾಕ್ಷಿಯಾಗಿದೆ. 22 ವರ್ಷಗಳ ಆಡಳಿತವನ್ನು ಉಳಿಸಿಕೊಳ್ಳಲು ಬಿಜೆಪಿ ಹಾಗೂ ಬಿಜೆಪಿ ಭದ್ರಕೋಟೆಯಾಗಿ ಬದಲಾಗಿರುವ ರಾಜ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿದ್ದವು ಮತ್ತು ತೊಡಗಿವೆ ಕೂಡ.

ಎರಡು ದಶಕಗಳ ನಂತರ ಇದೇ ಮೊದಲ ಬಾರಿಗೆ ಗುಜರಾತ್‌ ಚುನಾವಣೆಯಲ್ಲಿ ‘ಜಾತಿ ಅಜೆಂಡಾ’ ಪ್ರಮುಖ ಪಾತ್ರವಹಿಸುತ್ತಿದೆ ಅಂತ ಅನ್ನಿಸಿದ್ದು ಅಕ್ಟೋಬರ್‌ ತಿಂಗಳ ಮಧ್ಯದಲ್ಲಿ. ಈ ಸಮಯದಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಗುಜರಾತ್‌ನಲ್ಲಿ ಕಳೆದ ಒಂದೂವರೆ ವರ್ಷಗಳ ಅಂತರದಲ್ಲಿ ಮುಖ್ಯವಾಹಿನಿಗೆ ಬಂದ ಮೂವರು ಯುವ ನಾಯಕರ ಜತೆ ಮಾತುಕತೆಗೆ ಇಳಿದಿತ್ತು. ಪಾಟೀದಾರ್ ಸಮುದಾಯದ ಮೀಸಲಾತಿ ಹೋರಾಟವನ್ನು ಮುನ್ನಡೆಸಿದ ಹಾರ್ದಿಕ್ ಪಟೇಲ್, ಓಬಿಸಿ ಸಮುದಾಯದ ಹೋರಾಟಕ್ಕೆ ನಾಯಕತ್ವ ನೀಡಿದ ಅಲ್ಪೇಶ್ ಠಾಕೂರ್ ಹಾಗೂ ದಲಿತ ಸಮುದಾಯದ ಹೋರಾಟವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಜಿಗ್ನೇಶ್ ಮೇವಾನಿ ಜತೆ ಕಾಂಗ್ರೆಸ್ ಸೀಟು ಹಂಚಿಕೆ ಹಾಗೂ ಅಧಿಕಾರಕ್ಕೆ ಬಂದರೆ ಮೀಸಲಾತಿ ಜಾರಿ ಕುರಿತು ಸುದೀರ್ಘ ಮಾತುಕತೆ ನಡೆಸಿತು. ಇದೇ ವೇಳೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್‌ ಹೈವೇಗಳಲ್ಲಿ ನಡೆಸಿದ ರ‍್ಯಾಲಿಗಳಿಗೆ ಭಾರಿ ಜನಬೆಂಬಲವೂ ವ್ಯಕ್ತವಾಯಿತು.

ಎರಡು ದಶಕಗಳ ಕಾಲ ಅಧಿಕಾರವನ್ನು ಕೈಲಿಟ್ಟುಕೊಂಡಿದ್ದ ಬಿಜೆಪಿಗೆ ಪ್ರಬಲ ಪೈಪೋಟಿ ಕಾಣಿಸಿಕೊಂಡ ಸಮಯ ಇದು. ಮುಖ್ಯವಾಹಿನಿಯಲ್ಲಿ ಬಿಜೆಪಿ ಸಂಕಷ್ಟದಲ್ಲಿದೆ ಎಂಬ ವರದಿಗಳು ಹೊರಬೀಳತೊಡಗಿದವು.

“ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೆಚ್ಚು ಕಡಿಮೆ ಇದೇ ವೇಳೆಯಲ್ಲಿ ಪಕ್ಷವನ್ನು ಬೂತ್‌ ಮಟ್ಟದಿಂದ ಕಟ್ಟಲು ಶುರುಮಾಡಿದ್ದರು. ಕಾಂಗ್ರೆಸ್ ಸೋ- ಕಾಲ್ಡ್‌ ಯುವ ನಾಯಕರ ಜತೆ ರಾಜೀ ಸಂಧಾನ, ಸೀಟು ಹಂಚಿಕೆ ಕುರಿತು ಮಾತುಕತೆಯಲ್ಲೇ ಕಾಲ ಕಳೆಯಿತು. ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಪ್ರಯತ್ನಪಡಲಿಲ್ಲ. ಲಾಭ ಆಗಿದ್ದು ಬಿಜೆಪಿಗೆ. ಇವತ್ತು ಗುಜರಾತ್‌ನ ನಗರ ಪ್ರದೇಶದಲ್ಲಿ ಬಿಜೆಪಿ ಗೆಲುವು ನಿಶ್ಚಯವಾಗಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಸಡ್ಡು ಹೊಡೆಯಲು ಕಾಂಗ್ರೆಸ್ ಬಳಿ ಸಂಘಟನೆ ಇಲ್ಲ,” ಎನ್ನುತ್ತಾರೆ ನವಗುಜರಾತ್‌ ಸಮಯ್‌ನ ಹಿರಿಯ ರಾಜಕೀಯ ವರದಿಗಾರ ಆಶೀಶ್ ಅಮೀನ್‌.

‘ಕೈ’ಗೆ ಬಂದ ತುತ್ತು:

ಸದ್ಯ ಗುಜರಾತ್‌ ವಿದ್ಯಮಾನಗಳನ್ನು ಗಮನಿಸಿದರೆ, ಕಾಂಗ್ರೆಸ್ ಕೈಗೆ ಬರಬಹುದು ಎಂಬಂತಿದ್ದ ತುತ್ತನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

“ಜಿಗ್ನೇಶ್ ಮೇವಾನಿ ಸ್ವತಂತ್ರವಾಗಿ ಚುನಾವಣೆಗೆ ನಿಲ್ಲುವುದಾಗಿ ಪ್ರಕಟಿಸಿದ್ದಾರೆ. ಅಲ್ಪೇಶ್ ಠಾಕೂರ್‌ಗೆ ಕಾಂಗ್ರೆಸ್‌ ಪಕ್ಷದಿಂದಲೇ ಟಿಕೆಟ್ ನೀಡಲಾಗಿದೆ. ಪಾಟೀದಾರ್ ಸಮಯದಾಯ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವುದು ಅನುಮಾನ. ಹಾರ್ದಿಕ್ ಪಟೇಲ್‌ ಬೆಂಬಲವೇ ಸಮಸ್ಯೆಯಾಗುವ ಸಾಧ್ಯತೆಯೂ ಇದೆ,” ಎನ್ನುತ್ತಾರೆ ಸೌರಾಷ್ಟ್ರದ ಕಾಂಗ್ರೆಸ್ ನಾಯಕರೊಬ್ಬರು.

ರಾಹುಲ್‌ ಗಾಂಧಿ ಹೈವೇ ರ‍್ಯಾಲಿಗಳನ್ನು ಆಯೋಜಿಸಿದ ನಾಯಕರಲ್ಲಿ ಇವರೂ ಕೂಡ ಇಬ್ಬರು. ಮೇಲ್ನೋಟಕ್ಕೆ ಕಾಂಗ್ರೆಸ್ ಉತ್ಸಾಹದಲ್ಲಿರುವಂತೆ ಕಂಡುಬಂದರೂ, ಆಳದಲ್ಲಿರುವ ಸೋಲಿನ ಆತಂಕವನ್ನು ಈ ನಾಯಕರು ಹಂಚಿಕೊಳ್ಳುತ್ತಾರೆ.

ಒಂದು ಕಡೆ ಬಿಜೆಪಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾಗ, ಮುಖ್ಯವಾಹಿನಿಯಲ್ಲಿ ಗಮನ ಸೆಳೆದಿದ್ದು ಕಾಂಗ್ರೆಸ್. ಇವತ್ತು ಮೋದಿ ಅಖಾಡಕ್ಕೆ ಎಂಟ್ರಿ ಕೊಡುವ ಮೂಲಕ ಬಿಜೆಪಿ ಗೆಲುವಿನ ವಾತಾವರಣವನ್ನು ನಿರ್ಮಿಸಲು ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್‌ ಸೃಷ್ಟಿಸಿದ್ದ ವಾತಾವರಣವನ್ನು ಬಿಜೆಪಿ ಹೈಜಾಕ್‌ ಮಾಡುವ ತಂತ್ರಗಾರಿಕೆಯೂ ಇದರ ಹಿಂದಿದೆ. ಇದು ಒಂದು ಹಂತದಲ್ಲಿ ಯಶಸ್ವಿಯಾಗುವ ಸೂಚನೆಗಳೂ ಇಲ್ಲಿನ ತಳಮಟ್ಟದಲ್ಲಿ ಸಿಗುತ್ತಿವೆ.

ಅದೇ ವೇಳೆಯಲ್ಲಿ ಮುಖ್ಯವಾಹಿನಿಯಲ್ಲಿ ಸದ್ದು ಮಾಡಿದ್ದ ಕಾಂಗ್ರೆಸ್, ತಳಮಟ್ಟಕ್ಕೆ ಇಳಿಯಲು ಸಮಯವೂ ಇಲ್ಲ, ಸಾಧ್ಯತೆಗಳೂ ಇಲ್ಲಿ ಕಾಣಿಸುತ್ತಿಲ್ಲ.

“ಕಳೆದ ಎರಡೂವರೆ ತಿಂಗಳಿನಲ್ಲಿ ಧರ್ಮ ಹಾಗೂ ಅಭಿವೃದ್ಧಿಯ ಅಜೆಂಡಾಗಳ ಜಾಗದಲ್ಲಿ ಜಾತಿ ಅಜೆಂಡಾವನ್ನು ಮುಂದಿಡಲು ಕಾಂಗ್ರೆಸ್ ತಂತ್ರಗಾರಿಕೆ ಸಫಲವಾಗಿವೆ. ಆದರೆ ಅವೆಲ್ಲವೂ ಮತಗಳಾಗಿ ಬದಲಾಗುವ ಸಾಧ್ಯತೆಗಳಿಲ್ಲ,” ಎನ್ನುತ್ತಾರೆ ನೀರಜ್‌ ಭಾಯ್. ನೀರಜ್‌ ಗುಜರಾತ್‌ ಆರ್‌ಎಸ್‌ಎಸ್‌ನ ಪ್ರಮುಖ ನಾಯಕರಲ್ಲೊಬ್ಬರು.

ಮೋದಿ ಭೇಟಿ ಆರಂಭದಲ್ಲಿಯೇ ನಿರ್ಮಾಣವಾಗಿರುವ ಬಿಜೆಪಿ ಪರವಾಗಿರುವ ಅಲೆ, ಮತದಾನದವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಹೀಗಾದರೆ ಈ ಬಾರಿಯೂ ಬಿಜೆಪಿ ಕನಿಷ್ಟ 110+ ಸೀಟುಗಳ ಮೂಲಕ ಗುಜರಾತ್‌ ವಿಧಾನಸಭೆಯಲ್ಲಿ ಅಧಿಕಾರವನ್ನು ಹಿಡಿಯಬಹುದು.

“ಜಿಗ್ನೇಶ್ ಮೆವಾನಿಗೂ ಈ ಬಾರಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಬಹುದು ಅಂತ ಅನ್ನಿಸುತ್ತಿಲ್ಲ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಒಂದಷ್ಟು ಜನರ ಪರವಾಗಿ ಮಾತನಾಡುವವರು ವಿಧಾನಸಭೆ ಪ್ರವೇಶಿಸಬಹುದು. ಬಿಜೆಪಿ ಭದ್ರ ಕೋಟೆ ಸ್ವಲ್ಪ ಮುಕ್ಕಾಗಬಹುದು. ಮತ ಸರಾಸರಿಯಲ್ಲಿ ಕಡಿಮೆಯಾಗಬಹುದು. ಏನಕ್ಕೂ ಫಲಿತಾಂಶವನ್ನು ನೋಡಬೇಕಿದೆ,” ಎನ್ನುತ್ತಾರೆ ನೂರ್‌ ಶ್ರೀಧರ್.

 

Leave a comment

Top