An unconventional News Portal.

ತೆರೆಮರೆಯಲ್ಲಿದ್ದೇ ಆಟ ಗೆದ್ದ ರೂಪಾಣಿ- ಈಗ ಗುಜರಾತ್ ನೂತನ ಮುಖ್ಯಮಂತ್ರಿ!

ತೆರೆಮರೆಯಲ್ಲಿದ್ದೇ ಆಟ ಗೆದ್ದ ರೂಪಾಣಿ- ಈಗ ಗುಜರಾತ್ ನೂತನ ಮುಖ್ಯಮಂತ್ರಿ!

ಮೋದಿ- ಅಮಿತ್ ಶಾ ಜೋಡಿಯ ಅನಿರೀಕ್ಷಿತ ರಾಜಕೀಯ ನಡೆಗಳಿಗೆ ತಾಜಾ ಉದಾಹರಣೆಯಾಗಿ ಗುಜರಾತ್ ಮುಖ್ಯಮಂತ್ರಿ ಆಯ್ಕೆ ವಿಚಾರವೂ ಇದೀಗ ಸೇರಿ ಹೋಗಿದೆ. ಶುಕ್ರವಾರ ಇಡೀ ದಿನ ಗುಜರಾತ್ ಬಿಜೆಪಿ ವಲಯದಲ್ಲಿ ನಡೆದ ಬೆಳವಣಿಗೆಗಳು, ಸಂಜೆ ಹೊತ್ತಿಗೆ ತೆಗೆದುಕೊಂಡ ತಿರುವು ಮತ್ತು ಅಂತಿಮವಾಗಿ ಹೊರಬಿದ್ದ ತೀರ್ಮಾನವನ್ನು ಗಮನಿಸಿದವರು ಹೇಳುತ್ತಿರುವ ಮಾತುಗಳಿವು.

ಗುಜರಾತಿನ ರಾಜ್ಕೋಟ್ ಮಹಾನಗರ ಪಾಲಿಕೆಯಿಂದ ರಾಜಕೀಯ ಜೀವನ ಆರಂಭಿಸಿದ, ಸ್ಟಾಕ್ ಬ್ರೋಕರ್, ಸಂಘಪರಿವಾರದ ಸಭ್ಯ ಕಾರ್ಯಕರ್ತ, 61 ವರ್ಷವನ್ನು ಮೊನ್ನೆಯಷ್ಟೆ ಪೂರೈಸಿದ ವಿಜಯ್ ರೂಪಾಣಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನಿ ಗಾಧಿಗೆ ಏರುತ್ತಿದ್ದಂತೆ; ಬಿಜೆಪಿ ಹಿರಿಯ ನಾಯಕಿ ಆನಂದಿ ಬೆನ್ ಪಟೇಲ್ ಅವರನ್ನು ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಲಾಗಿತ್ತು. ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನವನ್ನು ಅವರು ಪ್ರಕಟಿಸಿದ್ದರು. ಇದಕ್ಕೆ ಆನಂದಿ ಬೆನ್ ಅವರ ವಯಸ್ಸಿಗಿಂತಲೂ ಇತ್ತೀಚೆಗೆ ಅವರಿಗೂ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೂ ಕೆಲವು ವಿಚಾರಗಳಲ್ಲಿ ಗಂಭೀರವಾದ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಗುಜರಾತಿನಲ್ಲಿ ಕಳೆದ ವರ್ಷ ಹುಟ್ಟಿಕೊಂಡ ಪಟೇಲ್ ಸಮಯದಾಯ ಮೀಸಲಾತಿ ಹೋರಾಟದ ಹೊಣೆಯನ್ನು ಮುಖ್ಯಮಂತ್ರಿ ಆನಂದಿ ಬೆನ್ ಮೇಲೆ ಅಮಿತ್ ಶಾ ಹೊರಿಸಿದ್ದಾರೆ ಎಂದು ಪಕ್ಷದ ಒಳಗೆ ಚರ್ಚೆಯ ವಸ್ತುವಾಗಿತ್ತು. ಇವುಗಳ ನಡುವೆಯೇ ವಯಸ್ಸಿನ ನೆಪ ಮುಂದಿಟ್ಟು, ಒಂದು ಕಾಲಕ್ಕೆ ಇಡೀ ದೇಶಕ್ಕೆ ‘ಅಭಿವೃದ್ಧಿ ಮಾದರಿ’ಯೊಂದನ್ನು ನೀಡಲು ಹೊರಟಿದ್ದ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾಣಿ ಅವರನ್ನು ತರಲಾಗಿದೆ.

ಹಾಗೆ ನೋಡಿದರೆ, ಇವರಿಗಿಂತಲೂ ಆನಂದಿ ಬೆನ್ ಪಟೇಲ್ ಅವರ ಹಿಂಬಾಲಕ ಎಂದೇ ಗುರುತಿಸಿಕೊಂಡಿದ್ದ ನಿತಿನ್ ಪಟೇಲ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ಶುಕ್ರವಾರ ಮುಂಜಾನೆ ವೇಳೆಗೆ ನಿತಿನ್ ಪಟೇಲ್ ಮನೆಯ ಮುಂದೆ ಪಟಾಕಿ ಸಿಡಿಸುವ ಪ್ರಕ್ರಿಯೆಗಳು ಆರಂಭವಾಗಿದ್ದವು. ದೇವಸ್ಥಾನಗಳಲ್ಲಿ ಪೂಜೆಗಳು ನಡೆಸಲಾಗುತ್ತಿತ್ತು. ಸಂಭ್ರಮಾಚರಣೆ ಶುರುವಾಗಿತ್ತು. ಸಾಲದು ಎಂಬಂತೆ ಸ್ವತಃ ನಿತಿನ್ ಪಟೇಲ್ ರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಲು ಶುರುಮಾಡಿದ್ದರು. ಸಂಜೆವರೆಗೂ ಇದೇ ಸ್ಥಿತಿ ಎದ್ದು ಕಾಣುತ್ತಿತ್ತು. ಆದರೆ, ಸಂಜೆ ನಾಲ್ಕು ಗಂಟೆ ವೇಳೆಗೆ ಅಮಿತ್ ಶಾ ಗಾಂಧಿನಗರದ ಅಂಚಿನಲ್ಲಿರುವ ಬಿಜೆಪಿ ಕಚೇರಿಗೆ ಕಾಲಿಡುತ್ತಿದ್ದಂತೆ ಒಟ್ಟಾರೆ ಚಿತ್ರಣದಲ್ಲಿ ಅನಿರೀಕ್ಷಿತ, ನಾಟಕೀಯ ಬೆಳವಣಿಗೆಗಳು ಜರುಗಿದವು. ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯ ವೀಕ್ಷಕರಾಗಿ ಆಗಮಿಸಿದ್ದ ರಾಷ್ಟ್ರೀಯ ನಾಯಕರಾದ ನಿತಿನ್ ಗಡ್ಕರಿ ಹಾಗೂ ಸರೋಕ್ ಪಾಂಡೆ ಅಂತಿಮವಾಗಿ ವಿಜಯ್ ರೂಪಾಣಿ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಘೋಷಿಸಿದರು. ಬೆಳಗ್ಗೆಯಿಂದ ಸಂಭ್ರಮದಲ್ಲಿದ್ದ ನಿತಿನ್ ಪಟೇಲ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಯಿತು. ಇದೇ ಮೊದಲ ಬಾರಿಗೆ ಗುಜರಾತ್ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿ ಕಲ್ಪಿಸಿತು. ಅಂತಿಮವಾಗಿ ಅಮಿತ್ ಶಾ ಮುಖದಲ್ಲಿ ತಮ್ಮ ಅನುಯಾಯಿಯೊಬ್ಬರನ್ನು ಮುಖ್ಯಮಂತ್ರಿ ಮಾಡಿದ ನಗು ಕಾಣಿಸಿತು. ರಾಷ್ಟ್ರೀಯ ಮಾಧ್ಯಮಗಳೂ ಸೇರಿದಂತೆ ಗುಜರಾತಿನ ಮಾಧ್ಯಮಗಳು ಬೆಸ್ತು ಬಿದ್ದು ಹೋದವು.

ಯಾರಿದು ವಿಜಯ್ ರೂಪಾಣಿ?:

ಸಂಘಪರಿವಾರದ ಸಕ್ರಿಯ ಕಾರ್ಯಕರ್ತ ರೂಪಾಣಿ ಈಗ ಗುಜರಾತಿನ ಮುಖ್ಯಮಂತ್ರಿ.

ಸಂಘಪರಿವಾರದ ಸಕ್ರಿಯ ಕಾರ್ಯಕರ್ತ ರೂಪಾಣಿ ಈಗ ಗುಜರಾತಿನ ಮುಖ್ಯಮಂತ್ರಿ.

ಹುಟ್ಟಿದ್ದು 1956ರಲ್ಲಿ; ಪಕ್ಕದ ಬರ್ಮಾ ದೇಶದಲ್ಲಿ. ಇವತ್ತು ಮಯನ್ಮಾರ್ ಎಂದು ಕರೆಸಿಕೊಳ್ಳುವ ದೇಶದಲ್ಲಿ ಆಂತರಿಕ ಪರಿಸ್ಥಿತಿ ಬಿಗಡಾಯಿಸಿದಾಗ ರೂಪಾಣಿ ತಂದೆ ಕುಟುಂಬ ಸಮೇತ ಗುಜರಾತಿನ ರಾಜ್ಕೋಟ್ಗೆ ಬಂದು ನೆಲೆಸಿದರು. ಏಳು ಮಕ್ಕಳ ಪೈಕಿ ಕೊನೆಯ ಮಗ ವಿಜಯ್ ರೂಪಾಣಿ ಅವರಿಗೆ ಆಗ 4 ವರ್ಷ. ಹಾಗೆ ರಾಜ್ಕೋಟ್ನಲ್ಲಿ ಬಾಲ್ಯವನ್ನು ಆರಂಭಿಸಿದ ರೂಪಾಣಿ ಬಿಎ ಪದವಿ ಪಡೆದರಾದರೂ, ವಿದ್ಯಾರ್ಥಿ ದೆಸೆಯಲ್ಲಿಯೇ ಬಿಜೆಪಿ ಪಕ್ಷದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸೇರಿದ್ದವರು. ಹಾಗೆ ಅಲ್ಲಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದವರು ಪ್ರಚಾರಕಾರದು. ಮುಂದೆ, ಜನಸಂಘ ನಂತರ ಬಿಜೆಪಿಯ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. ಮೊದಲ ಬಾರಿಗೆ, 1987ರಲ್ಲಿ ರಾಜ್ಕೋಟ್ ಮಹಾನಗರ ಪಾಲಿಕೆಗೆ ಆಯ್ಕೆಯಾಗುವ ಮೂಲಕ ಜನಪ್ರತಿನಿಧಿಯಾದರು. ಆಗ ಅವರಿಗೆ ಚರಂಡಿ ದುರಸ್ಥಿ ಮಂಡಳಿಯ ಹೊಣೆಯನ್ನು ನೀಡಲಾಗಿತ್ತು. 1996- 97ರ ಅವಧಿಗೆ ಅವರು ರಾಜ್ಕೋಟ್ ಪಾಲಿಕೆಯ ಮೇಯರ್ ಕೂಡ ಆಗಿದ್ದರು. 1998ರಲ್ಲಿ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರು. 2006- 12ರ ನಡುವೆ ಗುಜರಾತಿನಿಂದ ರಾಜ್ಯಸಭೆಯನ್ನೂ ಪ್ರತಿನಿಧಿಸಿದರು. ಸದ್ಯ ಅವರು ಗುಜರಾತ್ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಜತೆಗೆ ಆನಂದಿ ಬೆನ್ ಪಟೇಲ್ ಸಂಪುಟದಲ್ಲಿ ಸಚಿವರೂ ಆಗಿದ್ದರು.

ಹೀಗೆ, ಪಕ್ಷದ ಸಂಘಟನೆ, ಆಡಳಿತಾತ್ಮಕ ಅನುಭವಗಳನ್ನು ಹೊಂದಿದ್ದ ರೂಪಾಣಿ ಆರಂಭದಿಂದಲೂ ಸಂಘಪರಿವಾರ ಮತ್ತು ಬಿಜೆಪಿಯಲ್ಲಿ ತೆರೆಮರೆಯಲ್ಲಿಯೇ ಉಳಿದುಕೊಂಡರು. 2002ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ನರಮೇಧದ ಸಮಯದಲ್ಲಿಯೂ ಇವರು ಬಾಯಿ ಬಿಟ್ಟು ಮಾತನಾಡಿದವರಲ್ಲ. “ಆರಂಭದಲ್ಲಿ ಅವರು ಕೇಶುಭಾಯಿ ಪಟೇಲ್ ಜತೆಗೆ ಇದ್ದರು. ಮೋದಿ ಬಣದ ಬಲ ಹೆಚ್ಚಾಗುತ್ತಿದ್ದಂತೆ ನಿಧಾನವಾಗಿ ತಮ್ಮ ನಿಯತ್ತನ್ನು ಬದಲಿಸಿದರು,” ಎನ್ನುತ್ತಾರೆ ರೂಪಾಣಿಯನ್ನು ಬಲ್ಲ ರಾಜ್ಯ ಬಿಜೆಪಿಯ ನಾಯಕರೊಬ್ಬರು. ಕರ್ನಾಟಕದ ರಾಜ್ಯಪಾಲರಾಗಿರುವ ವಾಜುಭಾಯಿ ವಾಲಾ ಪ್ರತಿನಿಧಿಸುತ್ತಿದ್ದ ರಾಜ್ಕೋಟ್ ಕ್ಷೇತ್ರವನ್ನು ಇದೀಗ ರೂಪಾಣಿ ಪ್ರತಿನಿಧಿಸುತ್ತಿದ್ದಾರೆ.

ಮೂಲತಃ ವ್ಯಾಪಾರಿ ಬನಿಯಾ ಕುಟುಂಬದಲ್ಲಿ ಹುಟ್ಟಿದ ರೂಪಾಣಿ ವೃತ್ತಿಯಲ್ಲಿ ಸ್ಟಾಕ್ ಬ್ರೋಕರ್ ಕೂಡ. ಅವರು ತಮ್ಮ ತಂದೆಯ ಉದ್ಯಮವನ್ನೂ ಮುಂದುವರಿಸಿಕೊಂಡು ಬಂದಿದ್ದಾರೆ. ಪತ್ನಿ ಬಿಜೆಪಿ ಮಹಿಳಾ ವಿಭಾಗದಲ್ಲಿ ಸಕ್ರಿಯರಾಗಿದ್ದಾರೆ. “ಬಾಳಾ ಲೆಕ್ಕಾಚಾರದ ಮನುಷ್ಯ,” ಎಂಬುದು ಅವರನ್ನು ಬಲ್ಲವರು ಹೇಳುವ ಮಾತು.

ಹೆಚ್ಚು ಕಡಿಮೆ ಕಳೆದ 2 ದಶಕಗಳಿಂದ ಗುಜರಾತ್ ರಾಜ್ಯವನ್ನು ವಶದಲ್ಲಿ ಇಟ್ಟುಕೊಂಡಿದ್ದ ಬಿಜೆಪಿಗೆ ಸದ್ಯ ಅಲ್ಲಿ ಎದುರಾಗುತ್ತಿರುವ ತೊಡಕುಗಳ ಗಂಭೀರತೆ ಅರ್ಥವಾಗಿದೆ. ಅತೀ ದೊಡ್ಡ ಸಮದಾಯ ಪಟೇಲರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನೊಂದು ಕಡೆ ದಲಿತರು ಪ್ರತಿಭಟನೆ ಆರಂಭಿಸಿದ್ದಾರೆ. ಹಿಂದುಳಿದ ವರ್ಗಗಳ ಮತ ಬ್ಯಾಂಕ್ ನಿಧಾನಕ್ಕೆ ಕೇಸರಿ ಪಕ್ಷದಿಂದ ವಲಸೆ ಆರಂಭಿಸಿದೆ. ಮುಂದಿನ ವರ್ಷ ಇಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ದಿಲ್ಲಿಯಲ್ಲಿ ನರೇಂದ್ರ ಮೋದಿ ಆಳ್ವಿಕೆಯನ್ನು ಮತ್ತೊಂದು ಬಾರಿಗೆ ವಿಸ್ತರಿಸಿಕೊಳ್ಳಬೇಕು ಎಂದರೆ ಬಿಜೆಪಿ ಕೈಲಿ ಗುಜರಾತ್ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿಜಯ್ ರೂಪಾಣಿ ಅವರ ಆಯ್ಕೆ ಎಷ್ಟು ಸಮಂಜಸ ಎಂಬ ವಿಶ್ಲೇಷಣೆಗಳೂ ಶುರುವಾಗಿವೆ. ಅಮಿತ್ ಶಾ ಅವರಿಗೆ ಆಪ್ತರು ಎಂಬ ಒಂದೇ ಕಾರಣಕ್ಕೆ ರೂಪಾಣಿ ಅವರನ್ನು ಅಧಿಕಾರದ ಕೇಂದ್ರಕ್ಕೆ ತರಲಾಗಿದೆ ಎಂಬ ಆರೋಪಗಳೂ ಪಕ್ಷದೊಳಗೆ ಕೇಳಿ ಬರುತ್ತಿವೆ. ಆದರೆ, ಮೋದಿ- ಶಾ ಜೋಡಿಯ ಲೆಕ್ಕಚಾರಗಳು ಏನಿವೆಯೋ? ಕಾಲವೇ ಹೇಳಬೇಕಿದೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top