An unconventional News Portal.

ಮೇಟಿ ‘ಸಿಡಿ ಪುರಾಣಂ’: ಸುದ್ದಿಯ ಹಪಾಹಪಿಯಲ್ಲಿ ವಾಹಿನಿಗಳು ದಿಕ್ಕು ತಪ್ಪಿದ್ದೆಲ್ಲಿ?

ಮೇಟಿ ‘ಸಿಡಿ ಪುರಾಣಂ’: ಸುದ್ದಿಯ ಹಪಾಹಪಿಯಲ್ಲಿ ವಾಹಿನಿಗಳು ದಿಕ್ಕು ತಪ್ಪಿದ್ದೆಲ್ಲಿ?

ನಿದ್ದೆಯಲ್ಲಿ ಇರುವವರನ್ನು ಎಬ್ಬಿಸಬಹುದು. ಆದರೆ, ನಿದ್ದೆ ಮಾಡುವವರಂತೆ ನಟಿಸುವವರನ್ನು ಎಬ್ಬಿಸುವುದು ಕಷ್ಟ…

ಇದು ಕನ್ನಡದ ಕೆಲವು ಸುದ್ದಿ ವಾಹಿನಿಗಳು ಸಚಿವ ಎಚ್. ವೈ. ಮೇಟಿ ವಿಚಾರದಲ್ಲಿ ನಡೆದುಕೊಂಡ ರೀತಿಗೆ ಒಪ್ಪುವ ಮಾತು. ಎಲ್ಲವೂ ಅಂದುಕೊಂಡಂತೆ ನಡೆದು ಹೋಗಿದ್ದರೆ ಇಷ್ಟೊತ್ತಿಗೆ ಅಬಕಾರಿ ಸಚಿವ ಎಚ್. ವೈ. ಮೇಟಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯಗಳನ್ನು ರಾಜ್ಯದ ಮನೆ ಮಂದಿಗೆ ನಮ್ಮ ಸುದ್ದಿ ವಾಹಿನಿಗಳು ತಲುಪಿಸಿಬಿಟ್ಟಿರುತ್ತಿದ್ದವು. ಸಚಿವರ ರಾಜೀನಾಮೆಗೆ ಒತ್ತಾಯಗಳು ಕೇಳಿ ಬರುತ್ತಿದ್ದವು.

ಆದರೆ, ಕೊನೆಯ ಕ್ಷಣದಲ್ಲಿ ಗಣಿ ನಾಡು ಬಳ್ಳಾರಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಿಂದಾಗಿ ಸಚಿವರು ಬಚಾವ್ ಆಗಿದ್ದಾರೆ. ಸುದ್ದಿ ವಾಹಿನಿಗಳು ಸುದ್ದಿ ಭಿತ್ತರಿಸುವ ಸಮಯದಲ್ಲಿ ಬಳಸಿದ ಅತ್ಯಂತ ಕೀಳು ಅಭಿರುಚಿಯ ಭಾಷೆಯ ಕಾರಣಕ್ಕೆ ಈಗ ಟೀಕೆಗೆ ಗುರಿಯಾಗಿವೆ. ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸುದ್ದಿಯ ಹಪಾಹಪಿಯಲ್ಲಿ ಟಿವಿ ಪತ್ರಿಕೋದ್ಯಮ ತಲುಪಿಸುವ ಮಟ್ಟ ಎಂತಹದ್ದು ಎಂಬುದು ಢಾಳಾಗಿ ಕಾಣಿಸುತ್ತಿದೆ.

ನಡೆದಿದ್ದೇನು?:

ಮೂರು ದಿನಗಳ ಹಿಂದೆ ಕನ್ನಡದ ಎರಡು ಸುದ್ದಿ ವಾಹಿನಿಗಳಲ್ಲಿ ಅಬಕಾರಿ ಸಚಿವ ಎಚ್. ವೈ. ಮೇಟಿ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಭಿತ್ತರಗೊಳ್ಳುತ್ತದೆ. ಅವರ ಕಚೇರಿಯಲ್ಲಿಯೇ ಮಹಿಳೆಯೊಬ್ಬರ ಜತೆ ಲೈಂಗಿಕ ಕ್ರಿಯೆಯನ್ನು ತೊಡಗಿದ್ದಾರೆ ಎಂಬರ್ಥದಲ್ಲಿ ಸುದ್ದಿ ಪ್ರಸಾರವಾಗುತ್ತದೆ. ಮೊದಲಿಗೆ ಸಚಿವರ ಹೆಸರು ಕೂಡ ಇರುವುದಿಲ್ಲ. ಈ ಸಮಯದಲ್ಲಿ ‘ಪಬ್ಲಿಕ್ ಟಿವಿ’ ಬ್ರೇಕಿಂಗ್ ಪ್ಲೇಟ್ನಲ್ಲಿ ಬಳಸಿದ ಭಾ‍ಷೆ, ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನೂ ನಾಚಿವಂತಿತ್ತು.

ಪಬ್ಲಿಕ್ ಟಿವಿ ಬ್ರೇಕಿಂಗ್ ಒಂದರ ಸ್ಯಾಂಪಲ್.

ಪಬ್ಲಿಕ್ ಟಿವಿ ಬ್ರೇಕಿಂಗ್ ಒಂದರ ಸ್ಯಾಂಪಲ್.

ಹೀಗೆ ಬ್ರೇಕಿಂಗ್ ಸುದ್ದಿ ಭಿತ್ತರವಾಗುತ್ತಿದ್ದಂತೆ, ಬಳ್ಳಾರಿಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯಲಾರಂಭಿಸಿದವು. ಅಲ್ಲಿನ ಮಾಧ್ಯಮ ಮಿತ್ರರೊಬ್ಬರು ಹೇಳುವಂತೆ, “ಹಿಂದಿನ ದಿನವಷ್ಟೆ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ್ ನನ್ನನ್ನು ಕರೆದು ತಮ್ಮ ಮೊಬೈಲ್ನಲ್ಲಿ ಒಂದು ವಿಡಿಯೋ ತೋರಿಸಿದರು. ಅದರಲ್ಲಿ ಸಚಿವ ಮೇಟಿ ಮಹಿಳೆಯೊಂದಿಗೆ ಅಸಭ್ಯ ಭಂಗಿಯಲ್ಲಿದ್ದರು. ಅದನ್ನು ಮಾರನೇ ದಿನ ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಹೀಗಾಗಿ ನಾವು ಲೈವ್ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದೆವು. ಆದರೆ, ಮಾರನೇ ದಿನ (ಡಿ. 11ನೇ ತಾರೀಖು) ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಮುಂದೂಡುವುದಾಗಿ ರಾಜಶೇಖರ್ ಸಂದೇಶ ಕಳುಹಿಸಿದರು. ಹಿನ್ನೆಲೆಯಲ್ಲಿ ಏನೋ ನಡೆದಿದೆ ಎಂಬ ಅನುಮಾನ ನಮಗೆ ಬಂತು. ಹೀಗಾಗಿ, ಅದೇ ರೀತಿಯಲ್ಲಿ ಸುದ್ದಿಯನ್ನು ಭಿತ್ತರ ಮಾಡಿದೆವು,” ಎಂದು ಮಾಹಿತಿ ನೀಡುತ್ತಾರೆ.

ಹೀಗೆ, ಮೊದಲ ಬಾರಿಗೆ ಸಚಿವರ ಹೆಸರಿನಲ್ಲೇ ಆರೋಪಗಳ ಸುರಿಮಳೆಯನ್ನು ವಾಹಿನಿಗಳು ಭಿತ್ತರಿಸಿದವಾದರೂ, ಅವುಗಳ ಬಳಿ ನಿಖರವಾದ ಸಾಕ್ಷಿಗಳೇ ಇರಲಿಲ್ಲ. ಮಧ್ಯಾಹ್ನ ಕಳೆಯುವ ಹೊತ್ತಿಗೆ ಸುದ್ದಿಯ ಕೇಂದ್ರಕ್ಕೆ ಎಚ್. ವೈ. ಮೇಟಿಯವರ ಹೆಸರು ಕೇಳಿಬಂತು. ಜತೆಗೆ, ಅವರ ಗನ್ ಮನ್ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ್ಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆಡಿಯೋ ಕೂಡ ಭಿತ್ತರವಾಯಿತು.

ಇದು ತನಿಖಾ ವರದಿ:

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಸಚಿವರು ರಾಜೀನಾಮೆ ನೀಡಿದ್ದಾರೆ. ಹಿಂದಿನ ಬಿಜೆಪಿ ಸರಕಾರದ ಸಮಯದಲ್ಲಿ ರಾಜೀನಾಮೆ ನೀಡಿದ ಸಚಿವರಾಗಿದ್ದ ಹರತಾಳು ಹಾಲಪ್ಪ ಕೂಡ ಇಂತಹದ್ದೇ ಒಂದು ‘ಹನಿ ಟ್ರ್ಯಾಪ್’ ಕಾರಣಕ್ಕೆ ತಮ್ಮ ಸ್ಥಾನವನ್ನು ತ್ಯಜಿಸಿದ್ದರು. ನಂತರ ಸದನದೊಳಗೆ ನೀಲಿ ಚಿತ್ರವನ್ನು ನೋಡಿದ ಆರೋಪದ ಮೇಲೆ ಮೂವರು ಸಚಿವರ ತಲೆ ದಂಡವಾಗಿತ್ತು. ಹೀಗೆ, ಸಾಲು ಸಾಲು ಪ್ರಕರಣಗಳನ್ನು ಎದುರಿಗೆ ಇಟ್ಟುಕೊಂಡು ನೋಡಿದರೆ, ರಾಜೀನಾಮೆ ನೀಡಿದ ಸಚಿವರು ಲೈಂಗಿಕ ತೃಷೆಯ ಮಿತಿಗಳ ಕಾರಣಕ್ಕೆ ಖೆಡ್ಡಾಕ್ಕೆ ಬಿದ್ದಿದ್ದಾರೆ. ಈ ಎಲ್ಲಾ ಘಟನೆಗಳಲ್ಲಿಯೂ ಮಾಧ್ಯಮಗಳ ತನಿಖಾ ವರದಿಗಳಿಗಳಿಗಿಂತಲೂ, ಮೂಲಗಳು ನೀಡಿವ ಸಿಡಿಗಳೇ ಪ್ರಮುಖ ಪಾತ್ರವಹಿಸುತ್ತಾ ಬಂದಿರುವುದು ಎದ್ದು ಕಾಣಿಸುತ್ತಿದೆ.

ಸಚಿವ ಎಚ್. ವೈ. ಮೇಟಿ ವಿಚಾರದಲ್ಲಿಯೂ ಇದೇ ನಡೆದು ಹೋಗುವ ಸಾಧ್ಯತೆಗಳಿದ್ದವು. ಮಾಹಿತಿ ಹಕ್ಕು ಕಾರ್ಯಕರ್ತ ನೀಡುವ ಸಿಡಿಯೇ ಸಚಿವ ಸ್ಥಾನಕ್ಕೆ ಎಳ್ಳು ನೀರು ಬಿಡುಲಿತ್ತು. ಇದಕ್ಕಾಗಿಯೇ ಮಾಧ್ಯಮಗಳೂ ಕೂಡ ಹಪಾಹಪಿಯಿಂದ ಕಾಯುತ್ತಾ ಕುಳಿತಿದ್ದವು. ಆದರೆ ಕೊನೆಯ ಕ್ಷಣದಲ್ಲಿ ತೆರೆಮರೆಯಲ್ಲಿ ನಡೆದ ಘಟನೆಗಳು ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದವು. ಹೀಗಾಗಿ, ‘ಇಂಪ್ಯಾಕ್ಟ್’ ಎಂದು ಹಾಕಿಕೊಳ್ಳುವ ಸಾಧ್ಯತೆಯೊಂದು ತಪ್ಪಿ ಹೋಯಿತು.

“ನಮ್ಮಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಲು ಹತ್ತು ಹಲವು ಕಾರಣಗಳು ಸಿಗುತ್ತವೆ. ಸಚಿವರ ಕಚೇರಿಯ ದಾಖಲೆಗಳನ್ನು ಕಲೆ ಹಾಕಿ ತನಿಖೆ ನಡೆಸಿದರೂ ದೊಡ್ಡ ಹಗರಣಗಳು ಬಯಲಾಗುತ್ತವೆ. ಮಾವನ ಸಂಪನ್ಮೂಲ, ಸಾಧ್ಯತೆಗಳನ್ನು ಹೊಂದಿರುವ ಮಾಧ್ಯಮಗಳು ಅಂತಹ ಕೆಲಸಕ್ಕೆ ಮಾತ್ರ ಕೈ ಹಾಕುವುದಿಲ್ಲ. ಬದಲಿಗೆ ಇಂತಹ ‘ಹನಿ ಟ್ರ್ಯಾಪ್’ ಸುದ್ದಿಗಳ ಬೆನ್ನು ಬೀಳುತ್ತವೆ. ಮೇಟಿ ವಿಚಾರದಲ್ಲಿ ಮೂಲವನ್ನು ನಂಬಿ ಮೋಸ ಹೋಗಿವೆ,” ಎನ್ನುತ್ತಾರೆ ದೃಶ್ಯ ಮಾಧ್ಯಮದ ಹಿರಿಯ ಪತ್ರಕರ್ತರೊಬ್ಬರು.

ಮೇಡಂ ಯಾರು?:

ಬಳ್ಳಾರಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ್ ಬಿಡುಗಡೆ ಮಾಡಿರುವ ಒಂದು ಆಡಿಯೋದಲ್ಲಿ ‘ಮೇಡಂ’ ಎಂಬ ಹೆಸರು ಪ್ರಸ್ತಾಪವಾಗಿದೆ. ಅವರಿಗೆ ಪೋಸ್ಟಿಂಗ್ ಕೊಡಿಸುವುದು ಕೂಡ ‘ಹನಿ ಟ್ರ್ಯಾಪ್’ ನಾಟಕದ ಒಂದು ಅಂಶ ಎಂದೂ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಹೇಳುತ್ತಾರೆ. ಈ ‘ಮೇಡಂ’ ಅನುಪಮಾ ಶೆಣೈ ಎಂಬ ಅನುಮಾನವೂ ಅವರಿಗಿದೆ. ಆದರೆ, ಇದನ್ನು ದೃಢೀಕರಿಸುವ ದಾಖಲೆಗಳು ಮಾತ್ರ ಇಲ್ಲ.

ಒಟ್ಟಾರೆ, ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರ ಕಾರ್ಯಾಚರಣೆಯನ್ನೇ ನಂಬಿಕೊಂಡ ಮಾಧ್ಯಮಗಳು ‘ಸಿಡಿ’ ಸಿಗದೇ ಬೇಸ್ತು ಬಿದ್ದಿವೆ. ಜತೆಗೆ, ತಮ್ಮ ಭಾಷೆಯ ಬಳಕೆ ಕಾರಣಕ್ಕೆ ಟೀಕೆಗೆ ಗುರಿಯಾಗಿವೆ. ಪಾಠಗಳನ್ನು ಕಲಿಯುವ ಮನಸ್ಸಿದ್ದರೆ, ಇಂತಹ ಅಪಸವ್ಯಗಳು ನಡೆಯುತ್ತಿರಲಿಲ್ಲ. ಕಾಲದ ಓಘದಲ್ಲಿ ಕಲಿಕೆಯ ಮನಸ್ಸನ್ನು ಕಳೆದುಕೊಂಡವರಿಂದ ಇದನ್ನು ನಿರೀಕ್ಷಿಸುವುದು ಕಷ್ಟವಿದೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top