An unconventional News Portal.

‘ಸದನ ಸಮಿತಿ’ ಎಂಬ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಾಯಿತು; ಮುಂದೇನು?

‘ಸದನ ಸಮಿತಿ’ ಎಂಬ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಾಯಿತು; ಮುಂದೇನು?

 

ನಮ್ಮ ದೇಶದಲ್ಲಿ ‘ಟ್ಯಾಬೂ’ ಅಂತ ಅನ್ನಿಸಿಕೊಳ್ಳುವ ಹಲವು ನಿಷಿದ್ಧ ವಿಚಾರಗಳಿವೆ. ಅವುಗಳಲ್ಲಿ ಪ್ರಮುಖವಾದುದು ‘ಮಾಧ್ಯಮಗಳಿಗೆ ನೀತಿ ಸಂಹಿತೆ’ ಅಥವಾ ‘ಮಾಧ್ಯಮಗಳಿಗೆ ಕಡಿವಾಣ ಹಾಕಬೇಕು’ ಎಂಬದು ಒಂದು. ಸ್ವಾತಂತ್ರ್ಯ ನಂತರ, ದೇಶದಲ್ಲಿ ನಡೆದ ಹಲವು ವಿಫಲ ಚರ್ಚೆಗಳಲ್ಲಿ ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು ಎಂಬ ಕುರಿತು ನಡೆದ ವಾಗ್ವಾದಗಳೂ ಸೇರಿವೆ.

ಸದ್ಯ ದಕ್ಷಿಣ ಭಾರತ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲಿ ಮಾಧ್ಯಮ ಮತ್ತು ಅವುಗಳಿಗೆ ಇರಬೇಕಾದ ನೈತಿಕ ಚೌಕಟ್ಟುಗಳ ಚರ್ಚೆ ನಡೆಯುತ್ತಿದೆ. ಈ ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವ ಈ ಚರ್ಚೆ ಮತ್ತು ವಾಗ್ವಾದಗಳಿಗೆ ಆಹಾರ ಒದಗಿಸಿರುವುದು 24/7 ಸುದ್ದಿ ವಾಹಿನಿಗಳು ಎಂಬುದು ಗಮನಾರ್ಹ.

ಟಿವಿ ರೇಟಿಂಗ್:

ಮಾಧ್ಯಮಗಳ ಕುರಿತು ಟೀಕೆ- ಟಿಪ್ಪಣಿಗಳು ಏನೇ ಇರಲಿ; ಅವುಗಳ ಅಸ್ಥಿತ್ವವನ್ನೇ ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಜಾಪ್ರಭುತ್ವದಂತಹ ವ್ಯವಸ್ಥೆ, ಪ್ರಜೆಗಳಿಗೆ ಹಕ್ಕು ನೀಡವಂತಹ ಕಾನೂನಿನ ಚೌಕಟ್ಟಿನೊಳಗೆ ಸಮೂಹ ಮಾಧ್ಯಮಗಳ ಪಾತ್ರ ಅಗತ್ಯ ಮತ್ತು ಅನಿವಾರ್ಯ.

ಸಮೂಹ ಮಾಧ್ಯಮಗಳ ವಿಚಾರಕ್ಕೆ ಬಂದರೆ ದೇಶದಲ್ಲಿ ಮುದ್ರಣ ಮಾಧ್ಯಮಗಳಿಗೆ ತಮ್ಮದೇ ಆದ ಇತಿಹಾಸವಿದೆ. ಶತಮಾನಗಳ ಕಾಲದ ಅವುಗಳ ನಡಿಗೆಯಲ್ಲಿ ಸಾಕಷ್ಟು ಬಾರಿ ಎಡವಿ ಬಿದ್ದಿವೆ. ತಪ್ಪುಗಳನ್ನು ಅರ್ಥ ಮಾಡಿಕೊಂಡಿವೆ. ಅದಕ್ಕಿಂತ ಹೆಚ್ಚಾಗಿ ವೃತ್ತಿಪರವಾಗಿ ಅವು ಬೆಳೆದಿವೆ. ಅವುಗಳ ನಿಯಂತ್ರಣಕ್ಕೆ ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ’ದಂತಹ ಸಂಸ್ಥೆಗಳು ಜನ್ಮತಾಳಿವೆ. ಆದರೆ ಸುದ್ದಿ ವಾಹಿನಿಗಳ ವಿಚಾರದಲ್ಲಿ ಅಂತಹ ಬೆಳವಣಿಗೆಗಳನ್ನು ಈ ಸಮಯದಲ್ಲಿ ನಿರೀಕ್ಷಿಸುವುದು ಕಷ್ಟವಿದೆ. ಇದಕ್ಕೆ ಕಾರಣ, ಅವುಗಳಿನ್ನೂ ಅನುಭವದಲ್ಲಿ ಬಾಲ್ಯಾವಸ್ಥೆಯಲ್ಲಿವೆ.

ತಂತ್ರಜ್ಞಾನ ಮತ್ತು ಸಂಪಾದಕೀಯ ಎಂಬ ಎರಡು ಪ್ರತ್ಯೇಕ ಅಂಶಗಳ ಸಮ್ಮಿಶ್ರಣ ಈ ಸುದ್ದಿವಾಹಿನಿಗಳು. ಇವುಗಳನ್ನು ಅಳೆಯಲು ಇವತ್ತು ಬಳಸುತ್ತಿರುವ ಮಾನದಂಡ, ಅವುಗಳನ್ನು ಎಷ್ಟು ಜನ ವೀಕ್ಷಣೆ ಮಾಡುತ್ತಾರೆ ಎಂಬುದು. ಅದನ್ನೇ ‘ಟೆಲಿವಿಝನ್ ರೇಟಿಂಗ್ ಪಾಯಿಂಟ್’ (ಟಿಆರ್‌ಪಿ) ಎಂದು ಕರೆಯಲಾಗುತ್ತಿದೆ. ಈ ಟಿಆರ್‌ಪಿ ಮಾತ್ರವೇ ಅವುಗಳ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವುದರಿಂದ ರೇಟಿಂಗ್ ಆಚೆಗೆ ಸುದ್ದಿ ವಾಹಿನಿಗಳಿಗೆ ಅಸ್ಥಿತ್ವ ಇದೆ ಎಂದು ಹಲವು ಸಮಯದಲ್ಲಿ ಭಾಸವಾಗುವುದಿಲ್ಲ.

ಟಿಆರ್‌ಪಿ ವಿಚಾರಕ್ಕೆ ಬಂದರೆ, ಕನ್ನಡದ ಸುದ್ದಿ ವಾಹಿನಿಗಳ ರೇಟಿಂಗ್ ಪಾಯಿಂಟ್‌ ಇನ್ನೊಂದಿಷ್ಟು ಒಳನೋಟಗಳನ್ನು ನೀಡುತ್ತದೆ. ಯಾವುದೇ ವಾಹಿನಿಯ ಟಿಆರ್‌ಪಿಯನ್ನು ಮೂರು ಭಾಗಗಳಾಗಿ ವಿಭಾಗಿಸಿದರೆ, ಅದರಲ್ಲಿ ಒಂದು ಭಾಗ ಸುದ್ದಿಗೆ ಸೀಮಿತವಾಗಿದೆ. ಉಳಿದ ಎರಡು ಭಾಗ ಕಾರ್ಯಕ್ರಮಗಳನ್ನು ಆಧರಿಸಿದೆ. ಇವತ್ತು ಟಿವಿ9 ಕರ್ನಾಟಕದ ಪ್ರಾದೇಶಿಕ ವಾಹಿನಿಗಳಲ್ಲಿಯೇ ಅತೀ ಹೆಚ್ಚು ಜನರಿಂದ ವೀಕ್ಷಿಸಲ್ಪಡುತ್ತದೆ ಎನ್ನುತ್ತವೆ ಈ ರೇಟಿಂಗ್ ಪಾಯಿಂಟ್‌ಗಳು. ಆಳದಲ್ಲಿ, ವಾಹಿನಿಯ ಕಾರ್ಯಕ್ರಮಗಳು ಹೆಚ್ಚು ಜನರಿಂದ ವೀಕ್ಷಿಸ್ಪಡುತ್ತಿವೆ. ಹೀಗಾಗಿ ನಿರಂತರವಾಗಿ ಟಿವಿ9 ತನ್ನ ಸ್ಥಾನದಲ್ಲಿ ಮುಂದುವರಿಯುತ್ತಿದೆ.

ಅಂದರೆ ಸುದ್ದಿ ವಾಹಿನಿಗಳಾಗಿದ್ದರೂ, ಅವುಗಳ ರೇಟಿಂಗ್ ಪಾಯಿಂಟ್‌ ಇವತ್ತು ನಿರ್ಧಾರವಾಗುತ್ತಿರುವುದು ಕಾರ್ಯಕ್ರಮಗಳ ಮೇಲೆ ಎಂಬುದು ವಿಪರ್ಯಾಸ. ಹೀಗಾಗಿಯೇ ಭಾರತದಲ್ಲಿ ಮಾತ್ರವೇ ಸುದ್ದಿ ವಾಹಿನಿಗಳಲ್ಲಿ ಸುದ್ದಿ ಮತ್ತು ಮನೋರಂಜನೆಯ ಕಲಸು ಮೇಲೊಗರ ಕಾಣಸಿಗುತ್ತದೆ. ಇಂತಹದೊಂದು ದ್ವಂದ್ವಮಯ ಪರಿಸ್ಥಿತಿಯಲ್ಲಿ ಸುದ್ದಿ ವಾಹಿನಿಗಳಿರುವಾಗಲೇ ಅವುಗಳ ಮೇಲೆ ನೈತಿಕ ಚೌಕಟ್ಟು ಮೀರಿದ ಆರೋಪ ಕೇಳಿ ಬರುತ್ತಿದೆ. ಅವುಗಳ ನಿಯಂತ್ರಣಕ್ಕೆ ಪರೋಕ್ಷ ಪ್ರಯತ್ನ ನಡೆಯುತ್ತಿದೆ.

 

ಯಾಕೀ ಅನಿವಾರ್ಯತೆ?:

ರೇಟಿಂಗ್ ವಿಚಾರದಲ್ಲಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವಾದರೂ, ಒಂದು ವಾಹಿನಿಯ ‘ಪರ್ಸನಾಲಿಟಿ’ಯ ವಿಚಾರಕ್ಕೆ ಬಂದರೆ ಸುದ್ದಿಗಳೇ ನಿರ್ಣಾಯಕ. ಹೀಗಾಗಿಯೇ ಪ್ರತಿ ವಾಹಿನಿಯೂ ಸುದ್ದಿ ನೀಡುವ ಮೂಲಕ ಸದ್ದು ಮಾಡಬೇಕು ಎಂದು ಬಯಸುತ್ತವೆ. ಹೀಗಾಗಿಯೇ ಸ್ಫೋಟಕ ಸುದ್ದಿಗಳ ಮೊರೆ ಹೋಗುತ್ತವೆ. ಕೇರಳದಲ್ಲಿ ಕಳೆದ ಭಾನುವಾರ ಕಣ್ಣು ಬಿಟ್ಟ ‘ಮಂಗಳಂ ನ್ಯೂಸ್’ ಕೂಡ ಇಂತಹದ್ದೊಂದು ಅನಿವಾರ್ಯಕ್ಕೆ ಜೋತು ಬೀಳುವ ಮೂಲಕ ನ್ಯಾಯಾಂಗ ತನಿಖೆಯನ್ನು ಮೈಮೇಲೆ ಎಳೆದುಕೊಂಡಿದೆ.


Related: ‘ಪ್ರಥಮ ಚುಂಬನ…’: ತಾನೇ ತೋಡಿದ ಖೆಡ್ಡಾಕ್ಕೆ ಎಡವಿ ಬಿದ್ದ ಸುದ್ದಿ ವಾಹಿನಿ!


ಕರ್ನಾಟಕದ ಸುದ್ದಿ ವಾಹಿನಿಗಳೂ ಕೂಡ ಬೆಚ್ಚಿ ಬೀಳುಸುವಂತಹ ಸುದ್ದಿಗಳಿಗೆ ಆತುಕೊಳ್ಳುವ ಮೂಲಕ ಸದಸ ಸಮಿತಿಯನ್ನು ರಚಿಸುವ ಮಟ್ಟಕ್ಕೆ ಜನಪ್ರತಿನಿಧಿಗಳನ್ನು ಕಾಡಿವೆ.

ಸದ್ಯ ಕರ್ನಾಟಕದ ಶಾಸನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಗೋಡೆ ಮೇಲೆ ಇಟ್ಟ ದೀಪದಂತೆ ಭಾಸವಾಗುತ್ತಿದೆ. ಅದರ ಅಧ್ಯಕ್ಷತೆಯನ್ನು ವಹಿಸಬೇಕಿದ್ದ ಸಚಿವ ರಮೇಶ್ ಕುಮಾರ್‌ ಹಿಂದೇಟು ಹಾಕಿದ್ದಾರೆ. ಎರಡೂ ಪಕ್ಷದ (ಜನಪ್ರತಿನಿಧಿಗಳು ಮತ್ತು ಮಾಧ್ಯಮಗಳ ಪ್ರತಿನಿಧಿಗಳು) ಸಭೆಯ ನಂತರ ಸದನ ಸಮಿತಿಯ ರಚನೆಯನ್ನು ಬರಕಾಸ್ತುಗೊಳಿಸುವ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆಗಳಿವೆ. ಗಾಜಿನ ಮನೆಯಲ್ಲಿ ಕುಳಿತವರಿಂದ ಇನ್ನೊಬ್ಬರ ಮೇಲೆ ಕಲ್ಲು ತೂರುವುದನ್ನು ನಿರೀಕ್ಷಿಸುವುದು ಕಷ್ಟ ಕೂಡ.

ಆದರೆ ಹೀಗೊಂದು ಪ್ರಕ್ರಿಯೆ ನಡೆಯುವ ಮೂಲಕ ‘ಆತ್ಮ ವಿಮರ್ಶೆ’ ಮಾಡಿಕೊಳ್ಳಲು ಕರ್ನಾಟಕದ ವಾಹಿನಿಗಳಿಗೆ ತಮ್ಮದೇ ಆದ ಚೌಕಟ್ಟನ್ನು ನಿರ್ಮಿಸಿಕೊಳ್ಳುವ ಅವಕಾಶ ಮತ್ತು ಅನಿವಾರ್ಯತೆ ಸೃಷ್ಟಿಯಾಗಿದೆ.

ಹಿಂದೆ, ರಾಷ್ಟ್ರೀಯ ಮಟ್ಟದಲ್ಲಿಯೂ ಗೊಂದಲಮಯ ಪರಿಸ್ಥಿತಿಯ ನಂತರ ‘ನ್ಯಾಷನಲ್ ಬ್ರಾಡ್‌ಕಾಸ್ಟ್‌ ಅಸೋಸಿಯೇಷನ್’ (ಎನ್‌ಬಿಎ) ಅಸ್ಥಿತ್ವಕ್ಕೆ ಬಂತು. ಇದೀಗ ಕರ್ನಾಟಕದ ಸರದಿ ಅಷ್ಟೆ. ಇಲ್ಲಿಯೂ ಒಂದು ಸುದ್ದಿ ವಾಹಿನಿಗಳ ಆತ್ಮ ವಿಮರ್ಶೆಗೆ ವೇದಿಕೆಯೊಂದು ನಿರ್ಮಾಣಗೊಳ್ಳಬೇಕಿದೆ. ಅದು ತಾವು ನೀಡುವ ಸುದ್ದಿಗಳಿಗೆ ಇರಬೇಕಾದ ನೈತಿಕ ಚೌಕಟ್ಟುಗಳ ಕುರಿತು ಸ್ಪಷ್ಟತೆಗೆ ಬರಬೇಕಿದೆ. ಅದರ ಜತೆಗೆ, ವಾಹಿನಿಯಲ್ಲಿ ಕೆಲಸ ಮಾಡುವ ಕೆಳ ಹಂತದ ಪತ್ರಕರ್ತರ ಹಿತಾಸಕ್ತಿಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಿರುವುದು ಕಾಲದ ಅಗತ್ಯವಾಗಿದೆ. ಸಮಗ್ರ ಒಳನೋಟಗಳನ್ನು ಇಟ್ಟುಕೊಂಡು ಆತ್ಮ ವಿಮರ್ಶೆ ನಡೆಸದೇ ಹೋದರೆ, ಬಾಲ್ಯದಿಂದ ಪ್ರೌಢಾವಸ್ಥೆಗೆ ಕನ್ನಡದ ಸುದ್ದಿ ವಾಹಿನಿಗಳು ನೆಗೆತ ಸಾಧಿಸುವುದು ಕಷ್ಟವಿದೆ.

‘ಸದನ ಸಮಿತಿ’ ಎಂಬ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಮಾತ್ರಕ್ಕೆ ಈ ಕಾಲದಲ್ಲಿ ಹುಟ್ಟಿಕೊಂಡ ಚರ್ಚೆಗಳಿಗೆ ತೆರೆ ಬೀಳುವುದಿಲ್ಲ. ಬದಲಿಗೆ, ರಾಷ್ಟ್ರ ಮಟ್ಟದಲ್ಲಿ ನಡೆದ ಎನ್‌ಬಿಎ ಮಾದರಿಯ ಪ್ರಕ್ರಿಯೆಯೊಂದಕ್ಕೆ ಕರ್ನಾಟಕದಲ್ಲಿಯೂ ಚಾಲನೆ ಸಿಗಬೇಕಿದೆ.

Top