An unconventional News Portal.

ಮಾಧ್ಯಮ ಲೋಕ ಪ್ರವೇಶಿಸುವ ಮುನ್ನ ಮಾಹಿತಿ ಹೊತ್ತು ಬನ್ನಿರಣ್ಣಾ!

ಮಾಧ್ಯಮ ಲೋಕ ಪ್ರವೇಶಿಸುವ ಮುನ್ನ ಮಾಹಿತಿ ಹೊತ್ತು ಬನ್ನಿರಣ್ಣಾ!

  • ಜಿ ಎನ್ ಮೋಹನ್

 

‘Ak 47 ಅಂದ್ರೇನು?’ ಅಂದೆ.

ನನ್ನ ಎದುರು ಐದು ವಿಶ್ವವಿದ್ಯಾಲಯಗಳ ಸುಮಾರು 20 ಮಂದಿ ಕುಳಿತಿದ್ದರು. ಕಣ್ಣು ರೆಪ್ಪೆ ಮಿಟುಕಿಸುವುದರೊಳಗೆ ‘ಶಸ್ತ್ರಾಸ್ತ್ರ ಸಾರ್’ ಅಂತ ಒಕ್ಕೊರಲಿನಿಂದ ಗುಂಡೇಟು ಹೊಡೆದ ಹಾಗೇ ಉತ್ತರ ಕೊಟ್ಟರು. ‘ಇಷ್ಟೂ ಗೊತ್ತಿಲ್ವ’ ಅನ್ನೋ ಗೆದ್ದ ನಗು ಅವರ ಮುಖದಲ್ಲಿ ಕುಣಿತಿತ್ತು.

ಓಕೆ, ಆದ್ರೆ ‘ಎ ಕೆ-47’ ಅಂತ ಯಾಕೆ ಹೆಸರು ಬಂತು? ಅಂದೆ.

ಆಗ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. ಎ ಕೆ-47 ಗನ್ ಅನ್ನೋದು ಗೊತ್ತು. ಆದ್ರೆ ಅದಕ್ಕೆ ಹೆಸರು ಇಟ್ಟದ್ದು ಯಾರಪ್ಪಾ? ಅಂತ ತಲೆ ಕೆರೆದುಕೊಳ್ಳತೊಡಗಿದರು. ರೂಮಿನಲ್ಲಿ ನಿಶ್ಯಬ್ದ ವಾತಾವರಣ. ಎ ಕೆ-47 ಅಂದ್ರೆ..? ಅನ್ನುವುದು ಆ ಕ್ಷಣಕ್ಕೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಹೋಗಿತ್ತು.

ಅದು ಮೀಡಿಯಾ ವಿದ್ಯಾರ್ಥಿಗಳ ದಂಡು. ತಮ್ಮ ಎರಡು ವರ್ಷದ ಕಾಲೇಜ್ ಲೈಫ್ ಮುಗಿಸಿ ಇನ್ನೇನು ನ್ಯೂಸ್ ರೂಂ ಪ್ರವೇಶಿಸಬೇಕಾಗಿದ್ದವರು. ಕಾಲೇಜಿನಲ್ಲಿ ಈಗ ಬೋರ್ಡಿನ ಮೇಲೆ ಕ್ಯಾಮೆರಾ ಚಿತ್ರ ಬಿಡಿಸಬೇಕಾದ ಪರಿಸ್ಥಿತಿ ಏನೂ ಇಲ್ಲ. ಸಾಕಷ್ಟು ಯೂನಿವರ್ಸಿಟಿಗಳು ತಮ್ಮದೇ ಟೆಲಿವಿಷನ್ ಸ್ಟುಡಿಯೋ ಮಾಡಿಕೊಂಡಿವೆ. ಕ್ಯಾಮೆರಾ, ಎಡಿಟಿಂಗ್, ಗ್ರಾಫಿಕ್ಸ್ ಇವು ತಕ್ಕಮಟ್ಟಿಗಾದರೂ ಪರಿಚಯವಾಗಿರುತ್ತದೆ. ಮೊನ್ನೆ ಮೊನ್ನೆ ಸಿದ್ದಾರ್ಥ ಕಾಲೇಜಿಗೆ ಭೇಟಿ ಕೊಟ್ಟಾಗ ಅವರ ಟೆಲಿವಿಷನ್ ಸ್ಟುಡಿಯೋ ನೋಡಿ ದಂಗುಬಡಿದು ಹೋಗಿದ್ದೆ. ಅಷ್ಟು ಸಾಲದು ಎಂಬಂತೆ ‘ಸಿದ್ಧಾರ್ಥ’ ಅನ್ನುವ ಕಮ್ಯುನಿಟಿ ರೇಡಿಯೊ ಸಹಾ ಹುಟ್ಟುಹಾಕಿದ್ದರು. ವಿಜಾಪುರದ ಮಹಿಳಾ ಯೂನಿವರ್ಸಿಟಿಯಲ್ಲಿ ಯುಜಿಸಿ ಗ್ರಾಂಟ್ ಪಡೆದು ಅತ್ಯಂತ ಸುಸಜ್ಜಿತ ಸ್ಟುಡಿಯೊ ಮಾಡುತ್ತಿದ್ದೇವೆ ಅಂತ ಅದರ ಕುಲಪತಿ ಗೀತಾ ಬಾಲಿ ಮೊನ್ನೆ ಕಾಫಿ ಹೀರುತ್ತಾ ಹೇಳಿದ್ದರು.

ಈಗ ಸ್ಟೂಡೆಂಟ್ ಗಳಿಗೆ ಪೇಪರ್ ಮಾಡುವುದು ಗೊತ್ತು. ಕ್ಯಾಮೆರಾ ಹಿಡಿಯುವುದು ಗೊತ್ತು. ಎಲೆಕ್ಟ್ರಾನಿಕ್ ಮೀಡಿಯಾದ ಓಟಕ್ಕೆ ತಕ್ಕಂತೆ ಸ್ಕ್ರಿಪ್ಟ್ ಬರೆಯುವುದು ಗೊತ್ತು. ಮೌಸ್ ಹಿಡಿದ ಹತ್ತೇ ನಿಮಿಷದಲ್ಲಿ ವಾಹ್! ಎನಿಸುವ ಗ್ರಾಫಿಕ್ಸ್ ರೂಪಿಸುವುದು ಗೊತ್ತು. ಪಟಪಟ ಅರಳು ಹುರಿದಂತೆ ಮಾತನಾಡುವುದೂ ಗೊತ್ತು. ಪಿಟಿಸಿ ಕೊಡಬೇಕೆಂದರೆ ಬ್ಯಾಕ್ ಗ್ರೌಂಡ್ ಹೇಗಿರಬೇಕು. ತಾನು ಹೇಗೆ ಕಾಣಬೇಕು, ಕ್ಯಾಮೆರಾದಲ್ಲಿ ಯಾವ ಡ್ರೆಸ್ ಚೆನ್ನಾಗಿ ಕಾಣುತ್ತೆ ಅಂತಲೂ ಗೊತ್ತು.

journalist-news-pad-1ಆದರೆ ಗೊತ್ತಿಲ್ಲದಿರುವುದು ಇದೇ- ಪತ್ರಕರ್ತನಿಗೆ ಎಲ್ಲವೂ ಗೊತ್ತಿರಬೇಕು ಎನ್ನುವುದು. ಎಲ್ಲವೂ ಅಂದರೆ ಅಕ್ಷರಶಃ ಎಲ್ಲವೂ ಗೊತ್ತಿರಬೇಕು. ಆಕಾಶದ ಬಣ್ಣ ನೀಲಿ ಏಕೆ? ನೆಲ್ಸನ್ ಮಂಡೇಲಾ ಜೈಲಲ್ಲಿ ಇದ್ದದ್ದು ಎಷ್ಟು ವರ್ಷ? ರಷ್ಯಾದಲ್ಲಿ ವಿದಾಯ ಅನ್ನುವುದಕ್ಕೆ ಏನು ಹೇಳುತ್ತಾರೆ? ಬೆನಜೀರ್ ಭುಟ್ಟೋ ಎರಡನೆ ಮಗಳ ಹೆಸರೇನು? ಮೊನ್ನೆ ಬೆಂಗಳೂರಿನ ರಿಲಯನ್ಸ್ ಟೈಮ್ ಔಟ್ ನಲ್ಲಿ ಪುಸ್ತಕ ಬಿಡುಗಡೆ ಮಾಡಿದ ಭುಟ್ಟೋ ರಿಲೇಟಿವ್ ಯಾರು? ನೈಜೀರಿಯಾದಲ್ಲಿ ಎಣ್ಣೆ ಕಂಪನಿಗಳು ಅಷ್ಟೊಂದಿರುವುದು ಏಕೆ? ಮಕ್ಕಳು ಹುಟ್ಟುವುದು ಹೇಗೆ? ಮಲೆಗಳಲ್ಲಿ ಮದುಮಗಳು ಕಾದಂಬರಿ ಬರೆದ ವರ್ಷ ಯಾವುದು? ವಿ. ಕೃ. ಗೋಕಾಕರಿಗೂ, ಗೋಕಾಕ್ ಚಳುವಳಿಗೂ ಇರುವ ಸಂಬಂಧ ಏನು? ಶಂಕರ್ ನಾಗ್ ಸತ್ತ ಸ್ಥಳ ಯಾವುದು? ನರಗುಂದದಲ್ಲಿ ಗುಂಡೇಟು  ಬಿದ್ದದ್ದು ಯಾವಾಗ? ಜೆ. ಎಚ್. ಪಟೇಲ್ ಹೆಸರಲ್ಲಿ ಜೆಎಚ್ ಎಂದರೆ ಏನು? ಮಲಯಾಳ ಮನೋರಮಾ ಸರ್ಕ್ಯುಲೇಷನ್ ಎಷ್ಟು? ಪಶ್ಚಿಮ ಬಂಗಾಳದಲ್ಲಿ ಎಷ್ಟು ವರ್ಷಗಳಿಂದ ಎಡ ಪಕ್ಷಗಳ ಆಡಳಿತ ಇದೆ? ಶ್ರೀನಿವಾಸ ಜಿ. ಕಪ್ಪಣ್ಣ ಅವರ ಹೆಸರಿಗೆ ಕಪ್ಪಣ್ಣ ಎನ್ನುವುದು ಸೇರಿದ್ದು ಹೇಗೆ? ಎಂ. ಎಸ್. ಸತ್ಯು ಯಾವ ನಟರ ಬಗ್ಗೆ ಮಾತಾಡಿದ್ದಕ್ಕೆ ವಿವಾದವಾಯಿತು. ಅಸಲಿಗೆ ಎಂ. ಎಸ್ . ಸತ್ಯು ಯಾರು ? ಹೀಗೆ….

ಒಂದು ಸಲ ಹೀಗಾಯ್ತು. ಮಂಗಳೂರಿನ ‘ಪ್ರಜಾವಾಣಿ’ ಕಚೇರಿಯ ಫೋನ್ ಸದ್ದು ಮಾಡತೊಡಗಿತು. ನಾನು ಫೋನ್ ಎತ್ತಿಕೊಂಡೆ. ಆ ಕಡೆ ಇದ್ದವರು ‘ಸಾರ್ ಒಂದು ಪ್ಲೇನ್ ರೇಟ್ ಎಷ್ಟು ಸಾರ್’ ಅಂದ್ರು. ನನ್ನ ಕಿವಿ ನನಗೇ ಕೇಳದಂತಾಯಿತು. ಮತ್ತೆ ‘ಹಾಂ..ಏನಂದ್ರಿ?’ ಅಂದೆ. ಒಂದು ವಿಮಾನದ ಬೆಲೆ ಎಷ್ಟು? ಅಂತ ಪ್ರಶ್ನೆ ಬಂತು. ನಾನು ತಕ್ಷಣ ಗರಂ ಆದವನೇ ‘ಇದೇನು ಜೆಟ್ ಏರ್ ವೇಸ್ ಆಫೀಸಾ .. ಪ್ರಜಾವಾಣಿ ಪೇಪರ್ ಕಚೇರಿ’ ಎನ್ನಬೇಕೆಂದುಕೊಂಡವನು ಬಾಯಿ ಮುಚ್ಚಿಕೊಂಡೆ. ಹೌದಲ್ಲವಾ ಅವರು ಈ ಪ್ರಶ್ನೆಯನ್ನು ಇನ್ನಾರಿಗೆ ಕೇಳಲು ಸಾಧ್ಯ? ಯಾವುದೋ ಬ್ಯಾಂಕಿಗೋ, ಎಲ್ ಐ ಸಿ ಕಚೇರಿಗೋ, ಕನ್ನಡ ಸಂಸ್ಕೃತಿ ಇಲಾಖೆಗೋ, ಹಳ್ಳಿ ಮನೆ ಹೋಟೆಲಿಗೋ ಫೋನ್ ಮಾಡಿ ಈ ವಿಷಯ ಕೇಳಲು ಸಾಧ್ಯವೇ?

ರಾಜ್ ಕುಮಾರ್ ಅಪಹರಣವಾದಾಗ ನಾನು ಮಂಗಳೂರಿನಲ್ಲಿ, ಈಟಿವಿಯಲ್ಲಿದ್ದೆ. ಒಂದು ಮಣ ಫೋನ್ ಗಳ ಸುರಿಮಳೆ. ‘ಹೌದಾ, ಕಿಡ್ನಾಪ್ ಆಯ್ತಾ’ ಅಂತ. ಇದೇನು ಗಾಜನೂರಲ್ಲ, ನಾನು ವೀರಪ್ಪನ್ ಅಲ್ಲ, ನನಗ್ಯಾಕೆ ಕೇಳೋದು’ ಅಂತ ನಾನು ಪೋನ್ ಕುಕ್ಕಲು ಸಾಧ್ಯವಿಲ್ಲ. ಮತ್ತೊಂದು ಬಾರಿ ಪ್ರಜಾವಾಣಿ ಬೆಂಗಳೂರು ಕಚೇರಿಯಲ್ಲಿದ್ದೆ. ಒಂದೇ ಸಮ ಫೋನ್ ಗಳು ಆರಂಭವಾದವು. ಇಂದಿರಾನಗರದಲ್ಲಿ ನೆಲ ಅದುರಿದೆಯಂತೆ ಹೌದಾ? ಅಂತ. ಫೋನ್ ಮಾಡಿದವರಿಗೆ ಭೂಕಂಪ ಆಗಿದೆ ಅನ್ನೋ ಭಯ. ‘ನಮ್ಮ ಆಫೀಸ್ ಇರೋದು ಎಂಜಿ ರೋಡ್ ನಲ್ಲಿ, ಇಂದಿರಾನಗರದಲ್ಲಿಲ್ಲ’ ಅಂತ ಫೋನ್ ಕಟ್ ಮಾಡಲು ಸಾಧ್ಯವಿಲ್ಲ. ಯಾವುದೇ ಮೀಡಿಯಾ ಆಫೀಸಿಗೆ ಕೇಳಿ, ನಾಳೆ ಬಂದ್ ಅಂತ ಗೊತ್ತಾದರೆ ಸಾವಿರಾರು ಪೋನ್ ಗಳ ಸುರಿಮಳೆ ಆಗುತ್ತೆ, ‘ನಾಳೆ ಸ್ಕೂಲ್ ಗೆ ರಜಾ ಕೊಟ್ಟಿದ್ದಾರಾ …?’ ಅಂತ ಹಾಗಂತ ಪ್ರಜಾವಾಣಿ ಆಫೀಸೇನು ಡಿಡಿಪಿಐ ಮೌತ್ ಪೀಸಾ..?

ಪತ್ರಕರ್ತ ಎಂದರೆ ಮಾಹಿತಿಯ ಕಣಜ. ನಡೆದಾಡುವ ವಿಕಿಪೀಡಿಯಾ, ಮೀಡಿಯಾ ಆಫೀಸ್ ಎಂದರೆ ಕಣ್ಣೆದುರಿಗಿರುವ ಗೂಗಲ್ ಸರ್ಚ್. ಪತ್ರಕರ್ತನಾದವನಿಗೆ ಸೈನ್ಸ್ ಟು ಸೆಕ್ಸ್ ಎಲ್ಲವೂ ಗೊತ್ತಿರಬೇಕು ಅಂತ ಜಗತ್ತು ಭಾವಿಸುತ್ತದೆ. ಎಲ್ಲದ್ದಕ್ಕೂ ಕಾಮೆಂಟು ಕೊಡಬೇಕು ಅಂತ ಬಯಸುತ್ತೆ. ಪತ್ರಕರ್ತನ ಕೆಲಸವೂ ಹಾಗಿರುತ್ತದೆ.

ನ್ಯೂಸ್ ಡೆಸ್ಕ್ ನಲ್ಲಿ ಕುಳಿತ ಜರ್ನಲಿಸ್ಟ್ ಕತೆ ನೋಡಿ. ನೆಲ್ಸನ್ ಮಂಡೇಲಾ  ಜೈಲಿನಿಂದ  ಹೊರಬಂದಾಗ ಆತ ಪೊಲಿಟಿಕಲ್ ಕಾಮೆಂಟೇಟರ್, ವಿಶ್ವಕಪ್ ಜರುಗುವಾಗ ಸ್ಫೋರ್ಟ್ಸ್ ಗೊತ್ತಿರುವಾತ. ರಿಜರ್ವ್ ಬ್ಯಾಂಕ್ ದಿಢೀರನೆ ಬಡ್ಡಿದರ ಹೆಚ್ಚಳಕ್ಕೆ ಮುಂದಾದಾಗ ಫೈನಾನ್ಶಿಯಲ್ ಎಕ್ಸ್ ಪರ್ಟ್. 9 ಗಂಟೆಯ ಕಾಲದ ದೀರ್ಘ ನಾಟಕ ನಡೆಯುತ್ತದೆ ಎನ್ನುವಾಗ ಥಿಯೇಟರ್ ಕ್ರಿಟಿಕ್. ಸೃಜನಾ ಕಾಯ್ಕಿಣಿಯ ರಂಗ ಪ್ರವೇಶ ಇದ್ದಾಗ ಡ್ಯಾನ್ಸ್ ಕ್ರಿಟಿಕ್.  ಮೀಡಿಯಾ ಕೆಲಸ ಎನ್ನುವುದು ಗೋಳದ ಮೇಲೊಂದು ಸುತ್ತು ಬಂದಂತೆ. ಅಷ್ಟೇ ಅಲ್ಲ ಪಾತಾಳದಿಂದ ಆಕಾಶಕ್ಕೆ ನೆಗೆದಂತೆ. ಹೀಗೆ ಗೊತ್ತಿದ್ದರಿಂದಲೇ ‘ಪ್ಲೇನ್ ರೇಟ್ ಎಷ್ಟು’ ಅಂತ ಪೋನ್ ಬಂದಾಗ ನಾನು ತೀರಾ ಸಿಡಿಮಿಡಿಗೊಳ್ಳದೇ ಇದ್ದದ್ದು.

‘ಹತ್ತು ನಿಮಿಷ ಬಿಟ್ಟು ಫೋನ್ ಮಾಡಿ ತಿಳಿಸುತ್ತೀನಿ’ ಅಂದೆ. ಅವರು ಫೋನ್ ಇಟ್ಟ ತಕ್ಷಣ ನಾನು ಜೆಟ್ ಏರ್ ವೇಸ್ ಕಚೇರಿಗೆ ಫೋನ್ ತಿರುಗಿಸಲು ಆರಂಭಿಸಿದೆ. ಅತ್ತಲಿನ ದನಿ ‘ಎಲ್ಲಿಗೆ ಟಿಕೆಟ್ ಬುಕ್ ಮಾಡಬೇಕು’ ಅಂತ ಕೇಳಿತು. ನಾನು ‘ಟಿಕೆಟ್ ಬುಕ್ಕಿಂಗ್ ಬೇಡ ಒಂದು ಪ್ಲೇನ್ ರೇಟು ಎಷ್ಟು’ ಎಂದೆ. ಆ ಕಡೆ ಇದ್ದ ಹುಡುಗಿ ಮೂರ್ಛೆ ಹೋಗುವುದೊಂದೇ ಬಾಕಿ ಇತ್ತೇನೋ. ‘ಇಲ್ಲಿ ವಿಮಾನ ಮಾರುವುದಿಲ್ಲ ಸಾರ್, ವಿಮಾನದ ಟಿಕೆಟ್ ಮಾರ್ತೀವಿ’ ಅಂದಳು. ನಾನು ನನ್ನ ಪರಿಸ್ಥಿತಿ ವಿವರಿಸಿದೆ. ಪಾಪ ಏನೆಂದುಕೊಂಡಳೋ ಏನೋ ‘ಹತ್ತು ನಿಮಿಷ ಬಿಟ್ಟು ಫೋನ್ ಮಾಡಿ ಸಾರ್’ ಅಂತ ಫೋನ್ ಕಟ್ ಮಾಡಿದಳು . ಅಲ್ಲಿಂದ ಆಕೆ ಫೋನ್ ತಿರುಗಿಸಿದ್ದು ತನ್ನ ಮುಂಬಯಿ ಹೆಡ್ ಆಫೀಸ್ ಗೆ. ಪ್ರಶ್ನೆ ನೇರ. ‘ಒಂದು ವಿಮಾನದ ರೇಟ್ ಎಷ್ಟು’ ಅಂತ. ಅಲ್ಲಿದ್ದವರ ಸಿಟ್ಟು ನೆತ್ತಿಗೇರಿರಬೇಕು. ಅಲ್ಲಾ ಟಿಕೆಟ್ ಮಾರು ಅಂತ ಇವಳನ್ನ ಕೂರಿಸಿದ್ರೆ ಇವಳು ವಿಮಾನವನ್ನೇ ಮಾರೋದಿಕ್ಕೆ ಕುಳಿತಿದ್ದಾಳಲ್ಲಾ ಅಂತ. ಅವರು ಗದರುವ ಮುನ್ನವೇ ಆಕೆ ಹೀಗೀಗೆ ಅಂತ ಪರಿಸ್ಥಿತಿ ವಿವರಿಸಿದಳು. ಮತ್ತೆ ನನ್ನ ಮುಂದಿನ ಫೋನ್ ಟ್ರಿಣ್ ಎಂದಿತು. ಅದೇ ಹುಡುಗರು. ವಿಮಾನದ ರೇಟು ಇಷ್ಟು ಅಂತ ಹೇಳಿದೆ. ನನ್ನ ಕುತೂಹಲವೂ ಏರಿತ್ತು- ‘ಅದು ಸರಿ ಈ ಇನ್ ಫರ್ಮೇಶನ್ ನಿಮಗೆ ಯಾಕೆ ಬೇಕಿತ್ತು?’ ಎಂದೆ ಆ ಹುಡುಗರು ‘ಸಾರ್! ಕೆನರಾ ಕಾಲೇಜಿನ ಸ್ಟೂಡೆಂಟ್ಸ್ ನಾವು ಹರಟೆ ಹೊಡೀತಾ ಕೂತಿದ್ವಿ. ನ್ಯೂಸ್ ಪೇಪರ್ ನವರಿಗೆ ಎಲ್ಲಾ ಗೊತ್ತಿರುತ್ತಲ್ಲಾ ಸಾರ್ ಅದಕ್ಕೆ ನಿಮಗೆ ಫೋನ್ ಮಾಡಿದ್ವಿ’ ಅಂದ್ರು.

mobile-websites-1ಹೌದಲ್ವಾ! ಅನಿಸಿತು. ಅವರ ಪ್ರಶ್ನೆಯಿಂದ ಅವರೂ, ಜೆಟ್ ಏರ್ ವೇಸ್ ನ ಆ ಹುಡುಗಿಯೂ, ನಾನೂ… ಮಾಹಿತಿ ಶ್ರೀಮಂತರಾಗಿದ್ದೆವು. ನಿನ್ನೆಗಿಂತ ಇವತ್ತು ಒಂದು ಮಾಹಿತಿ ನಮಗೆ ಹೆಚ್ಚು ಗೊತ್ತಾಗಿತ್ತು. ಈ ಕತೆ ಹೇಳಿ ನಾನು ಮುಂದಿದ್ದವರನ್ನು ನೋಡಿದೆ. ಅವರಿಗೂ ಹೌದಲ್ಲಾ ಎನಿಸಿರಬೇಕು. ಈಗ ಹೇಳಿ ನೋಡೋಣ ಎ ಕೆ – 47 ಗೆ ಆ ಹೆಸರು ಏಕೆ ಬಂತು ಅಂದೆ. ತಕ್ಷಣ ಹಿಂದಿನ ಸಾಲಿನಲ್ಲಿದ್ದ ಹುಡುಗನೊಬ್ಬ ತನ್ನ ಮೊಬೈಲ್ ಬಟನ್ ಒತ್ತಿದ ಇಂಟರ್ ನೆಟ್ ಕನೆಕ್ಟ್ ಆಯಿತು. ಗೂಗಲ್ ಸರ್ಚ್ ನಲ್ಲಿ ಎ ಕೆ -47 ಅಂತ ಎಂಟರ್ ಮಾಡಿದ. ವಾಹ್! ಎನ್ನುವ ಉದ್ಗಾರ ಹೊರಬಿತ್ತು. ‘ಆಟೋಮ್ಯಾಟಿಕ್  ರೈಫಲ್’ ಕಾರಣದಿಂದಾಗಿ A, ಅದನ್ನು ಕಂಡುಹಿಡಿದಿದ್ದು, ‘ಕಲಾಶ್ನಿಕೋವ್’ ಆದ್ದರಿಂದ K, 1947ರಲ್ಲಿ ಇದನ್ನು ಕಂಡುಹಿಡಿದಿದ್ದರಿಂದ 47 ಅಂತ ಉತ್ತರ ಕೊಟ್ಟ ಕ್ಲಾಸಿನಲ್ಲಿದ್ದವರಿಗೆಲ್ಲಾ ಮಿಂಚು ಹೊಡೆದಂತಾಯಿತು.. ಅರೆ! ಇಷ್ಟೆಲ್ಲಾ ಕತೆ ಇರುತ್ತಾ ಅಂತ. ಅಷ್ಟಕ್ಕೇ ನಿಲ್ಲಲಿಲ್ಲ. ಮಾರನೆಯ ದಿನ ಎಕೆ -47 ನ ಬುಲೆಟ್ ಎಷ್ಟು ವೇಗದಲ್ಲಿ ಹೋಗುತ್ತೆ? ಎಕೆ -47 ನಂತರ ಬಂದಿರುವ ಮಾಡೆಲ್ ಯಾವುದು? ಎಕೆ-47 ರೇಟ್ ಎಷ್ಟು? ಎಲ್ಲಾ ಟೆರರಿಸ್ಟ್ ಗಳಿಗೂ ಅದು ಹೇಗೆ ಇಷ್ಟು ಸಲೀಸಾಗಿ ಸಿಕ್ಕುತ್ತೆ? ಅದರ ಉದ್ದ ಅಗಲ ಆಳ ಎಲ್ಲವನ್ನೂ ಬಗೆದು ಕೂತಿದ್ದರು.

ಅಲ್ಲಿಂದ ಶುರುವಾಯಿತು ನೋಡಿ ಎಲ್ಲವನ್ನೂ ತಿಳಿಯುವ ಆಟ. ಮೊಬೈಲ್ ಫೋನ್ ನಲ್ಲಿ ಬಳಸುವ T9 ಭಾಷೆ ಹುಟ್ಟಿದ್ದು ಹೇಗೆ? ಅದರ ಉಪಯೋಗ ಏನು? T9 ಅಂತಲೇ ಯಾಕೆ ಹೆಸರಿಟ್ಟರು. ಅಲ್ಲಿಗೂ ನಿಲ್ಲಲಿಲ್ಲ. ‘ಶೂನ್ಯವೇಳೆ’ ಎಂದರೇನು? ಅಸೆಂಬ್ಲಿಯಲ್ಲಿ ಯಾವಾಗ ಈ ಶೂನ್ಯವೇಳೆ ಇರುತ್ತೆ ? ಇದಕ್ಕೆ ಶೂನ್ಯವೇಳೆ ಅಂತಲೇ ಯಾಕೆ ಹೆಸರಿಟ್ಟರು? ಈಗ ಯಾವುದೂ ಪಾಠವಾಗಿರಲಿಲ್ಲ ಆಟವಾಗಿ ಹೋಗಿತ್ತು.

ಅಂದೂ ಹೀಗೇ ಆಗಿತ್ತು. ಬೆಸ್ಟ್ ಕ್ರೈಂ ರಿಪೋರ್ಟರ್ ಅಂತ ಬಣ್ಣಿಸಿಕೊಳ್ಳುತ್ತಿದ್ದ ರಿಪೋರ್ಟರ್ ಒಬ್ಬರು ಈಟಿವಿ ಸೇರಲು ಬಯಸಿ ನಮ್ಮೆದುರು ಹಾಜರಾಗಿದ್ದರು. ಆಗ ತಾನೇ ಬೆಂಗಳೂರಿನಲ್ಲಿ Rdx ಪತ್ತೆಯಾಗಿತ್ತು. Rdx ಅಂದ್ರೇನು ಅಂತ ಕೇಳಿದೆವು, ಒಂದೇ ಪ್ರಶ್ನೆಗೆ ಚಿತ್. ಇದನ್ನು ಸೈಕ್ಲೋನೈಟ್, ಹೈಕ್ಸೋಜೆನ್, T4 ಅಂತಾ ಕರೀತಾರೆ ಅನ್ನೋದು ಗೊತ್ತಿರಲಿಲ್ಲ. ಇನ್ನೊಬ್ಬರು ಬೆಸ್ಟ್ ಎನ್ವಿರಾನ್ಮೆಂಟ್ ರಿಪೋರ್ಟರ್ ನಮ್ಮ ಮುಂದಿದ್ದರು. ರಾಮೋಜಿರಾವ್ ಅವರು ಕೇಳಿದ್ದು ಇಷ್ಟೇ… ಬೆಂಗಳೂರಿನಲ್ಲಿ ಪರಾಗರೇಣು ಪ್ರಮಾಣ ಎಷ್ಟು? ಅಂತ. ಅವರೂ ಚಿತ್. ಆನಂತರ ನಾನು ಕರ್ನಾಟಕದಲ್ಲಿ ಎಷ್ಟು ಜಿಲ್ಲೆ ಇದೆ? ಎಷ್ಟು ಜನ ಶಾಸಕರು? ಎಷ್ಟುಜನ ಎಂಪಿಗಳು? ಎನ್ನುವ ಸಿಂಪಲ್ ಪ್ರಶ್ನೆ ಹಾಕುತ್ತಾ ಬಂದಿದ್ದೇನೆ.

ಮೊನ್ನೆ ಹಾಗೇ ಇದೇ ಮೀಡಿಯಾ ಸ್ಟೂಡೆಂಟ್ ಗಳಿಗೆ ಆಕ್ಟೋಪಸ್ ಅಥವಾ ಅಷ್ಟಪದಿಗೆ ಎಷ್ಟು ಕಾಲು? ಎಂದೆ. ಕಿತ್ತೂರು ರಾಣಿ ಚೆನ್ನಮ್ಮನ ಊರು ಯಾವುದು ಎನ್ನುವಷ್ಟೇ ಸಿಂಪಲ್ ಪ್ರಶ್ನೆ ಅದು. ಆದರೆ 5,8,16.. ಉತ್ತರ ಬೆಳೆಯುತ್ತಲೇ ಹೋಗುತ್ತಿತ್ತು.

(ಲೇಖಕರು ಹಿರಿಯ ಪತ್ರಕರ್ತರು ಹಾಗೂ ಬರಹಗಾರರು. ‘ಸಮಾಚಾರ’ ಪತ್ರಿಕೋದ್ಯಮದಲ್ಲಿ ಕೌಶಲ್ಯದ ಕೊರತೆ ಕುರಿತು ಪ್ರಕಟಿಸಿದ ಬರಹಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಬಂದ ಅವರ ಸಂಗ್ರಹ ಬರಹ ಇದು)

Top