An unconventional News Portal.

ಹೂಟ್ ರಿಪೋರ್ಟ್‌- 2017: ‘ಪತ್ರಿಕಾ ಸ್ವಾತಂತ್ರ್ಯದ ಹರಣ; ಮೋದಿಯ ರಾಷ್ಟ್ರೀಯತೆಯೇ ಕಾರಣ’

ಹೂಟ್ ರಿಪೋರ್ಟ್‌- 2017: ‘ಪತ್ರಿಕಾ ಸ್ವಾತಂತ್ರ್ಯದ ಹರಣ; ಮೋದಿಯ ರಾಷ್ಟ್ರೀಯತೆಯೇ ಕಾರಣ’

ಭಾರತದಲ್ಲಿ ಪತ್ರಕರ್ತರಿಗೆ ಭಯಾನಕ ಪರಿಸ್ಥಿತಿ ಎದುರಾಗಿದೆ ಎಂದು ‘ಹೂಟ್’ ಇತ್ತೀಚಿಗೆ ಬಿಡುಗಡೆಗೊಳಿಸಿರುವ ತನ್ನ ‘ಮೀಡಿಯಾ ಫ್ರೀಡಂ ಅಂಡ್ ಫ್ರೀಡಂ ಆಫ್ ಎಕ್ಸ್‌ಪ್ರೆಷನ್ ಇನ್ 2017’  ವರದಿಯಲ್ಲಿ ತಿಳಿಸಿದೆ. ಹಲವಾರು ಕಾರಣಗಳಿಂದ ಪತ್ರಕರ್ತರು ಸಂದಿಗ್ಧ ಪರಿಸರದಲ್ಲಿ ಬದುಕು ಸಾಗಿಸುವಂತಾಗಿದೆ. ಇದರೊಂದಿಗೆ ಮುಖ್ಯವಾಹಿನಿಯ ಬಹುಪಾಲು ಮಾಧ್ಯಮಗಳು ದೊಡ್ಡ ಬಂಡವಾಳಶಾಹಿಗಳು ಹಾಗೂ ರಾಜಕೀಯ ನಾಯಕರ ಕೈಗಳಲ್ಲಿದ್ದು, ಅವೇ ಹೆಚ್ಚು ಜನರನ್ನು ತಲುಪುತ್ತಿವೆ ಎಂದು ಈ ವರದಿ ಹೇಳಿದೆ.

ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಾಂಕ ತಿಳಿಸುವಂತೆ 2017ರಲ್ಲಿ ಭಾರತವು ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ 180 ರಾಷ್ಟ್ರಗಳ ಪೈಕಿ 136ನೇ ಸ್ಥಾನ ಪಡೆದಿದೆ. 2016ರ ವೇಳೆಗೆ ಭಾರತ 133ನೇ ಸ್ಥಾನದಲ್ಲಿತ್ತು. “ಹಿಂದೂ ರಾಷ್ಟ್ರೀಯತೆಯ ಉನ್ಮಾದದ ಹೆಚ್ಚಳವೇ, ಮಾಧ್ಯಮ ಸ್ವಾತಂತ್ರ್ಯದ ಶ್ರೇಯಾಂಕ ಕುಸಿತಕ್ಕೆ ಕಾರಣ,” ಎಂದು ವರದಿ ತಿಳಿಸುತ್ತದೆ.

ಕಳೆದ ವರ್ಷ ಕೊಲೆಗೀಡಾದ 11  ಲೇಖಕರಲ್ಲಿ ಮೂರು ಜನ ಪತ್ರಕರ್ತರು. ಕರ್ನಾಟಕದಲ್ಲಿ ಗೌರಿ ಲಂಕೇಶ್ ಮತ್ತು ತ್ರಿಪುರಾದಲ್ಲಿ ಇಬ್ಬರು ಪತ್ರಕರ್ತರನ್ನು ಕೊಲ್ಲಲಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಾನನಷ್ಟ ಮೊಕದ್ದಮೆಗಳು ಹೂಡಲ್ಪಟ್ಟಿದ್ದರೆ, ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮೃತಪಟ್ಟ ಬಳಿಕ ಮಾಧ್ಯಮ ಸ್ವಾತಂತ್ರ್ಯವು ಗಣನೀಯ ಪ್ರಮಾಣದಲ್ಲಿ ಕುಸಿದಿದೆ ಎಂದು ವರದಿ ವಿವರಿಸಿದೆ.

ತೆಲುಗಿನ ಸ್ಥಳೀಯ ಪತ್ರಿಕೆ ‘ಮ್ಯಾಟಿ ಚೇತುಲಾ ಬಾಸಾ’ಗೆ ಬರೆಯುತ್ತಿದ್ದ ಹವ್ಯಾಸಿ ಪತ್ರಕರ್ತ ನಾಗಾರ್ಜುನ ರೆಡ್ಡಿ, ಚಿರಾಲ ಕ್ಷೇತ್ರದ ಎಂಎಲ್‌ಎ ಭ್ರಷ್ಟಾಚಾರದ ಕುರಿತಾಗಿ ಲೇಖನವೊಂದನ್ನು ಬರೆದಿದ್ದರು. 2017ರ ಫೆಬ್ರವರಿಯಲ್ಲಿ ಸಾರ್ವಜನಿಕವಾಗಿಯೇ ಅವರ ಮೇಲೆ ದಾಳಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲ. ಇಂತಹ ಹಲವು ಪ್ರಕರಣಗಳನ್ನು ವರದಿ ಮುಂದಿಟ್ಟಿದೆ.

ಕಳೆದ ವರ್ಷ, ದೇಶದ ನಾನಾ ಭಾಗಗಳಲ್ಲಿ ನಡೆದ 11 ಮಂದಿ ಲೇಖಕರ ಹತ್ಯೆಗಳ ಜತೆಗೆ, 46 ಮಂದಿ ದಾಳಿಗೆ ಒಳಗಾಗಿದ್ದಾರೆ.  27 ಪತ್ರಕರ್ತರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಜೊತೆಗೆ 12 ಮಂದಿ ಪತ್ರಕರ್ತರು ತಮ್ಮ ವರದಿಗಳ ಕಾರಣದಿಂದಾಗಿ ಬೆದರಿಸಲ್ಪಟ್ಟಿದ್ದಾರೆ.  ಈ ದುಷ್ಕೃತ್ಯಗಳನ್ನು ನಡೆಸಿದವರಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ರಾಜಕೀಯ ಕಾರ್ಯಕರ್ತರು, ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಹಾಗೂ ಇವ್ಯಾವುದಕ್ಕೂ ಸಂಬಂಧ ಪಡದ ವ್ಯಕ್ತಿಗಳೂ ಇದ್ದಾರೆ ಎಂದು ‘ಹೂಟ್’ ವರದಿ ಉಲ್ಲೇಖಿಸಿದೆ.

ಕೊಲೆಗಳು, ಬೆದರಿಕೆಗಳು, ದಾಳಿಗಳು, ಸೆನ್ಸಾರ್‌ಶಿಪ್, ಅಂತರ್ಜಾಲ ಸ್ಥಗಿತಗೊಳಿಸುವಿಕೆ ಮತ್ತು ವಿವಾದಾತ್ಮಕ ಭಾಷಣಗಳ ಕುರಿತು ಹೂಟ್ ನೀಡಿರುವ ಪ್ರಮುಖ ಅಂಶಗಳು ಇಲ್ಲಿವೆ:

  • ವಾಕ್ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದ ವಿಷಯದಲ್ಲಿ ಹೆಚ್ಚು ತೊಂದರೆಗೆ ಒಳಪಟ್ಟಿರುವ ರಾಜ್ಯಗಳು ಸಿಕ್ಕಿಂ ಹಾಗೂ ಜಮ್ಮು ಮತ್ತು ಕಾಶ್ಮೀರ.
  • ಮಾಧ್ಯಮಗಳು ಮತ್ತು ಪತ್ರಕರ್ತರು ಅಸಹ್ಯಕರವಾದ ಮತ್ತು ಜೀವ ಬೆದರಿಕೆಗಳಿಗೆ ಗುರಿಯಾಗುತ್ತಿದ್ದಾರೆ.
  • ಚತ್ತೀಸ್‌ಗಢವೊಂದರಲ್ಲೇ ಪತ್ರಕರ್ತರ ವಿರುದ್ಧ 13 ಪ್ರಕರಣಗಳಲ್ಲಿ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ.
  • ಕಳೆದ ಜೂನ್‌ನಲ್ಲಿ ಕರ್ನಾಟಕದ ಶಾಸಕಾಂಗ ಸಭೆಯ ಸ್ಪೀಕರ್ ಮತ್ತು ಸವಲತ್ತುಗಳ ಸಮಿತಿಯ ಮುಖ್ಯಸ್ಥ ಕೆ.ಬಿ. ಕೋಳಿವಾಡ್, ಶಾಸಕಾಂಗದ ವಿರುದ್ಧ ಲೇಖನಗಳನ್ನು ಪ್ರಕಟಿಸಿದ ಕಾರಣಕ್ಕಾಗಿ ಎರಡು ವಾರಪತ್ರಿಕೆಗಳ ಸಂಪಾದಕರಿಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ, ತಲಾ ರೂ.10,000 ದಂಡ ವಿಧಿಸಿದ್ದರು.
  • ಜುಲೈನಲ್ಲಿ, ಎಕಾನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಪತ್ರಿಕೆ ಸಂಪಾದಕ ಪರಂಜಯ್ ಗುಹಾ ಠಾಕುರ್ತಾ, ‘ಜರ್ನಲ್ ಬೋರ್ಡ್’ಗೆ ಸಂಬಂಧಿಸಿದಂತೆ ಅದಾನಿಯ ಅಧಿಕಾರದ ಕುರಿತಾಗಿ ಅದಾಗಲೇ ಪ್ರಕಟಗೊಂಡಿದ್ದ ತನಿಖಾ ವರದಿಯನ್ನು ಕೈಬಿಡುವ ವಿಚಾರದಲ್ಲಿ ತಮ್ಮ ಕೆಲಸವನ್ನು ತ್ಯಜಿಸಿದ್ದರು.
  • ಕಾಶ್ಮೀರದಲ್ಲಿ ಕಳೆದ ವರ್ಷ 40 ಅಂತರ್ಜಾಲ ತಾಣಗಳು ಸ್ಥಗಿತಗೊಂಡವು, ‘ಕಾಶ್ಮೀರಿ ರೀಡರ್’ ಪತ್ರಿಕೆಯನ್ನು ಕೆಲಕಾಲ ನಿಲ್ಲಿಸುವಂತೆ ತಿಳಿಸಲಾಗಿತ್ತು.
  • ಅತಿ ಹೆಚ್ಚು ಮಾದ್ಯಮ ಬೆದರಿಕೆಗಳನ್ನು ಕಂಡ ಅಪಖ್ಯಾತಿಗೆ ಮಹಾರಾಷ್ಟ್ರ ಮತ್ತು ಅತಿ ಹೆಚ್ಚು ದಾಳಿಗಳಿಗೆ ಆಂಧ್ರಪ್ರದೇಶ ಸಾಕ್ಷಿಯಾಗಿದೆ.
  • ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣ ಸಂಬಂಧಿತ ಘಟನೆಗಳಿಗೆ ಕರ್ನಾಟಕ ಹೆಚ್ಚಿನ ಸಂಖ್ಯೆಯ ಕ್ರಮಗಳನ್ನು ಕೈಗೊಂಡಿದೆ.
  • ಮಹಾರಾಷ್ಟ್ರ ಕಳೆದ ವರ್ಷದಲ್ಲಿ 19 ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿಕೊಂಡಿದೆ. ತಮಿಳುನಾಡಿನಲ್ಲಿ ಜಯಲಲಿತಾ ನಿಧನದ ನಂತರ ಮಾನನಷ್ಟ ಪ್ರಕರಣಗಳು ಕಡಿಮೆಯಾಗಿವೆ.
  • ದಾಖಲಾಗಿರುವ 16 ವಿವಾದಾತ್ಮಕ ಭಾಷಣದ ಪ್ರಕರಣಗಳಲ್ಲಿ 10 ಪ್ರಕರಣಗಳು ಬಿಜೆಪಿಯ ರಾಜಕಾರಣಿಗಳು ಮತ್ತು ಸದಸ್ಯರು ಅಥವಾ ಅಖಿಲ ಭಾರತ ಹಿಂದೂ ಸಂಗತಿ ಮಂಚ್, ಹಿಂದೂ ಜಾಗರಣಾ ವೇದಿಕೆಂತಹ ಬಲಪಂಥೀಯ ಗುಂಪುಗಳ ವಿರುದ್ಧ ದಾಖಲಾಗಿವೆ.

Leave a comment

Top