An unconventional News Portal.

ಮದುವೆಗೆ ಹಣ ಹೊಂದಿಸಲು ಹೊಸ ಐಡಿಯಾ: ಸಿಲಿಕಾನ್ ಸಿಟಿಯಲ್ಲಿ ಹುಟ್ಟಿಕೊಂಡ ‘ವೆಡ್ಡಿಂಗ್ ಟೂರಿಸಂ’!

ಮದುವೆಗೆ ಹಣ ಹೊಂದಿಸಲು ಹೊಸ ಐಡಿಯಾ: ಸಿಲಿಕಾನ್ ಸಿಟಿಯಲ್ಲಿ ಹುಟ್ಟಿಕೊಂಡ ‘ವೆಡ್ಡಿಂಗ್ ಟೂರಿಸಂ’!

ಮದುವೆ ಎಂಬುದು ಖಾಸಗಿ ವಿಚಾರ; ಅತ್ಯಂತ ವೈಯುಕ್ತಿಕವಾದುದ್ದು. ಪ್ರತಿಯೊಬ್ಬರಿಗೂ ಅವರ ಮದುವೆಯನ್ನು ಹೇಗೆ ಆಗಬೇಕು ಎಂಬ ಕುರಿತು ಅವರದ್ದೇ ಆದ ಆಲೋಚನೆಗಳು ಇರುತ್ತದೆ. ಈ ಆಲೋಚನೆಗಳು ಹುಟ್ಟುವುದು ಸಾಮಾಜಿಕ ಪರಿಸರ ಹೇರುವ ಒತ್ತಡಗಳಿಂದ ಎಂಬುದನ್ನು ಗಮನಿಸಬೇಕಿದೆ. ಹೀಗಾಗಿಯೇ, ಅದ್ದೂರಿ ಮದುವೆಗಳು ಇಷ್ಟವಿದ್ದೋ, ಸಾಮರ್ಥ್ಯವಿದ್ದೋ ಆಯೋಜನೆಗೊಳ್ಳುತ್ತವೆ ಎನ್ನುವಂತಿಲ್ಲ.

ಹೀಗೆ, ಆಗುವ ಮದುವೆಗಳಿಗೆ ಹಣ ಹೊಂದಿಸುವುದಕ್ಕಾಗಿಯೇ ಹೊಸ ಐಡಿಯಾ ಒಂದು ಹುಟ್ಟಿಕೊಂಡಿದೆ. ಅದು ಮದುವೆಯ ಟಿಕೆಟುಗಳನ್ನು ಮಾರುವ ಯೋಜನೆ! ಹೌದು, ನೀವು ಓದುತ್ತಿರುವುದು ಸರಿಯಾಗಿಯೇ ಇದೆ. ಮದುವೆಗೂ ಟಿಕೆಟ್ ಇಟ್ಟು, ಅದನ್ನು ಮಾರುವ ಮೂಲಕ ನೀವು ನಿಮ್ಮ ಮದುವೆಗಳಿಗೆ ಹಣವನ್ನು ಹೊಂದಿಸಬಹುದು. ಟಿಕೇಟ್ ಕೊಳ್ಳುವವರು ಯಾರು? ಹೇಗೆ? ಅನ್ನೋ ಪ್ರಶ್ನೆಗಳು ನಿಮ್ಮಲ್ಲೀಗ ಹುಟ್ಟಿಕೊಂಡಿದ್ದರೆ, ಈ ಸ್ಟೋರಿ ಓದಿ.

ಬೆಂಗಳೂರಿನ ನಮ್ರತಾ ನಟರಾಜ್ ಮತ್ತು ನಿತಿನ್ ಭಾಟಿ ಎಂಬ ಜೋಡಿಗಳು ಕಳೆದ ತಿಂಗಳು ರಾಜಧಾನಿಯಲ್ಲಿ ಸತಿಪತಿಗಳಾದರು. ಇವರ ಮದುವೆಗೆ ಆರು ಜನ ವಿಶೇಷ ಅತಿಥಿಗಳು ಬಂದಿದ್ದರು; ಅವರೆಲ್ಲಾ ವಿದೇಶಿಯರು. ಮದುವೆ ಜೋಡಿಗಳಿಗೆ ಸಂಬಂಧವೇ ಇಲ್ಲದ ಇವರು ಕರ್ನಾಟಕದವರಗೆ ಬಂದಿದ್ದು ಮದುವೆ ನೋಡಲು. ಅದಕ್ಕಾಗಿ, ಅವರು ಮದುವೆಯ ಟಿಕೆಟ್ಗಳನ್ನು ದುಡ್ಡುಕೊಟ್ಟು ಖರೀದಿಸಿ ಬೆಂಗಳೂರಿನವರೆಗೆ ಬಂದಿದ್ದರು. ಮೂರು ದಿನಗಳ ಸ್ಥಳೀಯ ಸಂಪ್ರದಾಯದ ಮದುವೆಯಲ್ಲಿ ಇವರೆಲ್ಲಾ ಪಾಲ್ಗೊಂಡಿದ್ದರು.

ಮದುವೆಯ ಆಮಂತ್ರಣ ಪತ್ರಿಕೆಯನ್ನು ಈ ರೀತಿ ವಿದೇಶಿಯರಿಗೆ ಮಾರಲೆಂದೇ ‘ಜಾಯಿನ್ ಮೈ ವೆಡ್ಡಿಂಗ್’ ಎಂಬ ಸ್ಟಾರ್ಟಪ್ ಆರಂಭವಾಗಿದೆ. ಇವರು ಮದುವೆಯ ಟಿಕೆಟ್ಗಳನ್ನು ವಿದೇಶಿಯರಿಗೆ ಮಾರುತ್ತಾರೆ. ಈ ಹಣ ಜೋಡಿಗಳ ಮದುವೆ ಖರ್ಚಿಗೆ ಬಳಕೆಯಾದರೆ, ಅತ್ತ ಪ್ರವಾಸಿಗರಿಗೆ ಸಂಪ್ರದಾಯಬದ್ಧ ಮದುವೆಯನ್ನು ನೋಡುವ ಸೌಭಾಗ್ಯ. ಶಿಷ್ಠ ಭಾಷೆಯಲ್ಲಿ ಹೇಳುವುದಾದರೆ ಇದೊಂದು ರೀತಿಯ ‘ಮದುವೆ ಪ್ರವಾಸೋದ್ಯಮ’; ಬೇರೆ ಬೇರೆ ಸಂಸ್ಕ್ರತಿಯ ಮದುವೆಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಸೃಷ್ಟಿಸುವ ವೇದಿಕೆ.

ಸಂಬಂಧ ಬೆಸೆದ ಫೇಸ್ಬುಕ್: 

‘ಜಾಯಿನ್ ಮೈ ವೆಡ್ಡಿಂಗ್’ ಆರಂಭವಾದ ನಂತರ ವಿದೇಶಿಯರು ಪಾಲ್ಗೊಂಡ ಮೊದಲ ಮದುವೆ ನಮ್ರತಾ ಮತ್ತು ನಿತಿನ್ರದ್ದು. ಇವರ ನಡುವೆ ಸಂಬಂಧ ಬೆಸೆಯಲು ನೆರವಾಗಿದ್ದು ಮತ್ತದೇ ಜಗತ್ತನ್ನೇ ಸಂಪರ್ಕ ಜಾಲದ ಬುಟ್ಟಿಯಲ್ಲಿ ತೂಗುವ ಫೇಸ್ಬುಕ್. ಇಂಥಹದ್ದೊಂದು ಮದುವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇರುವುದನ್ನು ನೋಡಿ  ವಿದೇಶಿಯರು ಟಿಕೆಟ್ ಖರೀದಿಸಿ ಬಂದಿದ್ದರು. 500 ಜನರ ಮದುವೆ ಮತ್ತು 1000 ಜನರ ಆರತಕ್ಷತೆಯಲ್ಲಿ ಈ ವಿದೇಶಿ ಅತಿಥಿಗಳೂ ಪಾಲ್ಗೊಂಡರು.

ಮೊದಲಿಗೆ ಮದುವೆ ದಿನಾಂಕ ನಿಗದಿ ಮಾಡಿದ ಈ ಇಬ್ಬರು ಜೋಡಿಗಳು 6 ವಿದೇಶಿಗರಿಗೆ 9 ಟಿಕೆಟ್ಟುಗಳನ್ನು ಮಾರಾಟ ಮಾಡಿದ್ದರು. ಇವರ ಮದುವೆಯ ಟಿಕೆಟ್ಟುಗಳಿಗೆ ಒಂದು ದಿನಕ್ಕೆ 50 ಡಾಲರ್ ನಿಗದಿಪಡಿಸಲಾಗಿತ್ತು. ಮದುವೆಗೆ ಬಂದ ವಿದೇಶಿಯರು ಆಗಸ್ಟ್ 27 ರಿಂದ 29ರವರೆಗೆ ನಡೆದ, ಮದರಂಗಿ, ಮದುವೆ, ಆರತಕ್ಷತೆಯಲ್ಲಿ ಪಾಲ್ಗೊಂಡು ತೆರಳಿದರು.wedding

“ವಿದೇಶಿಯರಿಗೆ ತುಂಬಾ ಇಷ್ಟವಾಗಿದ್ದು ಇಲ್ಲಿನ ಊಟ. ಅದರಲ್ಲೂ ಬಾಳೆ ಎಲೆಯಲ್ಲಿ ಊಟ ಬಡಿಸಿದ್ದು ತುಂಬಾನೆ ಹಿಡಿಸಿತು. ಆರತಕ್ಷತೆ ದಿನದ ಉತ್ತರ ಭಾರತದ ಊಟವನ್ನೂ ಇಷ್ಟ ಪಟ್ಟರು,” ಎನ್ನುತ್ತಾರೆ ನಮ್ರತಾ. “ವಧು ವರರ ಮದುವೆ ಶಾಸ್ತ್ರದ ಆಟಗಳನ್ನು ವಿದೇಶಿಯರು ಆನಂದಿಸಿದರು,” ಎನ್ನುತ್ತಾರೆ ಅವರು.

“ಇದೊಂದು ಜೀವಮಾನದ ಅನುಭವ. ಇಲ್ಲಿಗೆ ಬಂದಿದ್ದು, ರೆಡ್ ಕಾರ್ಪೆಟ್ ಮೇಲೆ ನಡೆದಾಡಿದ್ದು, ಲೋಕಲ್ ಜನರೊಂದಿಗೆ ಬಾಲಿವುಡ್ ಸ್ಟೈಲಿನಲ್ಇ ಡಾನ್ಸ್ ಮಾಡಿದ್ದೆಲ್ಲಾ ನನಗೆ ತುಂಬಾನೇ ಇಷ್ಟವಾಯ್ತು,” ಎನ್ನುತ್ತಾರೆ ಆಸ್ಟ್ರೇಲಿಯಾದ ಮಾರ್ಟಿ ಮಟೆಸ್ಸಾ.

ಜಾಯಿನ್ ಮೈ ವೆಡ್ಡಿಂಗ್

ಜಾಯಿನ್ ಮೈ ವೆಡ್ಡಿಂಗ್ ವೆಬ್ಸೈಟ್ ಬೇರೆ ಬೇರೆ ದರದಲ್ಲಿ ಟಿಕೆಟುಗಳನ್ನು ಮಾರಿ ಕೊಡುತ್ತದೆ. ವಸತಿ, ಸಾರಿಗೆ ಮತ್ತು ಆಹಾರಗಳನ್ನು ಒಳಗೊಂಡಂತೆ ಭಿನ್ನ ಮಾದರಿಯ ಟಿಕೆಟ್ಟುಗಳಿವೆ. ಮೂರು ದಿನಗಳ ಮದುವೆಗೆ 300 – 500 ಡಾಲರ್ (20,000 – 33,000) ದರ ವಿಧಿಸುತ್ತಾರೆ. ಮದುವೆ ಜೋಡಿಗಳಿಗೆ ನೆಂಟರು, ಗೆಳೆಯರಲ್ಲೇ ಟಿಕೆಟ್ಟುಗಳನ್ನು ಮಾರಿ ಹಣ ಹೊಂದಿಸುವ ಅವಕಾಶವೂ ಇದೆ. ಇಲ್ಲೀವರೆಗೆ ಈ ವೆಬ್ಸೈಟಿನಲ್ಲಿ 30 ಜನ ತಮ್ಮ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಸದ್ಯ ಭಾರತವನ್ನು ಮಾತ್ರ ಗುರಿಯಾಗಿಸಿಕೊಂಡು ಇದನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ವಿಸ್ತರಿಸುವ ಯೋಜನೆಯನ್ನು ವೆಬ್ಸೈಟ್ ಇಟ್ಟುಕೊಂಡಿದೆ.

ಚಿತ್ರ ಕೃಪೆ: ಹಫಿಂಗ್ಟನ್ ಪೋಸ್ಟ್

Top