An unconventional News Portal.

ನಾವು ಎಂದರೆ ನಮ್ಮ ಆಲೋಚನೆಗಳ ಒಟ್ಟು ಮೊತ್ತ!

ನಾವು ಎಂದರೆ ನಮ್ಮ ಆಲೋಚನೆಗಳ ಒಟ್ಟು ಮೊತ್ತ!

ಇವತ್ತು ನಾವೇನು ಎಂಬುದನ್ನು ನಮ್ಮ ಇಲ್ಲೀವರೆಗಿನ ಆಲೋಚನೆಗಳು ನಿರ್ಧರಿಸಿರುತ್ತವೆ.

ಇವತ್ತು ಮನಃಶಾಸ್ತ್ರದ ಕುರಿತು ನಡೆಯುತ್ತಿರುವ ಹಲವು ಸಂಶೋಧನೆಗಳ ಪೈಕಿ ಮನುಷ್ಯನ ಆಲೋಚನೆಗಳನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿರುವ ಶೋಧನೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಆಲೋಚನೆಗಳು ಎಂದರೆ ನಮ್ಮ ಯೋಚನೆಯಿಂದ ಹುಟ್ಟುವ ಹೊಳವುಗಳು. ಇದು ಪ್ರತಿಯೊಬ್ಬರಲ್ಲೂ ನಡೆಯುವ ಮಾನಸಿಕ ಕ್ರಿಯೆ. ಆಲೋಚನೆಗಳು ಹೇಗೆ ಮನಸ್ಸಿನಲ್ಲಿ ಮೂಡುತ್ತವೆ ಎಂಬ ಕುರಿತು ಹಲವು ಥಿಯರಿಗಳಿದ್ದರೂ, ಸ್ಪಷ್ಟವಾಗಿ ಹೀಗೆ ಎಂದು ಹೇಳಲು ಈವರೆಗೆ ಸಾಧ್ಯವಾಗಿಲ್ಲ.

ಉದಾಹರಣೆಗೆ, ನೀವು ಈ ಸಾಲುಗಳನ್ನು ಓದುತ್ತಿರುವಾಗಲೇ, ನಿಮ್ಮ ಮನಸ್ಸಿನಲ್ಲಿ ಮತ್ತಿನ್ನೇನನ್ನೋ ಯೋಚಿಸುವಂತೆ ಇವು ಪ್ರಚೋದಿಸಬಹುದು. ಅಂದರೆ, ನಿಮಗೆ ಬೇಕೋ ಬೇಡವೋ, ಮನಸ್ಸಿನಲ್ಲಿ ಮತ್ತೊಂದು ಲಹರಿಯೊಂದನ್ನು ಓದು ಕ್ರಿಯೆ ಹುಟ್ಟು ಹಾಕಿರುತ್ತದೆ. ಇದು ಬರವಣಿಗೆ ವಿಚಾರದಲ್ಲಿ ಮಾತ್ರವಲ್ಲ, ಒಂದು ಸಿನೆಮಾ, ಕಲೆ, ಸಾಹಿತ್ಯ, ಸುತ್ತಮುತ್ತ ನಡೆಯುವ ಘಟನೆಗಳು… ಪ್ರತಿಯೊಂದು ಮನಸ್ಸಿನೊಳಗೆ ಭಿನ್ನವಾದ ಆಲೋಚನೆಗಳು ಹುಟ್ಟುವಂತೆ ಮಾಡುತ್ತವೆ. ಇದಕ್ಕೆ ಮೂಲ ಕಾರಣ ಈ ಪ್ರಕಿಯೆಗಳು ನಮ್ಮನ್ನು ಸೆಳೆಯುವುದು ಮತ್ತು ಯೋಚಿಸುವಂತೆ ಮಾಡುವುದು.

thoght-3

ಇವತ್ತು ಏನೆಲ್ಲಾ ನಡೆಯುತ್ತಿದೆಯೋ, ಅವೆಲ್ಲವುಗಳ ಮೂಲ ಇರುವುದು ವ್ಯಕ್ತಿಗಳ ಆಲೋಚನೆಯಲ್ಲಿ. ಅದು ಹೊಸ ಅನ್ವೇಷಣೆ ಇರಲಿ, ಪ್ರೀತಿ ಇರಲಿ, ಯುದ್ಧವಿರಲಿ ಎಲ್ಲವೂ ಸೃಷ್ಟಿಯಾಗುವುದು ಈ ಆಲೋಚನೆಗಳಿಂದಲೇ. ಅದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರ ನಿತ್ಯ ಬದುಕು ನಿಂತಿರುವುದು ಕೂಡ ಇದೇ ಆಲೋಚನೆಗಳ ಮೇಲೆಯೇ.

ಬೆಳಗಾಯಿತು. ಏಳುವುದಕ್ಕೆ ಮನಸ್ಸಿಲ್ಲ, ಕಚೇರಿಗೆ ಹೋಗಲು ಸಾಧ್ಯವೇ ಇಲ್ಲ. ರಜೆ ಹಾಕಿ ಬಿಡೋದಾ? ಅದಕ್ಕೆ ಏನು ಕಾರಣ ಹೇಳಬಹುದು? ಹೇಳಿದರೆ ನಂಬುತ್ತಾರಾ? ನಂಬುವಂತಹ ಕಾರಣ ಯಾವುದು? ಹಾಳಾಗಿ ಹೋಗಲಿ, ಇವತ್ತು ಹೇಗೋ ಶನಿವಾರ. ನಾಳೆ ಭಾನುವಾರ ರಜೆ. ಇವತ್ತೊಂದಿನ ಹೋಗಿ ಬಿಡೋಣ. ಅದಕ್ಕಾಗಿ ಹಾಸಿಗೆ ಬಿಟ್ಟು ಏಳೋಣ… ಹೀಗೆ ಸರಣಿಯಲ್ಲಿ ಹುಟ್ಟಿಕೊಳ್ಳುವ ಆಲೋಚನೆಗಳಿಂದಾಗಿ ನಮ್ಮ ದಿನ ಶುರುವಾಗಿ ಬಿಡುತ್ತದೆ ಎಂದುಕೊಳ್ಳೊಣ. ಅಲ್ಲಿಂದ ಶುರುವಾದ ಈ ಆಲೋಚನೆಗಳು ರಾತ್ರಿ ಮಲಗಿದ ನಂತರವೂ ಸೃಷ್ಟಿಯಾಗುತ್ತಲೇ ಇರುತ್ತದೆ. ಕೊನೆಗೆ, ನಾವು ನಿದ್ದೆ ಹೋದರೂ ನಮ್ಮ ಸುಪ್ತ ಮನಸ್ಸು ಆಲೋಚನೆಯನ್ನು ನಿಲ್ಲಿಸಿರುವುದಿಲ್ಲ. ಅವು ಕನಸಿನ ರೂಪದಲ್ಲಿ ದೃಶ್ಯಪಟವೊಂದನ್ನು ರೂಪಿಸಿ ಕೊಡುತ್ತವೆ. ಹಾಗೆ ರಾತ್ರಿ ಕಳೆದು ಬೆಳಕಾಗುತ್ತದೆ. ಮತ್ತೆದೇ ಯೋಚನೆಯ ಫಲವಾಗಿ ಹುಟ್ಟುವ ಆಲೋಚನೆಗಳ ಸರಣಿ ಮುಂದುವರಿಯುತ್ತದೆ.

ಅಂದರೆ, ನಮ್ಮ ಇಡೀ ದಿನದ ಬದುಕು ನಿಂತಿರುವುದು ಈ ಆಲೋಚನೆಗಳ ಮೇಲೆ. ಅವುಗಳು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ಇರುತ್ತವೆ. ಅದಕ್ಕೆ ಅವರವರದ್ದೇ ಹಿನ್ನೆಲೆ, ಬೆಳೆದು ಬಂದ ಪರಿಸರ, ಒಡನಾಟಗಳ ಪ್ರಭಾವ ಕಾರಣ ಎನ್ನುತ್ತದೆ ಮನಃಶಾಸ್ತ್ರ. ಇಂತಹ ತರ್ಕಗಳನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೆ, ನಾವು ಇವತ್ತು ಏನಾಗಿದ್ದೇವೋ ಅದಕ್ಕೆ ಕಾರಣ ನಮ್ಮ ಆಲೋಚನೆಗಳು ಅಷ್ಟೆ. ಅವುಗಳಿಂದ ಹುಟ್ಟುವ ಕ್ರಿಯೆಗಳು ನಾವು ಯಾರು ಎಂದು ಸಮಾಜ ಗುರುತಿಸುವಂತೆ ಮಾಡಿರುತ್ತವೆ. ಅಲ್ವಾ?

ಉತ್ತರಕ್ಕಾಗಿ ನಿಮ್ಮ ಮನಸ್ಸು ಮತ್ತೊಂದು ಸುತ್ತಿನ ಯೋಚನೆಗೆ ಹೊರಟು ಹೋಗಿರುತ್ತದೆ. ಅಲ್ಲಿ ಹುಟ್ಟುವ ಆಲೋಚನೆಗಳಿಂದ ಹೌದು ಅಥವಾ ಇಲ್ಲ ಎಂಬ ಉತ್ತರ ಸಿಗಬಹುದು. ಅಥವಾ ಹೌದು ಎಂಬುದಕ್ಕೆ, ಇಲ್ಲ ಎಂಬುದಕ್ಕೆ ಒಂದಷ್ಟು ತರ್ಕಗಳನ್ನು ಮುಂದಿಡಬಹುದು. ಅಂತಿಮವಾಗಿ ನೀವು ಏನೇ ನಿರ್ಧಾರಕ್ಕೆ ಬಂದರೂ, ಅದು ಮತ್ತೆ ಅದೂ ಕೂಡ ಆಲೋಚನೆಗಳ ಫಲವಾಗಿರುತ್ತದೆ, ಅಷ್ಟೆ.

Top