An unconventional News Portal.

ವಾಟ್ಸಾಪ್ ಗುಂಪಿಗೆ ಸಾರ್ವಜನಿಕ ಸೇವೆಯ ಸ್ಪರ್ಶ ನೀಡಿದ ಪಿಡಿಓ: ಪುಟ್ಟ ಹಳ್ಳಿಯಲ್ಲಿ ‘ತಿರುಪತಿ ಲೀಲೆ’!

ವಾಟ್ಸಾಪ್ ಗುಂಪಿಗೆ ಸಾರ್ವಜನಿಕ ಸೇವೆಯ ಸ್ಪರ್ಶ ನೀಡಿದ ಪಿಡಿಓ: ಪುಟ್ಟ ಹಳ್ಳಿಯಲ್ಲಿ ‘ತಿರುಪತಿ ಲೀಲೆ’!

ಜನಸಂಪರ್ಕಕ್ಕೆ ವಾಟ್ಸಾಪ್ ಮೊರೆ ಹೋದ ದಕ್ಷಿಣ ಕನ್ನಡದ ಗೋಳಿತೊಟ್ಟು ಗ್ರಾಮ ಪಂಚಾಯ್ತಿಯ ಕಥೆ ಇದು. ಸರಕಾರ ಮತ್ತು ಜನರ ಮಧ್ಯೆ ಸಂಪರ್ಕ ಸೇತುವೆಯಾಗಿ ಇಲ್ಲಿ ವಾಟ್ಸಾಪ್ ಬಳಕೆಯಾಗುತ್ತಿದೆ. ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಜನರನ್ನು ತಲುಪಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮಾದರಿಯನ್ನು ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ.

ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ನೆಲ್ಯಾಡಿ ಸಮೀಪದ ಸಣ್ಣ ಗ್ರಾಮ ಗೋಳಿತೊಟ್ಟು. ಸುಮಾರು 1800 ಜನ ಸಂಖ್ಯೆ ಇರುವ ಮೂರು ಹಳ್ಳಿಗಳನ್ನು ಒಳಗೊಂಡ ಗ್ರಾಮವಿದು. ಎಲ್ಲಾ ಗ್ರಾಮಗಳಂತೆ ಇಲ್ಲಿಯೂ ಒಂದಷ್ಟು ಸಮಸ್ಯೆಗಳು, ಸರಕಾರಿ ಯೋಜನೆಗಳ ಬಗ್ಗೆ ಗೊಂದಲಗಳು ಜನರಿಗಿವೆ. ಇದನ್ನು ನಿವಾರಿಸಲು ‘ವಾಟ್ಸಾಪ್’ ದಾರಿ ಕಂಡುಕೊಂಡವರು ಇಲ್ಲಿನ ‘ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)’ ತಿರುಪತಿ ಟಿ.

2010ರಲ್ಲಿ ಇವರು ರಾಯಚೂರಿನ ಲಿಂಗತ್ ಗೂಡಿನಿಂದ ಗೋಳಿತೊಟ್ಟಿಗೆ ಪಿಡಿಒ ಆಗಿ ಬಂದವರು ಇವರು.

ಪಿಡಿಒ ತಿರುಪತಿ ಟಿ ಉಪ್ಪಾರ

ಪಿಡಿಒ ತಿರುಪತಿ ಟಿ ಉಪ್ಪಾರ (ಚಿತ್ರ: ಎಫ್ಬಿ)

“ನಾವು ಗೆಳೆಯರೆಲ್ಲಾ ವಾಟ್ಸಾಪ್ ಗ್ರೂಪ್ ಮಾಡಿ ಸಂವಹನ ನಡೆಸುತ್ತಿದ್ದೆವು. ನಮ್ಮ ಗೊಂದಲಗಳು, ಸಮಸ್ಯೆಗಳನ್ನೆಲ್ಲಾ ಚರ್ಚಿಸುತ್ತಿದ್ದೆವು. ಇದೇ ಮಾದರಿಯಲ್ಲಿ ಗ್ರಾಮಸ್ಥರ ವಾಟ್ಸಾಪ್ ಗ್ರೂಪ್ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು,” ಎನ್ನುತ್ತಾರೆ ತಿರುಪತಿ.

ಕೊನೆಗೆ ಅವರು ಈ ಪ್ರಸ್ತಾಪವನ್ನು ಪಂಚಾಯತ್ ಬೋರ್ಡ್ ಸಭೆಯಲ್ಲಿ ಮಂಡಿಸಿದರು. “ಇದಕ್ಕೆ ಊರಿನವರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕೊನೆಗೆ ಎರಡು ತಿಂಗಳ ಹಿಂದೆ ವಾಟ್ಸಾಪ್ ಗ್ರೂಪ್ ರಚಿಸಲಾಯಿತು. ಸದ್ಯ ಗ್ರೂಪನಲ್ಲಿ 40 ಜನರಿದ್ದಾರೆ. ನಾನೂ ಸೇರಿದಂತೆ 15 ಗ್ರಾಮಸ್ಥರನ್ನು ಅಡ್ಮಿನ್ಗಳನ್ನಾಗಿ ಮಾಡಿ, ಅವರ ಸ್ನೇಹಿತರನ್ನು ಸೇರಿಸುವಂತೆ ಹೇಳಲಾಗಿದೆ. ಗ್ರಾಮದಲ್ಲಿ ಒಂದು ಸಾವಿರ ಸ್ಮಾರ್ಟ್ ಫೋನ್ ಬಳಕೆದಾರರಿರಬಹುದು. ಅವರನ್ನೆಲ್ಲಾ ಈ ಗ್ರೂಪಿಗೆ ಎಳೆದು ತರುವುದು ನಮ್ಮ ಉದ್ದೇಶ,“ ಎನ್ನುತ್ತಾರೆ ತಿರುಪತಿ.

ಸದ್ಯ ಒಂದು ವಾಟ್ಸಾಪ್ ಗ್ರೂಪನಲ್ಲಿ 256 ಸದಸ್ಯರನ್ನಷ್ಟೇ ಸೇರಿಸುವ ಅವಕಾಶ ಇರುವುದರಿಂದ ವಾರ್ಡಿಗೆ ಒಂದರಂತೆ ಗ್ರೂಪ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅಂದ ಹಾಗೆ ಗೋಳಿತೊಟ್ಟುವಿನಲ್ಲಿ 5 ವಾರ್ಡಿಗೆ

Karnataka-Village1

ಗೋಳಿತೊಟ್ಟು ಗ್ರಾಮ ಪಂಚಾಯ್ತಿ ಕಚೇರಿ ಒಳಭಾಗ.

ಕಳೆದ 15 ದಿನಗಳಿಂದ ಈ ವಾಟ್ಸಾಪ್ ಗ್ರೂಪ್ ತನ್ನ ಕಾರ್ಯಾಚರಣೆ ಆರಂಭಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಂತೆ. ಸದಸ್ಯರು ಚರಂಡಿ ಕಟ್ಟಿಕೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ, ನೀರು ಸೋರಿಕೆ ಹೀಗೆ ದಿನನಿತ್ಯದ ಸಮಸ್ಯೆಗಳನ್ನು ಪಂಚಾಯತ್ ಗಮನಕ್ಕೆ ತರುತ್ತಾರೆ. ಪಂಚಾಯ್ತಿಯ ಮೂರು ಜನ ಸಿಬ್ಬಂದಿಗಳು ಇದನ್ನು ನೋಡಿ ಪರಿಹರಿಸುವ ಪ್ರಯತ್ನ ಮಾಡುತ್ತಾರೆ. “ನಾನೂ ದಿನಕ್ಕೆ ಎರಡರಿಂದ ಮೂರು ಭಾರಿ ಗ್ರೂಪ್ ನೋಡಿ ಸಲಹೆ ಸೂಚನೆಗಳನ್ನು ನೀಡುತ್ತೇನೆ,” ಎನ್ನುವುದು ತಿರುಪತಿ ಅವರ ಮಾತು.

ಇದಲ್ಲದೇ ಯೋಜನೆಗಳ ಬಗ್ಗೆ ಮಾಹಿತಿ, ಪ್ರಕಟಣೆಗಳನ್ನೂ ಇದೇ ಗುಂಪಿನಲ್ಲಿ ಹಾಕಲಾಗುತ್ತದೆ. ಇದರಿಂದ ಸರಕಾರದ ಯೋಜನೆಗಳ ಸುತ್ತೋಲೆ ಪಂಚಾಯತಿಗೆ ಬರುತ್ತಿದ್ದಂತೆ ನೇರವಾಗಿ ಜನರಿಗೆ ತಲುಪುತ್ತದೆ. ಜನರೇ ಮಾಹಿತಿಗಳನ್ನು ಬೇಕಿದ್ದರೂ ಇದೇ ಗುಂಪಿನಲ್ಲಿ ಕೇಳುತ್ತಾರೆ. “ನಾವು ಸೂಕ್ತ ದಾಖಲೆಗಳನ್ನು, ಮಾಹಿತಿಗಳನ್ನು ಒದಗಿಸುತ್ತೇವೆ,” ಎನ್ನುತ್ತಾರೆ ಅವರು.

ಸದ್ಯ ಗ್ರಾಮ ಪಂಚಾಯ್ತಿ ಕಚೇರಿಗೆ ಮಾತ್ರ ಒಎಫ್ಸಿ ಕೇಬಲ್ ಸಂಪರ್ಕದ ಮೂಲಕ ಅಂತರ್ಜಾಲ ಸೇವೆ ಪಡೆದುಕೊಂಡಿದೆ. ಗ್ರಾಮದ ಹೆಚ್ಚಿನ ಭಾಗದಲ್ಲಿ ಮೊಬೈಲ್ ಸಂಪರ್ಕ ಲಭ್ಯವಿದ್ದು, ಅಂತರ್ಜಾಲ ಬಳಸುವವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಯೋಜನೆ ಯಶಸ್ವಿಯಾಗಲಿದೆ ಎನ್ನುವುದು ಅವರ ಆಶಾವಾದ.

“ಆಧುನಿಕ ಮಾಧ್ಯಮಗಳು ಇದ್ದೂ ನಾವು ಬಳಸದೇ ಇದ್ದಲ್ಲಿ ಮೂಲೆ ಗುಂಪಾಗುತ್ತೇವೆ. ಅದೇ ತಂತ್ರಜ್ಞಾನಗಳನ್ನು ಅರ್ಥ ಮಾಡಿಕೊಂಡು ಬಳಸಿದರೆ ಜನರಿಗೆ ಮತ್ತಷ್ಟು ಉತ್ತಮ ಸೇವೆ ನೀಡಬಹದು,” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ತಿರುಪತಿ.

ಏನೇ ಆಗಲೀ ಜನರೊಂದಿಗೆ ನಿರಂತರ ಮತ್ತು ನೇರ ಸಂಪರ್ಕ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ವಾಟ್ಸಾಪ್ ಮೊರೆ ಹೋದ ಗ್ರಾಮ ಪಂಚಾಯತ್ ಪ್ರಯತ್ನ ಮಾತ್ರ ನಿಜಕ್ಕೂ ಶ್ಲಾಘನೀಯ.

ಚಿತ್ರ: ಪ್ರತಿಕ್ಷಣ ಡಾಟ್ ಕಾಂ.

Top