An unconventional News Portal.

‘ಕಾವೇರಿ ಕಣಿವೆಯಿಂದ’: ಬರಡು ಬೀಳುತ್ತಿರುವ ಕೃಷಿ ಭೂಮಿ ಮತ್ತು ಭವಿಷ್ಯದ ಬಿಕ್ಕಟ್ಟು!

‘ಕಾವೇರಿ ಕಣಿವೆಯಿಂದ’: ಬರಡು ಬೀಳುತ್ತಿರುವ ಕೃಷಿ ಭೂಮಿ ಮತ್ತು ಭವಿಷ್ಯದ ಬಿಕ್ಕಟ್ಟು!

“ಹನ್ನೊಂದನೇ ದಿನ ಸೋಮವಾರ ಬಿತ್ತು. ಹಂಗಾಗಿ ಮಂಗಳವಾರ ಇಟ್ಕೊಳಿ ಅಂದ್ರು. ಸುಮಾರ್ 60 ಸಾವ್ರ ಖರ್ಚಾಗುತ್ತಿದೆ. ಎಲ್ಲಾ ಮುಗಿದ ಮೇಲೆ ಸಾಲ ವಾಪಾಸ್ ಕೊಡ್ತೀರೋ ಇಲ್ವೋ ಅನ್ನೋ ಬೈಗುಳನೂ ಕೇಳಬೇಕು,” ಎಂದು ತುಂಬಿದ ಕಣ್ಣುಗಳಲ್ಲಿ ನೋವಿನ ಕತೆಯನ್ನು ಶುರುಮಾಡಿದರು ಗಾಯತ್ರಿ. ಮಂಡ್ಯ ಜಿಲ್ಲೆಯ ಹೆಮ್ಮಿಗೆ ಗ್ರಾಮದ ದಲಿತ ಕಾಲೋನಿಯ ಅಂಚಿನಲ್ಲಿರುವ ಮನೆಯ ಮುಂದೆ ಅವರು ಕುಳಿತಿದ್ದರು. ಕಾವೇರಿ ವಿಚಾರದಲ್ಲಿ ವಿಶೇಷ ಅಧಿವೇಶನದ ನಿರ್ಣಯ ಹೊರಬಿದ್ದ ದಿನ ಅವರ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರ ಬಂದಾಗಲೆಲ್ಲಾ ಮಂಡ್ಯ ಜಿಲ್ಲೆಯ ರೈತರು ಹೆಸರು ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. 2015ರಲ್ಲಿ ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಯೇ ಸುಮಾರು 102. ಅದರಲ್ಲಿ ಹೆಚ್ಚಿನವರು ಒಕ್ಕಲಿಗರು ಮತ್ತು ಮೇಲ್ಜಾತಿಯ ಸಣ್ಣ ಹಿಡುವಳಿದಾರರು. ಅದಕ್ಕೆ ಹೋಲಿಸಿದರೆ ಗಾಯತ್ರಿ ಅವರ ಗಂಡ ಗುರುಸಿದ್ದಯ್ಯ ದಲಿತ ಸಮುದಾಯಕ್ಕೆ ಸೇರಿದವರು. ಅವರಿಗಿದ್ದದ್ದು 23 ಗುಂಟೆ ಜಮೀನು.

“ಮೂರು ವರ್ಷಗಳ ಹಿಂದೆ ಕಬ್ಬು ಹಾಕಿದ್ದೆವು. ಆದರೆ ಅದು ಕೈಗೆ ಬರಲಿಲ್ಲ. ನಂತರ ಎರಡು ವರ್ಷ ಭತ್ತ ಬೆಳೆಯಲು ಪ್ರಯತ್ನಪಟ್ಟೆವು. ಅದೂ ಕೃ ಕೊಟ್ಟಿತು. ಕೊನೆಗೆ, ಅಪ್ಪ ಆತ್ಮಹತ್ಯೆ ಮಾಡಿಕೊಂಡರು,” ಎಂದರು ಗುರುಸಿದ್ದಯ್ಯ ಅವರ ಮಗ ನಂದೀಶ್. ಇವರು ಮಂಡ್ಯದ ಚಿಂತನ ಗ್ರಾಮೀಣಾಭಿವೃದ್ಧಿ ಟ್ರಸ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಐಟಿಐ ಮುಗಿಸಿದ ಅವರು ಮಂಡ್ಯದಲ್ಲಿರುವ ತಮ್ಮ ಮಾವ(ಅಮ್ಮನ ಅಣ್ಣ)ನ ಮನೆಯಲ್ಲಿಯೇ ಬೆಳೆದು ದೊಡ್ಡವರಾದವರು. ಗುರುಸಿದ್ದಯ್ಯ ಅವರ ಮೂವರು ಮಕ್ಕಳ ಪೈಕಿ ಏಕೈಕ ಗಂಡು ಮಗ.

ಆತ್ಮಹತ್ಯೆ ಮಾಡಿಕೊಂಡು ರೈತ ಗುರುಸಿದ್ದಯ್ಯ ಮನೆ ಒಳಗೆ ಹರಡಿ ಬಿದ್ದ ವಸ್ತುಗಳು.

ಆತ್ಮಹತ್ಯೆ ಮಾಡಿಕೊಂಡು ರೈತ ಗುರುಸಿದ್ದಯ್ಯ ಮನೆ ಒಳಗೆ ಹರಡಿ ಬಿದ್ದ ವಸ್ತುಗಳು.

ತಂದೆಯ ಕಾರ್ಯ (ತಿಥಿ)ಗಾಗಿ ಮನೆಯ ವಸ್ತುಗಳನ್ನು ಹರಡಿಕೊಂಡು, ಗೋಡೆಗಳಿಗೆ ಸುಣ್ಣ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದರು. ಮನೆಯ ತುಂಬ ನೆಂಟರಿಷ್ಟರು, ದಾಯಾದಿಗಳು ನೋವನ್ನು ಹಂಚಿಕೊಳ್ಳುವ ಸಲುವಾಗಿ ಕುಳಿತುಕೊಂಡಿದ್ದರು. ಮನೆಯ ಒಳಗೆ ಹರಡಿ ಬಿದ್ದ ವಸ್ತುಗಳ ಜತೆಗೆ ಅಂಬೇಡ್ಕರ್ ಭಾವಚಿತ್ರವೂ ಅನಾಥವಾಗಿ ಬಿದ್ದಿತ್ತು.  ಗುರುಸಿದ್ದಯ್ಯ ಅವರ ತಾಯಿ ಮನೆಯ ಜಗಲಿಯಲ್ಲಿ ಆಗಸವನ್ನು ದಿಟ್ಟಿಸುತ್ತ ಸುತ್ತ ನಡೆಯುತ್ತಿದ್ದ ಮಾತುಕತೆಗೆ ಕಿವಿಯಾಗಿದ್ದರು. “ನಂಗೆ ಮದುವೆಯಾಗುವಾಗ ಹದಿನಾಲ್ಕು ವರ್ಷ. ನಾವು ಐದು ಜನ ಮಕ್ಕಳು. ಅದರಲ್ಲಿ ಹಿರಿಯ ಮಗಳು ನಾನೇ ಆಗಿದ್ದೆ. ಹೀಗಾಗಿ ತಂಗಿಯರನ್ನು ಆಡಿಸುವ ಕೆಲಸ ನನ್ನ ಮೇಲಿತ್ತು. ಮೂರನೇ ಕ್ಲಾಸು ಮಾತ್ರ ಓದಿದ್ದು. ಆಮೇಲೆ ಮದುವೆಯಾಯಿತು.  ಮೂವರು ಮಕ್ಕಳಾದರು. ಹಿರಿಯ ಮಗಳಿಗೆ ಮದುವೆ ಮಾಡಿದೆವು. ಇದ್ದ ಚಿಕ್ಕ ಮನೆಯನ್ನು ಸರಕಾರದ ಸಹಾಯದಿಂದ ರಿಪೇರಿ ಮಾಡಿಸಿಕೊಂಡೆವು. ಎಲ್ಲವೂ ಸರಿಯಾಯಿತು ಎನ್ನುವಾಗಲೇ ನನ್ನ ಯಜಮಾನನ ಕುಡಿತ ಶುರುವಾಯಿತು. ದಿನಾ ಬೆಳಗ್ಗೆ ಆರು ಗಂಟೆಗೆಲ್ಲಾ ಶುರುಮಾಡುತ್ತಿದ್ದರು,” ಎಂದು ವಿವರಿಸುವಾಗ ಗಾಯತ್ರಿ ದನಿಯಲ್ಲಿ ದುಃಖ ಮಡುವುಗಟ್ಟಿತ್ತು. ಪದಗಳು ನಿಧಾನವಾಗಿ ಹೊರಬರುತ್ತಿದ್ದವು. ಅವರ ಈ ಮಾತುಗಳನ್ನು ಕೇಳುತ್ತ ಕುಳಿತಿದ್ದ ಅವರ ಓರೆಗಿತ್ತಿ, “ಅಯ್ಯೋ ನಮ್ಮ ಮನೆಯಲ್ಲೂ ಇದೇ ಗೋಳು. ನನ್ನ ಹಿರಿ ಮಗ ಕುಡಿದು ಬಂದು ಹೆಂಡತಿ ಮೇಲೆ ಕೈ ಮಾಡುತ್ತಾನೆ. ಇಲ್ಲಿ ಸಣ್ಣ ಪುಟ್ಟ ಅಂಗಡಿಗಳಲ್ಲೂ ಎಣ್ಣೆ( ಮದ್ಯ) ಮಾರಾಟ ಮಾಡುತ್ತಾರೆ,” ಎಂದು ದನಿಗೂಡಿಸಿದರು.

ಗುರುಸಿದ್ದಯ್ಯ ಅವರ ಸಾವಿಗೆ ಕಾರಣವಾಗಿದ್ದು, ಅವರು ಕೊನೆಯಲ್ಲಿ ಕುಡಿದ ಕೀಟನಾಶಕವಾಗಿತ್ತು. ಸಾಯುವ ದಿನ ಅವರು ಮಂಡ್ಯದ ಅಣ್ಣನ ಮನೆಯಲ್ಲಿದ್ದ ಪತ್ನಿಯನ್ನು ಓಲೈಸಲು ಹೋಗಿದ್ದರು. ಅದಕ್ಕೆ ಒಂದು ದಿನ ಮೊದಲಷ್ಟೆ ಗಲಾಟೆ ಮಾಡಿಕೊಂಡು ಪತ್ನಿ ಗಾಯತ್ರಿ ಅಣ್ಣನ ಮನೆಗೆ ಹೊರಟು ಹೋಗಿದ್ದರು. “ಅವತ್ತು ಬೆಳಗ್ಗೆ ಬಂದು ಮನೆಗೆ ಬರುವಂತೆ ಕರೆದರು. ಆದರೆ ನೀನು ಹೊಡೆತ ಬಡಿತ ಮಾಡ್ತೀಯೊ, ನಾನು ಬರಾಕಿಲ್ಲ ಅಂದೆ. ಆಮೇಲೆ ಅವರನ್ನು ಆಸ್ಪತ್ರೆಗೆ ತಂದಾಗಲೇ ಹಂಗೆ ಮಾಡಿಕೊಂಡಿದ್ದಾರೆ ಎಂದು ಹೊತ್ತಾಗಿದ್ದು,” ಎಂದರು ಗಾಯತ್ರಿ. ಮಂಡ್ಯದಿಂದ ಪತ್ನಿ ಮಾತಾಡಿಸಿಕೊಂಡು ಬಂದ ಗುರುಸಿದ್ದಯ್ಯ ಸೂನಗಹಳ್ಳಿ ಗ್ರಾಮಪಂಚಾಯ್ತಿ ಕಚೇರಿ ಸಮೀಪವೇ ವಿಷ ಸೇವಿಸಿದ್ದರು. ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಬದುಕಿಸಿಕೊಳ್ಳಲು ಆಗಿರಲಿಲ್ಲ. ಅಲ್ಲಿಗೆ ರೈತರ ಆತ್ಮಹತ್ಯೆಗಳ ಪಟ್ಟಿಗೆ ಗುರುಸಿದ್ದಯ್ಯ ಅವರ ಹೆಸರೂ ಸೇರಿ ಹೋಯಿತು.

“ಮೂರು ವರ್ಷದಿಂದ ಒಂದು ರೂಪಾಯಿ ದುಡಿಮೆ ಇಲ್ಲ. ಊರಿನಲ್ಲಿ ತಿಂಗಳಿಗೆ 5 ಪರ್ಸೆಂಟ್ ಬಡ್ಡಿ ಸಾಲ, ಸಹಕಾರ ಸಂಘದಲ್ಲಿ ಕೃಷಿ ಸಾಲ… ಎಲ್ಲಾ ಮೈಮೇಲೆ ಬಂದಾಗ ಬೇರೆ ದಾರಿ ಇರಲಿಲ್ಲ ಎಂದು ಕಾಣುತ್ತೆ. ಅವ ಹೋಗಿಬಿಟ್ಟ,” ಎಂದರು ಗುರುಸಿದ್ದಯ್ಯ ಅವರ ಕೇರಿಯ ಹಿರಿಯರೊಬ್ಬರು. ಸಾಮಾನ್ಯವಾಗಿ ರೈತರ ಆತ್ಮಹತ್ಯೆಗೆ ಅವರ ಸಾಲ, ಸಾಲದ ಭಾರವನ್ನು ಹೊತ್ತ ಖಿನ್ನತೆ, ಖಿನ್ನತೆಯಿಂದ ಹೆಚ್ಚಾದ ಕುಡಿತ ಎಂಬ ವಿಷಚಕ್ರ ಕಾರಣವಾಗಿರುತ್ತದೆ. ಗುರುಸಿದ್ದಯ್ಯ ಅವರ ವಿಚಾರದಲ್ಲಿಯೂ ಅದೇ ಆಗಿದೆ. ಇದರ ಜತೆಗೆ, “ಈ ಬಾರಿ ಅಂತೂ ನಾಲೆಗಳಲ್ಲಿ ನೀರಿಲ್ಲ. ಹೀಗಾಗಿ ಕೃಷಿ ಆದಾಯ ಒನ್ನೊಂದು ವರ್ಷ ಇರುವುದಿಲ್ಲ. ಹೀಗಿರುವಾಗ ಗುರುಸಿದ್ದಯ್ಯನ ಹಾದಿಯನ್ನೇ ಇನ್ನಷ್ಟು ಜನ ಹಿಡಿಯಬಹುದು,” ಎನ್ನುತ್ತಾರೆ ಗ್ರಾಮಸ್ಥರು.

ಇದು ಪರಿಸ್ಥಿತಿ:

ಮಂಡ್ಯ ರೈತರ ಜಮೀನಿಗೆ ನೀರನ್ನು ಎತ್ತಲು ಕಂಡುಕೊಂಡ ಟಿಲ್ಲರ್ ಪಂಪ್ ಸೆಟ್ಗಳು.

ಮಂಡ್ಯ ರೈತರ ಜಮೀನಿಗೆ ನೀರನ್ನು ಎತ್ತಲು ಕಂಡುಕೊಂಡ ಟಿಲ್ಲರ್ ಪಂಪ್ ಸೆಟ್ಗಳು.

ಕಾವೇರಿ ಹೋರಾಟದ ‘ರಾಜಧಾನಿ’ ಅನ್ನಿಸಿಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ಏಳು ತಾಲೂಕುಗಳು ಬರುತ್ತವೆ. ಅವುಗಳಲ್ಲಿ ಕಾವೇರಿ ನಾಲೆಯ ಅತ್ಯಂತ ಕೆಳಗೆ ಇರುವವು ಮದ್ದೂರು ಮತ್ತು ಮಳವಳ್ಳಿ. ಇವುಗಳಿಗೆ ಈ ಬಾರಿ ವಿವಾದದ ಆರಂಭದ ಸಮಯದಲ್ಲಿ ಬಿಟ್ಟ ಒಂದು ವಾರಗಳ ನೀರು ಕೂಡ ತಲುಪಿಲ್ಲ. ಇವುಗಳಿಗೆ ಹೋಲಿಸಿದರೆ ಪಾಂಡವಪುರ ಮತ್ತು ಶ್ರೀರಂಗಪಟ್ಟಣಗಳಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳನ್ನು ಶುರುಮಾಡಲು ನೀರು ಸಿಕ್ಕಿದೆ. ಮಂಡ್ಯ ಜಿಲ್ಲಾ ಕೇಂದ್ರದ ಹೊರಭಾಗದಲ್ಲಿ ಬರುವ ಗುತ್ತಿಗೆ ಸುತ್ತಮುತ್ತ ನಗರದ ತ್ಯಾಜ್ಯ ನೀರನ್ನೇ ಬಳಸಿಕೊಂಡು ರೈತರು ಭತ್ತ ಹಾಗೂ ಕಬ್ಬಿನ ಕೃಷಿಯನ್ನು ಶುರುಮಾಡಿದ್ದಾರೆ.

ಆದರೆ, ಅದನ್ನು ದಾಟಿ ಸ್ವಲ್ಪ ದೂರ ಹೋದರೆ ಒಣಗಿದ ನಾಲೆಗಳು ಮತ್ತು ಸುಟ್ಟುಹೋದ ಕಬ್ಬು ಮತ್ತು ಭತ್ತದ ಗದ್ದೆಗಳು ಕಾಣಸಿಗುತ್ತವೆ. “ಈಗ ಇರುವುದು ಎರಡು ಅಡಿ ನೀರು ಮಾತ್ರ. ಇದೂ ಕೂಡ ಇನ್ನೊಂಡೆರಡು ದಿನಗಳಲ್ಲಿ ಒಣಗಿ ಹೋಗುತ್ತದೆ. ಹೀಗಾಗಿ ಜನ ಟಿಲ್ಲರ್ ಪಂಪ್ಗಳ ಮೂಲಕ ನೀರು ಹರಿಸಿಕೊಳ್ಳುತ್ತಿದ್ದಾರೆ. ಆದರೆ ಮುಂದೆ ಮಳೆ ಬರದಿದ್ದರೂ ಈ ಶ್ರಮವೂ ವ್ಯರ್ಥವಾಗುತ್ತೆ. ಹೀಗಾಗಿ ನಾನು ಎರಡು ಎಕರೆಯನ್ನು ಈ ಬಾರಿ ಹಾಳು ಬಿಟ್ಟಿದ್ದೇನೆ,” ಎಂದರು ಭತ್ತದ ವ್ಯಾಪಾರಿಯೂ ಆಗಿರುವ ಸಿದ್ದೇಗೌಡ. ಕಾಗೇಹಳ್ಳದದೊಡ್ಡಿ ಎಂಬ ಗ್ರಾಮದ ನಾಲೆಯ ಉದ್ದಕ್ಕೂ ವಿವರಣೆ ನೀಡುತ್ತ ಕರೆದುದೊಯ್ದಿದ್ದ ಅವರು, ಅಲ್ಲಲ್ಲಿ ಒಣಗಿ ನಿಂತ ಪೈರನ್ನು ಕಂಡವರೇ ಇದರ ಫೊಟೋ ತೆಗೆದುಕೊಳ್ಳಿ ಎಂದು ಒತ್ತಾಯಿಸುತ್ತಿದ್ದರು. ಈ ಮೂಲಕವಾದರೂ ರೈತರಿಗೆ ಒಂದಷ್ಟು ಪರಿಹಾರ ಸಿಗಬಹುದು ಎಂಬ ದೂರದ ಆಸೆ ಅವರದ್ದು.

ಪರೋಕ್ಷ ಪರಿಣಾಮ:

ಈ ಬಾರಿ ಕಾವೇರಿ ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ಇನ್ಯಾವುದಕ್ಕೂ ಬಳಸುವುದಿಲ್ಲ ಎಂದು ಸರಕಾರ ಘೋಷಿಸಿ ಆಗಿದೆ. ಅಣೆಕಟ್ಟುಗಳಿಂದ ರೈತರ ನಾಲೆಗಳಿಗೆ ನೀರು ಹರಿಸುವುದು ನಿಲ್ಲಿಸಲಾಗಿದೆ. ಇದು ರೈತರ ಕೃಷಿ ಬದುಕಿನ ಮೇಲೆ ನೇರ ಪರಿಣಾಮ ಬೀರಿದೆ. ಜತೆಗೆ, ಒಂದಷ್ಟು ಪರೋಕ್ಷ ಪರಿಣಾಮಗಳೂ ಇಲ್ಲಿನ ಆರ್ಥಿಕತೆಯ ಮೇಲಾಗುತ್ತಿದೆ. ‘ಸಮಾಚಾರ’ ಸುತ್ತಾಟದಲ್ಲಿ ಸಿಕ್ಕ ಶಿವಾನಂದ ಮತ್ತೊಂದು ಆಯಾಮದ ಮೇಲೆ ಬೆಳಕು ಚೆಲ್ಲಿದರು. ತಗ್ಗಳ್ಳಿ ಎಂಬ ಗ್ರಾಮದ ಮಹೇಶ್ವರ ರೈಸ್ ಮಿಲ್ ಕೆಲಸ ಮಗಿಸಿ ಮನೆಗೆ ಹೊರಟ ಅವರು, “ಹಿಂದೆಲ್ಲಾ ಒಂದು ದಿನಕ್ಕೆ ನೂರು ಕ್ವಿಂಟಾಲ್ ಭತ್ತ ಬರುತ್ತಿತ್ತು. ಇವತ್ತು ದಿನಕ್ಕೆ ಮೂರು ಅಥವಾ ನಾಲ್ಕು ಕ್ವಿಂಟಾಲ್ ಭತ್ತ ಸಿಕ್ಕರೆ ಅದೇ ಹೆಚ್ಚು. ಹೀಗೆ ಮುಂದುವರಿದ ರೈಸ್ ಮಿಲ್ ಮುಚ್ಚಬೇಕಾಗುತ್ತದೆ. ನಾನು ಸೇರಿದಂತೆ ಇನ್ನೂ ನಾಲ್ಕು ಜನ ಕೆಲಸ ಮಾಡುತ್ತಿದ್ದೇವೆ,” ಎಂದರು. ಅಲ್ಲಿಂದ ಸುಮಾರು 20 ಕಿ. ಮೀ ದೂರದಲ್ಲಿರುವ ಕೀಲಾರ ಅವರ ಗ್ರಾಮ. ದಿನ ಬೆಳಗ್ಗೆ ಬಂದು ಮಿಲ್ ನಿರ್ವಹಣೆ ಮಾಡಿ ಮನೆಗೆ ಹೋಗುವುದು ಅವರು ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಸಿಕೊಂಡು ಬಂದಿರುವ ವೃತ್ತಿ ಬದುಕು. “ನಮ್ಮ ಆದಾಯದ ಮೂಲವೇ ಇದು. ಕೃಷಿ ಭೂಮಿ ಇದ್ದರೂ ಮನೆ ನಡೆಸಲು ಅದು ಸಾಕಾಗುವುದಿಲ್ಲ. ಇವತ್ತಿನ ಸ್ಥಿತಿ ನೋಡಿದರೆ ಮುಂದಿನ ದಿನ ಹೇಗೋ ಅಂತ ಭಯವಾಗುತ್ತಿದೆ. ನಾವೂ ಕೂಡ ಅಷ್ಟೆ, ನಮ್ಮ ರೈತರು ಕುಡಿತ ಕಡಿಮೆ ಮಾಡಬೇಕು. ಖರ್ಚು ಕಡಿಮೆ ಮಾಡಬೇಕು,” ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾತನಾಡಿದರು.

ಮಂಡ್ಯ ಭಾಗದ ರೈತರ ಬದುಕಿನಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಕೇವಲ ಚಟದ ವಿಚಾರದಲ್ಲಿ ಮಾತ್ರವಲ್ಲ; ಕೃಷಿಯ ಪದ್ಧತಿಯಲ್ಲಿಯೂ ಸೃಷ್ಟಿಯಾಗಿದೆ. “ಮೂರುವರೆ ಸಾವಿರ ಎಕರೆ ಕೃಷಿ ಮಾಡಲು ಒಂದು ಟಿಎಂಸಿ ನೀರು ಖರ್ಚಾಗುತ್ತಿದೆ ಎಂಬ ಅಂದಾಜಿದೆ. ಮನಸ್ಸು ಮಾಡಿದರೆ ಒಂದು ಟಿಎಂಸಿ ನೀರಿನಲ್ಲಿ ಏಳು ಸಾವಿರ ಎಕರೆಯಲ್ಲಿ ಭತ್ತದ ಕೃಷಿಯನ್ನು ಮಾಡಬಹುದು. ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಆದರೆ ಹಾಗೆ ಬದಲಾವಣೆಯನ್ನು ಒಬ್ಬ ರೈತನಿಂದ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಸರಕಾರದ ಬೆಂಬಲ ಮತ್ತು ಸಾಮಾಜಿಕ ವಾತಾವರಣದಲ್ಲಿ ಜಾಗೃತಿಯ ಅಗತ್ಯವೂ ಇದೆ,” ಎನ್ನುತ್ತಾರೆ ಡಾ. ವಾಸು. ಜನಶಕ್ತಿ ಸಂಘಟನೆಯ ಕಾರ್ಯಕಾರಿ ಸಮಿತಿಯಲ್ಲಿರುವ ಅವರು ಮಂಡ್ಯ ಭಾಗದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಕಾವೇರಿ ವಿಚಾರದಲ್ಲಿ ದೂರಗಾಮಿಯಾದ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ರಾಜ್ಯದ ರೈತ ಸಮುದಾಯಕ್ಕಾಗಿ ಸರಕಾರ ಪ್ಯಾಕೇಜ್ ಒಂದನ್ನು ಘೋಷಿಸಬೇಕು ಎಂದು ಅವರು ಅಂಕಿಅಂಶಗಳ ಸಹಿತ ಬೇಡಿಕೆಯನ್ನು ಮುಂದಿಡುತ್ತಾರೆ. “ಸರಕಾರ 25 ಸಾವಿರ ಕೋಟಿಯ ಕೃಷಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬುದು ನಮ್ಮ ವೈಜ್ಞಾನಿಕ ಬೇಡಿಕೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು 65:35 ಆನುಪಾತದಲ್ಲಿ ಭರಿಸಬೇಕು. ಇದಕ್ಕಾಗಿ ಮುಂದಿನ ಹೋರಾಟವನ್ನು ರೂಪಿಸುತ್ತಿದ್ದೇವೆ. ಇಲ್ಲವಾದರೆ ಮುಂದೊಂದು ದಿನ ಕೃಷಿ ಬಿಕ್ಕಟ್ಟು ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ. ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತದೆ,” ಎನ್ನುತ್ತಾರೆ ವಾಸು.

ಬೆಂಗಳೂರು ಹೊಣೆಗಾರಿಕೆ:

ಬೆಂಗಳೂರಿನಲ್ಲಿ ಅನಧಿಕೃತ ಕಾವೇರಿ ನೀರಿನ ಟ್ಯಾಂಕರ್.

ಬೆಂಗಳೂರಿನಲ್ಲಿ ಅನಧಿಕೃತ ಕಾವೇರಿ ನೀರಿನ ಟ್ಯಾಂಕರ್.

ಹೀಗೆ, ಮಂಡ್ಯದಲ್ಲಿ ಕಂಡುಬರುತ್ತಿರುವ ಕಾವೇರಿದ ವಾತಾವರಣದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಿದ್ದು ಬೆಂಗಳೂರಿನ ಬೆಳವಣಿಗೆ ಮತ್ತು ಅದು ಬಳಸುತ್ತಿರುವ ನೀರು. “ಸರಕಾರ ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಯಾವ ಕಾರಣಕ್ಕೂ ನೀರು ಬಳಸುವುದಿಲ್ಲ ಎಂದು ಕಾವೇರಿ ವಿಚಾರದಲ್ಲಿ ಹೇಳಿದೆ. ಆದರೆ ಕಾವೇರಿ ಕೊಳ್ಳದ ನಗರ ಪ್ರದೇಶಗಳ ಕೈಗಾರಿಕೆಗಳಿಗೆ ಎಲ್ಲಿಂದ ನೀರು ತರುತ್ತದೆ. ಅಷ್ಟಕ್ಕೂ ಬೆಂಗಳೂರಿಗೆ ಸರಬರಾಜಾಗುತ್ತಿರುವ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸದ್ಯ ಅಲ್ಲಿಗೆ ನೀಡುತ್ತಿರುವ ನೀರಿನಲ್ಲಿ ಸುಮಾರು 15 ಲಕ್ಷ ಎಕರೆಯಲ್ಲಿ ಕೃಷಿ ಮಾಡಬಹುದಾಗಿದೆ. ಜತೆಗೆ, ನೈಸ್ ಸಂಸ್ಥೆಯೊಂದಕ್ಕೆ ಸುಮಾರು ಮೂರು ಟಿಎಂಸಿ ಕಾವೇರಿ ನೀರು ನೀಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಪರಾಮರ್ಶೆಗೆ ಒಳಪಡಿಸದಿದ್ದರೆ ಬಿಕ್ಕಟ್ಟು ಹುಟ್ಟಿಕೊಳ್ಳುತ್ತದೆ,” ಎನ್ನುತ್ತಾರೆ ವಾಸು.

“ನಾವು ಬಿಡಿ ಸ್ವಾಮಿ, ಅಲ್ಲಿ ಬೆಂಗಳೂರಿನಲ್ಲಿ ಕಾವೇರಿ ನೀರಿನಲ್ಲಿ ಕಾರ್ ತೊಳೆಯುತ್ತಾರೆ. ಟಾಯ್ಲೆಟ್ಟಿಗೂ ಬಳಸುತ್ತಾರೆ. ಕುಡಿಯೋಕೆ ಬಿಸ್ಲೇರಿ ಬಳಸುತ್ತಾರೆ. ಅದಕ್ಕೆಲ್ಲಾ ಅವರಿಗೆ ಇಲ್ಲಿಂದ ನೀರು ಕೊಡಬೇಕು. ಆದರೆ ನಾವು ಮಾತ್ರ ಕೃಷಿಗೆ ನೀರಿಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳಬೇಕು,” ಎಂದವರು ರೈತ ಜಯಣ್ಣ. ಕಾವೇರಿ ವಿಚಾರದಲ್ಲಿ ಹೋರಾಟವನ್ನು ರೂಪಿಸಿರುವ ಸಂಘಟನೆಗಳ ಪೈಕಿ ‘ಕಾವೇರಿ ಕಣಿವೆ ರೈತ ಒಕ್ಕೂಟ’ ಕೂಡ ತಮ್ಮ ಬೇಡಿಕೆಗಳ ಪಟ್ಟಿಯಲ್ಲಿ ಬೆಂಗಳೂರು ಬೆಳವಣಿಗೆಗೆ ಬ್ರೇಕ್ ಹಾಕಿ ಎಂದು ಸೇರಿಸಿಕೊಂಡಿದೆ. ಪಕ್ಕದ ಜಿಲ್ಲೆಗೆ ನೀರು ಬಿಡದಂತೆ ಹೋರಾಟ ಮಾಡಿದ ಇತಿಹಾಶವೂ ಮಂಡ್ಯ ಜಿಲ್ಲೆಗೆ ಇದೆ. ಈ ಸಮಯದಲ್ಲಿ ಬೆಂಗಳೂರಿಗೆ ಕಾವೇರಿ ನೀರು ಸರಬರಾಜಿನ ಕುರಿತು ಸಣ್ಣ ಮಟ್ಟದ ಅಸಹನೆಯೊಂದು ಇಲ್ಲಿ ಹುಟ್ಟಿಕೊಂಡಿದೆ. ಮುಂದೊಂದು ದಿನ ಇದು ಕಾವೇರಿ ವಿಚಾರದಲ್ಲಿ ಅಂತರ್ ಜಿಲ್ಲಾ ವಿವಾದವಾಗಿ ಬೆಳೆದರೂ ಅಚ್ಚರಿ ಇಲ್ಲ.

ಸದ್ಯಕ್ಕೆ ತಮಿಳುನಾಡು ಮತ್ತು ಸುಪ್ರಿಂ ಕೋರ್ಟ್ ಬೀಸೋ ದೊಣ್ಣೆಯಿಂದ ರಾಜ್ಯ ಸರಕಾರ ತಪ್ಪಿಸಿಕೊಂಡಿದೆ. ಆದರೆ, ಕಾವೇರಿ ವಿಚಾರದಲ್ಲಿ ದೂರಗಾಮಿ ನೆಲೆಯಲ್ಲಿ ಆಲೋಚನೆ ಮಾಡದೇ ಹೋದರೆ, ಮುಂದೊಂದು ದಿನ ತನ್ನದೇ ಜನ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗಬಹುದು. 

Top