An unconventional News Portal.

ಬಿಸಿಲಿಗೆ ಬೆಂಡಾದ ಊರಿನಲ್ಲಿ ತಂಪುಗಾಳಿ: ವಾಡಿಕೆ ಮಳೆಯ ಮುನ್ಸೂಚನೆ

ಬಿಸಿಲಿಗೆ ಬೆಂಡಾದ ಊರಿನಲ್ಲಿ ತಂಪುಗಾಳಿ: ವಾಡಿಕೆ ಮಳೆಯ ಮುನ್ಸೂಚನೆ

ತೀವ್ರ ಬರ ಮತ್ತು ನೀರಿನ ಅಭಾವದಿಂದ ಕಂಗೆಟ್ಟಿರುವ ರಾಜ್ಯಕ್ಕೆ ವಾಡಿಕೆಯಂತೆ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಪ್ರವೇಶವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿರೀಕ್ಷೆಯಂತೆಯೇ ನಿಗದಿತ ಸಮಯದಲ್ಲೇ ಮುಂಗಾರು ಪ್ರವೇಶ ಮಾಡಲಿದ್ದು, ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ.

ಕೇಂದ್ರ ಹವಾಮಾನ ಇಲಾಖೆಯ ಮೂಲಗಳ ಪ್ರಕಾರ, ಸಾಮಾನ್ಯಕ್ಕಿಂತ ಈ ಬಾರಿ ಶೇ.4ರಷ್ಟು ಹೆಚ್ಚು ಮಳೆಯಾಗಲಿದ್ದು, ಕರ್ನಾಟಕದಲ್ಲಿ 865 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ 900 ಮಿ.ಮೀ ಮಳೆಯಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

“ಇದೇ ಮೇ ತಿಂಗಳ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಕೇರಳಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಲಿದ್ದು, ಕರಾವಳಿ ಮತ್ತು ಘಾಟ್ ಪ್ರದೇಶಗಳಲ್ಲಿ ಭಾರಿ ವರ್ಷಧಾರೆಯಾಗಲಿದೆ,” ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿ ಎಂ. ಬಿ. ರಾಜೇಗೌಡ ಹೇಳಿದ್ದಾರೆ.

ಇದೇ ವೇಳೆ, ರೈತರಿಗೆ ಹಲವು ಸಲಹೆಗಳನ್ನು ನೀಡಿರುವ ರಾಜೇಗೌಡ ಅವರು, “ಭತ್ತ, ರಾಗಿ, ಮೆಕ್ಕೆ ಜೋಳ ಮತ್ತು ಸೂರ್ಯಕಾಂತಿ ಬೆಳೆಯಿರಿ,” ಎಂದು ದಕ್ಷಿಣ ಕರ್ನಾಟಕದ ರೈತರಿಗೆ ಹೇಳಿದ್ದಾರೆ. “ಉತ್ತರ ಕರ್ನಾಟಕದ ಭಾಗದ ರೈತರು ಶೇಂಗಾ, ಹೆಸರು ಬೇಳೆ, ಜೋಳ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳದಂತಹ ಬೆಳಗಳನ್ನು ಬೆಳೆಯಲು,” ಸಲಹೆ ಮಾಡಿದ್ದಾರೆ.

ಹವಾಮಾನ ಇಲಾಖೆಯ ಈ ಮಾಹಿತಿ ನೀರಿಲ್ಲದೆ ಬೆಳೆ ನಾಶವಾಗಿ ಕಂಗಾಲಾಗಿರುವ ರೈತರ ಮೊಗದಲ್ಲಿ ನಗು ಮೂಡಿಸಿದ್ದು, ಮತ್ತೆ ಹೊಲ-ಗದ್ದೆಗಳತ್ತ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದಾರೆ. ತೀವ್ರ ಬರಗಾಲದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಈ ವರ್ಷದ ಮುಂಗಾರು ಹರ್ಷವನ್ನು ತರುವ ಸಾಧ್ಯತೆ ಹೆಚ್ಚಾಗಿದೆ. ಉತ್ತಮ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

“ಈ ವರ್ಷ ಸಾಮಾನ್ಯ ಅಥವಾ ಅದಕ್ಕಿಂತ ಹೆಚ್ಚಿನ ಮಳೆಯಾಗಲಿದೆ. ಮಾನ್ಸೂನ್ ಕೇರಳ ತೀರವನ್ನು ಸಮಯಕ್ಕೆ ಸರಿಯಾಗಿ ತಲುಪುವ ಸಾಧ್ಯತೆ ಇದೆ. ಮಾನ್ಸೂನ್ ಕುರಿತು ಮೇ 15 ರ ನಂತರ ಅಧಿಕೃತ ಮುನ್ಸೂಚನೆಯನ್ನು ಪ್ರಕಟಿಸಲಾಗುವುದು,” ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರುನಲ್ಲಿ ತಂಪು ಗಾಳಿ: 

ಗುರುವಾರದ ಮಧ್ಯಾಹ್ನದ ವೇಳೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಸದ್ಯ ತಂಪುಗಾಳಿ ಬೀಸುತ್ತಿದ್ದು, ಮಳೆಯ ನಿರೀಕ್ಷೆ ಮೂಡಿಸಿದೆ.

ಈಗಾಗಲೇ, ಪಶ್ಚಿಮಘಟ್ಟ ಪ್ರದೇಶದಲ್ಲಿ ಒಂದೆರಡು ಸಣ್ಣ ಮಳೆ ಬಿದ್ದಿದೆ. ರಾಜ್ಯ ಮಳೆಗೆ ಸಿದ್ಧವಾಗುತ್ತಿದೆ.

Top