An unconventional News Portal.

‘ಜಯಲಲಿತಾ ಹೆಲ್ತ್ ರಿಪೋರ್ಟ್’: ಅಮ್ಮ ಆರೋಗ್ಯ ಗಂಭೀರ; ಸ್ಪಷ್ಟತೆ ಇನ್ನೂ ದೂರ

‘ಜಯಲಲಿತಾ ಹೆಲ್ತ್ ರಿಪೋರ್ಟ್’: ಅಮ್ಮ ಆರೋಗ್ಯ ಗಂಭೀರ; ಸ್ಪಷ್ಟತೆ ಇನ್ನೂ ದೂರ

ತಮಿಳುನಾಡಿನ ಮುಖ್ಯಮಂತ್ರಿ, ಎಐಎಡಿಎಂ ಪಕ್ಷದ ಕಾರ್ಯಕರ್ತರ ಪಾಲಿನ ಆರಾಧ್ಯ ದೈವ ಜೆ. ಜಯಲಲಿತಾ ಆರೋಗ್ಯದ ಗಂಭೀರತೆ ಮುಂದುವರಿದೆ.

ಸೋಮವಾರ ಮಧ್ಯಾಹ್ನ ತಾನೆ ಚೆನ್ನೈ ಅಪೊಲೋ ಆಸ್ಪತ್ರೆ ಬಿಡುಗಡೆ ಮಾಡಿರುವ ‘ಪ್ರಕಟಣೆ’ಯಲ್ಲಿ, ‘ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ನಿನ್ನೆ (ಭಾನುವಾರ) ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇವತ್ತೂ ಆರೋಗ್ಯ ಸ್ಥಿತಿಯಲ್ಲಿ ಗಂಭೀರತೆ ಮುಂದುವರಿದೆ. ಪರಿಣಿತ ತಜ್ಞ ವೈದ್ಯರು ನಿಗಾವಹಿಸಿದ್ದು, ಇಸಿಎಂಓ ಸೇರಿದಂತೆ ತೀವ್ರ ನಿಗಾ ಕ್ರಮಕ್ಕೆ ಒಳಗಾಗಿದ್ದಾರೆ’ ಎಂದು ತಿಳಿಸಿದೆ.

ಅಪೊಲೋ ಆಸ್ಪತ್ರೆ ಬಿಡುಗಡೆ ಮಾಡಿದ ಪ್ರಕಟಣೆ.

ಅಪೊಲೋ ಆಸ್ಪತ್ರೆ ಬಿಡುಗಡೆ ಮಾಡಿದ ಪ್ರಕಟಣೆ.

ಜಯಲಲಿತಾ 74 ದಿನಗಳ ಹಿಂದೆ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೊಲೋ ಆಸ್ಪತ್ರೆಗೆ ಅನಾರೋಗ್ಯದ ಕಾರಣಕ್ಕೆ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿದ್ದರು. ಭಾನುವಾರ ಬೆಳಗ್ಗೆ ಅವರ ಆರೋಗ್ಯ ಸುಧಾರಿಸಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿತ್ತು. ಭಾನುವಾರ ಸಂಜೆ ಜಯಲಲಿತಾ ಮೂರನೇ ಬಾರಿಗೆ ಹೃದಯಾಘಾತಕ್ಕೆ ಒಳಗಾಗಿದ್ದರು.

ಈ ಸುದ್ದಿ ಹೊರಬೀಳುತ್ತಿದ್ದಂತೆ ಆಸ್ಪತ್ರೆ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆಯಲು ಶುರು ಮಾಡಿದ್ದರು. ಹೀಗಾಗಿ, ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ಸ್ಥಳದಲ್ಲಿ ನೇಮಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಭಾವನಾತ್ಮಕ ಅಭಿಮಾನಿ ವರ್ಗವನ್ನು ಜಯಲಲಿತಾ ಹೊಂದಿರುವ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಜಯಲಲಿತಾ ಹೃದಯಾಘಾತದ ಸುದ್ದಿ ಹೊರಬೀಳುತ್ತಿದ್ದಂತೆ ಸೋಮವಾರ ಅಭಿಮಾನಿಯೊಬ್ಬರು ಅಘಾತಕ್ಕೊಳಗಾಗಿ ಸಾವಿಗೀಡಾಗಿದ್ದರು. ಜತೆಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ತಳಮಟ್ಟದಲ್ಲಿ ಸನ್ನಿವೇಶಗಳು ಬದಲಾಗತೊಡಗಿವೆ. ಎಐಎಡಿಎಂಕೆ ಒಳಗಿನ ನಾಯಕತ್ವದ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ಹಿಂದೆ ಜಯಲಲಿತಾ ‘ಗುರು’ ಎಂಜಿಆರ್ ಮರಣ ಸಮಯದಲ್ಲಿ ನಡೆದ ಘಟನಾವಳಿಗಳನ್ನು ಕೆಲವರು ರಾಷ್ಟ್ರೀಯ ಮಾಧ್ಯಮಗಳಲ್ಲಿ ಮೆಲುಕು ಹಾಕಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ತಮಿಳುನಾಡು ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. “ಭಾನುವಾರ ತಿರುವಣ್ಣಾಮಲೈನಲ್ಲಿ ರಾಜ್ಯ ಸಾರಿಗೆ ಬಸ್ಸೊಂದರ ಕಲ್ಲು ತೂರಾಟ ನಡೆಸಿದೆ. ಹಿಂಭಾಗದ ಗಾಜು ಒಡೆದುಹೋಗಿದೆ. ಯಾರಿಗೂ ತೊಂದರೆಯಾಗಿಲ್ಲ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ,” ಎಂದು ನಿಗಮದ ಅಧಿಕೃತ ಮೂಲ ‘ಸಮಾಚಾರ’ಕ್ಕೆ ಮಾಹಿತಿ ನೀಡಿದೆ.

ಕಲಾವಿದೆಯಾಗಿ ರಂಗ ಪ್ರವೇಶ:

ಕನ್ನಡ ಸಿನೆಮಾ 'ಚಂದನದ ಗೊಂಬೆ'ಯಲ್ಲಿ ಜಯಲಲಿತಾ.

ಕನ್ನಡ ಸಿನೆಮಾ ‘ಚಂದನದ ಗೊಂಬೆ’ಯಲ್ಲಿ ಜಯಲಲಿತಾ.

ಜಯಲಲಿತಾ ಹುಟ್ಟಿದ್ದು ಮೈಸೂರು ಜಿಲ್ಲೆಯ ಮೇಲುಕೋಟೆಯ ತಮಿಳು ಬ್ರಾಹ್ಮಣ ಕುಟುಂಬದಲ್ಲಿ. 1961ರಲ್ಲಿ ಬಾಲ ಕಲಾವಿದೆಯಾಗಿ ಮೊದಲ ಬಾರಿಗೆ ಅವರು ಸಿನೆಮಾ ರಂಗಕ್ಕೆ ಕಾಲಿಟ್ಟರು. ಅದಕ್ಕೂ ಮುಂಚೆ, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ರಂಗಭೂಮಿಯಲ್ಲಿ ಹಲವು ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. 1964ರ ಹೊತ್ತಿಗೆ ಕನ್ನಡ ಸಿನೆಮಾ ‘ಚಂದನದ ಗೊಂಬೆ’ಯಲ್ಲಿ ಅವರು ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದರು. ಅದಾದ ನಂತರ ಅವರು ತಮಿಳುನಾಡಿನ ಅಂದಿನ ಸ್ಟಾರ್ ನಟ ಎಂ. ಜಿ. ರಾಮಚಂದ್ರನ್ ಸಂಪರ್ಕಕ್ಕೆ ಬಂದರು. ಅವರ ಜತೆಯಲ್ಲಿ ನಟಿಸಿದ ಮೊದಲ ತಮಿಳು ಚಿತ್ರ ‘ವೆನ್ನಿರ ಆಡೈ’ ಆ ಕಾಲಕ್ಕೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟಿತು. ಅಲ್ಲಿಂದಲೇ ಎಂಜಿಆರ್ ಗರಡಿಯಲ್ಲಿ ಅವರ ಸಿನೆಮಾ ಮತ್ತು ರಾಜಕೀಯ ಜೀವನ (1987ರವರೆಗೆ) ಆರಂಭವಾಯಿತು. 1977ರ ಹೊತ್ತಿಗೆ ಸಿನೆಮಾ ಬದುಕನ್ನು ಸಂಪೂರ್ಣವಾಗಿ ನಿಲ್ಲಿಸಿದ ಜಯಾ, ಅಷ್ಟೊತ್ತಿಗಾಗಲೇ ಎಂಜಿಆರ್ ಸುಮಾರು 28 ಸಿನೆಮಾಗಳಲ್ಲಿ ಅಭಿನಯಿಸಿದ್ದರು.
ರಾಜಕೀಯ ಅಂಗಳಕ್ಕೆ:
ಎಂಜಿಆರ್ ಮಾರ್ಗದರ್ಶನದಲ್ಲಿ ಎಐಎಡಿಎಂಕೆ ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿ ಜಯಲಲಿತಾ ತಮ್ಮ ರಾಜಕೀಯ ಜೀವನವನ್ನು ಶುರುಮಾಡಿದರು. ಅವತ್ತು 1983ರಲ್ಲಿ ಜಯಾ ಮಾಡಿದ ಬಹಿರಂಗ ಭಾಷಣ ಭಾರಿ ಜನಪ್ರಿಯವಾಗಿತ್ತು. ಅದಾದ ನಂತರ ಪಕ್ಷದ ಪ್ರಚಾರ ಕಾರ್ಯರ್ಶಿಯಾಗಿ ಅವರು ನೇಮಕಗೊಂಡರು. 1984ರಲ್ಲಿ ಮೊದಲ ಬಾರಿಗೆ ತಿರುಚೆಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಾ ಕಣಕ್ಕಿಳಿದರು. ಆದರೆ ಅಲ್ಲಿ ಸೋತ ಹಿನ್ನೆಲೆಯಲ್ಲಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿದರು ಎಂಜಿಆರ್.
ಎಂಜಿಆರ್ ಕೊನೆಯ ದಿನಗಳಲ್ಲಿ ಪಾರ್ಶ್ವವಾಯಿಗೆ ಒಳಗಾದರು. ಅವರನ್ನು ಅಮೆರಿಕಾದಲ್ಲಿ ಚಿಕಿತ್ಸೆಗಾಗಿ ಕಳುಹಿಸಲಾಯಿತು. ಈ ಸಮಯದಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಸಹಾಯದಿಂದ ಜಯಾ ಮುಖ್ಯಮಂತ್ರಿ ಸ್ಥಾನಕ್ಕೆ ಬರಲು ಪ್ರಯತ್ನಪಟ್ಟರು. ಈ ಸಮಯದಲ್ಲಿ ಎಂಜಿಆರ್ ಮತ್ತು ಜಯಾ ನಡುವೆ ಸಮರ ಶುರುವಾಯಿತು. ಕೊನೆಗೆ ಜಯಾ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಕಿತ್ತು ಹಾಕಲಾಯಿತು. ಅದೇ ವರ್ಷ ತಮಿಳುನಾಡಿನಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಎಐಎಡಿಎಂಕೆ ಪಕ್ಷ ಗೆದ್ದು ಅಧಿಕಾರಕ್ಕೆ ಮರಳಿತು. ಎಂಜಿಆರ್ ಅನುಪಸ್ಥಿತಿಯಲ್ಲಿ ಜಯಾ ಪಕ್ಷವನ್ನು ಅಧಿಕಾರಕ್ಕೆ ತಂದರು.
1987ರಲ್ಲಿ ಎಂಜಿಆರ್ ಸಾವಿನ ನಂತರ ಪಕ್ಷವನ್ನು ಮುನ್ನೆಡೆಸುವ ವಿಚಾರದಲ್ಲಿ ಎರಡು ಬಣಗಳು ಹುಟ್ಟಿಕೊಂಡವು. ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಅಡಿಯಲ್ಲಿ ಒಂದಷ್ಟು ನಾಯಕರು ಹಾಗೂ ಜಯಲಲಿತಾ ನೇತೃತ್ವದಲ್ಲಿ ಇನ್ನೊಂದಿಷ್ಟು ನಾಯಕರು ಇದ್ಭಾಗಗೊಂಡರು. ಈ ಸಮಯದಲ್ಲಿ 132 ಶಾಸಕರ ಪೈಕಿ 97 ಜನ ಜಾನಕಿ ಅವರ ಜತೆ ನಿಂತ ಹಿನ್ನೆಲೆಯಲ್ಲಿ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು. ಆದರೆ, ಪಕ್ಷದೊಳಗಿನ ಆಂತರಿಕ ಕಲಹ ಹೆಚ್ಚಾದ ಹಿನ್ನೆಲೆಯಲ್ಲಿ 1989ರಲ್ಲಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು.
ಮರಳಿ ಅಧಿಕಾರಕ್ಕೆ:
ಮುಖ್ಯಮಂತ್ರಿಯಾಗಿ ಜಯಲಲಿತಾ.

ಮುಖ್ಯಮಂತ್ರಿಯಾಗಿ ಜಯಲಲಿತಾ.

ನಂತರ ನಡೆದ ಚುನಾವಣೆಯಲ್ಲಿ ಎಐಎಡಿಎಂಕೆ ಎರಡು ಬಣಗಳಾಗಿ ಚುನಾವಣೆಯನ್ನು ಎದುರಿಸಿತು. ಇದನ್ನು ಉಪಯೋಗಿಸಿಕೊಂಡ ಪ್ರತಿಪಕ್ಷ ಡಿಎಂಕೆ ಅಧಿಕಾರಕ್ಕೆ ಬಂತು. ಕೊನೆಗೆ, ಜಾನಕಿ ರಾಮಚಂದ್ರನ್ ಪಕ್ಷವನ್ನು ತೊರೆಯುವ ಮೂಲಕ ಪಕ್ಷದೊಳಗೆ ಜಯಾ ಅಧಿಕಾರ ಅಬಾಧಿತವಾಗಿ ಮುಂದುವರಿಯಲು ವೇದಿಕೆ ಸಜ್ಜುಗೊಂಡಿತು. ಈ ಸಮಯದಲ್ಲಿ ಡಿಎಂಕೆ ಕಾರ್ಯಕರ್ತರು, ಆಯವ್ಯಯ ಮಂಡಿಸಿ ಮಾತನಾಡುತ್ತಿದ್ದ ಸಿಎಂ ಕರುಣಾನಿಧಿ ಅವರ ಭಾಷಣಕ್ಕೆ ಅಡ್ಡಿ ಪಡಿಸಿದರು ಎಂಬ ಆರೋಪದ ಮೇಲೆ ಜಯಾ ಮೇಲೆ ಶಾಸಕ ಸಭೆಯ ಒಳಗಡೆಯೇ ಹಲ್ಲೆ ನಡೆಸಿದರು. ಇದರಿಂದಾಗಿ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಹಳೆಯ ಮುನಿಸು ಮರೆತು ಜಯಾ ನಾಯಕತ್ವದ ಕೆಳಗೆ ಒಂದಾದರು.
1991ರಲ್ಲಿ ಎಐಎಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ 234 ಸ್ಥಾನಗಳ ಪೈಕಿ 225 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಜಯಲಲಿತಾ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದರು. ಅಲ್ಲಿಂದ ನಂತರ ಜಯಲಲಿತಾ ಪಕ್ಷದ ಕಾರ್ಯಕರ್ತರ ಪಾಲಿಗೆ ಪ್ರೀತಿಯ ‘ಅಮ್ಮ’ ಆದರು. ಈ ಸಮಯದಲ್ಲಿ ತಮ್ಮ ಸಾಕು ಮಗ ಸುಧಾಕರನ್ಗೆ ಅದ್ದೂರಿ ಮದುವೆಯನ್ನು ಜಯಾ ಮಾಡಿದರು. ಈ ಸಮಯದಲ್ಲಿ ಅವರ ಮೇಲೆ ಮೊದಲ ಬಾರಿಗೆ ಭ್ರಷ್ಟಾಚಾರದ ಆರೋಪ ಕೇಳಿಬಂತು. ಆದಾಯ ಮಿತಿಯನ್ನು ಮೀರಿ ಅವರು ಆಸ್ತಿ ಮಾಡಿದ್ದಾರೆ ಎಂಬ ಆರೋಪ ಅವರ ಬೆನ್ನು ಹತ್ತಿತ್ತು. ಇದೇ ಪ್ರಕರಣದಲ್ಲಿ ಅವರು ಕೊನೆಗೆ ಪರಪ್ಪನ ಅಗ್ರಹಾರ ಜೈಲು ಪಾಲಾದರು ಕೂಡ. ಅಲ್ಲಿಂದ ನಂತರ, ಜಯಾ ರಾಜಕೀಯ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಾಣುತ್ತ ಬಂದರು. ಈಗ ಜಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಸುತ್ತ ರಾಜಕೀಯ ಚರ್ಚೆಯೊಂದು ಗರಿಗೆದುರುತ್ತಿದೆ. ಅವರ ಆರೋಗ್ಯವಾಗಿ ಮರಳಲಿ ಎಂದು ಪ್ರಾರ್ಥನೆಗಳು ನಡೆಯುತ್ತಿವೆ.
ಅಪರೂಪದ ಸಂದರ್ಶನ:
ಜಯಲಲಿತಾ ರಾಜಕೀಯ ಜೀವನದಲ್ಲಿ ಹೇಗಿದ್ದರು ಎಂಬುದಕ್ಕೆ 1994ರಲ್ಲಿ ಪತ್ರಕರ್ತ ಕರಣ್ ಥಾಪರ್ ಬಿಬಿಸಿ ವಾಹಿನಿಗೆ ನಡೆಸಿದ ಸಂದರ್ಶನ ಸಾಕಷ್ಟು ಒಳಸುಳಿಗಳನ್ನು ನೀಡುತ್ತದೆ. ಸಂದರ್ಶನದ ಆರಂಭದಲ್ಲಿ ಅರಾಮಾಗಿಯೇ ಪ್ರಶ್ನೆಗಳನ್ನು ಎದುರಿಸಿದ ಜಯಲಲಿತಾ ಕೊನೆಯ ಕ್ಷಣದಲ್ಲಿ ತಾಳ್ಮೆ ಉಳಿಸಿಕೊಂಡರೂ, ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಏಷಿಯಾ ರಾಜಕೀಯದಲ್ಲಿ ಮಹಿಳಾ ನಾಯಕರಾಗಿ ಬೆಳೆದು ಬಂದವರೆಲ್ಲರೂ ಕೌಟುಂಬಿಕ ಹಿನ್ನೆಲೆಯಿಂದಲೇ ಬಂದವರಾಗಿದ್ದವರು. ಇಂದಿರಾ ಗಾಂಧಿಯಿಂದ ಪಾಕಿಸ್ತಾನದ ಬೆನೆಝೀರ್ ಭುಟ್ಟೋವರೆಗೆ ರಾಜಕೀಯದ ಅನುಭವಿ ಕುಟುಂಬದಲ್ಲಿ ಹುಟ್ಟಿ ಬಂದವರು. ನಾನು ಹಾಗಲ್ಲ; ನನಗೆ ಯಾರೂ ರಾಜಕಾರಣವನ್ನು ಚಿನ್ನದ ತಟ್ಟೆಯಲ್ಲಿ ಇಟ್ಟು ಕೊಟ್ಟಿಲ್ಲ ಎಂದಿದ್ದರು.
ವಿಶೇಷವಾಗಿ 90ರ ದಶಕದ ಮಾಧ್ಯಮಗಳು ತನ್ನ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿವೆ ಎಂದು ದೂರಿದ್ದರು. ಕರಣ್ ಥಾಪರ್ ತರಹದ ಪತ್ರಕರ್ನಿಗೆ, ‘ನೀನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ. ಬರೆದುಕೊಂಡು ಬಂದದನ್ನು ಓದುತ್ತಿದ್ದೀಯಾ?’ ಎಂದು ವ್ಯಂಗ್ಯವಾಗಿ, ಕೋಪದಿಂದ ಹೇಳಿದ್ದರು. ಕೊನೆಗೆ, ‘ಇಷ್ಟೊಂದು ಒಳ್ಳೆಯ ಅನುಭವ ಕೊಟ್ಟ ಸಂದರ್ಶನಕ್ಕೆ ಒಪ್ಪಿಕೊಂಡಿದ್ದಕ್ಕೆ ಧನ್ಯವಾದ’ ಅಂದಾಗಲೂ, ‘ನನಗಿದು ಒಳ್ಳೆಯ ಅನುಭವ ಕೊಟ್ಟಿಲ್ಲ. ಇಂತಹದೊಂದು ಸಂದರ್ಶನ ನೀಡಲು ನಾನು ಒಪ್ಪಿಕೊಳ್ಳಲೇಬಾರದಾಗಿತ್ತು’ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿ ಎದ್ದು ಹೋಗಿದ್ದರು ಜಯಲಲಿತಾ. ಇವತ್ತು ಜಯಲಲಿತಾ ಬಗ್ಗೆ ಯಾವೊಂದು ತೀರ್ಮಾನವನ್ನು ತೆಗೆದುಕೊಳ್ಳುವ ಮುಂಚೆ, ಹಳೆಯ ಈ ಸಂದರ್ಶನವನ್ನು ಒಮ್ಮೆ ನೋಡಲೇಬೇಕು:

If you are interested:

ಹತ್ತು ವರ್ಷಗಳನ್ನು ಪೂರೈಸಿರುವ ಅರ್ನಾಬ್ ಅನುಪಸ್ಥಿತಿಯ ‘ಟೈಮ್ಸ್ ನೌ’ Live ಕವರೇಜ್ ಇಲ್ಲಿದೆ.

Leave a comment

Top