An unconventional News Portal.

‘ಸಮಾಚಾರ ಸಂದರ್ಶನ’: ರೈತರ ಸಾಲ ಮನ್ನಾ; ಪತ್ರಕರ್ತ ಪಿ. ಸಾಯಿನಾಥ್ ಏನಂತಾರೆ?

‘ಸಮಾಚಾರ ಸಂದರ್ಶನ’: ರೈತರ ಸಾಲ ಮನ್ನಾ; ಪತ್ರಕರ್ತ ಪಿ. ಸಾಯಿನಾಥ್ ಏನಂತಾರೆ?

‘Wait and See’ (ಕಾದು ನೋಡಿ)…

ಇದು ಕರ್ನಾಟಕ ಸರಕಾರ ರೈತರ ಸಾಲ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ಮುಂದಿಟ್ಟ ಪ್ರಶ್ನೆಗೆ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ನೀಡಿದ ಪ್ರತಿಕ್ರಿಯೆ.

ಗುರುವಾರ ಬೆಂಗಳೂರಿಗೆ ಬಂದಿದ್ದ ಅವರನ್ನು ‘ಸಮಾಚಾರ’ ಖಾಸಗಿ ಹೋಟೆಲ್‌ ಒಂದರಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಂದರ್ಶನ ನಡೆಸಿತು. ಈ ಸಮಯದಲ್ಲಿ ರೈತರ ಸಾಲ ಮನ್ನಾ ಯೋಜನೆಗಳು, ಅದು ಗ್ರಾಮೀಣ ಪರಿಸರದಲ್ಲಿ ಮೂಡಿಸುವ ಪರಿಣಾಮಗಳು, ಜಿಎಸ್‌ಟಿ ಬಗೆಗಿನ ಅವರ ಆತಂಕಗಳು, ಕಾರ್ಪೊರೇಟ್ ಜಗತ್ತಿಗೆ ನೀಡುತ್ತಿರುವ ವಿನಾಯಿತಿಗಳು ಹೀಗೆ ಹಲವು ವಿಚಾರಗಳ ಕುರಿತು ಸುದೀರ್ಘವಾಗಿ ಮಾತನಾಡಿದರು. ಇದೇ ವೇಳೆ ರೈತರ ವಿಚಾರದಲ್ಲಿ ಮಾಧ್ಯಮಗಳು ಹೊಂದಿರುವ ನಿಲುವು, ಅವು ಭಿತ್ತರಿಸುವ ಸುದ್ದಿಗಳ ಆಚೆಗೆ ಇರುವ ಆಯಾಮಗಳು ಕುರಿತೂ ಅವರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡರು.

ಅವರ ಜತೆಗಿನ ಸಂದರ್ಶನದ ಆಯ್ದ ಭಾಗ ಇಲ್ಲಿವೆ:

ಸಮಾಚಾರ: ನಿನ್ನೆಯಷ್ಟೆ ಕರ್ನಾಟಕದ ಕಾಂಗ್ರೆಸ್ ಸರಕಾರ 50 ಸಾವಿರದವರೆಗಿನ ಸಹಕಾರಿ ಹಣಕಾಸು ಸಂಸ್ಥೆಗಳಲ್ಲಿ ರೈತರು ಪಡೆದ ಸಾಲವನ್ನು ಮನ್ನಾ ಮಾಡಿದೆ. ಈ ಕುರಿತು ನಿಮ್ಮ ಪ್ರತಿಕ್ರಿಯೆ ಏನು?

ಪಿ. ಸಾಯಿನಾಥ್: (ನಗು) ನನ್ನ ಮೊದಲ ಪ್ರತಿಕ್ರಿಯೆ ಇಷ್ಟೆ; ವೈಟ್ ಅಂಡ್ ಸೀ (ಕಾದು ನೋಡಿ) ವಾಸ್ತವದಲ್ಲಿ ಏನಾಗುತ್ತೆ ಅಂತ. ಈ ಸಮಯದಲ್ಲಿ ಎಲ್ಲರೂ ಇದೇ ರೀತಿಯ ಘೋಷಣೆಗಳನ್ನು ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಮಹಾರಾಷ್ಟ್ರ ಇದೇ ಮಾದರಿಯ ಘೋಷಣೆ ಮಾಡಿತು. ಉತ್ತರ ಪ್ರದೇಶದಲ್ಲಿ ಮೊದಲ ಘೋಷಣೆ ಹೊರಬಿತ್ತು. ಆದರೆ ಈವರೆಗೆ ಒಂದು ಪೈಸೆ ಕೂಡ ಯಾವ ರೈತರಿಗೂ ಉತ್ತರ ಪ್ರದೇಶದಲ್ಲಿ ತಲುಪಿಲ್ಲ. ಅಲ್ಲಿನ ರೈತರು ಸಿಟ್ಟಿಗೆದ್ದಿದ್ದಾರೆ; ಸರಕಾರ ಸಾಲ ಮನ್ನಾ ಘೋಷಣೆ ಸುಳ್ಳು ಎನ್ನುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಎಲ್ಲಾ ರೈತರ ಬೆಳೆಸಾಲ ಮನ್ನಾ ಮಾಡುವುದಾಗಿ ಮೊದಲು ಘೋಷಣೆ ಮಾಡಲಾಗಿತ್ತು. ಈಗ ಅದರಲ್ಲಿ ಶೇ. 90ರಷ್ಟು ರೈತರನ್ನು ಹೊರಗಿಡಲು ಮಾನದಂಡಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿದೆ ಸರಕಾರ. ಹಾಗಾಗಿ, ರೈತರ ಸಾಲ ಮನ್ನಾ ಘೋಷಣೆ ಒಂದು ವಿಚಾರ. ವಾಸ್ತವದಲ್ಲಿ ಅದರ ಫಲಾನುಭವಿಗಳು ಯಾರಾಗುತ್ತಾರೆ ಎಂಬುದು ಮತ್ತೊಂದು ವಿಚಾರ.

2008ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ವಾಸ್ತವದಲ್ಲಿ ಎಷ್ಟು ಜನ ರೈತರಿಗೆ ಇದರ ಫಲ ಸಿಗಬೇಕಿತ್ತೊ, ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ರೈತರಿಗೆ ನೆರವಾಗಿತ್ತು. ಆಗ ಬ್ಯಾಂಕ್‌ಗಳ ಮೂಲಕ ಪಡೆದ ಸಾಲವನ್ನು ಮಾತ್ರವೇ ಮನ್ನಾ ಮಾಡಲಾಗಿತ್ತು. ವಿದರ್ಭದಲ್ಲಿರುವ ಶೇ. 52ರಷ್ಟು ರೈತರಿಗೆ ಬ್ಯಾಂಕ್‌ ಅಕೌಂಟ್‌ಗಳೇ ಇರಲಿಲ್ಲ. ಅನಂತಪುರ ಜಿಲ್ಲೆಯ ಶೇ. 60ರಷ್ಟು ರೈತರು ಬ್ಯಾಂಕ್‌ಗಳಲ್ಲಿ ಖಾತೆಗಳನ್ನೇ ಹೊಂದಿರಲಿಲ್ಲ; ಇದು ಒಂದು ಅಂಶ.

ಎರಡನೇಯದು, ಅವರು (ಸರಕಾರ) ಹೇಳಿದರು, 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಮಾತ್ರ ಇದು ಅನ್ವಯವಾಗುತ್ತದೆ ಅಂತ. ಆದರೆ ಐದು ಎಕರೆ ನೀರಾವರಿ ಭೂಮಿಯಾ? ಇಲ್ಲಾ, ಒಣ ಬೇಸಾಯದ ಭೂಮಿಯ ಎಂಬ ಕುರಿತು ಸ್ಪಷ್ಟತೆ ಇರಲಿಲ್ಲ. ನೀರಾವರಿ ಜಮೀನು ಆಗಿದ್ದರೆ ಭೂ ಒಡೆತನ ಕಡಿಮೆ ಇರುತ್ತದೆ. ಒಣ ಬೇಸಾಯದ ಭೂಮಿ ಆಗಿದ್ದರೆ ಒಡೆತನ ಹೆಚ್ಚಿರುತ್ತದೆ. ನೀವೇ ನೋಡಿ, ಕರಾವಳಿ ಭಾಗದ ರೈತರಿಗೆ ಹೋಲಿಸಿದರೆ ಬೀದರ್‌, ಗುಲ್ಬರ್ಗಾದಂತಹ ಜಿಲ್ಲೆಗಳಲ್ಲಿ ರೈತರ ಹೆಚ್ಚು ಭೂಮಿಯನ್ನು ಹೊಂದಿರುತ್ತಾರೆ. ನೀರಾವರಿ ವ್ಯವಸ್ಥೆ ಇಲ್ಲದ ಆದಿವಾಸಿಗಳು, ದಲಿತರು ಐದು ಎಕರೆಗಳಿಗಿಂತ ಒಣ ಬೇಸಾಯದ ಭೂಮಿಯನ್ನು ಸಹಜವಾಗಿಯೇ ಹೊಂದಿರುತ್ತಾರೆ. ಅದನ್ನು ನೀರಾವರಿ ಜಮೀನಿನ ಜತೆ ಹೋಲಿಸಲು ಸಾಧ್ಯವಿಲ್ಲ. ಹೀಗಾಗಿ, ಯುಪಿಎ ಸರಕಾರ ಘೋಷಣೆ ಮಾಡಿದ ರಾಷ್ಟ್ರೀಯ ಸಾಲ ಮನ್ನಾ ಯೋಜನೆ ಒಣ ಬೇಸಾಯ ಮಾಡುವ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿತ್ತು.

ಸಾಲ ಮನ್ನಾ ಯೋಜನೆ ಜಾರಿ ತರುವ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಸರಕಾರ ಮಾಡಿತ್ತು. ಮಹಾರಾಷ್ಟ್ರದ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಅಲ್ಲಿ 36 ಜಿಲ್ಲೆಗಳಿವೆ. ಸಾಲ ಮನ್ನಾ ಯೋಜನೆಯ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹೋಗಿದ್ದು 6 ಶ್ರೀಮಂತ ಜಿಲ್ಲೆಗಳಿಗೆ ಮತ್ತು ಆ ಜಿಲ್ಲೆಗಳಲ್ಲಿ ಅತ್ಯುತ್ತಮ ನೀರಾವರಿ ಕೃಷಿ ಇತ್ತು. ಹೀಗಾಗಿ ಸಾಲ ಮನ್ನಾ ಘೋಷಣೆಯ ಆಳಕ್ಕಿಳಿದು ಸರಕಾರಗಳು ರೂಪಿಸುವ ಮಾನದಂಡಗಳನ್ನು ಗಮನಿಸಬೇಕಿದೆ.

ಸಮಾಚಾರ: ಕರ್ನಾಟಕದಲ್ಲಿ ಸರಕಾರ 50 ಸಾವಿರದವರೆಗಿನ ಎಲ್ಲಾ ಬೆಳೆಸಾಲವನ್ನು ಮನ್ನಾ ಮಾಡಿದೆ. ಅದೂ ಸಹಕಾರಿ ಹಣಕಾಸು ಸಂಸ್ಥೆಗಳಲ್ಲಿ ಪಡೆದ ಸಾಲ ಮಾತ್ರ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಸಾಲಕ್ಕೆ ಇದು ಅನ್ವಯವಾಗುತ್ತಿಲ್ಲ…

ಸಾಯಿನಾಥ್: ಅವರು (ಮುಖ್ಯಮಂತ್ರಿ) ಸಹಕಾರಿ ಹಣಕಾಸು ಸಂಸ್ಥೆಗಳ ಸಾಲ ಮನ್ನಾ ಮಾತ್ರವೇ ಮಾಡಬಹುದು. ರಾಷ್ಟ್ರೀಕೃತ ಬ್ಯಾಂಕ್‌ಗಳ ಬೆಳೆ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಲು ಸಾಧ್ಯವಿಲ್ಲ. ಅದನ್ನು ಕೇಂದ್ರ ಸರಕಾರವೇ ಮಾಡಬೇಕು. ಒಂದು ವೇಳೆ 50 ಸಾವಿರ ಮಿತಿಯನ್ನು ಮಾನದಂಡವಾಗಿ ತೆಗೆದುಕೊಂಡಿದ್ದರೆ ಒಳ್ಳೆಯದು. ಆದರೂ ಕೆಲವೊಂದು ವಿಚಾರವನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕು. ಸರಕಾರ ಯಾರನ್ನು ರೈತರು ಎಂದು ಕರೆಯುತ್ತಿದೆ? ಯಾವುದನ್ನು ಬೆಳೆ ಸಾಲ ಎನ್ನುತ್ತಿದೆ? ಈ ಸಮಯದಲ್ಲಿ ಇಂತಹ ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ. ಈ ಬಗ್ಗೆ ಒಂದು ಪಾದರ್ಶಕತೆಯನ್ನು ನಿರೀಕ್ಷಿಸಬೇಕಾಗುತ್ತದೆ.

ಸಾಲ ಮನ್ನಾ ಅಗತ್ಯವಾಗಿರುವ ಕ್ರಮ. ಆದರೆ ಅದು ಶಾಶ್ವತ ಪರಿಹಾರ ಅಲ್ಲ: ಪಿ. ಸಾಯಿನಾಥ್.

ಸಾಲ ಮನ್ನಾ ಅಗತ್ಯವಾಗಿರುವ ಕ್ರಮ. ಆದರೆ ಅದು ಶಾಶ್ವತ ಪರಿಹಾರ ಅಲ್ಲ: ಪಿ. ಸಾಯಿನಾಥ್.

ಸಮಾಚಾರ: ಸಾಲ ಮನ್ನಾ ವಿಚಾರದಲ್ಲಿ ಇರುವ ರಾಜಕೀಯ, ಮಾನದಂಡಗಳ ಸಮಸ್ಯೆಗಳ ಆಚೆಗೆ ಇವತ್ತಿನ ಸಮಯದಲ್ಲಿ ಇದು ರೈತರಿಗೆ ಒಂದು ‘ಬೆಳ್ಳಿ ರೇಖೆ’ ಅಂತ ಅನ್ನಿಸುತ್ತಿಲ್ಲವಾ?

ಸಾಯಿನಾಥ್: ಖಂಡಿತಾ… ಅದರಲ್ಲಿ ಅನುಮಾನವೇ ಇಲ್ಲ. ಈ ಸಮಯದಲ್ಲಿ ನನಗೆ ಸಿಟ್ಟು ಬರುವುದು ಮಾಧ್ಯಮಗಳ ಬಗ್ಗೆ. ಅವೇ ರೈತರ ಸಾಲ ಮನ್ನಾ ಬಗ್ಗೆ ಗೊಂದಲಗಳನ್ನು ಸೃಷ್ಟಿಸುತ್ತಿವೆ. ರೈತರ ವಿರುದ್ಧ, ರೈತರ ಸಾಲ ಮನ್ನಾ ಆಲೋಚನೆಯ ವಿರುದ್ಧ ಅಲೆಯೊಂದನ್ನು ಸೃಷ್ಟಿಸಲು ಪ್ರಯತ್ನ ನಡೆಸುತ್ತಿವೆ. ಇದೇ ಮಾಧ್ಯಮಗಳು ಕಾರ್ಪೊರೇಟ್ ಜಗತ್ತಿಗೆ ‘ಪಿಂಪ್‌’ (ತಲೆಹಿಡುಕರು)ಗಳಾಗಿ ಕೆಲಸ ಮಾಡುತ್ತಿವೆ. ದೇಶದ ಕಾರ್ಪೊರೇಟ್ ಕುಳಗಳು ಲಕ್ಷ ಕೋಟಿಗಳ ಲೆಕ್ಕದಲ್ಲಿ ತೆರಿಗೆ ವಿನಾಯಿತಿ, ಸಾಲ ಮನ್ನಾದ ಫಲವನ್ನು ಪಡೆಯುತ್ತಿವೆ. ನಮ್ಮಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇರುವ ‘ಕೆಟ್ಟ ಸಾಲ’ದ ಮೊತ್ತ 7.5 ಲಕ್ಷ ಕೋಟಿ. ಇದರಲ್ಲಿ ಶೇ. 70ರಷ್ಟು ಕಾರ್ಪೊರೇಟ್ ಉದ್ಯಮದ ಸಾಲವಾಗಿದೆ. ಅವರಿಗೆ ಸರಕಾರಗಳು ಪ್ರತಿ ವರ್ಷ ಸಾಲ ಮನ್ನಾ ಮಾಡುತ್ತಿವೆ. ಈಗ ದೇಶದ ನಾಲ್ಕು ಪ್ರಮುಖ ಟೆಲಿಕಾಂ ಕಂಪನಿಗಳ ಮುಖ್ಯಸ್ಥರು ದಿಲ್ಲಿಯಲ್ಲಿ ಕುಳಿತುಕೊಂಡು ಹಣಕಾಸು ಸಚಿವ ಅರುಣ್ ಜೇಟ್ಲಿ ಬಳಿ ಅವರಿಗೆ 3 ಲಕ್ಷ ಕೋಟಿ ರೂಪಾಯಿಗಳನ್ನು ಜಿಎಸ್‌ಟಿಯಲ್ಲಿ ತೆರಿಗೆ ವಿನಾಯಿತಿ ನೀಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಟಾಟಾ ಮತ್ತಿತರ ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿರುವ ಕಂಪನಿಗಳು ಇಂಡೋನೇಷಿಯಾದಲ್ಲಿ ಕಲ್ಲಿದ್ದಲ ದರ ಹೆಚ್ಚಾಯಿತು ಎಂಬ ಕಾರಣಕ್ಕೆ ಪರಿಹಾರ ಬೇಡುತ್ತಿದ್ದಾರೆ. ಆದರೆ ಇದ್ಯಾವುದೂ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟವಾಗುತ್ತಿಲ್ಲ.

ರೈತರ ಸಾಲ ಮನ್ನಾ ವಿಚಾರಕ್ಕೆ ಬರುವುದಾದರೆ ಅದು ಶಾಶ್ವತ ಪರಿಹಾರ ಅಲ್ಲದಿರಬಹುದು. ಆದರೆ, ಅದು ಗಾಯಕ್ಕೆ ಹಚ್ಚುವ ಬ್ಯಾಂಡೇಜ್‌ ಇದ್ದಂತೆ. ಸಂಕಷ್ಟಗಳಿಗೆ ತಕ್ಷಣಕ್ಕೆ ನೀಡುವ ಸಮಾಧಾನ. ಅಂದರೆ, ಬರ ಬಂದಾಗ ಬರ ಪರಿಹಾರ ನೀಡಲಾಗುತ್ತದೆ. ಹಾಗಂತ ಅದು ಹವಾಮಾನ ಬದಲಾವಣೆ ಸಮಸ್ಯೆಗೆ ಉತ್ತರ ಆಗುವುದಿಲ್ಲ. ಹಾಗಂತ ನಾವು ಬರ ಬಂದಾಗ ದೂರಗಾಮಿ ನೆಲೆಯಲ್ಲಿ ಶಾಶ್ವತ ಪರಿಹಾರ ಹುಡುಕೋಣ, ಈಗ ಜನ ಸಾಯಲಿ ಅಂತ ಬಿಡಲು ಆಗುವುದಿಲ್ಲ. ಅದೇ ಮಾದರಿಯಲ್ಲಿ ರೈತರ ಸಾಲ ಮನ್ನಾ ಕೂಡ ಅಗತ್ಯವಾಗಿರುವ ತಕ್ಷಣದ ಸಮಾಧಾನ ಮಾತ್ರ. ಅದೇ ವೇಳೆ ಅದರ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸಮಾಚಾರ: ಟೆಲಿಕಾಂ ವಿಚಾರವನ್ನು ಪ್ರಸ್ತಾಪಿಸಿದಿರಿ. ಅವರೀಗ ಜಿಎಸ್‌ಟಿ ಜಾರಿಗೂ ಮುನ್ನ ವಿನಾಯಿತಿ ಕೇಳಲು ಹೋಗಿದ್ದಾರೆ. ಈ ಹೊಸ ತೆರಿಗೆ ಪದ್ಧತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಸಾಯಿನಾಥ್: ನಿಜ ಹೇಳಬೇಕು ಎಂದರೆ ಯಾರಿಗೂ ಕೂಡ ಜಿಎಸ್‌ಟಿ ಏನು ಮಾಡಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ನಮಗಿನ್ನೂ ಗೊತ್ತಿಲ್ಲದ ಸಾವಿರಾರು ಅಂಶಗಳು ಅದರೊಳಗೆ ಇವೆ. ಅದು ಹೇಗೆ ಜಾರಿಗೆ ಬರುತ್ತದೆ? ಗೊತ್ತಿಲ್ಲ. ನನಗೆ ಸದ್ಯಕ್ಕೆ ಗೊತ್ತಿರುವುದೇನು ಅಂದರೆ, ಈ ಸರಕಾರಗಳು ಎಲ್ಲವನ್ನೂ ಮಾಡುತ್ತವೆ, ಆದರೆ ಅದು ಕಾರ್ಪೊರೇಟ್ ಕುಳಗಳ ಸಮಸ್ಯೆಯ ಪರಿಹಾರಕ್ಕೆ ಹೊರತು, ಸಾರ್ವಜನಿಕರ ಸಮಸ್ಯೆಗಲ್ಲ.

ಸಮಾಚಾರ: ಅದೇಗೆ ಖಚಿತವಾಗಿ ಹೇಳ್ತಿರಾ? ಯಾಕೆ ಹಾಗನ್ಸುತ್ತೆ?

ಸಾಯಿನಾಥ್: ಯಾಕೆಂದರೆ ನಾವು ಕಾರ್ಪೊರೇಟ್‌ಗಳಿಂದ ಪರೋಕ್ಷ ಆಡಳಿತಕ್ಕೆ ಒಳಪಟ್ಟಿರುವ ದೇಶದಲ್ಲಿದ್ದೇವೆ. ಇವತ್ತಿನ ಸರಕಾರ ಜನರಿಗೆ ಉತ್ತರದಾಯಿಯಾಗಿಲ್ಲ. ಬದಲಿಗೆ ಅದಾನಿ, ಅಂಬಾನಿಗಳಿಗೆ ಉತ್ತರದಾಯಿಯಾಗಿದೆ. ಕೆಲವು ದಿನಗಳ ಹಿಂದಷ್ಟೆ ಅದಾನಿಗೆ 500 ಕೋಟಿ ಸಾಲ ಮನ್ನಾ ಮಾಡಲು ನಿಯಮವನ್ನೇ ಬದಲಿಸಲಾಗಿದೆ. ಹೀಗಾಗಿ ಜಿಎಸ್‌ಟಿ ಬಗ್ಗೆ ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನನಗೆ ಆತಂಕ ಇದೆ. ಅದು ಹೇಗೆ ಜಾರಿಗೆ ಬರುತ್ತೆ ಎಂದು ಗೊತ್ತಿಲ್ಲ. ಖಂಡಿತಾ ಸಮಾಜದಲ್ಲಿ ಗೊಂದಲ ಏರ್ಪಡುತ್ತದೆ. ಈಗಲೇ ಸ್ಪಷ್ಟವಾಗಿ ಹೇಳುವುದು ಕಷ್ಟ. ಏನೇ ಆಗಲಿ, ಒಂದು ವೇಳೆ ಸಮಸ್ಯೆಯಾದರೆ ಅದರ ಹೊರೆಯನ್ನು ಜನರಿಗೆ ಹೊರಿಸುತ್ತಾರೆ ಎಂಬುದನ್ನು ಖಂಡಿತವಾಗಿ ಹೇಳಬಹುದು.


ಪಿ. ಸಾಯಿನಾಥ್ ತಮಗೆ ಬಂದ ಮ್ಯಾಗ್ಸೆಸೆ ಪ್ರಶಸ್ತಿಯ ಹಣದಲ್ಲಿ ಗ್ರಾಮೀಣ ಭಾರತದ ಕತೆಯನ್ನು ಡಿಜಿಟಲ್ ರೂಪದಲ್ಲಿ ಶೇಖರಿಸಿ ಇಡುವ ಕೆಲಸ ಮಾಡುತ್ತಿದ್ದಾರೆ. ಪೀಪಲ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ಹೆಸರಿನಲ್ಲಿ ಆರಂಭವಾಗಿರುವ ಈ ಯೋಜನೆ, ಇವತ್ತಿನ ನಿಯತಕಾಲಿಕ; ಭವಿಷ್ಯದ ಪಠ್ಯಪುಸ್ತಕ ಎಂದು ಬಣ್ಣಿಸುತ್ತಾರೆ.

ಪಿ. ಸಾಯಿನಾಥ್ ತಮಗೆ ಬಂದ ಮ್ಯಾಗ್ಸೆಸೆ ಪ್ರಶಸ್ತಿಯ ಹಣದಲ್ಲಿ ಗ್ರಾಮೀಣ ಭಾರತದ ಕತೆಯನ್ನು ಡಿಜಿಟಲ್ ರೂಪದಲ್ಲಿ ಶೇಖರಿಸಿ ಇಡುವ ಕೆಲಸ ಮಾಡುತ್ತಿದ್ದಾರೆ. ಪೀಪಲ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ಹೆಸರಿನಲ್ಲಿ ಆರಂಭವಾಗಿರುವ ಈ ಯೋಜನೆ, ಇವತ್ತಿನ ನಿಯತಕಾಲಿಕ; ಭವಿಷ್ಯದ ಪಠ್ಯಪುಸ್ತಕ ಎಂದವರು ಬಣ್ಣಿಸುತ್ತಾರೆ.


ಸಮಾಚಾರ: ನೀವು, ಗ್ರಾಮೀಣ ಭಾರತವನ್ನು ಇಟ್ಟುಕೊಂಡು ‘ಪೀಪಲ್ ಆರ್ಕೈವ್ ಆಫ್ ರೂರಲ್ ಇಂಡಿಯಾ’ (ಪರಿ) ಯೋಜನೆ ರೂಪಿಸಿದ್ದೀರಾ? ಅದರ ಬಗ್ಗೆ ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರಾಥಮಿಕ ಮಾಹಿತಿ ಇದೆ. ಆದರೆ ಇದರ ಭವಿಷ್ಯವನ್ನು ನೀವು ಹೇಗೆ ನೋಡುತ್ತಿದ್ದೀರಾ? 

ಸಾಯಿನಾಥ್: ಪರಿ ಇವತ್ತಿನ ನಿಯತಕಾಲಿಕೆ; ಭವಿಷ್ಯದ ಪಠ್ಯ ಪುಸ್ತಕ. ಭವಿಷ್ಯದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆ ವಿಸ್ತರಿಸುತ್ತಿದ್ದಂತೆ ಗ್ರಾಮೀಣ ಪರಿಸರದಿಂದ ಬರುವ ವಿದ್ಯಾರ್ಥಿಗಳಿಗೆ ಇದು ಸಿದ್ಧ ಮಾಡಿಟ್ಟ ಪಠ್ಯ ಪುಸ್ತಕವಾಗಲಿದೆ. ಇಲ್ಲಿರುವ ಪ್ರತಿ ಮಾಹಿತಿಯೂ ಅಧಿಕೃತವಾಗಿದ್ದು. ಅವರಿಗೆ ಇದು ಮಾಹಿತಿ ಕಣಜವಾಗಲಿದೆ. ದೇಶಕ್ಕೆ ತನ್ನ ಹಿರಿಮೆಯನ್ನು ಉಳಿಸುವ ಪ್ರಯತ್ನ ಇದು. ಭವಿಷ್ಯದಲ್ಲಿ ಭಾರತೀಯರಿಗೆ ಅವರ ದೇಶದ ಕುರಿತು ಅಧ್ಯಯನ ಮಾಡಲು ಪರಿ ಪ್ರೇರಣೆ ನೀಡುತ್ತದೆ. ನಮ್ಮಲ್ಲಿ ಮಧ್ಯಮ ವರ್ಗದ ಜನ ತಮ್ಮದೇ ದೇಶದಲ್ಲಿ ವಿದೇಶಿಗರ ಹಾಗೆ ಬದುಕುತ್ತಿದ್ದಾರೆ. ಅವರಿಗೆ ಈ ದೇಶದ ಗ್ರಾಮೀಣ ಪರಿಸರ ಬಗ್ಗೆ ಮಾಹಿತಿಯೇ ಇಲ್ಲ. ಪರಿ ಈ ವಿಚಾರದಲ್ಲಿ ಇರುವ ಕಂದಕವನ್ನು ತುಂಬುವ ಪ್ರಯತ್ನ ಮಾಡುತ್ತದೆ.

(ಆಸಕ್ತರು ಪರಿ ನೋಡಲು ಇಲ್ಲಿ ಕ್ಲಿಕ್ ಮಾಡಿ)

ಸಮಾಚಾರ: ಕೊನೆಯದಾಗಿ, ಇವತ್ತಿನ ಡಿಜಿಟಲ್ ಯುಗದಲ್ಲಿ ಹುಟ್ಟುತ್ತಿರುವ ಹೊಸ ತಲೆಮಾರಿನ ನ್ಯೂಸ್‌ ಪೋರ್ಟಲ್‌ಗಳು ಕಾರ್ಪೊರೇಟ್ ಮೀಡಿಯಾ ಸಂಸ್ಥೆಗಳಿಗೆ ಪರ್ಯಾಯವಾಗಿ ಬೆಳೆಯುವ ಸಾಧ್ಯತೆ ಇದೆ ಅನ್ನಿಸುತ್ತಾ? 

ಸಾಯಿನಾಥ್: ಒಂದಷ್ಟು ಜನ ಹೊಸ ಪತ್ರಿಕೋದ್ಯಮದ ಹುಡುಕಾಟದಲ್ಲಿ ತೊಡಗಿರುವುದು ಒಳ್ಳೆಯ ಸೂಚನೆ. ಅಂತಿಮವಾಗಿ ನಾವು ನೋಡಬೇಕಿರುವುದು ಪತ್ರಿಕೋದ್ಯಮ ಆದಾಯದ ಮೂಲನಾ? ಇಲ್ಲ ಸಮಾಜದ ಅಗತ್ಯನಾ? ಎಂಬುದು. ಒಂದು ವೇಳೆ ಆದಾಯದ ಜತೆಗೆ ಪತ್ರಿಕೋದ್ಯಮ ತಳಕು ಹಾಕಿಕೊಂಡರೆ, ಅದರಲ್ಲಿ ಬರುವ ಪ್ರತಿ ಸುದ್ದಿಯ ಹಿಂದೆಯೂ ಉದ್ಯಮದ ಹಿತಾಸಕ್ತಿಯೇ ಕೆಲಸ ಮಾಡುತ್ತದೆ. ಹೀಗಾಗಿಯೇ ನಾವು ಪರ್ಯಾಯ ಉದ್ಯಮ ಮಾದರಿಯನ್ನು ಗಮನಿಸಬೇಕು. ಈ ಕಾರಣಕ್ಕಾಗಿಯೇ ‘ಪರಿ’ ಕಾರ್ಪೊರೇಟ್ ಹಾಗೂ ಸರಕಾರಗಳಿಂದ ಸಮಾನ ಅಂತರವನ್ನು ಕಾಯ್ದುಕೊಂಡಿದೆ. ಅವರ ಜತೆ ವೃತ್ತಿ ಸಂಬಂಧಗಳನ್ನು ಇಟ್ಟುಕೊಳ್ಳುವುದು ಬೇರೆ. ಆದರೆ ಹಣವನ್ನು ತೆಗೆದುಕೊಳ್ಳುವುದಿಲ್ಲ. ಜನರ ಹಣದಲ್ಲಿ ಮಾಧ್ಯಮ ಸಂಸ್ಥೆ ನಡೆಯುತ್ತಿದೆ. ಹೆಚ್ಚು ಜನರಿಂದ ಕಡಿಮೆ ಹಣವನ್ನು ತೆಗೆದುಕೊಂಡು ಮಾಧ್ಯಮ ನಡೆಸಿದರೆ ಸಹಜವಾಗಿಯೇ ಸ್ವಾತಂತ್ರ್ಯವನ್ನೂ ಉಳಿಸಿಕೊಳ್ಳಬಹುದು. ಅದು ಪರ್ಯಾಯದ ಆಲೋಚನೆಯಾಗಬೇಕು ಎಂಬುದು ನನ್ನ ನಂಬಿಕೆಯಾಗಿದೆ.

Leave a comment

Top