An unconventional News Portal.

‘ವಿಜಯ ಕರ್ನಾಟಕ’ದೊಳಗೆ ವರ್ಗಾವಣೆಗಳ ಪರ್ವ: ಏನಿದರ ಹಿಂದಿನ ಮರ್ಮ?

‘ವಿಜಯ ಕರ್ನಾಟಕ’ದೊಳಗೆ ವರ್ಗಾವಣೆಗಳ ಪರ್ವ: ಏನಿದರ ಹಿಂದಿನ ಮರ್ಮ?

ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ದಲ್ಲಿ ನಡೆದ ಬೆಳವಣಿಗೆಯೊಂದರಲ್ಲಿ ದಿಲ್ಲಿ ಬ್ಯುರೋಗೆ ಸುಭಾಷ್ ಹೂಗಾರ್ ಅವರನ್ನು ನೇಮಕ ಮಾಡಲಾಗಿದೆ.

ಮೇ ಅಂತ್ಯದೊಳಗೆ ದಿಲ್ಲಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಹುಬ್ಬಳ್ಳಿಯಿಂದ ಬಂದು, ಬೆಂಗಳೂರಿನಲ್ಲಿ ರಾಜಕೀಯ ವಿಭಾಗದ ಹೊಣೆಗಾರಿಕೆ ವಹಿಸಿಕೊಂಡಿದ್ದ ಹೂಗಾರ್ ಅವರಿಗೆ ತಿಳಿಸಲಾಗಿದೆ. ‘ವಿಕ’ದ ದಿಲ್ಲಿ ಪ್ರತಿನಿಧಿಯಾಗಿರುವ ಹಿರಿಯ ಪತ್ರಕರ್ತ ಡಿ. ಉಮಾಪತಿಯವರಿಗೆ ಬೆಂಗಳೂರಿನ ಕೇಂದ್ರ ಸ್ಥಾನಕ್ಕೆ ಬರುವಂತೆ ತಿಳಿಸಲಾಗಿದೆ. ಈ ನಡುವೆ ತಿಮ್ಮಪ್ಪ ಭಟ್ ಗುರುವಾರದಿಂದ ಸುದೀರ್ಘ ರಜೆಯ ಮೇಲೆ ತೆರಳಿದ್ದಾರೆ.

ಏನೀ ಬೆಳವಣಿಗಳು?:

“ನಮ್ಮಲ್ಲಿ ರಾಜಕೀಯ ವಿಭಾಗದ ಹೊಣೆಗಾರಿಕೆ ಹೊತ್ತುಕೊಂಡಿದ್ದ ಸುಭಾಷ್ ಹೂಗಾರ್ ಹಲವು ದಿನಗಳಿಂದ ದಿಲ್ಲಿಗೆ ಹೋಗುವುದಾಗಿ ಬೇಡಿಕೆ ಇಡುತ್ತಿದ್ದರು. ಅವರಿಗೆ ಒಂದು ಅವಕಾಶವನ್ನು ನೀಡುವ ಸಲುವಾಗಿ ಸಂಸ್ಥೆ ಈ ತೀರ್ಮಾನಕ್ಕೆ ಬಂದಿದೆ,” ಎಂದು ಪತ್ರಿಕೆಯ ಮಾನವ ಸಂಪನ್ಮೂಲ ವಿಭಾಗದ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ. ಮೇಲ್ಮಟ್ಟದಲ್ಲಿ ಇದು ಸಂಸ್ಥೆಯ ಆಂತರಿಕ ಸಂಗತಿಗಳಂತೆ ಕಾಣಿಸುತ್ತಿದ್ದರೂ, ಈ ಬೆಳವಣಿಗೆಯ ಹಿಂದೆ ಬೇರೆಯದೇ ಆಯಾಮ ಇರುವಂತಿದೆ.

ಎಲ್ಲರಿಗೂ ಗೊತ್ತಿರುವಂತೆ ‘ವಿಜಯ ಕರ್ನಾಟಕ’ ಉದ್ಯಮಿ ವಿಜಯ ಸಂಕೇಶ್ವರ ಅವರ ಕೂಸು. ಅವರು ಅದನ್ನು ಟೈಮ್ಸ್ ಸಮೂಹ ಸಂಸ್ಥೆಯ ಅಡಿಯಲ್ಲಿ ಹೊಸತಾಗಿ ಹುಟ್ಟುಹಾಕಿದ ಟಿವಿಪಿಎಲ್ಗೆ ಮಾರಾಟ ಮಾಡಿದ್ದರು. ಸದ್ಯ ಟಿವಿಪಿಎಲ್, ಮೆಟ್ರೊಪಾಲಿಟನ್ ಮೀಡಿಯಾ ಕಂಪನಿ ಲಿಮಿಟೆಡ್ (ಇದು ಕೂಡ ಟೈಮ್ಸ್ ಸಮೂಹ ಸಂಸ್ಥೆಗಳಲ್ಲಿ ಒಂದು) ನಲ್ಲಿ ವಿಲೀನಗೊಂಡಿದೆ.

times-group-logo

ಎಂಎಂಸಿಎಲ್ ‘ವಿಜಯ ಕರ್ನಾಟಕ’ಕ್ಕೆ ತಿಮ್ಮಪ್ಪ ಭಟ್ ಅವರನ್ನು ಸಂಪಾದಕರಾಗಿ ಕರೆತಂದ ನಂತರ ಸಂಸ್ಥೆಯೊಳಗೆ ಸಾಕಷ್ಟು ಬದಲಾವಣೆಗಳಾಗಿವೆ; ಅದರ ಸಂಪಾದಕೀಯ ನಿಲುವುಗಳೂ ಕೂಡ. ಹಿಂದೆ ಇ. ರಾಘವನ್ ಹಾಗೂ ಸುಗತ ಶ್ರೀನಿವಾಸರಾಜು ಸಂಪಾದಕರಾಗಿದ್ದ ಕಾಲದಲ್ಲಿ ‘ಪತ್ರಿಕೆ’ ಅತ್ಯಾಚಾರದ ಆರೋಪಕ್ಕೆ ಗುರಿಯಾದ ನಂತರ ರಾಘವೇಶ್ವರ ಭಾರತಿ ಸ್ವಾಮೀಜಿ ಕಾರ್ಯಕ್ರಮಗಳನ್ನು ವರದಿ ಮಾಡುವುದನ್ನು ನಿಲ್ಲಿಸಿತ್ತು. ಆದರೆ ತಿಮ್ಮಪ್ಪ ಭಟ್ ಬರುತ್ತಲೇ, ರಾಮಚಂದ್ರಪುರ ಮಠದ ಸಾಮಾನ್ಯ ಕಾರ್ಯಕ್ರಮಗಳೂ ಪತ್ರಿಕೆಯಲ್ಲಿ ದೊಡ್ಡ ಜಾಗವನ್ನು ಆಕ್ರಮಿಸಿಕೊಂಡವು. ಜತೆಗೆ ಅಂಕಣಕಾರರು ಕೂಡ ಬದಲಾದರು.

ಮೊದಲಿನ ಹಾಗೆ ನೇರವಂತಿಕೆಯಲ್ಲಿ ಅಂಕಣ ಬರೆಯುತ್ತಿದ್ದವರು ಡಿ. ಉಮಾಪತಿ. 1996ರ ಸುಮಾರಿಗೆ ‘ಕನ್ನಡ ಪ್ರಭ’ಕ್ಕೆ ದಿಲ್ಲಿ ಪ್ರತಿನಿಧಿಯಾಗಿ ಹೋಗಿದ್ದ ಉಮಾಪತಿ, ದೇಶದ ರಾಜಧಾನಿಯಲ್ಲಿ ಅತೀ ದೀರ್ಘ ಕಾಲ ಕನ್ನಡ ಪತ್ರಿಕೆಗೆ ವರದಿ ಮಾಡಿದ ಪತ್ರಕರ್ತ ಎನ್ನಿಸಿಕೊಂಡವರು. ‘ವಿಕ’ದಲ್ಲಿ ರಾಘವನ್ ಇದ್ದಾಗಲೇ, 2012ರ ಸುಮಾರಿಗೆ ಅವರನ್ನು ಸಂಪಾದಕರಾಗಿ ಕರೆತರುವ ಪ್ರಯತ್ನ ನಡೆದಿತ್ತು. ಆದರೆ ವೈಯುಕ್ತಿಕ ಕಾರಣಗಳಿಗಾಗಿ ಉಮಾಪತಿ ಬೆಂಗಳೂರಿಗೆ ಬರಲು ಒಪ್ಪಿರಲಿಲ್ಲ.

ಇದೀಗ, ಸುಭಾಷ್ ಹೂಗಾರ್ ಅವರನ್ನು ದಿಲ್ಲಿಗೆ ಕಳುಹಿಸಿ, ಉಮಾಪತಿ ಅವರನ್ನು ಕರೆಸಿಕೊಳ್ಳಲು ಸಂಪಾದಕ ತಿಮ್ಮಪ್ಪ ಭಟ್ ಮುಂದಾಗಿದ್ದಾರೆ. ಆದರೆ, ಉಮಾಪತಿಯವರ ಅದೇ ವೈಯುಕ್ತಿಕ ಕಾರಣಗಳಿಂದಾಗಿ ಬೆಂಗಳೂರಿಗೆ ಈ ಸಾರಿಯೂ ಬರುವುದು ಕಷ್ಟ ಎನ್ನುತ್ತವೆ ‘ಪತ್ರಿಕೆ’ ಮೂಲಗಳು.

“ಸದ್ಯ ಸಂಸ್ಥೆ ತೀರ್ಮಾನ ತೆಗೆದುಕೊಂಡಿದೆ. ಇನ್ನೂ ಒಂದು ತಿಂಗಳು ಕಾಲಾವಕಾಶ ಇದೆ. ಹೀಗಾಗಿ ಮುಂದೇನಾಗಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟ,” ಎಂಬುದು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಪ್ರತಿಕ್ರಿಯೆ. ಈ ಕುರಿತು ಪ್ರತಿಕ್ರಿಯೆಗೆ ಉಮಾಪತಿ ಹಾಗೂ ತಿಮ್ಮಪ್ಪ ಭಟ್ ಇಬ್ಬರೂ ಲಭ್ಯರಾಗಲಿಲ್ಲ.

ಹಣಿಯುವ ಪ್ರಯತ್ನ?:

raghaveshwara-swamy

ಸದ್ಯ ‘ವಿಕ’ದ ಬೆಳವಣಿಗೆಗಳನ್ನು ಗಮನಿಸಿದರೆ, “ರಾಘವೇಶ್ವರ ಭಾರತಿ ಸ್ವಾಮಿ ಅತ್ಯಾಚಾರ ಪ್ರಕರಣಗಳ ಸುತ್ತ ಸಾಕಷ್ಟು ಬಾರಿ ವರದಿ ಮಾಡಿದ್ದ ಉಮಾಪತಿಯವರನ್ನು ಹಣಿಯುವ ಪ್ರಯತ್ನದಂತೆ ಕಾಣಿಸುತ್ತಿದೆ,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು. ತಿಮ್ಮಪ್ಪ ಭಟ್ ಸಂಪಾದಕರಾಗಿ ಬಂದ ನಂತರ, ಪತ್ರಿಕೆಯ ಆಯಕಟ್ಟಿನ ಜಾಗಗಳಿಗೆ ಅವರ ಆಪ್ತರನ್ನು ಕರೆತರುವ ಪ್ರಯತ್ನಗಳು ನಡೆದಿರುವುದು ಢಾಳಾಗಿ ಕಾಣಿಸುತ್ತಿದೆ. ಜತೆಗೆ, ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯುವ ಪ್ರಯತ್ನವನ್ನು ಭಟ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿಸುವಂತಿದೆ ಅವರ ನಡೆಗಳು.

ಕನ್ನಡ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳಲ್ಲಿ ಇಂತಹ ಅಪಸವ್ಯಗಳೂ ಕೂಡ ಒಂದು. ಪ್ರತಿ ಸಂಸ್ಥೆಯ ಮುಖ್ಯಸ್ಥರು ಬದಲಾವಣೆ ಆದಾಗಲೂ, ಅವರ ಕೋರಂ (ಗುಂಪು) ಅಧಿಕಾರದ ಸ್ಥಾನದ ಸುತ್ತ ನೆರೆಯುವುದು, ಉಳಿದವರನ್ನು ಹಣಿಯುವ ಪ್ರಯತ್ನ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಆದರೆ, ಆರ್ಥಿಕ ಆಯಾಮವನ್ನಷ್ಟೆ ಜೀವಾಳ ಮಾಡಿಕೊಂಡಿರುವ ಟೈಮ್ಸ್ ಸಮೂಹದ ಪತ್ರಿಕೆಯೊಂದರಲ್ಲಿ ಇದಕ್ಕೆಲ್ಲಾ ಅವಕಾಶಗಳು ಕಡಿಮೆ ಎಂಬ ನಂಬಿಕೆಗಳಿವೆ. ಸದ್ಯ ‘ವಿಕ’ದ ಬೆಳವಣಿಗೆಗಳು ಈ ನಂಬಿಕೆಯನ್ನು ಅಲುಗಾಡಿಸುತ್ತಿವೆ.

ಮುಂದೆ, ಉಮಾಪತಿ ತೆಗೆದುಕೊಳ್ಳುವ ನಿಲುವು ಹಾಗೂ ಸಂಸ್ಥೆ ಅದನ್ನು ಸ್ವೀಕರಿಸುವ ರೀತಿಯ ಮೇಲೆ ಭವಿಷ್ಯ ನಿಂತಿದೆ ಎಂದಷ್ಟೆ ಸದ್ಯಕ್ಕೆ ಹೇಳಬಹುದಾಗಿದೆ.

ENTER YOUR E-MAIL

Name
Email *
May 2017
M T W T F S S
« Apr    
1234567
891011121314
15161718192021
22232425262728
293031  

Top