An unconventional News Portal.

‘ಮ್ಯಾಟ್ನಿ ಶೋ’: ಒಂದು ಮಧ್ಯಾಹ್ನ ನಡೆದ ವಿಜಯ್ ಮಲ್ಯ ಬಂಧನ; ಬಿಡುಗಡೆ ಪ್ರಹಸನ!

‘ಮ್ಯಾಟ್ನಿ ಶೋ’: ಒಂದು ಮಧ್ಯಾಹ್ನ ನಡೆದ ವಿಜಯ್ ಮಲ್ಯ ಬಂಧನ; ಬಿಡುಗಡೆ ಪ್ರಹಸನ!

“ಭಾರತದ ಇವತ್ತಿನ ವಾತಾವರಣವನ್ನು ಮೊದಲು ಗಮನಿಸಬೇಕಿದೆ. ಎಲೆಕ್ಟ್ರಾನಿಕ್ ಮೀಡಿಯಾ (ಸುದ್ದಿ ವಾಹಿನಿಗಳು) ಬರೀ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ; ಜತೆಗೆ ಸರಕಾರಕ್ಕೂ ದೊಡ್ಡ ಮಟ್ಟದಲ್ಲಿ ಒತ್ತಡ ಹೇರುತ್ತಿವೆ…”

ಹೀಗಂದಿದ್ದು ಬೇರೆ ಯಾರೂ ಅಲ್ಲ; ಸ್ವತಃ ವಿಜಯ್ ಮಲ್ಯ. 2016ರ ಮಾರ್ಚ್‌ 2ರಂದು ದೇಶ ಬಿಟ್ಟು ಪರಾರಿಯಾದ ನಂತರ ಮೊದಲ ಬಾರಿಗೆ ಲಂಡನ್ ಮೂಲದ ‘ಫೈನಾನ್ಸಿಯಲ್ ಟೈಮ್ಸ್’ಗೆ ನೀಡಿದ ನಾಲ್ಕು ಗಂಟೆಗಳ ಸಂದರ್ಶನದಲ್ಲಿ ಮಲ್ಯ ತಮ್ಮ ಮನದ ಮಾತುಗಳನ್ನು ಹೇಳಿದ್ದರು. ಅದರಲ್ಲಿ ತಾವು ಸಾಲ ವಾಪಾಸ್ ಮಾಡುವ ಮನಸ್ಸು ಮಾಡಿದರೂ, ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟವಾಗುತ್ತಿದೆ. ಇದಕ್ಕೆ ಮಾಧ್ಯಮಗಳ ಕೊಡುಗೆ ದೊಡ್ಡದಿದೆ ಎಂದು ಆರೋಪವನ್ನೂ ಮಾಡಿದ್ದರು.

ಇದಕ್ಕೆ ಪೂರಕ ಎಂಬಂತೆ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ದೇಶದ ಹೆಚ್ಚು ಕಡಿಮೆ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ‘ವಿಜಯ್ ಮಲ್ಯ ಬಂಧನ’ ಎಂಬ ಬ್ರೇಕಿಂಗ್ ನ್ಯೂಸ್‌ನ ಪ್ರಸಾರ ಆರಂಭವಾಯಿತು. ಲಂಡನ್‌ ಕಾಲಮಾನ ಬೆಳಗ್ಗೆ 9. 30ಕ್ಕೆ ಮಲ್ಯ ಬಂಧನವಾಗಿದೆ ಎಂಬ ಸುದ್ದಿಯನ್ನು ಅವು ನೀಡತೊಡಗಿದವು. ಕೆಲವು ಪ್ರಮುಖ ರಾಷ್ಟ್ರೀಯ ವಾಹಿನಿಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿ ‘ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಶುರುವಾಗಿದೆ. ಇದು ಪ್ರಧಾನಿ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ರಾಜತಾಂತ್ರಿಕ ಮಾತುಕತೆಗೆ ಸಿಕ್ಕ ಫಲ’ ಎಂದು ಬಣ್ಣಿಸಲು ಶುರು ಮಾಡಿದವು. ಯಥಾ ಪ್ರಕಾರ ಮಲ್ಯ ಮರುಪಾವತಿ ಮಾಡಬೇಕಿರುವ 9 ಸಾವಿರ ಕೋಟಿ ರೂಪಾಯಿಗಳ ಬಗ್ಗೆಯೂ ರಂಗು ರಂಗಿನ ವಿಶ್ಲೇಷಣೆ ಶುರುವಾಯಿತು.

ಇನ್ನೇನು ಮಲ್ಯರನ್ನು ಹಿಡಿದುಕೊಂಡು ಭಾರತಕ್ಕೆ ಬಂದೇ ಬಿಟ್ಟರು ಎಂಬ ಭ್ರಮೆ ವೀಕ್ಷಕರಲ್ಲಿ ವ್ಯಾಪಿಸುವ ಹೊತ್ತಿಗೆ ‘ಮಲ್ಯಗೆ ಜಾಮೀನು’ ಎಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸ್ಫೋಟಗೊಂಡಿತು. ಹೀಗೆ, ಕೆಲವು ದಿನಗಳಿಂದ ನಮ್ಮ ಸುದ್ದಿ ಕೇಂದ್ರದಿಂದ ಮಾಯವಾದಂತಾಗಿದ್ದ ವಿಜಯ್ ಮಲ್ಯ ಮತ್ತೊಮ್ಮೆ ಭಾರತೀಯರಿಗೆ ನೆನಪಾಗುವಂತಾಯಿತು.

ನಿಜಕ್ಕೂ ನಡೆದಿದ್ದೇನು?:

ಕಳೆದ ವರ್ಷದ ಆರಂಭದಲ್ಲಿಯೇ ದೇಶ ಬಿಟ್ಟು ಪರಾರಿಯಾದ ವಿಜಯ್ ಮಲ್ಯ ಲಂಡನ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಒಂದು ಕಡೆ ಅವರು ಕಿಂಗ್ ಫಿಶರ್ ಏರ್‌ಲೈನ್ಸ್‌ ಸಂಸ್ಥೆ ಹೆಸರಿನಲ್ಲಿ ಸುಮಾರು 16 ಬ್ಯಾಂಕುಗಳಿಂದ ಪಡೆದ 9 ಸಾವಿರ ಕೋಟಿ ಸಾಲ ಮರುಪಾವತಿಗೆ ಪ್ರಕ್ರಿಯೆಗಳು ನಡೆಯುತ್ತಿವೆ. ಜತೆಗೆ, ಹಣಕಾಸು ಇಲಾಖೆ, ಜಾರಿ ನಿರ್ದೇಶನಾಲಯಗಳು ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಬೇಡಿಕೆ ಮುಂದಿಟ್ಟಿವೆ.

ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಸೆಂಟ್ರಲ್ ಲಂಡನ್‌ ಪೊಲೀಸ್‌ ಠಾಣೆಗೆ ಹಾಜರಾಗುವಂತೆ ಮಲ್ಯಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಮಲ್ಯ ಆಗಮಿಸುತ್ತಿದ್ದಂತೆ ಬಂಧಿಸಿದ ಪೊಲೀಸರು ವೆಸ್ಟ್‌ ಮಿನಿಸ್ಟರ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಲ್ಲಿ ಭಾರತರ ಕಡೆಯಿಂದಲೂ ವಾದವನ್ನು ಆಲಿಸಿದ ನಂತರ ಮಲ್ಯಗೆ ಜಾಮೀನು ನೀಡಲಾಯಿತು.

ಈ ಪ್ರಕ್ರಿಯೆಯನ್ನು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ವಿವರಿಸಿದ ಬಿಬಿಸಿ ಪತ್ರಕರ್ತ ವಿಜಯ್‌ ರಾಣಾ, “ಈ ದೇಶದಲ್ಲಿ (ಯುಕೆ) ಗುರುತರ ಆರೋಪಗಳು ಇಲ್ಲದಿದ್ದರೆ ಜೈಲಿನಲ್ಲಿ ಆರೋಪಿಗಳನ್ನು ತಿಂಗಳಾನುಗಟ್ಟಲೆ ಇಟ್ಟು ಕೊಳೆಸುವ ಸಂಸ್ಕೃತಿ ಇಲ್ಲ. ಈಗಷ್ಟೆ ಮಲ್ಯ ಪ್ರಕರಣದಲ್ಲಿ ವಿಚಾರಣೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಭಾರತ ಕಡೆಯಿಂದ ಪ್ರಬಲ ಸಾಕ್ಷ್ಯಾಧಾರಗಳನ್ನು ಸಲ್ಲಿಕೆ ಮಾಡಿದರೆ ಮಲ್ಯ ಗಡೀಪಾರಿಗೆ ನ್ಯಾಯಾಲಯ ಒಪ್ಪಬಹುದು. ಸದ್ಯ ಅವರ (ಮಲ್ಯ) ಪರವಾಗಿ ಇಲ್ಲಿನ ಅತ್ಯಂತ ನುರಿತ ವಕೀಲರು ವಾದ ಮಂಡಿಸುತ್ತಿದ್ದಾರೆ,” ಎಂದರು.

ಮಲ್ಯ ಪ್ರತಿಕ್ರಿಯೆ:

ಇದೊಂದು ನಿರೀಕ್ಷಿತ ಬೆಳವಣಿಗೆ ಮತ್ತು ಯಥಾ ಪ್ರಕಾರ ಮಾಧ್ಯಮಗಳ ‘ಹೈಪ್’ ಇದು ಎಂದು ಸ್ವತಃ ವಿಜಯ್ ಮಲ್ಯ ಟ್ವೀಟ್ ಮಾಡಿದರು.

ಮುಂದೇನು?:

ಇತರೆ ದೇಶಗಳಿಗೆ ಹೋಲಿಸಿದರೆ ಯುಕೆಯಲ್ಲಿ ಮಾನವ ಹಕ್ಕುಗಳ ಕುರಿತು ಸೂಕ್ಷ್ಮ ಎನ್ನಿಸುವಂತಹ ಕಾನೂನುಗಳಿವೆ. ವ್ಯಕ್ತಿ ಗೌರವಗಳನ್ನು ಕಾಪಾಡಲು ನ್ಯಾಯಾಲಯಗಳು ಪ್ರಾಮುಖ್ಯತೆ ನೀಡುತ್ತವೆ. ಈ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ತಮ್ಮ ಬಂಧನದ ವಾಸನೆ ಸಿಗುತ್ತಿದ್ದಂತೆ ಲಂಡನ್‌ ಸೇರಿಕೊಂಡಿದ್ದಾರೆ. ಸದ್ಯ ಗಡೀಪಾರಿನ ಕುರಿತು ನ್ಯಾಯಾಲಯದಲ್ಲಿ ವಿಚಾರಣೆಯಷ್ಟೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಭಾರತ ಸರಕಾರ ಪ್ರಬಲ ಸಾಕ್ಷಿಗಳನ್ನು ಮುಂದಿಡುವ ಮೂಲಕ ಮಲ್ಯ ಅವರನ್ನು ಕರೆತರುವ ಕೆಲಸ ಮಾಡಬೇಕಿದೆ. ಏನೇ ಆದರೂ, ಅದು ಸಾಕಷ್ಟು ಸಮಯ ಬೇಡುವ ಪ್ರಕ್ರಿಯೆ.

ಸದ್ಯ ಸಾರ್ವಜನಿಕ ಬ್ಯಾಂಕುಗಳಿಂದ ಸಾಲ ಪಡೆದು, ಅದ್ದೂರಿ ಜೀವನ ನಡೆಸಿದ ಮಲ್ಯ ಕೊನೆಗೆ ಸಾಲ ತೀರಿಸಲಾಗದೆ ಪರಾರಿಯಾಗಿದ್ದಾರೆ. ಆದರೆ ಅಂತಹ ಸಾಕಷ್ಟು ಕುಳಗಳು ಇನ್ನೂ ಭಾರತದಲ್ಲಿಯೇ ಇವೆ. ಅನೇಕ ಉದ್ಯಮಿಪತಿಗಳು ಇವತ್ತಿಗೂ ಬ್ಯಾಂಕುಗಳಿಂದ ಪಡೆದ ತೀರಿಸದೆ ತಮ್ಮ ನಿತ್ಯ ಐಶಾರಾಮಿ ಬದುಕನ್ನು ಬದುಕುತ್ತಿದ್ದಾರೆ. ಅವರ ಒಂದು ಪಟ್ಟಿ ಇಲ್ಲಿದೆ.

ಕೃಪೆ: ನ್ಯೂಸ್ ಲಾಂಡ್ರಿ

ಕೃಪೆ: ನ್ಯೂಸ್ ಲಾಂಡ್ರಿ

ಮಲ್ಯ ವಿಚಾರಕ್ಕೆ ಬಂದಾಗ ತುಸು ಹೆಚ್ಚೇ ಎಗ್ಸೈಟ್ ಆಗುವ ಮಾಧ್ಯಮಗಳು, ಇತರೆ ಸಾಲದಾರರ ವಿಚಾರದಲ್ಲಿ ಮುಗುಮ್ಮಾಗಿರುವುದೇಕೆ? ಜಾಣ ಮೌನಕ್ಕೆ ಮೊರೆ ಹೋಗುವುದು ಏಕೆ? ಇಂತಹ ಘಟನೆಗಳು ನಡೆದಾಗಲೆಲ್ಲಾ ಇಂತಹದೊಂದು ಪ್ರಶ್ನೆಗಳು ಸಹಜವಾಗಿಯೇ ಹುಟ್ಟುತ್ತವೆ.

Leave a comment

Top