An unconventional News Portal.

ಚುನಾಯಿತ ಸರಕಾರದ ತೆಕ್ಕೆಗೆ ಮರಳಿದ ಉತ್ತರಖಾಂಡ್: ರಾಷ್ಟ್ರಪತಿ ಆಳ್ವಿಕೆ ಹಿಂತೆಗೆಯಲು ಸುಪ್ರೀಂ ಸೂಚನೆ

ಚುನಾಯಿತ ಸರಕಾರದ ತೆಕ್ಕೆಗೆ ಮರಳಿದ ಉತ್ತರಖಾಂಡ್: ರಾಷ್ಟ್ರಪತಿ ಆಳ್ವಿಕೆ ಹಿಂತೆಗೆಯಲು ಸುಪ್ರೀಂ ಸೂಚನೆ

ಉತ್ತರಖಾಂಡ್ ಎಂಬ ಪುಟ್ಟ ರಾಜ್ಯದಲ್ಲಿ ಮತ್ತೆ ಚುನಾಯಿತ ಸರಕಾರದ ಆಳ್ವಿಕೆ ಶುರುವಾಗಲಿದೆ.

ವಿಶ್ವಾಸ ಮತ ಯಾಚನೆಯಲ್ಲಿ ಕಾಂಗ್ರೆಸ್ ಪಕ್ಷದ ಹರೀಶ್ ರಾವತ್ ಸರಕಾರ ಅಗತ್ಯ ಬಹುಮತ ಗಳಿಸಿದೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಬುಧವಾರ ಸಂಜೆಯೊಳಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸುವಂತೆ ಸೂಚಿಸಿದೆ.

ಕಳೆದ ಕೆಲವು ದಿನಗಳಿಂದ ಉತ್ತರಖಾಂಡ್ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳು ಈ ಮೂಲಕ ತಾರ್ಕಿಕ ಅಂತ್ಯ ಕಾಣುವಂತಾಗಿವೆ. ಕೇಂದ್ರ ಸರಕಾರಕ್ಕೆ ಇದು ಭಾರಿ ಮುಖಭಂಗ ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಸಂಬಂಧವನ್ನು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬರುವಂತೆ ಮಾಡಿದ್ದು ಇಲ್ಲಿ ನಡೆದ ಬೆಳವಣಿಗೆಗಳು. ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಅದರದ್ದೇ ಶಾಸಕರು ಬಂಡಾಯವೆದ್ದ ನೆಪವನ್ನು ಮುಂದಿಟ್ಟು ಕೇಂದ್ರ ಸರಕಾರ ರಾಷ್ಟ್ರಪತಿ ಆಳ್ವಿಕೆ ಹೇರಿತು.

ಇದರ ವಿರುದ್ಧ ನಡೆದ ನ್ಯಾಯಾಂಗ ಹೋರಾಟದಲ್ಲಿ ಸ್ಥಳೀಯ ಸರಕಾರದ ಸಾರ್ವಭೌಮತೆಯನ್ನು ನೈನಿತಾಲ್ ಹೈರ್ಕೋರ್ಟ್ ಎತ್ತಿ ಹಿಡಿದಿತ್ತು. ಇದನ್ನು ಒಂದು ಹಂತದಲ್ಲಿ ತಡೆ ಹಿಡಿದಿದ್ದ ಸುಪ್ರಿಂ ಕೋರ್ಟ್ ಕೊನೆಗೂ ಮುಖ್ಯಮಂತ್ರಿ ಹರೀಶ್ ರಾವತ್ ಸರಕಾರಕ್ಕೆ ವಿಶ್ವಾಸ ಮತ ಯಾಚನೆಗೆ ಅವಕಾಶ ಮಾಡಿಕೊಟ್ಟಿತು.

ಮಂಗಳವಾರ ಉತ್ತರಖಾಂಡ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್ ಸರಕಾರ ಮರಳಿ ಅಧಿಕಾರ ಹಿಡಿಯುವುದು ಖಚಿತವಾಗಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಬೆಳವಣಿಗೆಗಳ ಮೇಲೊಂದು ಪಕ್ಷಿ ನೋಟ ಇಲ್ಲಿದೆ:


 

  1. ವಿಶ್ವಾಸಮತ ಯಾಚನೆ ಕಲಾಪದ 90 ನಿಮಿಷಗಳ ದೃಶ್ಯಾವಳಿಗಳನ್ನು ಸುಪ್ರಿಂ ಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದು, ನ್ಯಾಯಾಲಯ ವೀಕ್ಷಿಸಿದ ನಂತರ ಸ್ಥಳೀಯ ಸರಕಾರಕ್ಕೆ ಆಡಳಿತ ಮುಂದುವರಿಸಲು ಔಪಚಾರಿಕ ಅನುಮತಿ ನೀಡಿದೆ.

  2. “ಇದು ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಭಾರಿ ಹಿನ್ನಡೆ,” ಎಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ. “ಇದು ಪ್ರಜಾಪ್ರಭುತ್ವದ ವಿಜಯ,” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಸುಪ್ರಿಂ ಅಂತಿಮ ಆದೇಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಾಳೆಯದಲ್ಲಿ ವಿಜಯೋತ್ಸವ ಆರಂಭವಾಗಿದೆ.

  3. 70 ಸದಸ್ಯ ಬಲದ ಉತ್ತರಖಾಂಡ್ ವಿಧಾನಸಭೆಯಲ್ಲಿ 9 ಮಂದಿ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಹೀಗಾಗಿ ಉಳಿದ 61 ಶಾಸಕರು ವಿಶ್ವಾಸ ಮತದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ 33 ಜನ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಪಕ್ಷದ ಮೂಲಗಳು ಬಹಿರಂಗಪಡಿಸಿವೆ. ವಿರೋಧ ಪಕ್ಷ ಬಿಜೆಪಿಗೆ 28 ಶಾಸಕರು ಮತ ಚಲಾಯಿಸಿದ್ದಾರೆ ಎಂದು ಹೇಳಿವೆ.

  4. ಕಾಂಗ್ರೆಸ್ ಪಕ್ಷಕ್ಕೆ ಬಿಎಸ್ಪಿಯ ಒಬ್ಬ ಶಾಸಕ ಹಾಗೂ ಪಿಡಿಎಫ್ (ಪ್ರಗತಿಪರ ಪ್ರಜಸತ್ತಾತ್ಮಕ ಒಕ್ಕೂಟ)ದ 6 ಮಂದಿ ಶಾಸಕರು ಮತ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ.

  5. ಬಿಜೆಪಿಯ ಬಂಡಾಯ ಶಾಸಕರೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾವಣೆ ಮಾಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

  6. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಿಶ್ವಾಸ ಮತ ಯಾಚನೆ ಸಮಯದಲ್ಲಿ ಮಾತ್ರ ಹಿಂತೆದುಕೊಳ್ಳಲಾಗಿತ್ತು. ಸುಪ್ರಿಂ ಕೋರ್ಟ್ ನೇಮಿಸಿದ್ದ ವೀಕ್ಷಕರನ್ನು ಮಾತ್ರವೇ ಕಲಾಪದ ಸಮಯದಲ್ಲಿ ಒಳಗೆ ಬಿಟ್ಟುಕೊಳ್ಳಲಾಗಿತ್ತು.

Leave a comment

Top