An unconventional News Portal.

ಉತ್ತರಖಾಂಡ್ ಕಾಡ್ಗಿಚ್ಚು: ಟಿಂಬರ್ ಮಾಫಿಯಾ ಸುತ್ತ ಅನುಮಾನದ ಹುತ್ತ!

ಉತ್ತರಖಾಂಡ್ ಕಾಡ್ಗಿಚ್ಚು: ಟಿಂಬರ್ ಮಾಫಿಯಾ ಸುತ್ತ ಅನುಮಾನದ ಹುತ್ತ!

ಉತ್ತರಾಖಾಂಡ್ ರಾಜ್ಯದಲ್ಲಿ ಕಾಣಿಸಿಕೊಂಡ ಭಾರಿ ಕಾಡ್ಗಿಚ್ಚು ಈಗ ಹತೋಟಿಗೆ ಬರುತ್ತಿದೆ.

2000 ಹೆಕ್ಟೇರ್ ಅರಣ್ಯ ಅಗ್ನಿಗಾಹುತಿಯಾಗಿದೆ. ಒಣಹವೆಯಿಂದಾಗಿ ಮರಗಳ ನಡುವೆ ಘರ್ಷಣೆಯಿಂದ ಕಾಳ್ಗಿಚ್ಚು ಹಬ್ಬಿರಬಹುದೆಂದು ಮೊದಲು ಶಂಕಿಸಲಾಗಿತ್ತು. ಈಗ ಬೆಂಕಿಯ ಹಿಂದೆ ದುಷ್ಕರ್ಮಿಗಳ ಕೈವಾಡವಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಿರುವುದಾಗಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

“ಪ್ರಕರಣದ ತನಿಖೆ ನಡೆಯುತ್ತಿದ್ದು, ಸಂಚುಕೋರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ,” ಜಾವಡೇಕರ್ ಹೇಳಿದ್ದಾರೆ.

6000ಕ್ಕೂ ಅಧಿಕ ಮಂದಿ ಬೆಂಕಿ ನಂದಿಸುವಲ್ಲಿ ನಿರತವಾಗಿದ್ದು, ಶೇ.70ರಷ್ಟು ಬೆಂಕಿ ಹತೋಟಿಗೆ ಬಂದಿದೆ. ಸ್ಯಾಟಲೈಟ್ನಿಂದ ತೆಗೆದಿರುವ ಫೋಟೋಗಳಲ್ಲಿ ಇದು ಸ್ಪಷ್ಟವಾಗಿದೆ. 427 ಕಡೆ ಹೊತ್ತಿದ್ದ ಬೆಂಕಿಯನ್ನು ಅರ್ಧದಷ್ಟು ಹತೋಟಿಗೆ ತರಲಾಗಿದೆ.

ಈ ಮಧ್ಯೆ, ಬೆಂಕಿಯ ಹಿಂದೆ ಟಿಂಬರ್ ಮಾಫಿಯಾ ಕೈವಾಡ ಇರುವ ಬಗ್ಗೆಯೂ ಉತ್ತರಾಖಾಂಡ್ ಸ್ಥಳೀಯರು ಸೋಶಿಯಲ್ ಮೀಡಿಯಾಗಳಲ್ಲಿ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ. ‘ಬಿಲ್ಡರ್ಗಳು ತಮ್ಮ ಯೋಜನೆಗಳಿಗೆ ಅರಣ್ಯ ಭೂಮಿಯನ್ನ ಬಳಸಿಕೊಳ್ಳಲು ಇಂತಹ ಸಂಚು ರೂಪಿಸಿದ್ದಾರೆ. ಅಗ್ನಿಯ ಕೆನ್ನಾಲಿಗೆಗೆ ಸಿಲುಕಿ ಅರಣ್ಯದ ಜೀವ ವೈವಿಧ್ಯ ನಶಿಸಿಹೋದರೆ ತಮ್ಮ ಯೋಜನೆಗಳಿಗೆ ಸುಲಭವಾಗಿ ಅನುಮತಿ ದೊರೆಯುತ್ತೆ ಎಂಬುದು ಅಲ್ಲಿನ ಬಿಲ್ಡರ್ಗಳ ಪ್ಲಾನ್’ ಎಂದು ಆರೋಪಿಸಲಾಗುತ್ತಿದೆ.

uttakhand-forest-fire-2

“ಈ ಟಿಂಬರ್ ಮಾಫಿಯಾ ಜತೆ ಅರಣ್ಯ ಅಭಿವೃದ್ಧಿ ನಿಗಮವೂ ಕೈಜೋಡಿಸಿದೆ. ಸತ್ತ ಹಾಗೂ ಒಣ ಮರಗಳನ್ನು ನಿಗಮ ಹರಾಜಿನ ಮೂಲಕ ಮಾರಾಟ ಮಾಡುತ್ತದೆ. ಇದೀಗ ಸಾವಿರಾರು ಮರಗಳು ಸುಟ್ಟುಹೋಗಿವೆ. ಇವುಗಳ ಮಾರಾಟದಿಂದ ನಿಗಮಕ್ಕೆ ದೊಡ್ಡ ಆದಾಯ ಸಿಗಲಿದ್ದು, ಇದು ಮರ ಮಾರಾಟ ಮಾಫಿಯಾಗೆ ಕೂಡಾ ದೊಡ್ಡ ಮೊತ್ತದ ಲಾಭ ತರುತ್ತದೆ,” ಎಂಬ ದೂರುಗಳು ವ್ಯಾಪಕವಾಗಿವೆ.

ಅರಣ್ಯ ನಾಶವಾದ ಪ್ರದೇಶವನ್ನು ಭೂ ಪರಿವರ್ತನೆ ಉದ್ದೇಶಗಳಿಗೆ ನೀಡಬಹುದು ಎಂಬ ಕಾರಣಕ್ಕೆ ಭೂ ಮಾಫಿಯಾ ಕೂಡಾ ಇದರ ಹಿಂದೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಆದರೆ ಸರ್ಕಾರ ಇಂಥ ಪರಿಸ್ಥಿತಿ ಎದುರಿಸಲು ಸಜ್ಜಾಗಿಲ್ಲದೇ ಇದ್ದುದೇ ಈ ಭೀಕರತೆಗೆ ಕಾರಣ ಎಂದು ಪರಿಸರವಾದಿಗಳಾದ ಅನಿಲ್ ಜೋಶಿ ಹಾಗೂ ಸುರೇಶ್ ಭಾಯ್ ಅಭಿಪ್ರಾಯಪಡುತ್ತಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ

ಉತ್ತರಾಖಂಡ್’ನಲ್ಲಿ ಕಾಡ್ಗಿಚ್ಚು ತಣ್ಣಗಾಗುತ್ತಿದೆ. ಶೇ. 70ರಷ್ಟು ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ ಎಂದು ಎನ್’ಡಿಆರ್’ಎಫ್ ತಿಳಿಸಿದೆ. ಇಡೀ ರಾಜ್ಯವೇ ದಹನವಾಗಿ ಅಕ್ಕಪಕ್ಕದ ರಾಜ್ಯಗಳಿಗೂ ಬೆಂಕಿಯ ಕೆನ್ನಾಲಿಗೆ ಹರಡುವ ಅಪಾಯವಿದ್ದ ಹಿನ್ನೆಲೆಯಲ್ಲಿ ಈ ಸುದ್ದಿ ಸಮಾಧಾನ ತಂದಿದೆ. ಹವಾಮಾನ ಇಲಾಖೆಯೂ ಕೂಡ ಖುಷಿಯ ಸುದ್ದಿ ನೀಡಿದೆ. ಮಂಗಳವಾರ ಉತ್ತರಾಖಾಂಡ್ ರಾಜ್ಯದಲ್ಲಿ ಭಾರೀ ಮಳೆ ಸುರಿಯಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಸುರಿದರೆ ಬಹುತೇಕ ಕಾಡ್ಗಿಚ್ಚು ಶಮನಗೊಳ್ಳಲಿದೆ.

Leave a comment

Top