An unconventional News Portal.

ವಾರಣಾಸಿಯತ್ತ ಎಲ್ಲರ ಚಿತ್ತ: ಯುಪಿ ಚುನಾವಣೆಯಲ್ಲಿ ಏನಿದು ‘ಕ್ಷೇತ್ರ ಮಹಾತ್ಮೆ’?

ವಾರಣಾಸಿಯತ್ತ ಎಲ್ಲರ ಚಿತ್ತ: ಯುಪಿ ಚುನಾವಣೆಯಲ್ಲಿ ಏನಿದು ‘ಕ್ಷೇತ್ರ ಮಹಾತ್ಮೆ’?

ಉತ್ತರ ಪ್ರದೇಶ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಇನ್ನು 48 ಗಂಟೆಗಳಷ್ಟೆ ಬಾಕಿ ಇರುವಾಗ, ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಮುಖ ಪಕ್ಷಗಳು ಬಲ ಪ್ರದರ್ಶನಕ್ಕೆ ಇಳಿದಿವೆ.

ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ವಾರಣಾಸಿಯ ಬೀದಿಗಳಲ್ಲಿ ಮತದಾರರನ್ನು ಸೆಳೆಯುವ ತಂತ್ರ ಅನುಸರಿಸಿದ್ದರೆ, ವಾರಣಾಸಿಯ ಹೊರಭಾಗದ ದಲಿತ ಬಸ್ತಿಗಳಲ್ಲಿ ಬಿಎಸ್‌ಪಿ ಕೊನೆಯ ಹಂತದಲ್ಲಿ ಮತದಾರರನ್ನು ಆಕರ್ಷಿಸುವ ರ್ಯಾಲಿಗಳನ್ನು ಆಯೋಜಿಸಿದೆ. ಪ್ರಧಾನಿ ಮೋದಿ ಕಳೆದ ಮೂರು ದಿನಗಳಿಂದ ವಾರಣಾಸಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಹಸುಗಳಿಗೆ ಮೇವು ನೀಡುತ್ತಿದ್ದಾರೆ. ಲಕ್ಷಾಂತರ ಜನರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವಾರಣಾಸಿಯನ್ನು ಕೇಂದ್ರವಾಗಿಟ್ಟುಕೊಂಡು ರಾಜಕೀಯ ಸಮರ, ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕಳೆಗಟ್ಟಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗುಜರಾತಿನ ವಡೋದರ ಜತೆಗೆ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದಲೂ ಸ್ಪರ್ಧಿಸಲು ತೀರ್ಮಾನಿಸಿದ್ದರು. ಹಿಂದುತ್ವದ ನೆಲೆಯ ರಾಜಕಾರಣವನ್ನು ದೇಶದ ಮಟ್ಟಕ್ಕೆ ಸಾಂಕೇತಿಕಗೊಳಿಸುವ ನಿಟ್ಟಿನಲ್ಲಿ ಈ ಸ್ಪರ್ದೆ ಮಹತ್ವ ಪಡೆದುಕೊಂಡಿತ್ತು. ಈ ಹಿಂದೆ, ಇದೇ ಕ್ಷೇತ್ರದಿಂದ ಆಯ್ಕೆಯಾಗಿ ಬರುತ್ತಿದ್ದ ಬಿಜೆಪಿಯ ಮುರಳಿ ಮನೋಹರ್ ಜೋಷಿ ತಮ್ಮ ಕ್ಷೇತ್ರವನ್ನು ಕಳೆದುಕೊಂಡಿದ್ದರು. ಸನಾತನ ಹಿಂದೂ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿರುವ ವಾರಣಾಸಿ ಬಿಜೆಪಿಯ ‘ಸಾಂಕೇತಿಕ ರಾಜಕಾರಣ’ದ ಭಾಗವಾಗಿತ್ತು. ಮೋದಿ ವಿರುದ್ಧ ಎಎಪಿಯ ಅರವಿಂದ್ ಕೇಜ್ರಿವಾಲ್ ಕೂಡ ಸ್ಪರ್ದೆಗೆ ಇಳಿಯುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಹೆಚ್ಚು ಗಮನ ಸೆಳೆಯುವಂತೆ ಮಾಡಿತ್ತು.

ಇದೀಗ, ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿಯೂ ಕೊನೆಯ ಎರಡು ಹಂತಗಳ ಮತದಾನಕ್ಕೂ ಮುನ್ನ ವಾರಣಾಸಿ ಮಹತ್ವ ಪಡೆದುಕೊಂಡಿದೆ. ಮೊನ್ನೆಯಷ್ಟೆ ಮುಗಿದ 49 ಕ್ಷೇತ್ರಗಳ ಮತದಾನ ಹಾಗೂ ಬುಧವಾರ ನಡೆಯಲಿರುವ ಕೊನೆಯ ಹಂತದ 40 ಕ್ಷೇತ್ರಗಳ ಮತದಾನಕ್ಕೆ ವಾರಣಾಸಿ ಪರಿಣಾಮ ಮೂಡಿಸುವ ಕ್ಷೇತ್ರವಾಗಿದೆ. ಹೀಗಾಗಿಯೇ, ಬಿಜೆಪಿ, ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷದ ಪ್ರಮುಖ ನಾಯಕರು ಕಳೆದ 48 ಗಂಟೆಗಳ ಅವಧಿಯಲ್ಲಿ ವಾರಣಾಸಿಯನ್ನು ನೆಚ್ಚಿಕೊಂಡು ತಮ್ಮ ಬಲ ಪ್ರದರ್ಶನದ ವೇದಿಕೆಗಳಲ್ಲಿ ಭಾಷಣ ಮಾಡುತ್ತಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ವಾರಣಾಸಿಯಲ್ಲಿ ರೋಡ್‌ ಶೋ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಅವರು ಘೋಷಿಸಿದ್ದ ಮಹತ್ವಾಕಾಂಕ್ಷೆಯ ಗಂಗಾ ನದಿ ಶುದ್ಧೀಕರಣ ಯೋಜನೆ ಬಗ್ಗೆ ಜನರಲ್ಲಿ ಪ್ರಶ್ನೆಗಳಿವೆ. ಆದರೆ, ಆಶ್ವಾಸನೆಗಳ ಕುರಿತು ಹೆಚ್ಚು ಗಮನ ನೀಡಿದ ಮೋದಿ, ರಾಜಕೀಯ ಎದುರಾಳಿಗಳನ್ನು ಎದುರಿಸುವ ನಿಟ್ಟಿನಲ್ಲಿ ಆರೋಪಗಳ ಸುರಿಮಳೆಯನ್ನು ಸುರಿಸುತ್ತಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಒಂದೇ ದಿನ ಒಟ್ಟು 7 ಬಹಿರಂಗ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ಪಕ್ಷದ ವಾರಣಾಸಿ ರೋಡ್‌ ಶೋಗಳಿಂದ ನಗರ ಕಳೆಗಟ್ಟಿದೆ. ವಾರಣಾಸಿಯಲ್ಲಿ ಇವತ್ತಿಗೂ ನೇಕಾರರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಸೀರೆ ನೇಯುವ ಅವರ ಬದುಕು ಸಂಕಷ್ಟಗಳ ಗೂಡು. ಪ್ರತಿ ಚುನಾವಣೆ ಬಂದಾಗಲೂ ಅವರಲ್ಲಿ ಹೊಸ ಭರವಸೆಗಳು ಮೂಡುತ್ತವೆ. ಇದನ್ನೇ ಸಮಾಜವಾದಿ ಪಕ್ಷ ಕಳೆದ ಚುನಾವಣೆಯಲ್ಲಿ ಬಳಸಿಕೊಂಡಿತ್ತು. ಈ ಬಾರಿಯೂ ನೇಕಾರರನ್ನು ಗಮನದಲ್ಲಿಟ್ಟುಕೊಂಡು ಎಸ್‌ಪಿ ಚುನಾವಣಾ ತಂತ್ರಗಾರಿಕೆ ರೂಪಿಸಿದೆ. ಇದಕ್ಕೆ ಹೋಲಿಸಿದರೆ, ಬಹುಜನ ಸಮಾಜವಾದಿ ಪಕ್ಷ ವಾರಣಾಸಿಯ ಹೊರವಲಯದಲ್ಲಿ ಹೆಚ್ಚು ಪ್ರಭಾವ ಹೊಂದಿರುವಂತೆ ಕಾಣಿಸುತ್ತಿದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ದಲಿತ ಬಸ್ತಿಗಳಲ್ಲಿ ಈಗಾಗಲೇ ಅನೇಕ ಸುತ್ತುಗಳ ಪ್ರಚಾರವನ್ನು ಪಕ್ಷ ಮುಗಿಸಿದೆ. 2007ರಲ್ಲಿ ಈ ಭಾಗದಲ್ಲಿ ಬಿಎಸ್‌ಪಿಗೆ ನಿರ್ಣಾಯಕ ಸ್ಥಾನಗಳು ಲಭಿಸಿದ್ದವು.

ಉತ್ತರ ಪ್ರದೇಶದ ಪೂರ್ವಕ್ಕೆ ಬರುವ ಈ ಭಾಗ ಯಾವ ಪಕ್ಷದ ಕಡೆಗೆ ವಾಲುತ್ತದೆಯೇ ಅವರು ಬಹುಮತ ಗಳಿಸಲಿದ್ದಾರೆ ಎಂಬುದನ್ನು ಹಳೆಯ ಚುನಾವಣೆಯ ಅಂಕಿಅಂಶಗಳು ಮುಂದಿಡುತ್ತಿವೆ. ಹೀಗಾಗಿಯೇ ಕೊನೆಯ ಎರಡು ಹಂತಗಳಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ಇಲ್ಲಿಯೇ ಜಿದ್ದಾಗಿದ್ದಿಗೆ ಇಳಿದಿವೆ. ಇವರ ರಾಜಕೀಯ ಕಾಳಗಕ್ಕೆ ವಾರಣಾಸಿ ಮಣ್ಣು ನೆಲೆಯನ್ನು ಒದಗಿಸಿದೆ.

Top