An unconventional News Portal.

‘ಯಾದವೀ ಕಲಹ’: ಉತ್ತರ ಪ್ರದೇಶದಲ್ಲಿ ಮುಖಕ್ಕಿಂತ ಚಿನ್ಹೆಗೆ ಯಾಕಿಷ್ಟು ಬೆಲೆ?

‘ಯಾದವೀ ಕಲಹ’: ಉತ್ತರ ಪ್ರದೇಶದಲ್ಲಿ ಮುಖಕ್ಕಿಂತ ಚಿನ್ಹೆಗೆ ಯಾಕಿಷ್ಟು ಬೆಲೆ?

ಇದು ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶ. ಇವತ್ತಿಂದ ಸರಿಯಾಗಿ 25ನೇ ದಿನಕ್ಕೆ ಇಲ್ಲಿನ ವಿಧಾನಸಭೆಗಾಗಿ ದೊಡ್ಡ ಸಂಗ್ರಾಮವೊಂದು ನಡೆದು ಹೋಗಿರುತ್ತದೆ. ಇಲ್ಲಿರುವ 403 ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸುಮಾರು 13 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಅವರಲ್ಲಿ ಶೇ. 67. 68ರಷ್ಟು ಸಾಕ್ಷರರಿದ್ದು, ನಾನಾ ಪಕ್ಷಗಳ ಅಭ್ಯರ್ಥಿಗಳನ್ನು ಅಳೆದು, ತೂಗಿ, ಓಟಾಕಿ ವಿಧಾನಸಭೆಗೆ ಕಳುಹಿಸಿಕೊಡಲಿದ್ದಾರೆ.

ಹಾಗೆ ನೋಡಿದರೆ, ಇಲ್ಲಿನ ನಾನಾ ಪಕ್ಷಗಳ ಚುನಾವಣಾ ಪ್ರಚಾರದ ಮಾಹಿತಿ ದೇಶದ ಸುದ್ದಿಕೇಂದ್ರವನ್ನು ಇಷ್ಟೊತ್ತಿಗಾಗಲೇ ಆವರಿಸಿಕೊಳ್ಳಬೇಕಿತ್ತು. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವ 49 ಅಭ್ಯರ್ಥಿಗಳ ಮೊದಲ ಪಟ್ಟಿ, ಅಧಿಕಾರವನ್ನು ಪಡೆಯಲೇಬೇಕು ಎಂಬ ಹಠದಿಂದ ರ್ಯಾಲಿಗಳ ಮೇಲೆ ರ್ಯಾಲಿಗಳನ್ನು ಮಾಡುತ್ತಿರುವ ಬಿಎಸ್ಪಿಯ ಪ್ರಚಾರ ವೈಖರಿ, ದಿಲ್ಲಿಯಿಂದ ಶೀಲಾ ದೀಕ್ಷಿತ್ ಕರೆದುಕೊಂಡು ಹೋಗಿ ಉತ್ತರ ಪ್ರದೇಶದ ಅಖಾಡಕ್ಕೆ ಇಳಿಸಿರುವ ಕಾಂಗ್ರೆಸ್ ರಣತಂತ್ರಗಳ ಕುರಿತು ಸುದ್ದಿ ವಿಶ್ಲೇಷಣೆಗಳು ಪಡಿಮೂಡಬೇಕಿತ್ತು. ಆದರೆ, ಕಳೆದ ಮೂರು ತಿಂಗಳ ಅಂತರದಲ್ಲಿ ಉತ್ತರ ಪ್ರದೇಶದ ಸುದ್ದಿಜಾತ್ರೆಯನ್ನು ಆವರಿಸಿಕೊಂಡಿರುವುದು ಸಮಾಜವಾದಿ ಪಕ್ಷದ ಆಂತರಿಕ ಕಲಹ ಮಾತ್ರ.

ಸೋಮವಾರ ಸಂಜೆ ಚುನಾವಣಾ ಆಯೋಗ ಸಮಾಜವಾದಿ ಪಕ್ಷದ ಸೈಕಲ್ ಚಿನ್ಹೆಯನ್ನು ಅಪ್ಪ ಮುಲಾಯಂ ಸಿಂಗ್ ಯಾದವರಿಂದ ಕಸಿದುಕೊಂಡು ಮಗ ಅಖಿಲೇಶ್ ಯಾದವ್ಗೆ ನೀಡಿದೆ. ಈ ಮೂಲಕ ಸಮಾಜವಾದಿ ಪಕ್ಷದ ಪ್ರಶ್ನಾತೀತ ನಾಯಕನಾಗಿ ಅಖಿಲೇಶ್ ಯಾದವ್ ಹೊರಹೊಮ್ಮಿದ್ದಾರೆ. ಮಂಗಳವಾರ ಸಂಜೆ ಅಥವಾ ಬುಧವಾರದ ವೇಳೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಚುನಾವಣಾ ಮೈತ್ರಿಯ ಕುರಿತು ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಇಳೀ ವಯಸ್ಸಿನಲ್ಲಿ ಮುಲಾಯಂ ಸಿಂಗ್ ಯಾದವ್ ಯಾವ ನಡೆ ಇಡಬಹುದು ಎಂಬುದು ಕೂಡ ಶೀಘ್ರದಲ್ಲಿಯೇ ಬಹಿರಂಗವಾಗಲಿದೆ. ಅದು ಇಷ್ಟು ದಿನ ಸಮಾಜವಾದಿ ಪಕ್ಷದೊಳಗೆ ನಡೆದ ‘ಯಾದವೀ ಕಲಹ’ ಎಷ್ಟರ ಮಟ್ಟಿಗೆ ಸತ್ಯವಾಗಿತ್ತು ಎಂಬುದನ್ನು ಸಾಭೀತುಪಡಿಸಲಿದೆ.

up-election-2016

ಚಿನ್ಹೆ ರಾಜಕೀಯ:

ಉಳಿದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ರಾಜಕೀಯ ನಾಯಕರಿಗಿಂತ ಚಿನ್ಹಗಳೇ ಹೆಚ್ಚು ಜನಪ್ರಿಯವಾಗಿವೆ. ಇಲ್ಲಿ ನಡೆಯುವ ಯಾವ ಚುನಾವಣೆಯಲ್ಲಿಯೂ ನಾಯಕರ ಮುಖಕ್ಕಿಂತ ಚಿನ್ಹೆಗಳು ಹೆಚ್ಚು ಲಾಭವನ್ನು ತಂದುಕೊಡುತ್ತವೆ. ಹೀಗಾಗಿಯೇ ಮಾಯಾವತಿ ತಮ್ಮ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಆನೆಯ ಪ್ರತಿಮೆಗಳನ್ನು ನಿರ್ಮಿಸಲು ಖರ್ಚು ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದರು. ಇದೀಗ ಸಮಾಜವಾದಿ ಪಕ್ಷದೊಳಗೆ ಅಪ್ಪ- ಮಗ ಕೂಡ ಚಿನ್ಹೆಗಾಗಿಯೇ ಹೋರಾಟ ನಡೆಸಿದ್ದಾರೆ. ತಮ್ಮ ಮುಖವಾಡವನ್ನು ಮುಂದಿಟ್ಟುಕೊಂಡೇ ಚುನಾವಣೆ ಪ್ರಚಾರ ನಡೆಸುತ್ತಿರುವ ಪ್ರಧಾನಿ ಮೋದಿ ಕೂಡ ಉತ್ತರ ಪ್ರದೇಶಕ್ಕೆ ಬಂದರೆ, ತಮ್ಮ ಭಾವಚಿತ್ರದ ಜತೆಗೆ ಪಕ್ಷದ ಚಿನ್ಹೆಯನ್ನು ಬಳಸಬೇಕಾದ ಅನಿವಾರ್ಯತೆ ಇದೆ.

“ಇಲ್ಲಿ ಪಕ್ಷಗಳು ಚಿನ್ಹೆಗಳಿಗೆ ಮಹತ್ವ ಕೊಡಲು ಅದರದ್ದೇ ಆದ ಹಿನ್ನಲೆ ಇದೆ. ಹೊಸ ಚಿನ್ಹೆಯನ್ನು ಜನರಿಗೆ ತಲುಪಿಸುವುದು ಇವತ್ತಿಗೆ ಕಷ್ಟ ಎಂಬ ಭಾವನೆ ಸಮಾಜವಾದಿ ಪಕ್ಷದೊಳಗಿತ್ತು. ಹೀಗಾಗಿ ಚುನಾವಣಾ ಆಯೋಗಕ್ಕೆ ಹೋಗಿ ಚಿನ್ಹೆಯನ್ನು ಪಡೆಯುವ ಕಸರತ್ತು ನಡೆಯಿತು. ಸದ್ಯ ತಳಮಟ್ಟದಲ್ಲಿ ನೋಡಿದರೆ, ಯಾಕೋ ಇದು ಅಪ್ಪ ಮಗನ ಚುನಾವಣಾ ತಂತ್ರಗಾರಿಕೆ ಎನ್ನಿಸುತ್ತದೆ,” ಎನ್ನುತ್ತಾರೆ ಉತ್ತರ ಪ್ರದೇಶದ ಪತ್ರಕರ್ತ ರಾಮ್ಜಿ ಟಂಡನ್.

ಪಕ್ಷದ ಚಿನ್ಹೆಗಳು ಉತ್ತರ ಪ್ರದೇಶದಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದಕ್ಕೆ ಬಿಎಸ್ಪಿಯ ಈ ಪೋಸ್ಟರ್ ಸಾಕ್ಷಿ ಹೇಳುತ್ತದೆ.

ಪಕ್ಷದ ಚಿನ್ಹೆಗಳು ಉತ್ತರ ಪ್ರದೇಶದಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದಕ್ಕೆ ಬಿಎಸ್ಪಿಯ ಈ ಪೋಸ್ಟರ್ ಸಾಕ್ಷಿ ಹೇಳುತ್ತದೆ.

ಕಳೆದ ಮೂರು ತಿಂಗಳ ಅಂತರದಲ್ಲಿ ನಡೆಯುತ್ತಿರುವ ಸಮಾಜವಾದಿ ಪಕ್ಷದೊಳಗಿನ ಬೆಳವಣಿಗೆ ನೋಡಿದರೆ ಅವರ ಮಾತುಗಳಿಗೆ ಪೂರಕ ಎನ್ನಿಸುವ ಹೇರಳ ಸಾಕ್ಷಿಗಳು ದೊರಕುತ್ತವೆ. ಒಂದು ಕಡೆ ಚುನಾವಣಾ ಆಯೋಗದ ಮುಂದೆ ಚಿನ್ಹೆಗಾಗಿ ಹೋರಾಟ ನಡೆಸಿದ ಮುಲಾಯಂ ಸಿಂಗ್ ಯಾದವ್ ಕೊನೆ ಗಳಿಗೆಯಲ್ಲಿ ತಮ್ಮ ಕಡೆಯಿಂದ ಅಫಿಡವಿಟ್ ಸಲ್ಲಿಸುವುದನ್ನು ಮರೆತು ಹೋದರು. ಈ ಮೂಲಕ ಮಗನಿಗೆ ಅನಾಯಾಸವಾಗಿ ಸೈಕಲ್ ದೊರಕುವಂತೆ ನೋಡಿಕೊಂಡರು. ಅದರ ಜತೆಗೆ, ”ಅಖಿಲೇಶ್ ಯಾದವ್ ಮುಸ್ಲಿಂ ಸಮುದಾಯದ ಬಗ್ಗೆ ಹೊಂದಿರುವ ಕಹಿ ಭಾವನೆಯನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಆತನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವುದಾಗಿ,” ಮುಲಾಯಂ ಹೇಳಿದ್ದಾರೆ. ಈ ಮೂಲಕ ಮುಸ್ಲಿಂ ಸಮುದಾಯ ಸಮಾಜವಾದಿ ಪಕ್ಷದ ಜತೆ ನಿಲ್ಲಲು ಭೂಮಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ.

ಸೋಮವಾರ ಚುನಾವಣಾ ಆಯೋಗದ ತೀರ್ಮಾನ ಹೊರಬೀಳುತ್ತಿದ್ದಂತೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರ, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಈ ಸಮಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಪ್ರತಿಯೊಬ್ಬರು, “ಪಕ್ಷ ಹೋಳಾಗುವುದಿಲ್ಲ, ನೇತಾಜಿ (ಮುಲಾಯಂ ಸಿಂಗ್ ಯಾದವ್) ಭರವಸೆ ನೀಡಿದ್ದಾರೆ,” ಎಂದು ಸಾರಿ ಹೇಳುತ್ತಿದ್ದರು. ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತು ಎಚ್. ಡಿ. ದೇವೇಗೌಡರ ನಡುವೆ ಇಂತಹದೊಂದು ‘ಅಪ್ಪ- ಮಗ’ನ ರಾಜಕೀಯ ನಾಟಕಕ್ಕೆ ಕರ್ನಾಟಕ ಹಿಂದೆಯೇ ಸಾಕ್ಷಿಯಾಗಿದೆ. ಇದೀಗ ಉತ್ತರ ಪ್ರದೇಶದಲ್ಲಿ ಪುನರಾವರ್ತನೆಯಾಗಲಿದೆಯಾ ಎಂಬುದನ್ನು ಕಾಲ ಹೇಳಲಿದೆ.

ಮುಸ್ಲಿಂ ಸಮುದಾಯದ ಓಲೈಕೆ:

ಸದ್ಯದ ಮಟ್ಟಿಗೆ ಉತ್ತರ ಪ್ರದೇಶದ ಪ್ರಮುಖ ಪಕ್ಷಗಳು ಶೇ. 19. 3ರಷ್ಟಿರುವ ಮುಸ್ಲಿಂ ಸಮುದಾಯವನ್ನು ಓಲೈಸುವ ಕೊನೆಯ ಹಂತದ ಕಸರತ್ತಿನಲ್ಲಿ ತೊಡಗಿವೆ. ಸಮಾಜವಾದಿ ಪಕ್ಷ ಯಾದವರ ಪ್ರಬಲ ಮತಬ್ಯಾಂಕಿನ ಜತೆಗೆ ಮುಸ್ಲಿಂರೂ ಜತೆಗೆ ನಿಂತರೆ ಚುನಾವಣೆ ಗೆಲ್ಲುವುದಕ್ಕೆ ಸಾಧ್ಯ ಎಂದು ತೀರ್ಮಾನಿಸಿದೆ. ಹೀಗಾಗಿಯೇ, ಮುಲಾಯಂ ಸಿಂಗ್ ಯಾದವ್ ತಮ್ಮ ರಾಜಕೀಯ ಚತುರತೆಯನ್ನು ಈ ವಿಚಾರದಲ್ಲಿ ಪ್ರದರ್ಶಿಸುತ್ತಿದ್ದಾರೆ. ಜತೆಗೆ, ಕಾಂಗ್ರೆಸ್ ಜತೆಗಿನ ಮೈತ್ರಿಯೂ ಈ ವಿಚಾರದಲ್ಲಿ ಸಹಾಯಕ್ಕೆ ಬರಲಿದೆ ಎಂದು ಪಕ್ಷ ನಂಬಿಕೊಂಡಿದೆ. ರಾಷ್ಟ್ರೀಯ ಲೋಕ ದಳದ ಜತೆಗಿನ ಮೈತ್ರಿ ತೊಡಕಾಗಬಹುದು ಎಂಬ ಆತಂಕ ಪಕ್ಷದಲ್ಲಿದೆ.

ಅತ್ತ ಮಾಯಾವತಿ ಕೂಡ ತಮ್ಮ ಹಿಂದಿನ ಬಿಜೆಪಿ ಜತೆಗಿನ ಮೈತ್ರಿಯ ಕಹಿಯನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ಮೂಲಕ ಮನುವಾದಿ ಪಕ್ಷದಿಂದ ತಾವು ದೂರ ಇದ್ದೀವಿ ಎಂದು ಅರ್ಥಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಬಿಜೆಪಿ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸದ್ಯದ ಬೆಳವಣಿಗೆಗಳ ನಡುವೆ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದು ಪಕ್ಷ ಹೇಳುತ್ತಿದೆ.

ಒಟ್ಟಾರೆ, ದೇಶದ ದೊಡ್ಡ ರಾಜ್ಯದಲ್ಲಿ ನಡೆಯುವ ಮಹಾ ಸಂಗ್ರಾಮ ಕೊನೆಯ ಹಂತದಲ್ಲಿ ನಾನಾ ಕಾರಣಗಳಿಗೆ ಕುತೂಹಲ ಮೂಡಿಸಿದೆ. ಹೊರಗೆ ಮಾಧ್ಯಮಗಳಲ್ಲಿನ ಸುದ್ದಿ ಜಾತ್ರೆ ಆಚೆಗೆ ತಳಮಟ್ಟದ ವಾಸ್ತವಗಳನ್ನು ಮತದಾರರ ಅಂತಿಮ ತೀರ್ಮಾನ ಮಾತ್ರವೇ ಹೇಳಬೇಕಿದೆ.

 

Leave a comment

Top