An unconventional News Portal.

‘ಕಾಶ್ಮೀರ ಫಾಲೋಅಪ್’: ಸಂಘರ್ಷಕ್ಕೆ 50 ದಿನ; ರಾಜತಾಂತ್ರಿಕ ಮಟ್ಟದಲ್ಲಿ ಮಿಂಚಿನ ಸಂಚಲನ!

‘ಕಾಶ್ಮೀರ ಫಾಲೋಅಪ್’: ಸಂಘರ್ಷಕ್ಕೆ 50 ದಿನ; ರಾಜತಾಂತ್ರಿಕ ಮಟ್ಟದಲ್ಲಿ ಮಿಂಚಿನ ಸಂಚಲನ!

ಆಗಸ್ಟ್ 8ರಂದು ಕಣಿವೆ ರಾಜ್ಯದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ‘ಬುರ್ಹಾನ್ ವನಿ’ಯನ್ನು ಸೇನೆ ಗುಂಡಿಕ್ಕಿ ಇಂದಿಗೆ 50 ದಿನ. ಸಾವಿನ ಸೂತಕದ ಜತೆ ಶುರುವಾದ ಸಂಘರ್ಷ ಮಾತ್ರ ನಿಂತಿಲ್ಲ; ನಿಲ್ಲುವಂತೆಯೂ ಕಾಣಿಸುತ್ತಿಲ್ಲ.

ಕಾಶ್ಮೀರ ಸಂಘರ್ಷ 50ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ರಾಜಕೀಯದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿವೆ. ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಕಾಶ್ಮೀರ ವಿಚಾರ ಚರ್ಚಿಸಿದರೆ, ಅತ್ತ ಪಾಕಿಸ್ತಾನ ವಿಶ್ವಸಂಸ್ಥೆ ಬಾಗಿಲು ತಟ್ಟಲು ಸಿದ್ಧತೆ ಮಾಡಿಕೊಂಡಿದೆ.

ಪ್ರಧಾನಿ ಜತೆ ಮೆಹಬೂಬಾ ಚರ್ಚೆ: 

ಶನಿವಾರ ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರಧಾನಿ ಮೋದಿ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡು ಹುಡುಕಲು ಕಾಳಜಿ ಹೊಂದಿದ್ದಾರೆ,” ಎಂದು ತಿಳಿಸಿದರು. ಈ ವೇಳೆ ಮುಫ್ತಿ ಪ್ರಧಾನಿ ಮುಂದೆ ಕಾಶ್ಮೀರ ಸಮಸ್ಯೆಗೆ ಮೂರು ಅಂಶಗಳ ಕಾರ್ಯಯೋಜನೆಯನ್ನೂ ಸೂಚಿಸಿದ್ದಾರೆ. ಅವುಗಳಲ್ಲಿ ಕಾಶ್ಮೀರ ಸಮಸ್ಯೆಗೆ ಪರಿಹಾರ ಹುಡುಕಲು ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನದೊಂದಿಗೆ ಸೇರಿ ಮಾತುಕತೆ ನಡೆಸುವುದೂ ಸೇರಿದೆ.

“ಹುರಿಯತ್ ನಾಯಕರು ಸೇರಿ ಎಲ್ಲಾ ಪಕ್ಷಗಳ ನಾಯಕರು, ಅಮಾಯಕರ ಜೀವ ಉಳಿಸಲು ಅರ್ಥಪೂರ್ಣ ಮಾತುಕತೆಗೆ ಬರಬೇಕು. ಮಾತ್ರವಲ್ಲ ಶಾಂತಿ ಮಾರ್ಗದಲ್ಲೇ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು,” ಎಂದು ಒತ್ತಾಯಿಸಿದ್ದಾರೆ.

“ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕಾಳಜಿ ಇಟ್ಟು ಪಾಕಿಸ್ತಾನವೂ ಒಂದು ಹೆಜ್ಜೆ ಮುಂದೆ ಬರಬೇಕು,” ಎಂದು ಹೇಳಿದ ಅವರು “ಪ್ರತ್ಯೇಕತಾವಾದಿ ನಾಯಕರೂ ಕಾಶ್ಮೀರ ಹಿಂಸೆ ನಿಲ್ಲಿಸಲು ಸಹಕರಿಸಬೇಕು,” ಎಂದು ಮನವಿ ಮಾಡಿಕೊಂಡರು. “ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರಲ್ಲಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ನೀವು ನನ್ನ ಮೇಲೆ ಕೋಪಗೊಂಡಿರಬಹುದು. ನಾನೂ ನಿಮ್ಮ ಮೇಲೆ ಕೋಪಿತಳಾಗಿರಬಹುದು. ಆದರೆ ನಿಮ್ಮ ಆಶೋತ್ತರಗಳು, ಕಾಳಜಿಗಳನ್ನು ನೆರವೇರಿಸಲು ನನಗೆ ಒಂದು ಅವಕಾಶ ಕೊಡಿ ಎಂದಷ್ಟೇ ಕೇಳುತ್ತಿದ್ದೇನೆ,” ಎಂದರು.

ಶನಿವಾರ ನವದೆಹಲಿ ಈ ಎಲ್ಲಾ ಬೆಳವಣಿಗೆಗಳಿಗೆ ಸಾಕ್ಷಿಯಾದರೆ ಅತ್ತ ಇಸ್ಲಮಾಬಾದಿನಲ್ಲಿಯೂ ರಾಜಕೀಯ ಬೆಳವಣಿಗೆಗಳು ಬಿರುಸು ಪಡೆದುಕೊಂಡಿದ್ದವು.

ಕಾಶ್ಮೀರ ವಿಚಾರಕ್ಕೆ ಕೈ ಹಾಕಿದ ಪಾಕಿಸ್ತಾನ

ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಕಾಶ್ಮೀರ ವಿಚಾರವನ್ನು ಅಂತರಾಷ್ಟ್ರೀಯ ವೇದಿಕೆಗಳಿಗೆ ಕೊಂಡೊಯ್ಯಲು ಯೋಜನೆ ರೂಪಿಸಿದ್ದಾರೆ.

ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ಸೇರಿದಂತೆ ವಿವಿಧ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿನಿಧಿಸಲು ಶನಿವಾರ 22 ಸಂಸದರನ್ನು ಅವರು ಆಯ್ಕೆ ಮಾಡಿದ್ದಾರೆ.

ಹುರಿಯತ್ ನಾಯಕರ ಬಂಧನ

ಕಾಶ್ಮೀರ ಪ್ರತಿಭಟನೆಯನ್ನು ಅಂತರಾಷ್ಟ್ರೀಯ ವಿಚಾರ ಎಂದು ಬಿಂಬಿಸಲು ಪಾಕಿಸ್ತಾನ ನಿರಂತರ ಪ್ರಯತ್ನದಲ್ಲಿ ಮುಳಗಿದ್ದು ಪ್ರಧಾನಿ ನವಾಜ್ ಶರೀಫ್, ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಶುಕ್ರವಾರ ಅಮೆರಿಕಾ, ಬ್ರಿಟನ್, ಫ್ರಾನ್ಸ್, ರಷ್ಯಾ, ಚೀನಾ ಮತ್ತು ಯುರೋಪಿಯನ್ ಯೂನಿಯನ್ ರಾಯಭಾರ ಕಚೇರಿಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಆದರೆ ಈ ಮಾತುಕತೆಗಳು ಫಲಪ್ರದವಾಗಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.

ಭಾರತ ಮತ್ತು ಪಾಕಿಸ್ತಾನ ಸರಕಾರದ ಮಟ್ಟದಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೆ ಹುರಿಯತ್ ಕಾನ್ಫೆರೆನ್ಸ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿಯನ್ನು ಶನಿವಾರವೇ ಬಂಧಿಸಲಾಗಿದೆ. ಗೃಹ ಬಂಧನದಲ್ಲಿದ್ದ ಹುರಿಯತ್ ನಾಯಕ ಗಿಲಾನಿ, ಬಂಧನದಿಂದ ಹೊರ ಬಂದು ಶ್ರೀನಗರದ ಬಾದಾಮಿಭಾಗ್ನಲ್ಲಿರುವ ಭೂ ಸೇನೆಯ ಮುಖ್ಯ ಕಚೇರಿಯತ್ತ ಪ್ರತಿಭಟನೆ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಅವರನ್ನು ಬಂಧಿಸಲಾಗಿದೆ. ಇದೇ ಸಂದರ್ಭದಲ್ಲಿ ಯಾವುದೇ ಪೂರ್ವ ಷರತ್ತುಗಳಿಲ್ಲದ ಕೇಂದ್ರದ ಜೊತೆಗೆ ಮಾತುಕತೆಗೆ ನಾವು ಸಿದ್ಧ ಎಂದು ಹುರಿಯತ್ ನಾಯಕರು ತಿಳಿಸಿದ್ದಾರೆ.

ಈವರೆಗಿನ ನಿರಂತರ ಹಿಂಸಾಚಾರಕ್ಕೆ ಕಣಿವೆ ರಾಜ್ಯದಲ್ಲಿ 71 ಜನ ಸಾವಿಗೀಡಾಗಿದ್ದಾರೆ. ಒಟ್ಟು 11 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, 7000 ಕ್ಕೂ ಹೆಚ್ಚು ನಾಗರಿಕರು ಮತ್ತು 4000 ಹೆಚ್ಚು ರಕ್ಷಣಾ ಪಡೆ ಸಿಬ್ಬಂದಿ ಸೇರಿದ್ದಾರೆ. ಇನ್ನ ಪೆಲ್ಲೆಟ್ ಗನ್ ಅವಾಂತರದಿಂದ 500 ಕ್ಕೂ ಹೆಚ್ಚು ಜನ ಕಣ್ಣಿಗೆ ಗಾಯ ಮಾಡಿಕೊಂಡಿದ್ದರೆ, 100 ಕ್ಕೂ ಹೆಚ್ಚು ಜನ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top