An unconventional News Portal.

ಶೈಕ್ಷಣಿಕ ಕ್ಷೇತ್ರದ ಮೇಲೆ ಆಸೆ; ರಾಜಕಾರಣದ ಬಗ್ಗೆ ಪ್ರೀತಿ: ದಿಲ್ಲಿ ರಾಜಕಾರಣದಿಂದ ಜಂಗ್ ನಿರ್ಗಮನ

ಶೈಕ್ಷಣಿಕ ಕ್ಷೇತ್ರದ ಮೇಲೆ ಆಸೆ; ರಾಜಕಾರಣದ ಬಗ್ಗೆ ಪ್ರೀತಿ: ದಿಲ್ಲಿ ರಾಜಕಾರಣದಿಂದ ಜಂಗ್ ನಿರ್ಗಮನ

ದೆಹಲಿ ರಾಜಕೀಯ ಅಖಾಡದ ‘ಜಂಗೀ’ ಕುಸ್ತಿ ಅಂತ್ಯವಾಗಿದೆ.

ಅರವಿಂದ ಕೇಜ್ರಿವಾಲ್ ಜತೆ ತೊಡೆ ತಟ್ಟಿದ್ದ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಅವಧಿ ಬಾಕಿ ಉಳಿದಿರುವಾಗಲೇ ಅಖಾಡದಿಂದ ಹಿಂದೆ ಸರಿದಿದ್ದಾರೆ.

ಗುರುವಾರ ಸಂಜೆ ವೇಳೆಗೆ ಜಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಅಚ್ಚರಿಯ ವಿಚಾರ ಹೊರ ಬಿದ್ದಿದೆ. ಕೇಂದ್ರ ಸರಕಾರದ ಅಣತಿಯಂತೆ ನಡೆದುಕೊಳ್ಳುತ್ತಾರೆ ಎಂಬ ಆರೋಪವನ್ನು ಅವರು ಹೊತ್ತುಕೊಂಡಿದ್ದರು. ಅಂಥಹದ್ದೊಂದು ಆರೋಪ ಹೊರಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಜಂಗ್ ಮುಂದಿನ ದಿನಗಳು ಒಳ್ಳೆಯದಾಗಿರಲಿ’ ಎಂದು ಶುಭ ಹಾರೈಸಿದ್ದಾರೆ.

ಮೂರುವರೆ ವರ್ಷಕ್ಕೆ ಸಾಕಾಯ್ತು ಗವರ್ನರ್ ಹುದ್ದೆ:

ಜುಲೈ 9, 2013ರಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆ ವಹಿಸಿಕೊಂಡಿದ್ದ ಮಾಜಿ ಐಎಎಸ್ ಅಧಿಕಾರಿ ನಜೀಬ್ ಜಂಗ್ ಗುರುವಾರ ಯಾವುದೇ ಕಾರಣಗಳನ್ನು ನೀಡದೆ ತಮ್ಮ ರಾಜೀನಾಮೆಯನ್ನು ಕೇಂದ್ರಕ್ಕೆ ಸಲ್ಲಿಸಿದ್ದಾರೆ.

najeeb_jung_arvind_kejriwal

ದೆಹಲಿಯಲ್ಲಿ 2014ರಲ್ಲಿ ಕೇಜ್ರಿವಾಲ್ ಮುಖ್ಯಮಂತ್ರಿಯಾದ ನಂತರ ಗವರ್ನರ್ ಜತೆ ನೇರ ಕಾದಾಟಕ್ಕೆ ಇಳಿದಿದ್ದರು. ಅಲ್ಲಿಂದ ‘ಜಂಗೀ’ ಕುಸ್ತಿ ಆರಂಭವಾಗಿತ್ತು. ಕೇಂದ್ರದ ಅಣತಿಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ಕೇಜ್ರಿವಾಲ್ ಗಂಭೀರ ಆರೋಪಗಳನ್ನು ಮಾಡಿದ್ದರು. ಪ್ರತಿಯಾಗಿ ಕೇಜ್ರಿವಾಲ್ ಗಿಂತ ಮೇಲಿನ ಹುದ್ದೆಯಲ್ಲಿ ನಿಂತು ಜಂಗ್ ತಮ್ಮ ‘ಅಧಿಕಾರ’ ದಂಡ ಝಳಪಿಸಿದ್ದರು. ಇಬ್ಬರೂ ಒಂದೇ ಹುದ್ದೆಗೆ ಬೇರೆ ಬೇರೆ ಅಧಿಕಾರಿಗಳನ್ನು ನೇಮಕ ಮಾಡಿ ಗೊಂದಲ ಮೂಡಿಸಿದ್ದೂ ಇತ್ತು. ಇವರಿಬ್ಬರ ಜುಗಲ್ ಬಂದಿ ಪ್ರತಿಷ್ಠೆಗಳು ಸುಪ್ರಿಂ ಕೋರ್ಟ್ ಮೆಟ್ಟಿಲು ಹತ್ತಿದ್ದೂ ನಡೆದಿತ್ತು. ಹೀಗೆ ಕೇಜ್ರಿ ಜಂಗ್ ಬೀದಿ ರಂಪ ಮಾಡಿದ್ದ ವಿಚಾರಗಳು ಒಂದೆರಡಲ್ಲ.

ಯಾರು ಈ ನಜೀಬ್ ಜಂಗ್?

ನಜೀಬ್ ಜಂಗ್ ಹುಟ್ಟಿದ್ದು 18, ಜನವರಿ 1951. ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದ್ದ ಜಂಗ್, ಮುಂದೆ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನಿಂದ ‘ಸಾಮಾಜಿಕ ಕಾನೂನು ಮತ್ತು ಯೋಜನೆ’ ವಿಷಯದಲ್ಲಿ ಎಂಎ ಪದವಿ ಪಡೆದಿದ್ದರು.

ನಂತರ ಭಾರತೀಯ ಆಡಳಿತ ಸೇವೆ ಸೇರಿಕೊಂಡಿದ್ದರು. 1973ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿ ಜಂಗ್ ಮಧ್ಯ ಪ್ರದೇಶದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದವರು. ತಮ್ಮ ಆಡಳಿತದ ಕೊನೆಯ ದಿನಗಳಲ್ಲಿ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಹುದ್ದೆಗೇರಿದ್ದರು. 1994ರಿಂದ 1999ರವರೆಗೆ ಈ ಹುದ್ದೆ ನಿಭಾಯಿಸಿ ಸ್ವಯಂ ನಿವೃತ್ತಿ ನೀಡಿ ಹೊರ ಬಂದಿದ್ದರು.

ಸಾಹಿತ್ಯದ ಬಗ್ಗೆ ಒಂದಷ್ಟು ಒಲವು ಬೆಳೆಸಿಕೊಂಡಿರುವ ನಜೀಬ್ ಜಂಗ್ ‘ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್’ ಮತ್ತು ‘ಆಕ್ಸ್ ಫರ್ಡ್ ವಿಶ್ವವಿದ್ಯಾಲಯ’ದಲ್ಲೂ ಒಂದಷ್ಟು ಸೇವೆ ಸಲ್ಲಿಸಿದ್ದಾರೆ. ‘ಎನರ್ಜಿ ರಿಸರ್ಚ್ ಫೌಂಡೇಷನ್’ನ ಎನರ್ಜಿ ರಿಸರ್ಚ್ ನಿರ್ದೇಶಕರಾಗಿಯೂ ಇದ್ದರು. ಇದರಾಚೆಗೆ ಕೇಂದ್ರ ಸರಕಾರದ ಹಲವು ಮಹತ್ತರ ಸಮಿತಿಗಳ ಸದಸ್ಯರಾಗಿ, ಐಐಟಿ ಕಾನ್ಪುರ್ ಸೆನೆಟ್ ಸದಸ್ಯರಾಗಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಎನರ್ಜಿ (ಶಕ್ತಿ)ಗೆ ಸಂಬಂಧಿಸಿದಂತೆ ಹಲವು ವರದಿಗಳನ್ನು ಅವರು ಹೊರತಂದಿದ್ದಾರೆ. ಹೀಗೆ ತಮ್ಮ ಹುದ್ದೆಯಾಚೆಗೆ ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿದವರು ನಜೀಬ್ ಜಂಗ್.

2010ರಲ್ಲಿ ದೆಹಲಿಯ ‘ಜಮಿಯಾ ಮಿಲ್ಲಿಯಾ ಇಸ್ಲಾಮಿಯಾ’ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಜಂಗ್ ರನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಕರೆತಂದವರು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್. ವಿಧಾನಸಭೆ ಚುನಾವಣೆಗೆ ಕೇವಲ 5 ತಿಂಗಳಿದೆ ಎಂದಾಗ ಅವರು ಈ ಹುದ್ದೆಗೆ ಬಂದು ಕುಳಿತಿದ್ದರು. ದೆಹಲಿಯ 19ನೇ ಲೆಫ್ಟಿನೆಂಟ್ ಗವರ್ನರ್ ಆಗಿ ಬಂದ ನಜೀಬ್ ಜಂಗ್ ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಜತೆ ಚೆನ್ನಾಗಿದ್ದರು. ಈ ಕಾರಣಕ್ಕೆ ಅವರ ಮೇಲೆ ಹೆಚ್ಚಿನ ಆರೋಪಗಳೂ ಕೇಳಿ ಬಂದಿದ್ದವು.

ಸದ್ಯ ಕೇಜ್ರಿವಾಲ್ ಸರಕಾರವನ್ನು ಬೆನ್ನು ಬಿಡದ ಬೇತಾಳದಂತೆ ಕಾಡಿದ್ದ ಜಂಗ್ ಕೊನೆಗೂ ರಾಜೀನಾಮೆ ನೀಡಿ ಮನೆ ಕಡೆ ಹೊರಟಿದ್ದಾರೆ. ಜಂಗ್ ನಿರ್ಗಮಿಸುತ್ತಿದ್ದಂತೆ ಕಾಂಗ್ರೆಸ್ ನರೇಂದ್ರ ಮೋದಿ ಸರಕಾರದ ಬಳಿ ರಾಜೀನಾಮೆಗೆ ಕಾರಣ ಏನು ಎಂದು ಪ್ರಶ್ನಿಸಿದೆ. ‘ಕೇಜ್ರಿವಾಲ್ ತಲೆ ಮೇಲೆ ಆರ್.ಎಸ್.ಎಸ್. ಸಿದ್ಧಾಂತಕ್ಕೆ ಹತ್ತಿರವಾಗುವವರನ್ನು ತರಲು ಈ ನಿರ್ಧಾರಕ್ಕೆ ಬಂದಿದ್ದೀರಾ?,’ ಎಂದು ಅದು ಆರೋಪ ಮಾಡಿದೆ.

ಹಲವು ಸರಕಾರಗಳನ್ನು ಉರುಳಿಸಲು ಬಹಿರಂಗ ಪ್ರಯತ್ನ ನಡೆಸಿದ ಕೇಂದ್ರ ಬಿಜೆಪಿ ಸರಕಾರ ದೆಹಲಿ ರಾಜಕಾರಣದಲ್ಲಿ ಇನ್ನು ಯಾವ ದಾಳ ಉರುಳಿಸುತ್ತದೋ ಕಾದು ನೋಡಬೇಕು. ಒಂದಂತೂ ನಿಜ ಕೇಜ್ರಿವಾಲ್ಗೆ ಇದು ಸಂಭ್ರಮದ ಜತೆ ಚಿಂತೆಯ ಸಮಯವೂ ಹೌದು.

ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್, ಎನ್ಡಿಟಿವಿ

Top