An unconventional News Portal.

‘ಪನಾಮ ಪೇಪರ್ಸ್’ ಹವಾದಲ್ಲಿ ಕೊಚ್ಚಿಹೋಯಿತು ಯುವ ಪತ್ರಕರ್ತನ ತನಿಖಾ ವರದಿ!

‘ಪನಾಮ ಪೇಪರ್ಸ್’ ಹವಾದಲ್ಲಿ ಕೊಚ್ಚಿಹೋಯಿತು ಯುವ ಪತ್ರಕರ್ತನ ತನಿಖಾ ವರದಿ!

ಅನ್ಆಯಿಲ್…

ಉದ್ಯಮ ಜಗತ್ತಿನಲ್ಲಿ ಅಪರಿಚಿತವಾಗಿರುವ, ಅಗೋಚರ ಕಂಪನಿಯ ಹೆಸರಿದು. ಸದ್ಯ ಇದು ಲಕ್ಷಾಂತರ ಕೋಟಿ ಬೆಲೆಬಾಳುತ್ತದೆ. ಮೊನಾಕೋದಲ್ಲಿ ತನ್ನ ಕೇಂದ್ರ ಸ್ಥಾನವನ್ನು ಹೊಂದಿದೆ. ತೈಲ ನಿಕ್ಷೇಪವನ್ನು ಹೊಂದಿರುವ ದೇಶಗಳಾದ ಇರಾಕ್, ಕುವೈಟ್, ಯುಎಇ, ಅಲ್ಜೀರಿಯಾ, ಅಜರ್ ಬೈಜಾನ್, ಕಜಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಕಂಪನಿ ತನ್ನ ಕಾರ್ಯಚರಣೆ ನಡೆಸುತ್ತಿದೆ.

ಅನ್ಆಯಿಲ್ ಕಂಪನಿಯ ಒಳಮರ್ಮ ಇಷ್ಟೆ. ರೋಲ್ಸ್ ರಾಯ್ಸ್, ಸ್ಯಾಮ್ಸಂಗ್, ಹಲಿಬರ್ಡನ್, ಹುಂಡೈ, ಲೈಟನ್ ಹೋಲ್ಡಿಂಗ್ಸ್ ನಂಥ ಕಂಪೆನಿಗಳಿಗೆ ಆಯಿಲ್ ಕಾಂಟ್ರಾಕ್ಟ್ ಗಳನ್ನು ಇದು ಎತ್ತಿಕೊಡುತ್ತದೆ. ಇದರಲ್ಲಿ ಭಾರತದ ಎಲ್ ಆಂಡ್ ಟಿ (L&T) ಕಂಪೆನಿಯೂ ಇದೆ. ಇವುಗಳಿಗೆ ಸಾವಿರಾರು ಕೋಟಿ ಬೆಲೆಬಾಳುವ ಕಾಂಟ್ರಾಕ್ಟ್ ಗಳನ್ನು ಅನ್ಆಯಿಲ್  ಹೇಗೆ ಎತ್ತಿ ಕೊಡುತ್ತದೆ.

ಬೇರೆ ಬೇರೆ ದೇಶದ ಇಂಧನ ಸಚಿವಾಲಯದ ಅಧಿಕಾರಿಗಳು, ಸಚಿವರು, ಮಧ್ಯಮವರ್ತಿಗಳಿಗೆ ಕೋಟಿ ಕೋಟಿ ಹಣ ನೀಡಿ ಈ ಕಾಂಟ್ರಾಕ್ಟ್ ಗಳನ್ನು ತಂದು ಈ ಬಹುರಾಷ್ಟ್ರೀಯ ಕಂಪೆನಿಗಳ ಕೈಗಿಡುತ್ತದೆ ಅನ್ಆಯಿಲ್. ಅದಕ್ಕೆ ಪ್ರತಿಯಾಗಿ ಸಾವಿರಾರು ಕೋಟಿ ಲೆಕ್ಕದಲ್ಲಿ ಕಮಿಷನ್ ಎಣಿಸುತ್ತದೆ. ಇದೆಲ್ಲವೂ ಕಳ್ಳ ಮಾಲು. ಈ ರೀತಿಯ ಕಿಕ್ ಬ್ಯಾಕ್ ಪಡೆಯಲೆಂದೇ ಅನ್ಆಯಿಲ್ ಸಾವಿರಾರು ನಕಲಿ ಕಂಪೆನಿಗಳನ್ನೂ ಸೃಷ್ಟಿಸಿ ಪ್ರತಿಬಾರಿ ಹಣ ಪಡೆಯುವಾಗಲೂ ಒಂದೊಂದು ಕಂಪೆನಿಯ ಹೆಸರಿನಲ್ಲಿ ಹಣ ಪಡೆಯುತ್ತದೆ. ಇಂತದೊಂದು ಇಂಟೆರೆಸ್ಟಿಂಗ್ ಪ್ರಕರಣದ ಬೆನ್ನು ಬಿದ್ದು ಅದನ್ನು ಹೊರಗೆಡಹುವಲ್ಲಿ ಯಶಸ್ವಿಯಾದ ಮೂವರು ಪತ್ರಕರ್ತರ ಕತೆ ಹೇಳುವುದಕ್ಕಾಗಿ ಈ ಪೀಠಿಕೆ.

ರೋಚಕ ಕಥೆ: 

ಪತ್ರಕರ್ತರ ತಂಡ ಈ ಪ್ರಕರಣವನ್ನು ಬಯಲಿಗೆ ಎಳೆದಿದ್ದೇ ರೋಚಕ ಕತೆ. ಇದರ ಮುಖ್ಯ ರೂವಾರಿ ಆಸ್ಟ್ರೇಲಿಯಾ ಮೂಲದ ನಿಕ್ ಮೆಕೆಂಜಿ ಎಂಬ ಯುವ ತನಿಖಾ ಪತ್ರಕರ್ತ. ಪತ್ರಿಕೋದ್ಯಮದ ಭಾಷೆಯಲ್ಲಿ ಹೇಳಬೇಕೆಂದರೆ ಈತ ‘ಸ್ಟಿಂಗರ್’ ತನಿಖಾ ಪತ್ರಕರ್ತ. ವಿಶ್ವದ ದೊಡ್ಡ ದೊಡ್ಡ ಮಾಧ್ಯಮಗಳಾದ ‘ದಿ ಏಜ್’, ‘ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್’, ಮತ್ತು ‘ಫೋರ್ ಕಾರ್ನರ್’ ಗಳಿಗಾಗಿ ಈತ ಕೆಲಸ ಮಾಡುತ್ತಿದ್ದ. ಈತನ ಸಹವರ್ತಿ ರಿಚರ್ಡ್ ಬೆಕರ್. ಇವರಿಬ್ರೂ 2013ರಲ್ಲಿ ‘ಅನ್ಆಯಿಲ್’ ಬಗ್ಗೆ ಒಂದು ಸುದ್ದಿ ಸಿದ್ದಪಡಿಸ್ತಾರೆ. ಆಸ್ಟ್ರೇಲಿಯಾದ ಪ್ರಮುಖ ಕಂಪೆನಿಯೊಂದು ಲಂಚ ನೀಡಿ ಮಧ್ಯ ಪೂರ್ವ ದೇಶಗಳಲ್ಲಿ ಹೇಗೆ ತೈಲದ ಕಾಂಟ್ರಾಕ್ಟ್ ಪಡೆಯಿತು ಎಂಬುದು ಆ ಸುದ್ದಿಯ ತಿರುಳು.

ಇಡೀ ಈ ತನಿಖೆಯಲ್ಲಿ ನಿಕ್ ಮೆಕೆಂಜಿಗೆ ಸಹಾಯಕನಾದ ವ್ಯಕ್ತಿ ಇನ್ನೊಬ್ಬನಿದ್ದ. ಅತನ ಹೆಸರನ್ನು ಇವರು ಎಲ್ಲೂ  ಬಿಟ್ಟುಕೊಟ್ಟಿಲ್ಲ. ಆತನನ್ನು ಕೋಡ್ ವರ್ಡ್ ‘ಲೆ ಫಿಗಾರೋ’ ಎಂದಷ್ಟೇ ಕರೆಯುತ್ತಾರೆ. ಈ ‘ಲೆ ಫಿಗಾರೋ’ ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಆರಂಭದಲ್ಲಿ ಈ ತಂಡಕ್ಕೆ ಮಾಹಿತಿಗಳು ಸಿಗುತ್ತಿದ್ದಿದ್ದೇ ಅಪರೂಪ. ನಂತರ ನಿಧಾನವಾಗಿ ಅನ್ಆಯಿಲ್ ನಿಂದ ಸೋರಿಕೆಯಾದ ಮೇಲ್ಸ್ ಸಿಗುತ್ತಾ ಹೋದವು.

ಇಡೀ ಜಾಲದ ಬಗ್ಗೆ ಮಾಹಿತಿ ನೀಡಲು ಒಬ್ಬ ವ್ಯಕ್ತಿ ಇದ್ದ. ಆತ ಪತ್ರಕರ್ತರಿಂದ ಬಯಸುತ್ತಿದ್ದಿದ್ದು ಇಷ್ಟೇ. ವಿಶ್ವದಾದ್ಯಂತ ಅಧಿಕಾರದಲ್ಲಿರುವ ಕೆಲ ಶ್ರೀಮಂತರು ಮತ್ತು ಕಂಪೆನಿಗಳಲ್ಲಿರುವ ಕೆಲವೇ ಕೆಲವು ಅತೀ ಶ್ರಿಮಂತರ ಭ್ರಷ್ಟಾಚಾರವನ್ನು ಜಗತ್ತಿನ ಮುಂದೆ ತೆರೆದಿಡುವುದಾಗಿತ್ತು. ಈತನ ಸಹಾಯದಿಂದ ಇಂಥಹದೊಂದು ವರದಿ ಕಳೆದ 10 ದಿನಗಳ ಹಿಂದೆ ಹೊರ ಬಂತು.

‘ಹಫಿಂಗ್ಟನ್ ಫೋಸ್ಟ್’, ‘ದಿ ಏಜ್’ ಹಾಗೂ ‘ಫೇರ್ ಫಾಕ್ಸ್ ನ್ಯೂಸ್’ ಹೊಂದಾಣಿಕೆಯಲ್ಲಿ ವರದಿಯನ್ನು ಪ್ರಕಟಿಸಿದವು.

‘ಪನಾಮ ಪೇಪರ್ಸ್’ ಹವಾ: 

‘ಅನ್ಆಯಿಲ್’ ಹಗರಣ ತೈಲ ಮಾರುಕಟ್ಟೆಯಲ್ಲಿ ನಡೆದ ಅತೀ ದೊಡ್ಡ ಹಗರಣ. ಇನ್ನೇನು ಈ ಹಗರಣದ ಹೊರಗೆ ಬಂದು ಅಂತರಾಷ್ಟ್ರೀಯ ಸುದ್ದಿಯಾಗುತ್ತಿತ್ತು. ಅತ್ತ ‘ಪನಾಮ ಪೇಪರ್ಸ್’ ಸದ್ದು ಮಾಡಲಾರಂಭಿಸಿತು. ತನ್ನ ವಿಶಾಲ ಹಗರಣದ ವರದಿಯಿಂದಾಗಿ ‘ಪನಾಮ ಪೇಪರ್ಸ್’ ಒಂದೇ ದಿನಕ್ಕೆ ಜಗನ್ಮಾನ್ಯವಾಯಿತು. ಅಲ್ಲಿಗೆ ಅನ್ಆಯಿಲ್ ಹಗರಣ ಬದಿಗೆ ಸರಿಯಲ್ಪಟ್ಟಿತು. ಹೀಗೆ ಇಂಥಹದ್ದೊಂದು ಅಪರೂಪದ, ಅದ್ಭುತ ತನಿಖಾ ವರದಿ ಪನಾಮಾ ದಾಖಲೆಗಳ ಮುಂದೆ ಪೇಲವವಾಗಿ ಕೊಚ್ಚಿ ಹೋಯಿತು. ಸುದ್ದಿ ಮಾಡುವುದು ಮುಖ್ಯವಲ್ಲ; ಅದು ಪ್ರಕಟವಾಗುವ ಕಾಲ ಕೂಡ ಅಷ್ಟೆ ಮುಖ್ಯ ಎಂಬ ಪತ್ರಿಕೋದ್ಯಮ ಪಾಠಕ್ಕೆ ಇದೊಂದು ತಾಜಾ ಉದಾಹರಣೆ.

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top