An unconventional News Portal.

ಓಂ ನಮಃ ಶಿವಾಯ…: ಈ ಅಲೆಮಾರಿಯ ಪಾಲಿಗೆ ಪ್ರಕೃತಿಯೇ ಆಲಯ!

ಓಂ ನಮಃ ಶಿವಾಯ…: ಈ ಅಲೆಮಾರಿಯ ಪಾಲಿಗೆ ಪ್ರಕೃತಿಯೇ ಆಲಯ!

ನಾವು ಅಂದುಕೊಂಡಂತೆ ಬದುಕುತ್ತಿದ್ದೇವೆ ಎಂದು ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ‘ನಾವು ಅಂದುಕೊಂಡಿದ್ದು’ ಏನು? ಅದು ಹಾಗೆ ಅನ್ನಿಸಲು ಕಾರಣಗಳೇನು ಎಂದು ಹುಡುಕಲು ಹೊರಟಾಗ ಗೊಂದಲ ಶುರುವಾಗುತ್ತದೆ. ನಿಜಕ್ಕೂ, ನಾನು ಬದುಕುತ್ತಿರುವ ಬದುಕು, ನಮ್ಮದೇನಾ? ಅನ್ನಿಸಲು ಶುರುವಾಗುತ್ತದೆ. ಯಾಕೆ ಈಗ ಈ ಪೀಠಿಕೆ ಎಂದರೆ, ಕಳೆದ 20 ವರ್ಷಗಳಿಂದ ತಮ್ಮನ್ನು ತಾವು, ಅಂದುಕೊಂಡ ಹಾದಿಯಲ್ಲಿಯೇ ನಡೆಸಿಕೊಂಡು ಬಂದು, ಇವತ್ತು ಸಾಗಿ ಬಂದ ಹಾದಿಯನ್ನು ಹಿಂತಿರುಗಿ ನೋಡಬೇಕು ಎಂಬ ಮನಸ್ಥಿತಿಯಲ್ಲಿರುವ ಒಬ್ಬರ ಪರಿಚಯವನ್ನು ನಿಮಗೆ ಮಾಡಿಸಬೇಕಿದೆ.

ಅವರು ಮಂಜುನಾಥ್ ಸುಳ್ಳೊಳ್ಳಿ. ಸಾಮಾಜಿಕ ಜಾಲತಾಣ ‘ಫೇಸ್ ಬುಕ್’ ಬಳಸುತ್ತಿರುವ ಕೆಲವರಿಗಾದರೂ ಇವರ ಪರಿಚಯವಿದೆ. ಕಳೆದ ಹಲವು ವರ್ಷಗಳಿಂದ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ತೆಗೆದ ಚಿತ್ರಗಳನ್ನು ಇವರು ತುಂಬಿಸುತ್ತಲೇ ಬಂದಿದ್ದಾರೆ. ಕಾಡು ಮೇಡುಗಳಲ್ಲಿ, ಬುಡಕಟ್ಟು ಜನರ ನಡುವೆ, ಜೋಯಿಡಾದ ಸಂತೆಯಲ್ಲಿ, ಗೋವಾದ ಗೇರುಹಣ್ಣಿನ ಮದ್ಯ ತಯಾರಿಕೆಯ ನಡುವೆ ನಿಂತ ಇವರ ಚಿತ್ರಗಳು ಈ ಕಾಲಕ್ಕೆ ಹೊಸತೇನನ್ನೋ ಹೇಳಲು ಬಯಸುತ್ತಿರುವಂತೆ ಭಾಸವಾಗುತ್ತಿವೆ. ಒಮ್ಮೊಮ್ಮೆ, ಬೆಟ್ಟದ ತಪ್ಪಲಿನಲ್ಲಿ ವಿರಾಗಿಯಂತೆ ಕಾಣಿಸುವ ಮಂಜುನಾಥ್, ಮತ್ತೊಮ್ಮೆ ಗ್ರಾಮೀಣ ಜನರ ನಡುವೆ ಮನೆಮಗನೇನೋ ಅನ್ನಿಸಿ ಬಿಡುತ್ತಾರೆ. ಕೆಲವು ಕಾಲ ಕಳೆದರೆ, ಮಣ್ಣಿನ ಜತೆ ಬೆರೆಯುವ ಇವರ ತವಕ ಕಾಣಿಸುತ್ತದೆ, ಮರುಕ್ಷಣವೇ ಇನ್ನೆಲ್ಲೋ ಗುಹೆಯ ಸಂಶೋಧನೆ ಮಾಡಿದ್ದೀನಿ ಎಂದು ಹೇಳಿಕೊಳ್ಳುತ್ತಾರೆ.

ms-2

ಹೀಗೆ, ಇವತ್ತಿನ ಯಾಂತ್ರಿಕ ಬದುಕಿನಲ್ಲಿ ಜಂಜಾಟದಲ್ಲಿರುವವರಿಗೆ ಒಂದಷ್ಟು ದಿನಗಳ ಮಟ್ಟಿಗಾದರೂ, ಇಂತಹದೊಂದು ‘ಇನ್ ಟು ದಿ ವೈಲ್ಡ್’ ಬದುಕು ಬೇಕು ಎಂಬ ಭಾವನೆ  ಮೂಡಿಸುವ ಹೊತ್ತಿಗೇ, ಮಂಜುನಾಥ್ ಸುಮಾರು ಎರಡು ದಶಕಗಳನ್ನು ಹೀಗೆ ಕಾಡುಗಳ ನಡುವೆ, ನಿಸರ್ಗದ ನಡುವೆ ಕಳೆದು ಬಿಟ್ಟಿದ್ದಾರೆ.

‘ಸಮಾಚಾರ’ ಜತೆ ಮುಂಜಾನೆ ಹೊತ್ತಿಗೆ ಸುದೀರ್ಘ ಮಾತುಕತೆಗೆ ಸಿಕ್ಕ ಮಂಜುನಾಥ್, ಮನಸ್ಸು ಬಿಚ್ಚಿ, ತಮ್ಮೊಳಗಿನ ಭಾವನೆಗಳನ್ನು ಹಂಚಿಕೊಂಡರು. “ನಿಸರ್ಗವೇ ದೇವರು, ಅದೇ ನಿಜವಾದ ಧರ್ಮ,” ಎಂದೇ ಮಾತು ಶುರುಮಾಡಿದ ಅವರು, “ನಾನು ಏನು ಮಾಡಬೇಕು ಅಂದುಕೊಂಡಿದ್ದೆನೋ, ಅದೇ ಆಗಿ ಬದುಕಿ ಬಿಟ್ಟೆ ನೋಡಿ,” ಎಂದು ಬದುಕಿನಲ್ಲಿ ಕಂಡುಕೊಂಡ ಈವರೆಗಿನ ಸತ್ಯಗಳನ್ನು ಹಂಚಿಕೊಳ್ಳುತ್ತ ಹೋದರು.

ಮಂಜುನಾಥ್ ತಂದೆ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದವರು. ಇವರಿಗೆ ಐಎಫ್ಎಸ್ ಅಧಿಕಾರಿಯಾಗಬೇಕು ಎಂಬ ಕನಸಿತ್ತು. ಅದಕ್ಕಾಗಿ ಟ್ರೈನಿಂಗ್ ಪಡೆಯಲು ದಿಲ್ಲಿಗೆ ಹೋಗುತ್ತಾರೆ. ಅಲ್ಲಿ ಜೆಎನ್ಯು ಕ್ಯಾಂಪಸ್ ಪ್ರವೇಶ ಸಿಗುತ್ತದೆ. ಸೀತಾರಾಮ್ ಯಚೂರಿಯಂತಹ ಕಮ್ಯುನಿಸ್ಟ್ ನಾಯಕರ ಮಾತುಗಳಿಗೆ ಕಿವಿಯಾಗುತ್ತಾರೆ. “ಈ ಸಮಯದಲ್ಲಿ ಸಿಕ್ಕಾಪಟ್ಟೆ ಓದುತ್ತಿದ್ದೆ. ನಮ್ಮ ಮನೆಯಲ್ಲಿ ಈಗ ಸುಮಾರು 9 ಸಾವಿರ ಪುಸ್ತಕಗಳಿರಬಹುದು. ಪ್ಯಾಪಿಲಾನ್ ನನ್ನ ಬದುಕು ಬದಲಿಸಿದ ಪುಸ್ತಕ,” ಎನ್ನುತ್ತಾರೆ ಅವರು.

ದಿಲ್ಲಿಯಿಂದ ಬಂದವರು ಒಂದಷ್ಟು ದಿನ ಅಘೋರಿಗಳ ಜತೆ, ನಾಗಸಾಧುಗಳ ಜತೆ ಬದುಕು ಕಳೆಯುತ್ತಾರೆ. ನಂತರ ಮನೆಯ ಹಾದಿ ಹಿಡಿಯುತ್ತಾರೆ. ಈ ಸಮಯದಲ್ಲಿ ಸಿಕ್ಕಿದ ‘ಗುರು’ಗಳೊಬ್ಬರು, “ನಿಮಗೆ ಏನಿಷ್ಟವೋ ಹಾಗೆ ಬದುಕಿ ಬಿಡಿ,” ಎನ್ನುತ್ತಾರೆ. ”ಇವತ್ತು 20 ವರ್ಷಗಳ ನಂತರ ನಿಂತು ನೋಡಿದಾಗ ಅವತ್ತು ಅವರು ಹೇಳಿದ ಅದೊಂದು ಮಾತು ನನ್ನ ಎಲ್ಲಾ ಗೊಂದಲಗಳಿಗೂ ಪರಿಹಾರ ನೀಡಿತು,” ಎನ್ನುತ್ತಾರೆ ಮಂಜುನಾಥ್. ಅಲ್ಲಿಂದ ಮುಂದೆ ಶುರುವಾಗಿದ್ದೇ ಕಾಡಿನ ಜತೆ ಬೆರೆಯುವ ಕೆಲಸ.

ಹೀಗೆ, 20 ವರ್ಷಗಳನ್ನು ಕಳೆದು ಬಿಟ್ಟಿದ್ದಾರೆ ಮಂಜುನಾಥ್. ಅವರ ಕಾಡಿನ ಕತೆಗಳನ್ನು ಹೇಳಲು ಹೊರಟರೆ ದೊಡ್ಡ ಗ್ರಂಥವಾಗಬಹುದೇನೋ ಅನ್ನಿಸುವಷ್ಟು ಅವರ ಬಳಿ ಮಾಹಿತಿ ಇದೆ. ನಿಸರ್ಗದ ಜತೆಗಿನ ಸಹವಾಸ ಅವರನ್ನೂ ಆಧ್ಯಾತ್ಮದ ಕಡೆಗೆ ಸೆಳೆದಿದೆಯೇನೋ ಎಂದು ಭಾಸವಾಗುವಂತೆ ಮಾತನಾಡುತ್ತಾರೆ. “ನಾನು ಕಾಡಿನ ನಡುವೆ, ಯಾವುದೋ ಬೆಟ್ಟದ ತಪ್ಪಲಿನಲ್ಲಿ ರಾತ್ರಿ ಕಳೆಯುವಾಗ ಇದೇ ಸುಂದರ, ಇದೇ ಸತ್ಯ ಅನ್ನಿಸಿ ಬಿಡುತ್ತದೆ. ಭೂತ ಮತ್ತು ಭವಿಷ್ಯವನ್ನು ಮರೆತು, ಆ ಕ್ಷಣ ನನ್ನಲ್ಲಿ ಪರಿಪೂರ್ಣತೆಯನ್ನು ಮೂಡಿಸಿ ಬಿಡುತ್ತದೆ,” ಎಂಬುದು ಅವರ ಅನುಭವದ ಮಾತು.

ms-3ಮರುಕ್ಷಣವೇ, “ಕೆಲವು ಕಡೆ ಬುಡಕಟ್ಟು ಜನರನ್ನು ಭೇಟಿ ಮಾಡಿದಾಗ ಸರಕಾರ ಆಗಲೀ, ಹೊರಗಿನ ಪ್ರಪಂಚವಾಗಲೀ ಅವರನ್ನು ಇನ್ನೂ ಮುಟ್ಟಿಯೇ ಇಲ್ಲದ್ದನ್ನು ನೋಡಿದಾಗ ಬೇಸರವಾಗುತ್ತದೆ. ಈ ವ್ಯವಸ್ಥೆಯ ಬಗ್ಗೆ ಅಸಹನೆಯೊಂದು ಹುಟ್ಟುತ್ತದೆ. ನಾನು ಹೀಗೆ ಬದುಕುತ್ತಿರುವುದು ಸರಿ ಅನ್ನಿಸಿ ಬಿಡುತ್ತದೆ,” ಎಂದು ಮಂಜುನಾಥ್ ಬೇರೊಂದು ಲಹರಿಗೆ ಹೊರಳಿಕೊಳ್ಳುತ್ತಾರೆ.

ನೀವು ನಿಸರ್ಗವೇ ಧರ್ಮ ಎನ್ನುತ್ತೀರಿ, ಪ್ರಕೃತಿಯೇ ‘ಸನಾತನ’ ಎನ್ನುತ್ತೀದ್ದೀರಿ? ಇವೇ ಪದಗಳನ್ನು ಎಲ್ಲೋ ಕೇಳಿದ ಹಾಗಿದೆಯಲ್ಲ ಎಂದರೆ, “ಅಯ್ಯೋ, ಅದು ಹೊರಗಿನವರ ಪಾಲಿನ ಧರ್ಮ, ರಾಜಕೀಯ, ಸೈದ್ಧಾಂತಿಕ ತಿಕ್ಕಾಟಗಳು. ಅದನ್ನು ಮಾಡಲು ಈ ದೇಶದಲ್ಲಿ ಮಾನವ ಸಂಪನ್ಮೂಲದ ಕೊರತೆ ಇಲ್ಲ. ಹೀಗಾಗಿ ನಾನು ಅದರಿಂದ ದೂರವಿದ್ದೇನೆ, ಓಂ ನಮಃ ಶಿವಾಯ…” ಎಂದು ನಗುತ್ತಾರೆ.

ನಮ್ಮ ನಡುವೆಯೇ, ನಮ್ಮಂತವರಾಗದ ಇಂತವರು ಹೇಳುವ ಬದುಕು ವಾಸ್ತವನಾ? ಅಥವಾ ಯಾಂತ್ರಿಕವಾಗಿ, ಭವಿಷ್ಯದ ಬಗ್ಗೆ ಸಿಕ್ಕಾಪಟ್ಟೆ ಚಿಂತಿಸುತ್ತ, ವರ್ತಮಾನದ ಲೆಕ್ಕಾಚಾರಗಳಲ್ಲಿ ಕಳೆಯುವ ನಮ್ಮ ಬದುಕು ವಾಸ್ತವನಾ? ಉತ್ತರ ಎರಡರ ನಡುವೆ ಇದೆ ಎನ್ನಿಸುತ್ತದೆ.

Top