An unconventional News Portal.

‘ಉದಯ ನ್ಯೂಸ್’ ಮುಚ್ಚಲು ನೋಟಿಸ್: ನಷ್ಟ ತುಂಬಲು ಮಾರನ್ ಮಗಳ ‘ಪಾಕೆಟ್ ಮನಿ’ ಸಾಕು!

‘ಉದಯ ನ್ಯೂಸ್’ ಮುಚ್ಚಲು ನೋಟಿಸ್: ನಷ್ಟ ತುಂಬಲು ಮಾರನ್ ಮಗಳ ‘ಪಾಕೆಟ್ ಮನಿ’ ಸಾಕು!

ಕೋಪ, ಸಿಟ್ಟು, ಬೇಜಾರು, ಅಸಹನೆ, ಆಕ್ರೋಶ, ಖುಷಿ, ಸಂತಸ, ಸಂತೃಪ್ತಿ, ಉತ್ಸಾಹ… ಹೀಗೆ ನಾನಾ ಭಾವನೆಗಳನ್ನು ಅವುಗಳ ಅತಿರೇಕದಲ್ಲಿ ಅನುಭವಿಸುವ ಸಮುದಾಯ ಪತ್ರಕರ್ತರದ್ದು. ಇವುಗಳ ಜತೆಗೆ, ಉದ್ಯೋಗದ ಅಭದ್ರತೆಯೂ ಅವರನ್ನು ಯಾವ ಪರಿಯಲ್ಲಿ ಕಾಡಬಹುದು ಎಂಬುದಕ್ಕೆ ಕರ್ನಾಟಕದ ಸುದ್ದಿ ಮಾಧ್ಯಮದಲ್ಲಿ ಸದ್ಯ ನಡೆದಿರುವ ಈ ಬೆಳವಣಿಗೆಯೇ ಸಾಕ್ಷಿ.

ಕಳೆದ ಐದು ವರ್ಷಗಳಲ್ಲಿ 3,834.95 ಕೋಟಿ ನಿವ್ವಳ ಲಾಭ ಗಳಿಸಿದ ಸನ್ ನೆಟ್ವರ್ಕ್ ತನ್ನ ಅಂಗ ಸಂಸ್ಥೆ ‘ಉದಯ ನ್ಯೂಸ್’ನ್ನು ಮುಚ್ಚಲು ತೀರ್ಮಾನಿಸಿದೆ. ನಷ್ಟದ ಕಾರಣವನ್ನು ಮುಂದಿಟ್ಟ ಸಂಸ್ಥೆಯ ಮಾಲೀಕ ಕಲಾನಿಧಿ ಮಾರನ್ 73 ಸಿಬ್ಬಂದಿಗಳ ಉದ್ಯೋಗ ಖಾತ್ರಿಯನ್ನು ಕಿತ್ತುಕೊಳ್ಳಲು ಮೂರು ತಿಂಗಳ ಕಾಲಾವಕಾಶ ನಿಗದಿ ಮಾಡಿದ್ದಾರೆ. ಕಾರ್ಪೊರೇಟ್ ಭ್ರಮೆಯಲ್ಲಿ ಮಿಂದೇಳುತ್ತಿರುವ ದೇಶದಲ್ಲಿ, ಬೃಹತ್ ಕಾರ್ಪೊರೇಟ್ ಮಾಧ್ಯಮ ಸಂಸ್ಥೆಯೊಂದು ಹೇಗೆ ತನ್ನ ಸಿಬ್ಬಂದಿಗಳನ್ನು ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ.

udaya-news

ನಾಲ್ಕು ವರ್ಷಗಳ ಗುದ್ದಾಟ:

ಕರ್ನಾಟಕದ ಖಾಸಗಿ ಟಿವಿ ವಲಯಕ್ಕೆ ಮೊದಲು ಕಾಲಿಟ್ಟಿದ್ದು ಉದಯ ಟಿವಿ. ಸುಮಾರು 19 ವರ್ಷಗಳ ಹಿಂದೆ ರಾಜ್ಯದಲ್ಲಿ ಡಿಡಿ 1 ಹಾಗೂ ಚಂದನ ವಾಹಿನಿಗಳು ನೀಡುತ್ತಿದ್ದ ಮನೋರಂಜನೆಯನ್ನು ಸ್ಥಿತ್ಯಂತರಗೊಳಿಸಿದ್ದು ತಮಿಳುನಾಡು ಮೂಲದ ‘ಸನ್ ನೆಟ್ವರ್ಕ್’ ಮಾಧ್ಯಮ ಸಂಸ್ಥೆ. ಉದಯ ಟಿವಿ ಹೆಸರಿನಲ್ಲಿ ಅದು ಮೊದಲು ತನ್ನ ಕಾರ್ಯಾಚರಣೆ ಶುರು ಮಾಡುತ್ತಿದ್ದಂತೆ ಜನ ಕೂಡ ಹೊಸ ಮಾದರಿಯ ಮನೋರಂಜನೆಗೆ ಒಗ್ಗಿಕೊಂಡರು. ಅಲ್ಲಿಂದ ಸುಮಾರು ಒಂದೂವರೆ ದಶಕಗಳ ಕಾಲ ಕರ್ನಾಟಕದ ಮನೋರಂಜನಾ ಲೋಕದ ಅನಭಿಷಕ್ತ ದೊರೆಯಾಗಿ ಉದಯ ಟಿವಿ ಆಳ್ವಿಕೆ ನಡೆಸಿತು.

ಹೀಗಿರುವಾಗಲೇ, 2000ನೇ ಇಸವಿಯಲ್ಲಿ ನಟ ರಾಜ್ ಕುಮಾರ್ ಅಪಹರಣ ಪ್ರಕರಣ ನಡೆಯಿತು. ತನ್ನ ಬಳಿ ಇದ್ದ ಸುದ್ದಿ ವಾಹಿನಿಯ ಪರವಾನಗಿಯನ್ನು ಅನುಷ್ಠಾನಕ್ಕೆ ಇಳಿಸಲು ‘ಸನ್ ನೆಟ್ವರ್ಕ್’ ಮುಂದಾಯಿತು. ಹಾಗೆ ತರಾತುರಿಯಲ್ಲಿ ಆರಂಭಗೊಂಡಿದ್ದು ‘ಉದಯ ನ್ಯೂಸ್’. “ಅವತ್ತು ಹೆಚ್ಚಿನ ಸಿದ್ದತೆಗಳೂ ಇರಲಿಲ್ಲ. ಉದಯ ಮನೋರಂಜನಾ ವಾಹಿನಿಯಲ್ಲಿದ್ದ ಸಿಬ್ಬಂದಿಗಳನ್ನೇ ಹೊಸ ನ್ಯೂಸ್ ಚಾನಲ್ಗೆ ವರ್ಗಾವಣೆ ಮಾಡಲಾಯಿತು. ತಾಂತ್ರಿಕ ಉಪಕರಣಗಳನ್ನು ಎರವಲು ಪಡೆಯಲಾಯಿತು. ಮೊನ್ನೆ ಮೊನ್ನೆವರೆಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಮಾಡಲು ಒದ್ದಾಡುತ್ತಿದ್ದೆವು. ಈಗಿರುವುದು 3 ವಿಡಿಯೋ ಎಡಿಟರ್ಗಳು, ಡೆಸ್ಕ್ನಲ್ಲಿ ಐವರು ಸಿಬ್ಬಂದಿ. ಕಳಪೆ ಮಟ್ಟದ ಸೌಕರ್ಯ ನೀಡಿ ರೇಟಿಂಗ್ ತನ್ನಿ ಎಂದರೆ ಹೇಗೆ ಸಾಧ್ಯ?” ಎನ್ನುತ್ತಾರೆ ಉದಯ ನ್ಯೂಸ್ ಹಿರಿಯ ಸಿಬ್ಬಂದಿಯೊಬ್ಬರು.

ಹಾಗೆ ನೋಡಿದರೆ, ಇವತ್ತಿಗೆ ಡಜನ್ ಸಂಖ್ಯೆ ಮುಟ್ಟಿರುವ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯಚರಣೆ ನಡೆಸುತ್ತಿರುವುದು ‘ಉದಯ ನ್ಯೂಸ್’. ಇಲ್ಲಿನ ಆಂತರಿಕ ಮೂಲಗಳ ನೀಡಿರುವ ಮಾಹಿತಿ ಪ್ರಕಾರ, “ಪ್ರತಿ ತಿಂಗಳು ಸುದ್ದಿ ವಾಹಿನಿಗೆ ಖರ್ಚಾಗುತ್ತಿರುವುದು 25 ಲಕ್ಷ ರೂಪಾಯಿಗಳು. ಇದರಲ್ಲಿ ಸಂಸ್ಥೆಯಲ್ಲಿರುವ 73 ಸಿಬ್ಬಂದಿಗಳಿಗೆ ಸಂಬಳ ರೂಪದಲ್ಲಿ ವೆಚ್ಚ ಮಾಡುತ್ತಿದ್ದದ್ದು 13 ಲಕ್ಷ. ಜತೆಗೆ ಇದಕ್ಕೆ ಪ್ರತ್ಯೇಕವಾದ ಮಾರ್ಕೆಟಿಂಗ್ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ.”

ಚಾನಲ್ ಮುಚ್ಚುವ ಬಗ್ಗೆ ಸಂಸ್ಥೆ ಲೇಬರ್ ಕಮಿಷನರ್ ಗೆ ಬರೆದ ಪತ್ರ

ಚಾನಲ್ ಮುಚ್ಚುವ ಬಗ್ಗೆ ಸಂಸ್ಥೆ ಲೇಬರ್ ಕಮಿಷನರ್ ಗೆ ಬರೆದ ಪತ್ರ

ಕಳೆದ ನಾಲ್ಕು ವರ್ಷಗಳಿಂದ ‘ಉದಯ ನ್ಯೂಸ್’ ಮುಚ್ಚಲಾಗುತ್ತಂತೆ ಅನ್ನುವ ವರ್ತಮಾನ ಇಲ್ಲಿನ ಸಿಬ್ಬಂದಿಗಳಿಗೆ ಸಾಮಾನ್ಯ ಸಂಗತಿಯಾಗಿ ಬದಲಾಗಿತ್ತು. ಮೊದಲು ಬಾಯ್ಮಾತಿನಲ್ಲಿ, ಗಾಳಿ ಸುದ್ದಿ ರೂಪದಲ್ಲಿದ್ದ ಈ ಸುದ್ದಿ ಇತ್ತೀಚೆಗೆ ‘ಸನ್ ನೆಟ್ವರ್ಕ್’ ಕಡೆಯಿಂದ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮತ್ತು ಕಾರ್ಮಿಕ ಸಚಿವಾಲಯಕ್ಕೆ ಸಲ್ಲಿಸಿದ ‘ಫಾರ್ಮ್ ಕ್ಯೂ’ ರೂಪದಲ್ಲಿ ವಾಸ್ತವದ ಸ್ವರೂಪ ಪಡೆದುಕೊಂಡಿದೆ. ಕಾರ್ಮಿಕ ವಿವಾದಗಳ ಕಾಯ್ದೆ ಪ್ರಕಾರ 50 ಜನ ಮೀರಿರುವ ಸಂಸ್ಥೆಯನ್ನು ಮುಚ್ಚುವ ಮುನ್ನ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಿದೆ. ಇದನ್ನೀಗ ‘ಸನ್ ನೆಟ್ವರ್ಕ್’ ಪಾಲಿಸಿದೆ. ಜತೆಗೆ, ‘ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದರೂ, ನಷ್ಟದಲ್ಲಿರುವ ಸಂಸ್ಥೆ’ಯನ್ನು ಮುಚ್ಚುವುದಾಗಿ ಕಾರಣವನ್ನೂ ನೀಡಿದೆ.

ಅದು ಕೋಟಿ ಸಾಮ್ರಾಜ್ಯ:

ನಿಜಕ್ಕೂ ‘ಸನ್ ನೆಟ್ವರ್ಕ್’ಗೆ ಉದಯ ನ್ಯೂಸ್ ನಷ್ಟ ಉಂಟು ಮಾಡಿದೆಯಾ? ಈ ಕುರಿತು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ ಅವರ ಬ್ಲಾಗ್ ‘ಚುರುಮುರಿ’ ನೆರವು ನೀಡುತ್ತದೆ. ಉದಯ ನ್ಯೂಸ್ ಮುಚ್ಚುವ ಕುರಿತು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ‘ಚುರುಮುರಿ’ ಪ್ರಕಟಿಸಿರುವ ವರದಿಯ ಸಾರ ಇಲ್ಲಿದೆ:

ಅಟಲ್ ಬಿಹಾರಿ ವಾಜಿಪೇಯಿ ಸರಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದ ಮುರಸೋಳಿ ಮಾರನ್ ಮಗ ಕಲಾನಿಧಿ ಮಾರನ್. ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಹತ್ತಿರದ ಸಂಬಂಧಿ. ಕಲಾನಿಧಿ ಮಾರನ್ ದೇಶದ 500 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಅವರ ಆಸ್ತಿಯ ಪ್ರಮಾಣ ಅಂದಾಜು 27,470 ಕೋಟಿ ರೂಪಾಯಿಗಳು. ಇವರ ಪತ್ನಿ ಕಾವೇರಿ ಕಲಾನಿಧಿ ಕರ್ನಾಟಕ ಮೂಲದ ಮಹಿಳೆ. ಮಡಿಕೇರಿಯ ಗೋಣಿಕೊಪ್ಪದಲ್ಲಿ ಹುಟ್ಟಿದ ಕಾವೇರಿ ಇಂದು ಸನ್ ಟಿವಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ. ಸನ್ ಟಿವಿ ಸಮೂಹ ಸಂಸ್ಥೆಗಳ ಅಡಿಯಲ್ಲಿ ಒಟ್ಟು 33 ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ.

ಕಲಾನಿಧಿ ಮಾರನ್ ಹಾಗೂ ಪತ್ನಿ ಕಾವೇರಿ ಮಾರನ್ ಕಳೆದ ಐದು ವರ್ಷಗಳಲ್ಲಿ ಪಡೆದ ಸಂಬಳ ಮತ್ತಿತರ ಭತ್ಯೆಗಳ ಒಟ್ಟು ಮೊತ್ತವೇ 642.58 ಕೋಟಿ ರೂಪಾಯಿಗಳು. (ಉದಯ ನ್ಯೂಸ್ ನಡೆಸಲು ವರ್ಷಕ್ಕೆ ಖರ್ಚಾಗುತ್ತಿರುವುದು ಹೆಚ್ಚೆಂದರೆ ಮೂರು ಕೋಟಿ ರೂ.) ಇವುಗಳ ಜತೆಗೆ, ಶೇರು ಮಾರುಕಟ್ಟೆಯಲ್ಲಿರುವ ಸನ್ ಟಿವಿ ಸಮೂಹ ಸಂಸ್ಥೆಗಳ ಒಟ್ಟು ಶೇರುಗಳ ಪೈಕಿ ಶೇ. 75ರಷ್ಟ ಮಾರನ್ ದಂಪತಿ ಅಧೀನದಲ್ಲಿವೆ. ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಲಾಭದಲ್ಲಿರುವ ದೇಶದ ಕೆಲವೇ ಮಾಧ್ಯಮಗಳ ಸಂಸ್ಥೆಗಳ ಪೈಕಿ ಪ್ರಮಖ ಸ್ಥಾನದಲ್ಲಿ ಸನ್ ಟಿವಿ ಸಮೂಹ ಸಂಸ್ಥೆ ಇದೆ. ಸದ್ಯ ಮಾರುಕಟ್ಟೆಯ ಅಂದಾಜಿನ ಪ್ರಕಾರ, ಸನ್ ಟಿವಿ ಸಮೂಹ ಸಂಸ್ಥೆಗಳ ಒಟ್ಟು ಆಸ್ತಿಯ ಮೊತ್ತ 28 ಸಾವಿರ ಕೋಟಿ ತೂಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಸಂಸ್ಥೆ ಘೋಷಿಸಿಕೊಂಡ ನಿವ್ವಳ ಆಸ್ತಿಯ ಮೌಲ್ಯವೇ 3,834.95 ಕೋಟಿ.

ಮೂರು ತಿಂಗಳ ಹಿಂದೆ, ಸನ್ ಟಿವಿ ಸಮೂಹ ಸಂಸ್ಥೆಗಳ ಮಲೆಯಾಳಂ ವಾಹಿನಿ ಸೂರ್ಯ ಟಿವಿಯ 178 ಸಿಬ್ಬಂದಿ ಧರಣಿ ನಡೆಸಿದ್ದರು. ಅವರಿಗೆ ವಾರ್ಷಿಕ ಸಂಬಳ 12 ರೂಪಾಯಿಗಳಿಂದ 172 ರೂಪಾಯಿಗಳವರೆಗೆ ಹೆಚ್ಚಳ ನೀಡಲಾಗಿದ್ದು ಕಾರಣವಾಗಿತ್ತು.

“ಮಾರನ್ ದಂಪತಿ ಸಂಸ್ಥೆಯಿಂದ ಪಡೆದ ಸಂಬಳ, ಭತ್ಯೆಗಳಿಗೆ ಹೋಲಿಸಿದರೆ ಉದಯ ನ್ಯೂಸ್ ಕಾರ್ಯಾಚರಣೆಗೆ ಖರ್ಚಾಗುತ್ತಿರುವುದು ಅತ್ಯಂತ ಕಡಿಮೆ ಹಣ. ಮಾರನ್ ಮಗಳ ಪಾಕೆಟ್ ಮನಿಯಲ್ಲಿ ಈ ವಾಹಿನಿಯನ್ನು ಮುನ್ನಡೆಸಬಹುದು,” ಎನ್ನುತ್ತಾರೆ ವಾಹಿನಿಯ ಜತೆ ಹಲವು ವರ್ಷಗಳ ಒಡನಾಟ ಹೊಂದಿರುವ ಪತ್ರಕರ್ತರೊಬ್ಬರು.

ಮುಂದಿನ ಹಾದಿ:

2010ರಲ್ಲಿ ಕರ್ನಾಟಕದಲ್ಲಿಯೂ ಉದಯ ಟಿವಿ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದರು. “ಆ ದಿನಗಳಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೆವು. ನಮ್ಮ ನಾಯಕತ್ವವಹಿಸಿಕೊಂಡ ಕೆಲವರು ಕೊನೆಗೆ ಆಡಳಿತ ಮಂಡಳಿ ಜತೆ ಒಳ ಒಪ್ಪಂದ ಮಾಡಿಕೊಂಡು ಉದ್ಯೋಗಿಗಳನ್ನು ನಡು ನೀರಿನಲ್ಲಿ ಕೈಬಿಟ್ಟರು. ಹೀಗಾಗಿ ಈ ಬಾರಿ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಈಗ ನೋಟಿಸ್ ನೀಡಿರುವುದನ್ನು ನೋಡಿದರೆ, ಆಡಳಿತ ಮಂಡಳಿ ಉದ್ಯೋಗಿಗಳ ಮುಂದಿನ ನಡೆ ಏನು ಎಂಬುದನ್ನು ಗಮನಿಸುವ ತಂತ್ರವೂ ಆಗಿರಬಹುದು. ಇಲ್ಲಿ 73 ಸಿಬ್ಬಂದಿಗಳಿದ್ದರೂ ಪೂರ್ಣ ಪ್ರಮಾಣದ ಸಿಬ್ಬಂದಿಗಳ ಸಂಖ್ಯೆ 20 ದಾಟುವುದಿಲ್ಲ,” ಎನ್ನುತ್ತಾರೆ ಉಯದ ನ್ಯೂಸ್ ನ ಮತ್ತೊಬ್ಬ ಹಿರಿಯ ಉದ್ಯೋಗಿ ಒಬ್ಬರು.

ಒಂದು ಬೃಹತ್ ಕಾರ್ಪೊರೇಟ್ ಸಂಸ್ಥೆ, ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭವನ್ನು ಘೋಷಿಸಿಕೊಂಡು ಬರುತ್ತಿರುವ ಸಾಮ್ರಾಜ್ಯ, ಕೋಟಿ ಲೆಕ್ಕದಲ್ಲಿ ಸಂಬಳ, ಭತ್ಯೆಗಳನ್ನು ಪಡೆಯುವ ಅದರ ಮಾಲೀಕರು ಹೀಗೆ ಕೆಳಹಂತದ ವಿಚಾರದಲ್ಲಿ ಹೀನಾಯವಾಗಿ ನಡೆದುಕೊಳ್ಳುತ್ತಾರೆ ಎಂಬುದನ್ನು ಈ ಬೆಳವಣಿಗೆ ಸ್ಪಷ್ಟವಾಗಿ ಬಿಡಿಸಿಡುತ್ತಿದೆ.

ಊರ ತುಂಬಾ ಅನ್ಯಾಯಗಳು ನಡೆದಾಗ ಧ್ವನಿ ಎತ್ತುತ್ತೀವಿ ಎನ್ನುವ ಮಾಧ್ಯಮಗಳು, ತಮ್ಮದೇ ವಲಯದ ಸಹೋದ್ಯೋಗಿಗಳು ಸಂಕಷ್ಟಕ್ಕೆ ಸಿಕ್ಕಾಗ ಮೌನಕ್ಕೆ ಶರಣಾಗುತ್ತವೆ. ಇದಕ್ಕಿಂತ ಕ್ರೂರವಾದುದ್ದು ಏನೆಂದರೆ, ಒಂದು ವೇಳೆ ಅನ್ಯಾಯವನ್ನು ಪ್ರಶ್ನಿಸಿದರೆ, ಅಂತಹ ಪತ್ರಕರ್ತರನ್ನು ಹಣಿಯುವ ಮಟ್ಟಕ್ಕೂ ಇಳಿದು ಬಿಡುತ್ತಾರೆ. ಇಂತಹ ಅಸಹ್ಯಕರ ಇತಿಹಾಸಗಳನ್ನು ಹೊಂದಿರುವ ಕನ್ನಡ ಸುದ್ದಿ ವಾಹಿನಿಗಳ ಲೋಕದಲ್ಲಿ ಈಗ ಅಭದ್ರತೆಯ ಭಾವಗಳನ್ನು ‘ಉದಯ ನ್ಯೂಸ್’ ಸಿಬ್ಬಂದಿಗಳು ಎದುರಿಸುತ್ತಿದ್ದಾರೆ. #ಜಸ್ಟಿಸ್ಫಾರ್ಉದಯ_ನ್ಯೂಸ್ ಎಂಬ ಹ್ಯಾಶ್ ಟ್ಯಾಗ್ ಯಾರು ಶುರುಮಾಡುತ್ತಾರೆ? ಯಾರ ಪ್ರೈಂ ಟೈಮಿನಲ್ಲಿ ಇಲ್ಲಿನ ಸಿಬ್ಬಂದಿಗಳ ಧ್ವನಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

(ಚಿತ್ರ ಕೃಪೆ: ಸಕ್ಸಸ್ ಸ್ಟೋರಿ)

Top