An unconventional News Portal.

ಬ್ಯಾಂಡ್ ಬಾಜಾ ಬಾರ್ಕ್ ರೇಟಿಂಗ್: ಟಿವಿ9, ವಿ6, ಇಂಡಿಯಾ ನ್ಯೂಸ್ ವಾಹಿನಿಗಳ ಮೇಲೆ ಗುರುತರ ಆರೋಪ

ಬ್ಯಾಂಡ್ ಬಾಜಾ ಬಾರ್ಕ್ ರೇಟಿಂಗ್: ಟಿವಿ9, ವಿ6, ಇಂಡಿಯಾ ನ್ಯೂಸ್ ವಾಹಿನಿಗಳ ಮೇಲೆ ಗುರುತರ ಆರೋಪ

ಪ್ರಾದೇಶಿಕ ಭಾಷೆಯ ಸುದ್ದಿ ವಾಹಿನಿಗಳ ಮೇಲೆ ವೀಕ್ಷಕರನ್ನು ಅಳೆಯುವ ಏಜೆನ್ಸಿ ಬಾರ್ಕ್ ತನಿಖೆ ಆರಂಭಿಸಿದೆ.

ತೆಲುಗಿನ ಎರಡು ಜನಪ್ರಿಯ ವಾಹಿನಿಗಳಾದ ‘ಟಿವಿ9’ ಮತ್ತು ‘ವಿ6’ ಹಾಗೂ ಹಿಂದಿ ಭಾ‍ಷೆಯಲ್ಲಿ ಸುದ್ದಿಯನ್ನು ಭಿತ್ತರಿಸುತ್ತಿರುವ ‘ಇಂಡಿಯಾ ನ್ಯೂಸ್’ ಮೇಲೆ ಗುರುತರ ಆರೋಪ ಕೇಳಿಬಂದಿದೆ. ಟಿವಿಗಳ ರೇಟಿಂಗ್ ನೀಡುವ ‘ಬಾರ್ಕ್ ಇಂಡಿಯಾ’ (ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ – BARC) ರೇಟಿಂಗನ್ನು ತಿರುಚಲು ‘ದುರುದ್ದೇಶ ಪೂರಿತ ಚಟುವಟಿಕೆಯಲ್ಲಿ’ ತೊಡಗಿದ ಆರೋಪದ ಹಿನ್ನೆಲೆಯಲ್ಲಿ ದೂರುಗಳು ಕೇಳಿಬಂದಿದ್ದವು. ಈಗಾಗಲೇ ತನಿಖೆ ಜಾರಿಯಲ್ಲಿದ್ದು ನಾಲ್ಕು ವಾರಗಳ ಕಾಲ ಮೂರೂ ಚಾನಲ್ಲುಗಳನ್ನು ಆಳತೆಯ ಮಾಪನದಿಂದ ಹೊರಗಿಡಲಾಗಿದೆ.

ಈ ಕುರಿತು ಬಾರ್ಕ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

“ಬಾರ್ಕ್ ಮೀಟರ್ (ವೀಕ್ಷಕರು ಯಾವ ಚಾನಲ್ ಅನ್ನು ಎಷ್ಟು ಹೊತ್ತು ನೋಡುತ್ತಾರೆ ಎಂದು ಅಳೆಯಲು ಅಳವಡಿಸಿರುವ ಮೀಟರ್) ಅಳವಡಿಸಿರುವ ಮನೆಗಳಲ್ಲಿ ತಮ್ಮ ವಾಹಿನಿಯನ್ನೇ ವೀಕ್ಷಿಸುವಂತೆ ಹಣ ನೀಡುತ್ತಿದ್ದವು. ಈ ಮೂಲಕ ಪ್ರಭಾವ ಬೀರಿ, ಸಂಗ್ರಹಿಸುವ ಮಾಹಿತಿಯನ್ನೇ ತಿರುಚುತ್ತಿದ್ದವು,” ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿ ಹೇಳಿರುವುದಾಗಿ ‘ಲೈವ್ ಮಿಂಟ್’ ವರದಿ ಮಾಡಿದೆ.

ಈ ಕುರಿತು ಇಂಡಿಯಾ ನ್ಯೂಸ್ ಸಿಇಒ ವರುಣ್ ಕೊಹ್ಲಿ ‘ಮಿಂಟ್’ ಜತೆ ಮಾತನಾಡಿದ್ದು, “ಸಮಸ್ಯೆ ಪರಿಹರಿಸಲು, ಯಾವುದೇ ತಪ್ಪು ಮಾಹಿತಿ ರವಾನೆಯಾಗಿದ್ದರೆ ನಾವು ಬಾರ್ಕ್ ಸೇರಿದಂತೆ ನಮ್ಮ ಸಹಭಾಗಿಗಳ ಜತೆ ಮಾತನಾಡುತ್ತೇವೆ. ಸಮಸ್ಯೆ ಶೀಘ್ರ ಬಗೆಹರಿಯುವ ಭರವಸೆ ನಮಗಿದೆ. ನಾವು ನಂಬಿಕಸ್ಥ ನೆಟ್ವರ್ಕ್ ಆಗಿ ಕಳೆದ 8 ವರ್ಷಗಳಿಂದ ಬ್ರಾಡ್ಕಾಸ್ಟ್ ವ್ಯವಹಾರದಲ್ಲಿದ್ದೇವೆ. ಟ್ಯಾಮ್ ಮತ್ತು ಬಾರ್ಕ್ ರೇಟಿಂಗ್ನನಲ್ಲಿ ಕಳೆದ ಐದು ವರ್ಷಗಳಿಂದ ನಾವು ಸ್ಥಿರವಾದ ರೇಟಿಂಗ್ ಪಡೆಯುತ್ತಾ ಬಂದಿದ್ದೇವೆ. ಸಮಸ್ಯೆಯ ಆಳಕ್ಕೆ ಇಳಿಯಲು ನಾವು ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ನಂಬಿದ್ದೇವೆ,” ಎಂದಿದ್ದಾರೆ.

ಇನ್ನು ವಿ6 ಸಿಇಒ ಅಂಕಮ್ ರವಿ ಪ್ರತಿಕ್ರಿಯೆ ನೀಡಿದ್ದು, “ಈ ಕ್ಷಣಕ್ಕೆ ನಾವು ಅಘಾತಕ್ಕೆ ಒಳಗಾಗಿದ್ದೇವೆ. ನನಗೆ ಗೊತ್ತಿದೆ; ಏನೋ ಸಮಸ್ಯೆಯಾಗಿದೆ. ನಾವು ಬಾರ್ಕ್ ಮ್ಯಾನೆಜ್ಮೆಂಟ್ ಜತೆ ಮಾತನಾಡುತ್ತೇವೆ. ವಿ6 ಜವಾಬ್ದಾರಿಯುತ ಪತ್ರಿಕೋದ್ಯಮದಲ್ಲಿ ವಿಶಿಷ್ಠತೆ ಕಾಪಾಡಿಕೊಂಡು ಬಂದಿದೆ; ನಾವು ದೃಢವಾಗಿದ್ದೇವೆ ಮತ್ತು ಜನಪ್ರಿಯ ವಾಹಿನಿಯಾಗಿದ್ದೇವೆ. ನಮಗೆ ಈ ರೀತಿಯ ಅನಗತ್ಯ ತಿರುಚುವಿಕೆಯ ಅಗತ್ಯವಿಲ್ಲ,” ಎಂದು ಹೇಳಿದ್ದಾರೆ.

ಟಿವಿ9 ತೆಲುಗಿನ ಔಟ್ ಪುಟ್ ಮುಖ್ಯಸ್ಥ ಚಂದ್ರಮೌಳಿ ‘ಸಮಾಚಾರ’ಜತೆ ಮಾತನಾಡಿ “ಬಾರ್ಕ್ ಜತೆ ಮೀಟಿಂಗ್ನಲ್ಲಿದ್ದೇವೆ. ನಂತರ ಪ್ರತಿಕ್ರಿಯೆ ನೀಡುತ್ತೇವೆ,” ಎಂದರು. ನಂತರ ಅವರ ಜತೆ ಸಂಪರ್ಕ ಸಾಧ್ಯವಾಗಲಿಲ್ಲ.

“ಬಾರ್ಕ್ ಪ್ಯಾನಲ್ ಸದಸ್ಯರು ಕೈಜೋಡಿಸುವುದರಿಂದ ಈ ರೀತಿಯ ಕ್ರಿಮಿನಲ್ ಚಟುವಟಿಕೆಗಳು ಯಶಸ್ವಿಯಾಗಿರಬಹುದು. ಆದರೆ ಚಾನಲ್ಲುಗಳ ಪಾಲಿಗೆ ಇದು ಕ್ಷಣಿಕ ಮಾತ್ರ; ದೀರ್ಘ ಪಯಣದಲ್ಲಿ ಇವೆಲ್ಲಾ ಉಳಿಯುವುದಿಲ್ಲ. ದೂರುದ್ದೇಶ ಪೂರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ಒಮ್ಮೆ ಸರಿಯಾದ ಪುರಾವೆ ಸಿಕ್ಕಿದರೆ, ಬಾರ್ಕ್ ಅಂಥ ಚಾನಲ್ಲುಗಳಿಗೆ ರೇಟಿಂಗ್ ನೀಡುವುದನ್ನು ನಿಲ್ಲಿಸುತ್ತದೆ,” ಎಂದು ಬಾರ್ಕ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಹೇಳಲಾಗಿದೆ.

ಈ ಹಿಂದೆ ಟಿಆರ್ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್)ಗಳನ್ನು ಟ್ಯಾಮ್ (TAM) ನೀಡುತ್ತಿತ್ತು. ಆದರೆ ಹೆಚ್ಚಿನ ವೈಜ್ಞಾನಿಕ ವಿಧಾನಗಳೊಂದಿಗೆ ಬಾರ್ಕ್, ಟ್ಯಾಮ್ ನ ಜಾಗವನ್ನು ಆವರಿಸಿಕೊಂಡಿತು. ಬಾರ್ಕ್ ಬಂದ ನಂತರ ರೇಟಿಂಗ್ನಲ್ಲಿ ಏರು ಪೇರು ಕಡಿಮೆಯಾಗಿದೆ ಎಂಬ ಮಾತುಗಳೂ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ.

ಮೊದಲ ಹಂತದಲ್ಲಿ ‘ಬಾರ್ಕ್’, ಮಾರುಕಟ್ಟೆ ಸಮೀಕ್ಷೆ ಮಾಡುತ್ತಿದ್ದ ಕಳಂಕಿತರನ್ನು ಹೊರಗಟ್ಟಿತ್ತು. ಎರಡನೇ ಹಂತದಲ್ಲಿ ಕಳಂಕಿತ ಚಾನಲ್ಲುಗಳನ್ನೇ ರೇಟಿಂಗಿನಿಂದ ಹೊರಗಿಡುವ ಪ್ರಯತ್ನ ಈಗ ಆರಂಭವಾಗಿದೆ. ಹೀಗಿದ್ದೂ ಮಾಹಿತಿಗಳ ಪ್ರಕಾರ ಕೆಲವು ಪ್ರಭಾವಿ ಚಾನಲ್ಲುಗಳು ಬಾರ್ಕ್ ನ ಸದಸ್ಯರ ಜತೆಗೇ ಶಾಮೀಲಾಗಿ ರೇಟಿಂಗನ್ನು ತಿರುಚಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪವಿದೆ.

ಕೇರಳದಲ್ಲಿ ಪ್ರಕರಣ ದಾಖಲು:

ಇದೇ ರೀತಿ ರೇಟಿಂಗ್ ತಿರುಚಲು ಯತ್ನಿಸಿದ ಆರೋಪದಲ್ಲಿ ಎರಡು ಮಲಯಾಳಂ ವಾಹಿನಿಗಳ ವಿರುದ್ಧ ಇದೇ ಅಕ್ಟೋಬರಿನಲ್ಲಿ ‘ಕೇರಳ ಟಿವಿ ಫೆಡರೇಷನ್’ ಮತ್ತು ‘ಬಾರ್ಕ್ ಇಂಡಿಯಾ’ ಜಂಟಿಯಾಗಿ ಕೇರಳದಲ್ಲಿ ಪ್ರಕರಣ ದಾಖಲಿಸಿತ್ತು. ಎರಡು ಚಾನಲ್ಲುಗಳ ವಿರುದ್ಧ ನಿರಂತರ ದೂರುಗಳು ಕೇಳಿ ಬಂದಿದ್ದರಿಂದ ‘ಬಾರ್ಕ್ ಜಾಗೃತ ದಳ’ ತನಿಖೆ ನಡೆಸಿ ಪೊಲೀಸ್ ವರಿಷ್ಠಾಧಿಕಾರಿಗೆ ಈ ದೂರು ಸಲ್ಲಿಸಿತ್ತು. ಆ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಬಾರ್ಕ್ ಯಾವೆಲ್ಲಾ ಮನೆಗಳಿಂದ ಮಾಹಿತಿ ಪಡೆಯುತ್ತದೆಯೋ ಅದನ್ನು ತಿಳಿದುಕೊಂಡು, ಅಲ್ಲಿ ವಾಹಿನಿಯವರು ತಮ್ಮ ಚಾನಲ್ಲುಗಳನ್ನೇ ನೋಡುವಂತೆ ಮಾಡುತ್ತಿದ್ದರು ಎಂಬುದು ಈ ದೂರಿನ ಒಂದು ಸಾಲಿನ ಸಾರಾಂಶ.

Read More:

‘ಸಮಾಚಾರ ಸಮೀಕ್ಷೆ’: ನ್ಯೂಸ್ ಚಾನಲ್ ವೀಕ್ಷಕರು ಕೊಟ್ಟ ರೇಟಿಂಗ್ ಎಷ್ಟು?

Leave a comment

Top