An unconventional News Portal.

ಟರ್ಕಿಯಲ್ಲಿ ಮಧ್ಯರಾತ್ರಿ ಕ್ಷಿಪ್ರ ಕ್ರಾಂತಿ: ಸೇನೆಯ ನಾಟಕೀಯ ನಡೆಗೆ 265ಕ್ಕೂ ಹೆಚ್ಚು ಸಾವು

ಟರ್ಕಿಯಲ್ಲಿ ಮಧ್ಯರಾತ್ರಿ ಕ್ಷಿಪ್ರ ಕ್ರಾಂತಿ: ಸೇನೆಯ ನಾಟಕೀಯ ನಡೆಗೆ 265ಕ್ಕೂ ಹೆಚ್ಚು ಸಾವು

ಟರ್ಕಿಯಲ್ಲಿ ಸರಕಾರ ಉರುಳಿಸಲು ಅಲ್ಲಿನ ಸೇನೆ ನಡೆಸಿದ ನಾಟಕೀಯ ಕ್ಷಿಪ್ರ ಕ್ರಾಂತಿಗೆ 265ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.

ಶುಕ್ರವಾರ ತಡರಾತ್ರಿ ಮಿಲಿಟರಿಯ ಒಂದು ಗುಂಪು ಅಧಿಕೃತವಾಗಿ ಸೇನಾ ನಿಯಮಗಳನ್ನು ಅಂದರೆ ಕ್ಷಿಪ್ರ ಕ್ರಾಂತಿಯನ್ನು ಘೋಷಿಸಿತು. ನಾವು “ದೇಶದ ನಿಯಂತ್ರಣವನ್ನು ತೆಗೆದುಕೊಳ್ಳುತ್ತೇವೆ,” ಎಂಬ ಘೋಷಣೆ ಹೊರಡಿಸಿತು. ಇದಾದ ಬೆನ್ನಿಗೆ ಟರ್ಕಿಯ ವಾಣಿಜ್ಯ ನಗರ ಇಸ್ತಾಂಬುಲ್ನ ಮುಖ್ಯ ವಿಮಾನ ನಿಲ್ದಾಣ ಅಟಾಟರ್ಕ್ ಮುಚ್ಚಲಾಯಿತು. ಯುದ್ಧ ವಿಮಾನಗಳು ಆಗಸದಲ್ಲಿ ಕಾಣಿಸಿಕೊಳ್ಳಲಾರಂಭಿಸಿದವು. ಇದೇ ವೇಳೆ ಪ್ರಮುಖ ಸೇತುವೆಗಳನ್ನು ಕ್ರಾಂತಿಗೆ ಕೈ ಹಾಕಿದ ಸೈನಿಕರು ಬಂದ್ ಮಾಡಿದರು. ಗುಂಡಿನ ದಾಳಿ ಮತ್ತು ಸ್ಪೋಟದ ಭಾರಿ ಸದ್ದು ಇಸ್ತಾಂಬುಲ್ ಮತ್ತು ರಾಜಧಾನಿ ಅಂಕಾರದಿಂದ ಕೇಳಲು ಆರಂಭವಾಯಿತು.

ಸರಕಾರಿ ಟಿವಿ ಚಾನಲ್ ‘ಟಿಆರ್ಟಿ ವರ್ಲ್ಡ್’ ಕೇಂದ್ರ ಕಚೇರಿಗೆ ನುಗ್ಗಿದ ಮಿಲಿಟರಿಯ ಜವಾನರು, ನಿರೂಪಕಿಯ ಕೈಯಲ್ಲಿ ತಮ್ಮ ಪರವಾದ ಹೇಳಿಕೆಗಳನ್ನು ಹೇಳಿಸಿದರು.

ಮುಖ್ಯವಾಗಿ ಅಲ್ಲಿನ ಗುಪ್ತದಳ ಎಮ್ಐಟಿ ಮೇಲೆ ಹೈಜಾಕ್ ಮಾಡಿದ ಹೆಲಿಕಾಪ್ಟರ್ಗಳು ದಾಳಿ ನಡೆಸಿದವು. ಆದರೆ ಯತ್ನ ಮಾತ್ರ ಫಲ ನೀಡಲಿಲ್ಲ.

ಸೈನಿಕರು ನಡೆಸಿದ ಕ್ಷಿಪ್ರ ಕ್ರಾಂತಿಯ ಯತ್ನದಲ್ಲಿ ತೊಡಗಿದ್ದ 161 ಸೈನಿಕರು ಮತ್ತು 104 ಇತರರು ಸಾವನ್ನಪ್ಪಿದ್ದಾರೆ. ಈ ಕುರಿತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಹಂಗಾಮಿ ಸೇನಾ ಮುಖ್ಯಸ್ಥ ಉಮಿತ್ ದಂಡರ್, 1,440 ಜನ ಗಾಯಗೊಂಡಿದ್ದು, 2,839 ಸೇನಾ ದಂಗೆಕೋರರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದಲ್ಲದೇ ಟರ್ಕಿಯ 2,745 ನ್ಯಾಯಾಧೀಶರನ್ನು ವಜಾ ಮಾಡಲಾಗಿದೆ.

ಶನಿವಾರ ಮುಂಜಾನೆ ಅಧ್ಯಕ್ಷರ ನಿವಾಸವಿರುವ ಬೆಸ್ಟೆಪೆ ಜಿಲ್ಲೆಯ ಮೇಲೆಯೂ ಜೆಟ್ಗಳು ಬಾಂಬ್ ದಾಳಿ ನಡೆಸಿವೆ. ಬಾಂಬ್ ದಾಳಿಯಿಂದ ಹೊಗೆ ಮೇಲೇಳುವ ದೃಶ್ಯವನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿವೆ. ದೇಶದ ಸಂಸತ್ ಭವನ ಸ್ಪೋಟವಾಗಿರುವ ವರದಿಗಳೂ ಇದೇ ಸಂದರ್ಭ ಹೊರ ಬರುತ್ತಿವೆ.

ದಾಳಿಕೋರರು ಅಲ್ಲಿನ ಅಧ್ಯಕ್ಷರನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದು ಸ್ಪಷ್ಟವಾಗುತ್ತಿದೆ. ಬಾಂಬರ್ಗಳು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಇರಬಹುದಾದ ಸಾಂಭಾವ್ಯ ಸ್ಥಳಗಳನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅಧ್ಯಕ್ಷರು ಹೆಚ್ಚಾಗಿ ಇರುವ ಸ್ಥಳಗಳನ್ನು ಗುರಿಯಾಗಿಸಿಕೊಂಡು, ಅಲ್ಲಿ ಎರ್ಡೋಗನ್ ಇದ್ದಾರೆ ಎಂದೇ ಭಾವಿಸಿ ಈ ದಾಳಿ ನಡೆಸಲಾಗಿದೆ.

ಆದರೆ ಕರಾವಳಿ ನಗರ ಮಾರ್ಮರಿಸ್ ಪ್ರವಾಸದಲ್ಲಿದ್ದ ಅವರು, ಟರ್ಕಿ ಪ್ರಧಾನಿ ಬಿನಾಲಿ ಯಿಲ್ದಿರಿಮ್ ‘ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣದಲ್ಲಿದೆ’ ಎಂದ ಬಳಿಕವಷ್ಟೇ ಇಸ್ತಾಂಬುಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ಎರ್ಡೊಗನ್, “ತಮ್ಮನ್ನು ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನ ದೇಶದ್ರೊಹದ ಕೃತ್ಯ, ಇದಕ್ಕಾಗಿ ಭಾರಿ ಬೆಲೆ ತೆರಬೇಕಾಗುತ್ತದೆ,” ಎಂದಿದ್ದಾರೆ.

ಇಸ್ತಾಂಬುಲ್ ಅಟಾಟರ್ಕ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಧ್ಯಕ್ಷರು ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. “ನಾನು ಜನರ ಜೊತೆ ನಿಲ್ಲುತ್ತೇನೆ. ಎಲ್ಲಿಗೂ ಓಡಿ ಹೋಗುವುದಿಲ್ಲ. 52 ಶೇಕಡಾ ಜನ ನನ್ನನ್ನು ಅಧಿಕಾರಕ್ಕೆ ತಂದಿದ್ದಾರೆ. ಎಲ್ಲಾ ರಿಸ್ಕ್ಗಳನ್ನು ತೆಗೆದುಕೊಂಡು ಅವರ (ದಾಳಿಕೋರರು) ವಿರುದ್ಧ ನಾವು ನಿಂತಷ್ಟು ದಿನ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ,” ಎಂದು ತಮ್ಮ ಬೆಂಬಲಿಗರನ್ನು ಹುರಿದುಂಬಿಸಿದ್ದಾರೆ.

ಇದೇ ಸಂದರ್ಭ ಕ್ರಾಂತಿಗೆ ಮುಂದಾಗಿದ್ದ ಹತ್ತಾರು ಸೈನಿಕರು ತಮ್ಮ ಟ್ಯಾಂಕ್ಗಳೊಂದಿಗೆ ಕೈ ಮೇಲೆತ್ತಿ ಬೊಸ್ಪರಸ್ ಸೇತುವೆ ಮೇಲೆ ಶರಣಾಗಿದ್ದಾರೆ.

ನಿಲ್ಲದ ಬಾಂಬ್ ದಾಳಿ:

ಆದರೆ ನಗರದಲ್ಲಿ ಇನ್ನೂ ಸಣ್ಣ ಮಟ್ಟಕ್ಕೆ ಬಾಂಬ್ ದಾಳಿ ನಡೆಯುತ್ತಿದೆ ಎಂದು ಅಂತರಾಷ್ಟ್ರೀಯ ನ್ಯೂಸ್ ಏಜೆನ್ಸಿಗಳು ವರದಿ ಮಾಡಿವೆ.

ಈ ಘಟನೆಗಳಿಗೆ ಅಧ್ಯಕ್ಷ ಎರ್ಡೋಗನ್, ಅಮೆರಿಕಾ ಮೂಲದ ಧಾರ್ಮಿಕ ಪ್ರವಚನಕಾರ ಫೆತುಲ್ಲಾಹ್ ಗುಲೇನ್ ಕಾರಣ ಎಂದು ದೂರಿದ್ದಾರೆ. ಈ ಹಿಂದೆಯಿಂದಲೂ ಗುಲೇನ್ ನ್ಯಾಯಾಂಗ ಮತ್ತು ಸೈನ್ಯದಲ್ಲಿರುವ ತನ್ನ ಬೆಂಬಲಿಗರ ಮೂಲಕ ಸರಕಾರವನ್ನು ಬೀಳಿಸಲು ಯತ್ನಿಸಿದ್ದರು ಎಂದು ಅವರು ಆಪಾದಿಸಿದ್ದಾರೆ.

ಆದರೆ ಅಧ್ಯಕ್ಷರ ವಾದವನ್ನು ತಳ್ಳಿ ಹಾಕಿರುವ ಗುಲೇನ್, “ಸರಕಾರ ಮುಕ್ತ ಮತದಾನದ ಮೂಲಕ ಜಯಗಳಿಸಬೇಕು, ಬಲವಂತದಿಂದ ಅಲ್ಲ,” ಎಂದು ತಿರುಗೇಟು ನೀಡಿದ್ದಾರೆ.

ಬೀದಿಗೆ ಬಂದು ಅಧ್ಯಕ್ಷರಿಗೆ ತಮ್ಮ ಬೆಂಬಲ ಸೂಚಿಸುತ್ತಿರುವ ಅಭಿಮಾನಿಗಳು

ಬೀದಿಗೆ ಬಂದು ಅಧ್ಯಕ್ಷರಿಗೆ ತಮ್ಮ ಬೆಂಬಲ ಸೂಚಿಸುತ್ತಿರುವ ಅಭಿಮಾನಿಗಳು

ಕ್ಷಿಪ್ರ ಕ್ರಾಂತಿಯ ಯತ್ನದ ಬೆನ್ನಿಗೇ, ಸಾವಿರಾರು ಜನರನ್ನು ಉದ್ದೇಶಿಸಿ ಬೀದಿಗೆ ಬಂದು ಕ್ಷಿಪ್ರ ಜಕ್ರಾಂತಿಗೆ ಯತ್ನಿಸಿದ ಸೈನಿಕರ ವಿರುದ್ಧ ಪ್ರತಿಭಟನೆ ನಡೆಸುವಂತೆ ಅಧ್ಯಕ್ಷರು ಕರೆ ನೀಡಿದ್ದಾರೆ. ಇದಾದ ಬಳಿಕ ‘ಸಿಎನ್ಎನ್ ಟರ್ಕ್’ ಚಾನಲ್ನಲ್ಲಿ ಅಧ್ಯಕ್ಷರು ಪ್ರತಕ್ಷವಾಗಿದ್ದು ಬೆಂಬಲಿಗರನ್ನು ಬೀದಿಗೆ ಬರುವಂತೆ ಕರೆ ನೀಡಿದ ಬೆನ್ನಿಗೆ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರೆಲ್ಲಾ ರಸ್ತೆಗೆ ಧುಮುಕಿದ್ದಾರೆ. “ನಾವು ಈ ಘಟನೆಯಿಂದ ಹೊರ ಬರಲಿದ್ದೇವೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈವರೆಗೆ 120ಕ್ಕೂ ಹೆಚ್ಚು ಸೈನಿಕರನ್ನು ಬಂಧಿಸಲಾಗಿದ್ದು, ಹೆಚ್ಚಿನವರು ಮಿಲಿಟರಿ ಅಧಿಕಾರಿಗಳಾಗಿದ್ದಾರೆ. ಇನ್ನು ಹೈಜಾಕ್ ಮಾಡಿದ ಜೆಟ್ ವಿಮಾನಗಳನ್ನು ಹೊಡೆದುರುಳಿಸುವಂತೆ ಅಧ್ಯಕ್ಷರು ಆದೇಶ ನೀಡಿದ್ದಾರೆ. ಈಗಾಗಲೇ ಹೆಲಿಕಾಪ್ಟರ್ ಒಂದನ್ನು ಹೊಡೆದುರುಳಿಸಲಾಗಿದೆ.

ರಾಜಧಾನಿ ಅಂಕಾರದಲ್ಲಿ ವಿಮಾನ ಹಾರಟವನ್ನು ಪೂರ್ತಿಯಾಗಿ ನಿಷೇಧಿಸಲಾಗಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಯತ್ನಗಳು ಜಾರಿಯಲ್ಲಿವೆ.

ಇತ್ತೀಚೆಗೆ ಟರ್ಕಿ ಸೇನೆಯ ಹಲವು ಅಧಿಕಾರಿಗಳನ್ನು ಅಧ್ಯಕ್ಷ ಎರ್ಡೋಗನ್ ಜೈಲಿಗೆ ಅಟ್ಟಿದ್ದು ಹಾಗೂ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಕ್ಷಿಪ್ರ ಕ್ರಾಂತಿಗೆ ಕಾರಣ ಎನ್ನಲಾಗುತ್ತಿದೆ.

ಚಿತ್ರ: ರಾಯಿಟರ್ಸ್

Leave a comment

Top