An unconventional News Portal.

ಹಬ್ಬದ ಸಂಭ್ರಮದ ಮೇಲೆ ಎರಗಿದ 19 ಟನ್ ತೂಕದ ಟ್ರಕ್: 84 ಸಾವು; ನೂರಾರು ಮಂದಿಗೆ ಗಾಯ

ಹಬ್ಬದ ಸಂಭ್ರಮದ ಮೇಲೆ ಎರಗಿದ 19 ಟನ್ ತೂಕದ ಟ್ರಕ್: 84 ಸಾವು; ನೂರಾರು ಮಂದಿಗೆ ಗಾಯ

ಪ್ಯಾರೀಸ್ ಕ್ರಾಂತಿ ನೆನಪಿನಲ್ಲಿ ಫ್ರಾನ್ಸ್ ದೇಶದಲ್ಲಿಆಚರಿಸುವ ಬ್ಯಾಸ್ಟೈಲ್ ಹಬ್ಬದ ದಿನ, ಗುರುವಾರ ತಡರಾತ್ರಿ ರಿವೇರಾ ನಗರದ ನೈಸ್ ಪ್ರದೇಶದಲ್ಲಿ ಸಂಭ್ರಮಾಚಾರಣೆ ನಿರತ ಜನರ ಮೇಲೆ ಟ್ರಕ್ ನುಗ್ಗಿಸಿದ ಪರಿಣಾಮ 84 ಜನ ಸಾವನ್ನಪ್ಪಿದ್ದಾರೆ; ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ನಗರದಲ್ಲಿ ಹಬ್ಬದ ಸಂಭ್ರಮಾಚರಣೆ ನಿರತ ಜನರ ಮೇಲೆ ಏಕಾಏಕಿ ಟ್ರಕ್ ನುಗ್ಗಿಸಲಾಗಿತ್ತು. ನಂತರ ಚಾಲಕ ಗುಂಡಿನ ದಾಳಿ ಆರಂಭಿಸುತ್ತಿದ್ದಂತೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದರು. ದಾಳಿಕೋರನನ್ನು 30 ವರ್ಷದ ಫ್ರೆಂಚ್- ಟ್ಯುನಿಸೀಯ ಪ್ರಜೆ ಎಂದು ಗುರುತಿಸಲಾಗಿದೆ. ಈತನ ಮೇಲೆ ಕ್ರಿಮಿನಲ್ ಕೇಸುಗಳಿದ್ದವು ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ದಾಳಿಗೆ ಬಳಸಿದ ಟ್ರಕ್ ಒಳಗೆ ಆಯುಧಗಳು ಹಾಗೂ ಗ್ರೆನೇಡ್ಗಳು ಪತ್ತೆಯಾಗಿವೆ.

ಘಟನೆ ನಂತರ ಪ್ರತಿಕ್ರಿಯಿಸಿದ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ, “ಇದೊಂದು ಭಯೋತ್ಪಾದನಾ ಕೃತ್ಯ,” ಎಂದರು. ಪ್ಯಾರೀಸ್ನಲ್ಲಿ ಎಂಟು ತಿಂಗಳ ಹಿಂದೆ ಐಸಿಸ್ ದಾಳಿ ನಡೆಸಿದ ಬೆನ್ನಿಗೇ ಈ ಘಟನೆ ನಡೆಸಿದೆ.

ಭೀಕರ ಚಿತ್ರಣ: 

ಸದ್ಯ ಸ್ಥಳೀಯ ಮಾಧ್ಯಮಗಳು ಸ್ಥಳದಲ್ಲಿ ನಿರ್ಮಾಣವಾಗಿರುವ ಭೀಕರ ಚಿತ್ರಣವನ್ನು ಭಿತ್ತರಿಸುತ್ತಿವೆ. ಮಹಿಳೆಯರ ಮತ್ತು ಮಕ್ಕಳ ಮೃತ ದೇಹಗಳು ಟ್ರಕ್ ಅಡಿಗೆ ಸಿಕ್ಕ ನುಜ್ಜುಗುಜ್ಜಾಗಿ ಚದುರಿ ಹೋಗಿದ್ದವು. ಹಬ್ಬದ ಆಚರಣೆಗೆ ತಂದಿದ್ದ ಆಟಿಕೆಗಳು ಹಾಗೂ ಫ್ಯಾನ್ಸಿ ಬಟ್ಟೆಗಳು ಎಲ್ಲೆಂದರಲ್ಲಿ ಹರಡಿದ್ದವು.

ಸುಮಾರು 19 ಟನ್ ತೂಕದ ಲಾರಿ ಜನರ ಮೇಲೆ ಭಾರಿ ವೇಗದಲ್ಲಿ ನುಗ್ಗಿದ ಪರಿಣಾಮಗಳು ರಸ್ತೆಯ ಮೇಲೆ ಢಾಳಾಗಿ ಕಾಣಿಸುತ್ತಿವೆ. “ದೂರದಿಂದ ನೋಡುತ್ತಿದ್ದ ನನಗೆ ಟ್ರಕ್ ಬರುತ್ತಿದ್ದ ರೀತಿ ನೋಡಿಯೇ ಅಚ್ಚರಿ ಅನ್ನಿಸಿತ್ತು. ರಸ್ತೆ ಮುಂದೆ ಮುಚ್ಚಲಾಗಿದ್ದರೂ. ಅದೇ ಮಾರ್ಗದಲ್ಲಿ ಯಾಕೆ ಚಾಲಕ ಹೋಗುತ್ತಿದ್ದಾನೆ ಎಂದು ಯೋಚಿಸಿದೆ. ಅಷ್ಟೊತ್ತಿಗೆ ರಸ್ತೆ ಮೇಲಿದ್ದ ಸಾವಿರಾರು ಜನರ ಕೂಗಾಟ ಕೇಳಿಬಂತು. ನೋಡ ನೋಡುತ್ತಿದ್ದಂರೆ ಜನ ಟ್ರಕ್ ಅಡಿಯಲ್ಲಿ ಸಮಾಧಿಯಾಗಿದ್ದರು,” ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಘಟನೆಯಲನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ವಿಶ್ವದ ಹಲವು ಗಣ್ಯರು ಖಂಡಿಸಿದ್ದಾರೆ. ಈಗಾಗಲೇ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಸಾಮೂಹಿಕ ಕಗ್ಗೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತೀಯರು ಸೇಫ್: 

ಘಟನೆಯಲ್ಲಿ ಯಾವುದೇ ಭಾರತೀಯರಿಗೆ ತೊಂದರೆಯಾಗಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ. ಅದೇ ವೇಳೆ, ಪ್ಯಾರಿಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸಹಾಯವಾಣಿಯನ್ನು ಆರಂಭಿಸಿದೆ, ಎಂದು ಅವರು ಮಾಹಿತಿ ನೀಡಿದ್ದಾರೆ.

Leave a comment

Top