An unconventional News Portal.

‘ಕಾಡಿಗೆ ಬಂದ ಪುಟ್ಟಗೌರಿ’: ಧಾರಾವಾಹಿ, ಟ್ರಾಲಿಂಗ್‌, ವೀಕ್ಷಕರ ಮನಸ್ಥಿತಿ ಮತ್ತು ಹಿಡನ್ ಅಜೆಂಡಾ!

‘ಕಾಡಿಗೆ ಬಂದ ಪುಟ್ಟಗೌರಿ’: ಧಾರಾವಾಹಿ, ಟ್ರಾಲಿಂಗ್‌, ವೀಕ್ಷಕರ ಮನಸ್ಥಿತಿ ಮತ್ತು ಹಿಡನ್ ಅಜೆಂಡಾ!

‘ದೋಸ್ತ, ಪುಟ್ಟಗೌರಿ ಕಾಡಿಗೆ ಬಂದಾಳ ಅಂತಲೇ… ಅಕ **** ಜಿಪಿಎಸ್‌ ಹಾಕ್ತೇನ ಹುಡುಕಿ ಉಡಿ ತುಂಬಿಸಿ ಕಳಿಸೋಣ’… ಹೀಗೆ ಶುರುವಾಗುತ್ತದೆ ಎರಡು ಚಿಂಪಾಂಜಿಗಳ ನಡುವಿನ ಸಂಭಾಷಣೆ.

ಇದು, ಅಂಬಾನಿ ಒಡೆತನದ ಕನ್ನಡದ ಮನೋರಂಜನಾ ವಾಹಿನಿ ‘ಕಲರ್ಸ್ ಕನ್ನಡ’ದಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಗೌರಿ ಮದುವೆ’ ಎಂಬ ಧಾರಾವಾಹಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಹಸ್ರ ಟ್ರಾಲಿಂಗ್‌ಗಳ ಒಂದು ಸ್ಯಾಂಪಲ್ ಅಷ್ಟೆ.

ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಲು ಆರಂಭಿಸಿತು. ಅಲ್ಲಿಂದ ಆರಂಭವಾದ ಟ್ರಾಲಿಂಗ್‌ಗಳು ಇದೀಗ ಹೊಸ ಆಯಾಮವನ್ನು ಪಡೆದುಕೊಂಡಿವೆ. ಇದಕ್ಕೆ ಕಾರಣ, ಧಾರಾವಾಹಿಯ ಪ್ರಮುಖ ಪಾತ್ರ ಪುಟ್ಟಗೌರಿ ಊರು ಬಿಟ್ಟು ಕಾಡು ಸೇರಿದ್ದು!

ಕಾಡಿಗೆ ಬರುವ ಪುಟ್ಟಗೌರಿ ಜಂಗಲ್‌ ಬುಕ್‌ ಮೋಗ್ಲಿಯನ್ನೂ ಮೀರಿಸುವ ಸಾಹಸಗಳನ್ನು ಮಾಡುತ್ತಾಳೆ. ಹಾವಿನ ವಿರುದ್ಧ ಹೋರಾಟ ಮಾಡುತ್ತಾಳೆ; ತಿನ್ನಲು ಬಂದ ಹುಲಿಯನ್ನೇ ರಕ್ಷಣೆ ಮಾಡುತ್ತಾಳೆ. ಅದಕ್ಕಿಂತ ಹೆಚ್ಚಾಗಿ ಬೆಟ್ಟದ ಮೇಲಿಂದ ಬಿದ್ದ ನಂತರವೂ, ಮೇಕಪ್‌ ಮುಕ್ಕಾದಂತೆ ಬದುಕು ಮುಂದುರಿಸುತ್ತಾಳೆ. ಈ ಮೂಲಕ ಜನರಿಗೆ ಭರಪೂರ ಮನೋರಂಜನೆ ಸಿಕ್ಕಿದೆ ಎಂದು ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವ ವಾಹಿನಿ ಅಂದುಕೊಂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ಟಿಆರ್‌ಪಿ ರೇಟಿಂಗ್‌ ಮುಂದಿಡಲಾಗುತ್ತಿದೆ.

puttagowri-adventures-1

“ಪುಟ್ಟಗೌರಿ ಧಾರಾವಾಹಿ ಇಂತಹ ವಿಲಕ್ಷಣ, ತರ್ಕಕ್ಕೆ ಮೀರಿದ ಕಥನದ ಕಾರಣಕ್ಕೆ ಟ್ರಾಲಿಂಗ್‌ ಪೇಜ್‌ಗಳ ಗಮನ ಸೆಳೆಯುತ್ತಿದೆ. ಆಕೆಯ ಮೇಲೆ ಅನೇಕ ಬಾರಿ ಹತ್ಯಾ ಹತ್ನ ನಡೆಯುತ್ತದೆ. ಅವೆಲ್ಲವುಗಳಿಂದ ಆಕೆ ಬಚಾವಾಗುತ್ತಾಳೆ. ಹೊಟ್ಟೆಯಲ್ಲಿರುವ ಮಗುವನ್ನು ರಕ್ಷಿಸಿಕೊಳ್ಳಲು ಆಕೆ ಎರಡು ವರ್ಷ ಹರಸಾಹಸ ಮಾಡುತ್ತಾಳೆ. ತನ್ನ ಗಂಡನಿಗೆ ಕ್ಯಾನ್ಸರ್‌ ಇದೆ ಎಂದು ಸುಳ್ಳು ಹೇಳಿ ಬೇರೆ ಮದುವೆ ಮಾಡಿಸುವ ಮೂಲಕ ತ್ಯಾಗಮಯಿ ಆಗುತ್ತಾಳೆ. ಒಂದು ಕತೆಯಲ್ಲಿ ಏನೆಲ್ಲಾ ಅತಿರೇಕಗಳನ್ನು ಮಾಡಬಹುದೋ, ಎಲ್ಲವೂ ಪುಟ್ಟಗೌರಿ ಮದುವೆಯಲ್ಲಿ ಕಾಣಸಿಗುತ್ತದೆ,” ಎನ್ನುತ್ತಾರೆ ದಿನೇಶ್ ಕುಮಾರ್ ಎಸ್‌. ಸಿ.

ಪುಟ್ಟಗೌರಿ ಮದುವೆ ಹಿಂದಿಯ ‘ಬಾಲಿಕಾ ವಧು’ ಧಾರಾವಾಹಿಯ ಕನ್ನಡದ ಅವತರಣಿಕೆ. ಇವತ್ತಿಗೆ ಗ್ರಾಮೀಣ ಕರ್ನಾಟಕ ಹಾಗೂ ನಗರ ಪ್ರದೇಶಗಳಲ್ಲಿ ಸಂಜೆಯಾಗುತ್ತಲೇ ಜನ ಈ ಧಾರಾವಾಹಿ ನೋಡಲು ಮುಗಿಬೀಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಟಿವಿ ವೀಕ್ಷಕರನ್ನು ಅಳೆಯುವ, ಬಾರ್ಕ್‌ ಪಟ್ಟಿಯಲ್ಲಿ ಇದೇ ಧಾರವಾಹಿ ಮೊದಲ ಸ್ಥಾನದಲ್ಲಿದೆ. (ಬಾರ್ಕ್‌ ಹೇಗೆ ಕೆಲಸ ಮಾಡುತ್ತದೆ? ಇದು ವೀಕ್ಷಕರ ಮನಸ್ಥಿತಿಯನ್ನು ಅಳೆಯಲು ಬಳಸುವ ಮಾನದಂಡಗಳೇನು? ಇದಕ್ಕೆ ಬಂಡವಾಳ ಹೂಡಿದವರು ಯಾರು? ಎಂಬುದು ಪ್ರತ್ಯೇಕ ಸ್ಟೋರಿ)

puttagowri-rating-1

ಇಷ್ಟೊಂದು ಖ್ಯಾತಿಗೆ ಒಳಗಾದ ‘ಪುಟ್ಟಗೌರಿ ಮದುವೆ’ ಎಂಬ ಧಾರಾವಾಹಿ ಎಬ್ಬಿಸುವ ಸಾಮಾಜಿಕ ಕಂಪನಗಳೂ ವಿಚಿತ್ರವಾಗಿದೆ. ಯುವತಿಯೊಬ್ಬಳು ಪುಟ್ಟಗೌರಿ ಪಾತ್ರದ ಪ್ರಭಾವಕ್ಕೆ ಒಳಗಾಗಿ ಮನೆ ಬಿಟ್ಟು ಹೋದ ಘಟನೆ, ಧಾರಾವಾಹಿಯ ಪಾತ್ರವೊಂದು ಸಾವನ್ನಪ್ಪಿದ ದುಃಖದಲ್ಲಿ ಹೃದಯಾಘಾತಕ್ಕೆ ಒಳಗಾದ ವೃದ್ಧರೊಬ್ಬರ ಪ್ರಕರಣಗಳು ಈ ಹಿಂದೆ ವರದಿಯಾಗಿದ್ದವು.

ಒಂದು ಕಡೆ ಹೊಸ ತಲೆಮಾರಿನ ಯುವಕ/ ಯುವತಿಯರು ಇದೇ ಧಾರಾವಾಹಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೀಗಳೆಯುವಿಕೆಗೆ ಇಳಿದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಮನೆಗಳಲ್ಲಿ ಧಾರವಾಹಿಯನ್ನು ವೀಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಮನೋರಂಜನಾ ರಾಜಕೀಯ: 

ದೂರದರ್ಶನ ಎಂಬುದು ಪ್ರಭಾವಿ ಮಾಧ್ಯಮವಾಗಿ ಬೆಳೆಯುವ ಹಂತದಲ್ಲಿ ಸಾಕಷ್ಟು ಬದಲಾವಣೆಯನ್ನೂ ಕಂಡಿದೆ. ಹಿಂದೆ, ಸರಕಾರಿ ಸ್ವಾಮ್ಯದ ಒಂದು ಚಾನಲ್‌ ಇರುವಾಗ ಸುದ್ದಿ ಮತ್ತು ಮನೋರಂಜನೆಯನ್ನು ಮಿತವಾಗಿ ಜನರಿಗೆ ನೀಡಲಾಗುತ್ತಿತ್ತು. ಆದರೆ ತಂತ್ರಜ್ಞಾನದ ಬೆಳವಣಿಗೆ, ಖಾಸಗಿ ಹೂಡಿಕೆ ಹಿನ್ನೆಲೆಯಲ್ಲಿ ಸುದ್ದಿ ಮತ್ತು ಮನೋರಂಜನೆಗೆ ಪ್ರತ್ಯೇಕವಾದ ಚಾನಲ್‌ಗಳು ಹುಟ್ಟಿಕೊಂಡಿವೆ. ಕಳೆದ ಹತ್ತು ವರ್ಷಗಳ ಬೆಳವಣಿಗೆಯಲ್ಲಿ; ಸುದ್ದಿ ವಿಭಾಗಕ್ಕೆ ಹೋಲಿಸಿದರೆ ಮನೋರಂಜನಾ ವಿಭಾಗದ ಮಾರುಕಟ್ಟೆ, ವಹಿವಾಟು ಅಗಾಧ ಪ್ರಮಾಣದಲ್ಲಿ ಬೆಳೆದು ನಿಂತಿದೆ.

“ಕರ್ನಾಟಕದಲ್ಲಿ ಒಂದು ಸೀರಿಯಲ್‌ನ ಒಂದು ಎಪಿಸೋಡ್‌ ರೂಪಿಸಲು ಅಂದಾಜು ಒಂದು ಲಕ್ಷ ಖರ್ಚಾಗುತ್ತದೆ. ಅಂದರೆ, ತಿಂಗಳಿಗೆ 30 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇದನ್ನು ಮರಳಿ ಪಡೆಯಲು ಯಾವುದೇ ಸೀರಿಯಲ್‌ ಆದರೂ ಕನಿಷ್ಟ ಒಂದು ವರ್ಷ ಚಲಾವಣೆಯಲ್ಲಿ ಇರಬೇಕು. ಇಲ್ಲವಾದರೆ ಬಂಡವಾಳ ಹೂಡುವವರಿಗೆ ನಷ್ಟವಾಗುವುದು ಖಚಿತ. ಈ ಕಾರಣಕ್ಕಾಗಿಯೇ ಕತೆಯಲ್ಲಿ ವಿಚಿತ್ರ ತಿರುವುಗಳನ್ನು ಪ್ರತಿ ಎಪಿಸೋಡಿನಲ್ಲೂ ನೀಡುವ ಪ್ರಯತ್ನ ಮಾಡಲಾಗುತ್ತದೆ,” ಎನ್ನುತ್ತಾರೆ ಮನೋರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುವ ನಿರ್ದೇಶಕಿಯೊಬ್ಬರು.

ಇತ್ತೀಚಿನ ದಿನಗಳಲ್ಲಿ, ಕಾರ್ಪೊರೇಟ್‌ ಮಾಧ್ಯಮ ಸಂಸ್ಥೆಗಳು ಪ್ರಾದೇಶಿಕ ಮಾರುಕಟ್ಟೆಗೆ ಬಂದ ನಂತರ ಅವು ನೀಡುವ ಮನೋರಂಜನಾ ಸರಕೂ ಕೂಡ ಬದಲಾಗಿದೆ. ಯಾವುದಾದರೂ ಒಂದು ಸೀರಿಯಲ್‌ ಹಿಂದಿಯಲ್ಲಿ ಜನಪ್ರಿಯವಾದರೆ, ಅದರ ಅವತರಣಿಕೆಗಳು ದೇಶದ ಇತರೆ ಎಲ್ಲಾ ಭಾಷೆಗಳಲ್ಲೂ ಭಿತ್ತರಗೊಳ್ಳಲು ಆರಂಭಿಸುತ್ತವೆ. ಆದರೆ ಕತೆಯಲ್ಲಿ ಸ್ಥಳೀಯತೆಯ ಮೆರಗು ಹಚ್ಚುವ ಕಸರತ್ತು ಕಾಣಿಸುತ್ತದೆ.

‘ಪುಟ್ಟಗೌರಿ ಮದುವೆ’ಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಹಿಂದಿಯ ‘ಬಾಲಿಕ ವಧು’ ಧಾರಾವಾಹಿಯ ಬಹುತೇಕ ಅಂಶಗಳು ಇಲ್ಲಿಗೆ ಬರುವಾಗ ಬದಲಾಗಿವೆ. ಹಿಂದಿಯಲ್ಲಿ, ಧಾರಾವಾಹಿಯ ಪ್ರಮುಖ ಪಾತ್ರಗಳು ಎರಡು- ಮೂರು ಬಾರಿ ಮರು ಮದುವೆಗೆ ಒಳಗಾಗುತ್ತವೆ. “ಆದರೆ ನಮಲ್ಲಿ ಅಂತಹ ವಾತಾವರಣ ಇಲ್ಲ. ಹಾಗಾಗಿ, ಅದನ್ನು ಬದಲಿಸಲಾಗಿದೆ,” ಎನ್ನುತ್ತಾರೆ ಪುಟ್ಟಗೌರಿ ಧಾರವಾಹಿಯ ಕಾರ್ಯಕಾರಿ ನಿರ್ಮಾಪಕಿ ಮಾನಸ. ‘ಕಲರ್ಸ್ ಕನ್ನಡ’ದ ಉದ್ಯೋಗಿಯಾಗಿರುವ ಮಾನಸ, ಹೆಚ್ಚಿನ ಮಾಹಿತಿ ನೀಡಲು, ಟ್ರಾಲಿಂಗ್‌ಗಳ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. “ಧಾರಾವಾಹಿಯ ಪ್ರಮುಖ ಪಾತ್ರವನ್ನು ಕಾಡಿಗೆ ಕಳುಹಿಸುವ ಪ್ರಸಂಗ ಅದರ ಒರಿಜಿನಲ್ ಸೀರಿಯಲ್‌ನಲ್ಲಿ ಇರಲಿಲ್ಲ. ಇಲ್ಲಿ ಪುಟ್ಟಗೌರಿಯನ್ನು ಕಾಡಿಗೆ ಕಳುಹಿಸುವ ಆಲೋಚನೆ ಹೇಗೆ ಬಂತು?” ಎಂಬ ‘ಸಮಾಚಾರ’ದ ಪ್ರಶ್ನೆಗೆ, ಅವರ ನಗುವೇ ಉತ್ತರವಾಗಿತ್ತು.

ಮಾರುಕಟ್ಟೆ ತಂತ್ರಗಳು:

“ಸೀರಿಯಲ್‌ಗಳು ನಿಂತಿರುವುದು ಅವುಗಳ ನಡುವೆ ಬರುವ ಜಾಹೀರಾತುಗಳ ಮೇಲೆ. ಧಾರಾವಾಹಿಗಳನ್ನು ನೋಡುವವರು ಹೆಚ್ಚಾಗಿ ಮಹಿಳೆಯರು. ಅದರಲ್ಲೂ ವೃತ್ತಿಯಲ್ಲಿರುವ, ಮಧ್ಯಮವರ್ಗದ ಮಹಿಳೆಯರು ನೋಡುವ ಸೀರಿಯಲ್‌ಗಳಿಗೆ ಹೆಚ್ಚಿನ ಜಾಹೀರಾತುಗಳು ಬರುತ್ತವೆ. ಯಾಕೆಂದರೆ ಅದರ ವೀಕ್ಷಕರಿಗೆ ಕೊಳ್ಳುವ ಶಕ್ತಿ ಇದೆ ಎಂಬ ಕಾರಣಕ್ಕೆ ಅಷ್ಟೆ. ಇದರ ಜತೆಗೆ, ಧಾರಾವಾಹಿಗಳ ಪ್ರಮುಖ ಪಾತ್ರಗಳು ಹಾಕುವ ಬಟ್ಟೆ, ಬಳಸುವ ಕಾಸ್ಟ್ಯೂಮ್‌ಗಳನ್ನು ಅವರು ಅನುಸರಿಸಲು ಶುರುಮಾಡುತ್ತಾರೆ ಎಂಬ ನಂಬಿಕೆಯೂ ಇದೆ. ಹೀಗಾಗಿ, ಕತೆಯನ್ನು ಹೇಳುವಾಗಲೇ ಪಾತ್ರಗಳ ಮೂಲಕ ಮಾರುಕಟ್ಟೆಯನ್ನೂ ಸೃಷ್ಟಿಸುವ ಕೆಲಸ ಮಾಡಲಾಗುತ್ತದೆ,” ಎನ್ನುತ್ತಾರೆ ಯುವ ನಿರ್ದೇಶಕಿಯೊಬ್ಬರು.

“ಇವತ್ತು ಇಂಗ್ಲಿಷ್‌ ಭಾಷೆಯ ಅಷ್ಟೂ ವಾಹಿನಿಗಳ ರೇಟಿಂಗ್‌ಗಳನ್ನು ಒಟ್ಟಾಕಿದರೆ, ಪುಟ್ಟಗೌರಿ ಮದುವೆ ಸೀರಿಯಲ್‌ನ ರೇಟಿಂಗ್‌ಗೆ ಸಮ,” ಎನ್ನುತ್ತಾರೆ ದಿನೇಶ್ ಕುಮಾರ್. ಇದು ನಿಜ ಕೂಡ. ಸುದ್ದಿ ವಾಹಿನಿಗಳಿಗೆ ಹೋಲಿಸಿದರೆ, ಮನೋರಂಜನಾ ವಾಹಿನಿಗಳು ಬೀರುವ ಪ್ರಭಾವ ಹೆಚ್ಚು. ಧಾರಾವಾಹಿಗಳ ಜತೆಗೆ, ‘ಬಿಗ್‌ ಬಾಸ್‌’ನಂತಹ ರಿಯಾಲಿಟಿ ಶೋಗಳು ಕೂಡ ಜನರ ಮನಸ್ಥಿತಿಯನ್ನು ಬದಲಿಸುವ ಕೆಲಸ ಮಾಡುತ್ತಿವೆ. ಸುದ್ದಿ ವಾಹಿನಿಗಳಿಗೂ ಹಣದ ಮೂಲವಾಗಿ ಬದಲಾಗಿರುವ ಜ್ಯೋತಿಷ್ಯದ ಕಾರ್ಯಕ್ರಮಗಳು, ಪೇಯ್ಡ್‌ ಡಾಕ್ಟರ್ಸ್‌ ಶೋಗಳೂ ಕೂಡ ಮನೋರಂಜನಾ ವಾಹಿನಿಗಳು ನೀಡಿದ ಕೊಡುಗುಗಳೇ.

ಬೃಹತ್ ಬಂಡವಾಳ, ವಿಸ್ತಾರವಾದ ಮಾರುಕಟ್ಟೆಯನ್ನು ಹೊಂದಿರುವ, ತಮ್ಮದೇ ಆದ ಹಿಡನ್‌ ಅಜೆಂಡಾವನ್ನೂ ಹೊಂದಿರುವ ಈ ಮಾಧ್ಯಮಗಳು ಜನರಿಗೆ ಏನೆಲ್ಲಾ ನೀಡುತ್ತಿವೆಯೋ; ಅವನ್ನೆಲ್ಲಾ ‘ಮನೋರಂಜನೆ’ಯ ಸೂರಿನ ಅಡಿಯಲ್ಲಿ ತಂದು ಸಮರ್ಥಿಸಿಕೊಳ್ಳುತ್ತವೆ. ಅಗ್ಗದ ಮನೋರಂಜನೆಗಳು ಕೆಲವೊಮ್ಮೆ ಅತಿರೇಕಕ್ಕೆ, ಅತಾರ್ಕಿಕಕ್ಕೆ ಹೋದಾಗ ತಮಾಷೆಯ ಟ್ರಾಲಿಂಗ್‌, ಸಾಮಾಜಿಕ ಜಾಲತಾಣಗಳಲ್ಲಿ ಹೀಗಳೆಯುವಿಕೆಯ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ.

ಆದರೆ, ಬಹುಕೋಟಿ ಉದ್ಯಮವಾಗಿರುವ ಮನೋರಂಜನಾ ಕ್ಷೇತ್ರಕ್ಕೂ, ಅದರಿಂದ ಹೊರಬರುವ ಧಾರವಾಹಿಗಳಿಗೂ ಒಂದು ಸಾಮಾಜಿಕ ಹೊಣೆಗಾರಿಕೆ ಇದೆ ಎಂದು ಅರ್ಥಪಡಿಸಲು, ಕೇವಲ ಟ್ರಾಲಿಂಗ್‌ ಮಾತ್ರವೇ ಸಾಕಾಗುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.

Leave a comment

Top