An unconventional News Portal.

‘ಸಾರ್ವಜನಿಕ ಸಾರಿಗೆ’: ಬಸ್ ದರದಲ್ಲಿ 75% ಇಳಿಕೆ; ದೆಹಲಿಯಲ್ಲಿ ಹೊಸವರ್ಷಕ್ಕೆ ಕೇಜ್ರಿವಾಲ್ ಕೊಡುಗೆ

‘ಸಾರ್ವಜನಿಕ ಸಾರಿಗೆ’: ಬಸ್ ದರದಲ್ಲಿ 75% ಇಳಿಕೆ; ದೆಹಲಿಯಲ್ಲಿ ಹೊಸವರ್ಷಕ್ಕೆ ಕೇಜ್ರಿವಾಲ್ ಕೊಡುಗೆ

ಜನಪರ, ಆಕ್ರಮಣಕಾರಿ ಯೋಜನೆಗಳನ್ನು ಜಾರಿಗೆ ತರುತ್ತಿರುವ ಅರವಿಂದ್ ಕೇಜ್ರಿವಾಲ್ ಈ ಬಾರಿ ಬಸ್ ದರ ಕಡಿತ ಗೊಳಿಸಿ ಸುದ್ದಿಯಲ್ಲಿದ್ದಾರೆ.

ದೆಹಲಿ ನಾಗರಿಕರಿಗೆ ಹೊಸ ವರ್ಷದ ಕೊಡುಗೆ ನೀಡಿರುವ ಕೇಜ್ರಿವಾಲ್ ಸರಕಾರಿ ಸ್ವಾಮ್ಯದ ಡಿಟಿಎಸ್ ಬಸ್ ದರಗಳನ್ನು ಬರೋಬ್ಬರಿ ಶೇಕಡಾ 75ರಷ್ಟು ಕಡಿತಗೊಳಿಸಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಉತ್ತೇಜನಗೊಳಿಸಲು ಮತ್ತು ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಸಾಧಿಸಲು ಎಎಪಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.

ಹೊಸ ವರ್ಷದಿಂದ ಆರಂಭವಾಗಿ ಜನವರಿ ಅಂತ್ಯದವರೆಗೆ ದೆಹಲಿಯಲ್ಲಿ ಕೇವಲ ಒಂದೇ ರೀತಿಯ ಬಸ್ ದರಗಳು ಇರಲಿವೆ. ಸಾಮಾನ್ಯ ಬಸ್ಸುಗಳಲ್ಲಿ ಎಲ್ಲೇ ಪ್ರಯಾಣಿಸಿದರೂ 5 ರೂ ಹಾಗೂ ಎಸಿ ಬಸ್ಸುಗಳಿಗೆ 10 ರೂ ದರ ನಿಗದಿಪಡಿಸಲಾಗಿದೆ. ಇದರಿಂದ ದೆಹಲಿ ಜನತೆ ತಮ್ಮ ಖಾಸಗಿ ವಾಹನಗಳನ್ನು ಮನೆಗಳಲ್ಲೇ ಬಿಟ್ಟು ಬರಲಿದ್ದಾರೆ ಎಂದುಕೊಳ್ಳಲಾಗಿದೆ. ಸದ್ಯ ಸಾಮಾನ್ಯ ಬಸ್ಸುಗಳಲ್ಲಿ 5 -15 ಹಾಗೂ ಎಸಿ ಬಸ್ಸುಗಳಲ್ಲಿ 10 – 25 ರೂಪಾಯಿ ದರವಿದೆ.

ಇದಿಷ್ಟಲ್ಲದೆ ಸರಕಾರ 21 ವರ್ಷ ಒಳಗಿನ ವಿದ್ಯಾರ್ಥಿಗಳು, ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸುಗಳನ್ನು ವಿತರಿಸಲು ನಿರ್ಧರಿಸಿದೆ. ಮಾತ್ರವಲ್ಲ ಮಹಿಳೆಯರ ಪಾಸ್ ದರದಲ್ಲಿ ಶಾಶ್ವತವಾಗಿ ಶೇಕಡಾ 75 ರಿಯಾಯಿತಿ ನೀಡಲಿದೆ. ಇದು ಕಡು ಬಡವರಿಗೂ ಅನ್ವಯವಾಗಲಿದೆ. ಸದ್ಯ ಮಾಸಿಕ 800 ರೂಪಾಯಿ ಬೆಲೆಯಿರುವ ಸಾಮಾನ್ಯ ಬಸ್ ಪಾಸ್ ಹಾಗೂ 1,000 ರೂಪಾಯಿ ಬೆಲೆಯ ಎಸಿ ಬಸ್ ಪಾಸ್ ಇನ್ನು ಮುಂದೆ 250 ರೂಪಾಯಿಗೆ ಲಭ್ಯವಾಗಲಿದೆ. ಇದೇ ರೀತಿ ದಿನದ ಪಾಸುಗಳ ದರವನ್ನು ಎಸಿ ಬಸ್ಸುಗಳಲ್ಲಿ ಹಾಗೂ ಸಾಮಾನ್ಯ ಬಸ್ಸುಗಳಲ್ಲಿದ್ದ 20 ರೂಪಾಯಿಗೆ ಕಡಿತ ಮಾಡಲಾಗಿದೆ. ಸದ್ಯ ಎಸಿ ಬಸ್ಸುಗಳಲ್ಲಿ 50 ಹಾಗೂ ಸಾಮಾನ್ಯ ಬಸ್ಸುಗಳಲ್ಲಿ 20 ರೂಪಾಯಿ ದರವಿತ್ತು.

“ನಮ್ಮ ಗುರಿ ಇರುವುದು ರಸ್ತೆ ಗಿಳಿಯುವ ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸುವುದು. ಇದರಿಂದ ಮಾಲಿನ್ಯ ಕಡಿಮೆಯಾಗಲಿದೆ. ಬಸ್ಸುಗಳು ಖಾಲಿ ತಿರುಗಾಡುತ್ತಿರುತ್ತವೆ; ನಾವು ದರ ಕಡಿತ ಮಾಡಿದ್ದರಿಂದ ಹೆಚ್ಚಿನ ಜನ ಬಸ್ಸು ಹತ್ತಬಹುದು ಎಂದುಕೊಂಡಿದ್ದೇವೆ. ಅದರಲ್ಲೂ ನಾವು ಯುವ ಜನತೆ ಬಸ್ಸು ಹತ್ತಬೇಕು ಎಂದುಕೊಂಡಿದ್ದೇವೆ. ಅವರೆಲ್ಲಾ ತಮ್ಮ ಬೈಕುಗಳನ್ನು ಮನೆಯಲ್ಲೇ ಬಿಟ್ಟು ಬಸ್ಸು ಹತ್ತಿದರೆ ಒಂದು ಹಂತಕ್ಕೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ,” ಎಂದು ಹಿರಿಯ ಸಾರಿಗೆ ಅಧಿಕಾರಿ ಹೇಳಿದ್ದಾರೆ.

ಅಂಕಿ ಅಂಶಗಳು ಹೇಳುವುದೇನು?

ದೆಹಲಿಯಲ್ಲಿ ಶೇಕಡಾ 21.8 ಪ್ರಯಾಣಿಕರು ಬಸ್ಸಿನಲ್ಲೇ ಪ್ರಯಾಣಿಸುತ್ತಾರೆ. ಆದರೆ 1980-81ರಲ್ಲಿ ಒಟ್ಟು ವಾಹನಗಳಲ್ಲಿ ಬಸ್ಸುಗಳ ಪಾಲು ಶೇಕಡಾ 1.52 ಇತ್ತು. ಅದೀಗ 2014-15ರ ಹೊತ್ತಿಗೆ ಶೇಕಡಾ 0.36ಕ್ಕೆ ಕುಸಿದಿದೆ. ಅದೇ 1980-81ರಲ್ಲಿ ಶೇಕಡಾ 86.61 ಇದ್ದ ಖಾಸಗಿ ವಾಹನಗಳ ಪಾಲು 2014-15ರ ಹೊತ್ತಿಗೆ ಶೇಕಡಾ 95.95ಕ್ಕೆ ವಿಸ್ತರಣೆಯಾಗಿದೆ.

ಕಾರುಗಳು ಮತ್ತು ದ್ವಿಚಕ್ರ ವಾಹನಗಳು ದೆಹಲಿ ರಸ್ತೆಯ ಶೇಕಡಾ 75ನ್ನು ಆಕ್ರಮಿಸಿಕೊಳ್ಳುತ್ತವೆ. ಆದರೆ ಇದರಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಮಾತ್ರ ಕೇವಲ ಶೇಕಡಾ 20 ಮಾತ್ರ. ಅದೇ ರಸ್ತೆಯನ್ನು ಶೇಕಡಾ 5ರಷ್ಟು ಮಾತ್ರ ಬಳಸಿಕೊಳ್ಳುವ ಬಸ್ಸುಗಳು ಶೇಕಡಾ 60 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.

ಸಾರಿಗೆ ಇಲಾಖೆಯಿಂದ ವಿರೋಧ; ಪಟ್ಟು ಬಿಡದ ಸಿಸೋಡಿಯಾ:

ಮೂಲಗಳ ಪ್ರಕಾರ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಸಾರಿಗೆ ಮಂತ್ರಿ ಸತ್ಯೇಂದ್ರ ಜೈನ್ ಬುಧವಾರ ಸಭೆ ನಡೆಸಿ ಯೋಜನೆ ಅನುಷ್ಠಾನಗೊಳಿಸುವಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದರೆ ಇದಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಪಟ್ಟು ಬಿಡದ ಮನೀಷ್ ಸಿಸೋಡಿಯಾ ತಕ್ಷಣ ಜಾರಿಗೆ ತರುವಂತೆ ಆದೇಶ ಹೊರಡಿಸಿದ್ದಾರೆ.

ಸದ್ಯ ದೆಹಲಿ ಸಾರಿಗೆ ಸಂಸ್ಥೆಯಲ್ಲಿ 4352 ಬಸ್ಸುಗಳಿವೆ, ಇದರಲ್ಲಿ 569 ಸ್ಟ್ಯಾಂಡರ್ಡ್, 2,506 ಗ್ರೀನ್ ಲೋ ಫ್ಲೋರ್, 1,275 ಎಸಿ ಲೋ ಫ್ಲೋರ್, ಮತ್ತು 1100 ಕ್ಲಸ್ಟರ್ ಬಸ್ಸುಗಳಿವೆ. ಸ್ಟ್ಯಾಂಡರ್ಡ್  ಬಸ್ಸುಗಳ ಆಯಸ್ಸು ಮುಗಿದಿದ್ದು 2016ರ ಅಂತ್ಯಕ್ಕೆ ಅವುಗಳ ಓಡಾಟ ನಿಲ್ಲಿಸಲಾಗುತ್ತದೆ.

ಸದ್ಯ ದೆಹಲಿ ಸಾರಿಗೆ ಸಂಸ್ಥೆ ದೊಡ್ಡ ಮಟ್ಟಕ್ಕೆ ತನ್ನ ಪ್ರಯಾಣಿಕರನ್ನು ಕಳೆದುಕೊಂಡಿದೆ. 2013-14ರಲ್ಲಿ ಪ್ರತಿದಿನ 43.47 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದ ಸಂಸ್ಥೆಯೀಗ ಕೇವಲ 35 ಲಕ್ಷ ಜನರಿಗೆ ಸೇವೆ ನೀಡುತ್ತಿದೆ. ಈ ಯೋಜನೆ ಘೋಷಣೆಯಿಂದ ಮತ್ತೆ ಪ್ರಯಾಣಿಕರೆಲ್ಲಾ ಸಾರ್ವಜನಿಕ ಬಸ್ಸಿಗೆ ಮರಳಿ ಬರಲಿದ್ದು ವಾಯು ಮಾಲಿನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದುಕೊಳ್ಳಲಾಗಿದೆ.

ಈ ಹಿಂದೆ ದೆಹಲಿ ಸರಕಾರ ವಾಯು ಮಾಲಿನ್ಯ ತಡಗೆ ಸಮ-ಬೆಸ ಸಂಖ್ಯೆಗಳ ವಾಹನಗಳನ್ನು ರಸ್ತೆಗಿಳಿಸುವ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಮಾತ್ರವಲ್ಲ 2,000 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಎಂಜಿನ್ ಕಾರುಗಳನ್ನೂ ಬ್ಯಾನ್ ಮಾಡಿತ್ತು. ಹೀಗಿದ್ದೂ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಇತ್ತೀಚೆಗೆ ದೀಪಾವಳಿ ಸಂದರ್ಭ ಮಾಲಿನ್ಯ ಹೆಚ್ಚಾಗಿ ಶಾಲೆಗಳಿಗೆ ರಜೆ ಘೋಷಿಸಿದ್ದನ್ನು ಈ ಸಂದರ್ಭ ಸ್ಮರಿಸಬಹುದು.

Top