An unconventional News Portal.

ಎಐಎಡಿಎಂಕೆ ಪ್ರಣಾಳಿಕೆ: ಮಕ್ಕಳ ಅಗತ್ಯವೇನು ಎಂದು ಅರ್ಥ ಮಾಡಿಕೊಂಡವರ ಹೆಸರು ‘ಅಮ್ಮ’!

ಎಐಎಡಿಎಂಕೆ ಪ್ರಣಾಳಿಕೆ: ಮಕ್ಕಳ ಅಗತ್ಯವೇನು ಎಂದು ಅರ್ಥ ಮಾಡಿಕೊಂಡವರ ಹೆಸರು ‘ಅಮ್ಮ’!

ತಮಿಳುನಾಡಿನಲ್ಲಿ ಮಾನ್ಸೂನ್ ಮೋಡಗಳ ಜತೆಜತೆಗೇ ಹೊರಬಿದ್ದಿದೆ ಜೆ. ಜಯಲಲಿತಾ ಅವರ ಎಐಎಡಿಎಂಕೆ ಪಕ್ಷದ ಪ್ರಣಾಳಿಕೆ.

ಎರಡು ತಿಂಗಳಿಗೆ ನೂರು ಯೂನಿಟ್ ಉಚಿತ ಗೃಹ ಬಳಕೆಯ ವಿದ್ಯುತ್, ಮಹಿಳೆಯರು ಖರೀದಿಸುವ ಸ್ಕೂಟರ್ ಮೇಲೆ ಶೇ. 50ರಷ್ಟು ಸಬ್ಸಿಡಿ, ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಹಾಗೂ ಇಂಟರ್ ನೆಟ್, ಮದುವೆಯಾಗುವ ಯುವತಿಯರಿಗೆ 8 ಗ್ರಾಂ ಉಚಿತ ಚಿನ್ನ, ರೇಷನ್ ಕಾರ್ಡ್ ಹೊಂದಿದವರಿಗೆ ಉಚಿತ ಮೊಬೈಲ್ ಸಂಪರ್ಕ, ಬಾಣಂತನಕ್ಕೆ 18 ಸಾವಿರ ಸಹಾಯ ಧನ ಹಾಗೂ 9 ತಿಂಗಳ ರಜೆ, 2016-21ರ ಆರ್ಥಿಕ ವರ್ಷಗಳಲ್ಲಿ 40 ಸಾವಿರ ಕೋಟಿ ರೈತರಿಗೆ ಸಾಲ…ಇತ್ಯಾದಿ.

ಇವು ಜಯಲಲಿತಾ ಚುನಾವಣೆಯ ಹಿನ್ನೆಲೆಯಲ್ಲಿ ನೀಡಿರುವ ಪ್ರಣಾಳಿಕೆಯ ಆಶ್ವಾಸನೆಗಳು.

ಗುರುವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಜಯಲಲಿತಾ, ತಮ್ಮ ರಾಜ್ಯದ ಜನರ ಮತಗಳನ್ನು ಈ ಬಾರಿಯೂ ಪಕ್ಷಕ್ಕೇ ಸೀಮಿತವಾಗಿಟ್ಟುಕೊಳ್ಳುವ ತಂತ್ರಗಾರಿಕೆಯನ್ನು ನಾಜೂಕಾಗಿ ಹೆಣೆಯುವುದು ಹೇಗೆ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

ಈಗಾಗಲೇ, ತಮಿಳುನಾಡಿನಾದ್ಯಂತ ಭಾರಿ ಜನಮನ್ನಣೆ ಗಳಿಸಿರುವ ‘ಅಮ್ಮ ಕ್ಯಾಂಟೀನ್’ ಯೋಜನೆಯನ್ನು ಉಲ್ಲೇಖಿಸುತ್ತಲೇ, ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಅವರು ಮಾತನಾಡಿದರು. “ತಾಯಿಗೆ ಮಾತ್ರವೇ ತನ್ನ ಮಕ್ಕಳ ಅಗತ್ಯವೇನು ಎಂಬುದು ಅರ್ಥವಾಗುತ್ತದೆ. ನನ್ನ ಅಧಿಕಾರದ ಅವಧಿಯಲ್ಲಿ ನೀವು ಇದಕ್ಕೂ ಮೀರಿದ ಯೋಜನೆಗಳನ್ನು ಅನುಭವಿಸುತ್ತೀರಿ,” ಎಂದು ಘೋಷಿಸಿದರು.

 

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಮೇ. 16 ರಂದು ಮತದಾನ ನಡೆಯಲಿದೆ. ಮೇ. 19ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಹತ್ತು ದಿನ ಬಾಕಿ ಇರುವಾಗಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಎಐಎಡಿಎಂಕೆ, ಮತ್ತೆ ಅಧಿಕಾರಕ್ಕೇರುವ ವಿಶ್ವಾಸವನ್ನು ಹೊಂದಿದೆ. ಈಗಾಗಲೇ ಹೊರಬಿದ್ದಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ನಿಚ್ಚಳ ಬಹುಮತವನ್ನು ಪಕ್ಷಕ್ಕೆ ನೀಡಿವೆ.

“ನಾನು ಜನರಿಂದ ರೂಪುಗೊಂಡವಳು. ನಾನು ಜನರಿಗಾಗಿ ಇರುವವಳು,” ಎಂದು ಈ ಸಂದರ್ಭದಲ್ಲಿ ಜಯಲಲಿತಾ ಹೇಳಿದರು.

ಪ್ರತಿಪಕ್ಷ ಡಿಎಂಕೆ ಪ್ರಣಾಳಿಕೆ ಬಿಡುಗಡೆ ಮಾಡಿದ 15 ದಿನಗಳ ನಂತರ ಎಐಎಡಿಎಂಕೆ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಒಟ್ಟು 14 ಜನ ತಂಡವು ಇದನ್ನು ತಯಾರಿಸಿದ್ದು, ನಾನಾ ಕ್ಷೇತ್ರಗಳ ಪರಿಣಿತರನ್ನು ಇದಕ್ಕಾಗಿ ಸಂಪರ್ಕಿಸಿ, ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ ಎಂದು ಪಕ್ಷ ಹೇಳಿಕೊಂಡಿದೆ.

ಬಾಣಂತನಕ್ಕೆ ಸಹಾಯಧನ ಹಾಗೂ ರಜೆಯ ವಿಸ್ತರಣೆ ಸೇರಿದಂತೆ, ಮಹಿಳೆಯರನ್ನೇ ಕೇಂದ್ರವಾಗಿಟ್ಟುಕೊಂಡು, ಪ್ರಣಾಳಿಕೆಯಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿರುವುದು ವಿಶೇಷ.

“ಪ್ರಣಾಳಿಕೆಯು ಬೆಟ್ಟದಷ್ಟು ಆಶಯಗಳನ್ನು ಜನರಲ್ಲಿ ಹುಟ್ಟು ಹಾಕಿದೆ. ಉತ್ಪಾದನೆ ಆರ್ಥಿಕತೆ ಕಡೆಗೆ ನಿಮ್ಮ ಗಮನ ಇಲ್ಲದಿರುವ ಸಮಯದಲ್ಲಿ ಹೀಗೆ ಜನರಿಗೆ ಉಚಿತಗಳ ಆಮಿಷ ಒಡ್ಡುವುದು ಸರಿಯಲ್ಲ,” ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

Top