An unconventional News Portal.

‘ಅನಾಣ್ಯೀಕರಣ’: ಹೊಸ ಸುತ್ತಿನ ‘ನೋಟಿನ ನಾಟಕ’ ತೆರೆಗೆ ಬರಲು 24 ಗಂಟೆಗಳಷ್ಟೆ ಬಾಕಿ!

‘ಅನಾಣ್ಯೀಕರಣ’: ಹೊಸ ಸುತ್ತಿನ ‘ನೋಟಿನ ನಾಟಕ’ ತೆರೆಗೆ ಬರಲು 24 ಗಂಟೆಗಳಷ್ಟೆ ಬಾಕಿ!

ಅನಾಣ್ಯೀಕರಣದ ಸಂಕಷ್ಟಗಳ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡ 50 ದಿನ ಮುಗಿಯಲು ಇನ್ನು 24 ಗಂಟೆಗಳಷ್ಟೆ ಬಾಕಿ ಉಳಿದಿವೆ.

ಅನಾಣ್ಯೀಕರಣ ಘೋಷಣೆಯಾಗಿ ಈ 50 ದಿನಗಳಲ್ಲಿ ಚಲಾವಣೆಗೆ ಬಂದ ಹೊಸದಾಗಿ ಮುದ್ರಿತ ನೋಟುಗಳ ಸಂಖ್ಯೆ ತೀರಾ ಅಲ್ಪ ಪ್ರಮಾಣದ್ದು. ಇದರ ಬೆನ್ನಿಗೇ ನೋಟು ಮುದ್ರಣದ ಪ್ರಮಾಣ ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಸಮಸ್ಯೆ ಮತ್ತಷ್ಟು ಬಿಗುಡಾಯಿಸುವ ಸಾಧ್ಯತೆಗಳಿವೆ.

ಅನಾಣ್ಯೀಕರಣ ಘೋಷಣೆಯಾದ ನಂತರ ಓವರ್ ಟೈಮ್ ಕೆಲಸ ಮಾಡುತ್ತಿದ್ದ ಸಾಲ್ದಾನಿ ನೋಟು ಮುದ್ರಣ ಘಟಕದ ಸಿಬ್ಬಂದಿಗಳು ನಮ್ಮಿಂದ ಇನ್ನು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತಗಾದೆ ತೆಗೆದಿದ್ದಾರೆ. ಆರೋಗ್ಯದ ಕಾರಣ ಮುಂದಿಟ್ಟಿರುವ ಸಿಬ್ಬಂದಿಗಳು, ನಮ್ಮಿಂದ ದಿನಕ್ಕೆ 12 ಗಂಟೆ ಕೆಲಸ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಇದರಿಂದ ಘಟಕದಲ್ಲಿ ಮುದ್ರಣವಾಗುವ ನೋಟುಗಳ ಸಂಖ್ಯೆಯಲ್ಲಿ 60 ಲಕ್ಷ ಕುಸಿತವಾಗಲಿದೆ.

ಓವರ್ ಟೈಮ್ಗೆ ಹಿಂದೇಟು:

ಸಾಲ್ದಾನಿ ಸಂಸ್ಥೆಯ ಸಿಬ್ಬಂದಿಗಳು ಕಳೆದ 15 ದಿನದಿಂದ ದಿನಕ್ಕೆ 12 ಗಂಟೆಯಂತೆ ಕೆಲಸ ಮಾಡುತ್ತಾ ಬಂದಿದ್ದರು. ಹೆಚ್ಚಿನ ಸಂಖ್ಯೆಯ ನೋಟುಗಳು ಮುದ್ರಣವಾಗಬೇಕು ಎಂಬ ಕಾರಣಕ್ಕೆ ಅವರನ್ನೆಲ್ಲಾ 12 ಗಂಟೆ ದುಡಿಸಲಾಗುತ್ತಿತ್ತು. ಇದರಿಂದ ಕಾರ್ಮಿಕರಲ್ಲೀಗ ನಿಧಾನಕ್ಕೆ ಬೆನ್ನು ನೋವು ಕಾಣಿಸಿಕೊಂಡಿದೆ. ನಿದ್ರಾ ಹೀನತೆಯಿಂದ ಕೆಲವರು ಬಳಲುತ್ತಿದ್ದರೆ, ದೈಹಿಕ ಮತ್ತು ಮಾನಸಿಕ ಒತ್ತಡ ಕೆಲವರನ್ನು ಆವರಿಸಿಕೊಂಡಿದೆ.

“ನಾವು ಡಿಸೆಂಬರ್ 14 ರಂದು ಮ್ಯಾನೇಜ್ಮೆಂಟ್ ಜತೆ ಎರಡು ವಾರಗಳ ಕಾಲ 12 ಗಂಟೆ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದ್ದೆವು. ಒಪ್ಪಂದ ಡಿಸೆಂಬರ್ 27ರಂದು ಮುಗಿದಿದೆ. ನಾವು ಒಪ್ಪಂದ ಮುಂದುವರಿಸುವುದನ್ನು ತಿರಸ್ಕರಿಸಿದ್ದೇವೆ,” ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಸಿಬ್ಬಂದಿಯೊಬ್ಬರು ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಹಿಂದೆ ಇವರೆಲ್ಲಾ ದಿನಕ್ಕೆ 9 ಗಂಟೆ ದುಡಿಯುತ್ತಿದ್ದವರು.

ಸಿಬ್ಬಂದಿಗಳು 12 ಗಂಟೆ ದುಡಿಯುತ್ತಿದ್ದಾಗ ದಿನಕ್ಕೆ 4.6 ಕೋಟಿ ನೋಟುಗಳು ಪ್ರಿಂಟಾಗುತ್ತಿದ್ದವು. ಆದರೆ ಇದೀಗ 4 ಕೋಟಿಗೆ ಇಳಿಕೆಯಾಗಲಿದೆ. “ಶಿಪ್ಟ್ ಕಡಿಮೆ ಮಾಡುವುದರಿಂದ ಯಂತ್ರಗಳೂ ಕೆಲಸವಿಲ್ಲದೆ ಖಾಲಿ ಬಿದ್ದಿರುತ್ತವೆ. ಇದರಿಂದ ನೋಟುಗಳ ಮುದ್ರಣ ಕಡಿಮೆಯಾಗುತ್ತದೆ. ಈ ಕಾರಣಕ್ಕೆ ಆರ್ಬಿಐ ಶಿಫ್ಟುಗಳನ್ನು ಹೆಚ್ಚಿಗೆ ಮಾಡಲು ಮ್ಯಾನೇಜ್ಮೆಂಟ್ ಬಳಿ ಕೇಳಿಕೊಂಡಿದೆ,” ಎಂದು ಮೂಲಗಳು ಹೇಳಿದ್ದಾಗಿ ಪತ್ರಿಕೆ ವರದಿ ಮಾಡಿದೆ.

ಬುಧವಾರದಿಂದ ಸಂಸ್ಥೆಯಲ್ಲಿ 9 ಗಂಟೆಗಳ ಎರಡು ಶಿಫ್ಟು, ಮತ್ತು 6 ಗಂಟೆಗಳ ಒಂದು ಶಿಪ್ಟು ಆರಂಭವಾಗಿದೆ. ರಿಸರ್ವ್ ಬ್ಯಾಂಕಿನ ಹೊಸ 2,000 ಮುಖಬೆಲೆಯ ನೋಟುಗಳನ್ನು ಮುದ್ರಿಸುವ ಎರಡು ಸಂಸ್ಥೆಗಳಲ್ಲಿ ಸಾಲ್ದಾನಿಯೂ ಒಂದಾಗಿದ್ದು, ಮುದ್ರಣವಾಗುವ ನೋಟುಗಳಲ್ಲಿ ದೊಡ್ಡ ಮಟ್ಟಕ್ಕೆ ಕಡಿತವಾಗಲಿದೆ.

note-mudran-ltd-logo

ಇಲ್ಲೂ ಅದೇ ಕತೆ:

ಸಿಎನ್’ಪಿ ನಾಸಿಕ್ ಮುದ್ರಣ ಘಟಕದಲ್ಲಿಯೂ ಇದೇ ಗೋಳು ಕೇಳಿ ಬರುತ್ತಿದೆ. ಅಲ್ಲಿನ 1700 ಸಿಬ್ಬಂದಿಗಳಿಗೆ ಕಳೆದ 7 ವಾರಗಳಿಂದ ಭಾನುವಾರದ ರಜೆಯನ್ನೂ ಕೊಟ್ಟಿಲ್ಲ. ಮೊನ್ನೆಯ ಕ್ರಿಸ್ ಮಸ್ ರಜೆಯ ದಿನವೂ ಸಿಬ್ಬಂದಿಗಳ ಕೈಯಲ್ಲಿ ಕೆಲಸ ಮಾಡಿಸಲಾಗಿದೆ. ಇಲ್ಲಿ ಕೆಲಸದ ಒತ್ತಡ ಯಾವ ಮಟ್ಟಕ್ಕೆ ಇದೆ ಎಂದರೆ, ಸಿಬ್ಬಂದಿಗಳಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೂ ಬಿಡುವು ನೀಡುತ್ತಿಲ್ಲ. ಒಟ್ಟು 11 ಗಂಟೆಗಳ ಕಾಲ ಇಲ್ಲಿನ ಸಿಬ್ಬಂದಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ದುಡಿಸಿಕೊಳ್ಳುತ್ತಿದೆ. ಅದರಲ್ಲೂ ಮೊದಲ ಎರಡು ಭಾನುವಾರದಂದು ಕೆಲಸ ಮಾಡಿದ ಸಿಬ್ಬಂದಿಗಳಿಗೆ ಆಡಳಿತ ಮಂಡಳಿ ಸಂಬಳವನ್ನೂ ಕೊಟ್ಟಿಲ್ಲ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಗುರಿ ಮುಟ್ಟದ ನೋಟು ಮುದ್ರಣ:

ಮೈಸೂರು ಮತ್ತು ಸಾಲ್ಬಾನಿ ಮುದ್ರಣ ಘಟಕದಲ್ಲಿ 2,000 ಮುಖಬೆಲೆಯ ನೋಟುಗಳ ಮುದ್ರಣ ನಡೆಯುತ್ತಿದ್ದರೆ, ನಾಸಿಕ್ ಮತ್ತು ದಿವಾಸ್ ನಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣ ನಡೆಯುತ್ತಿದೆ.

ಸದ್ಯ ನಾಸಿಕ್ನಲ್ಲಿ ಪ್ರತಿ ದಿನ 1 ಕೋಟಿ 500 ಮುಖಬೆಲೆಯ ನೋಟುಗಳ ಮುದ್ರಣ ನಡೆಯುತ್ತಿದ್ದರೆ, ಸುಮಾರು 80 ಲಕ್ಷ 100, 50, 20 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿದೆ.

ಅನಾಣ್ಯೀಕರಣದಿಂದಾಗಿ ಅಂದಾಜು 1500 ಕೋಟಿ 500 ರೂಪಾಯಿಯ ನೋಟುಗಳು ಹಾಗೂ 670 ಕೋಟಿ 1,000 ರೂಪಾಯಿಯ ನೋಟುಗಳನ್ನು  ಹಿಂತೆಗೆದುಕೊಂಡಿದ್ದರಿಂದ ಅಷ್ಟೇ ಮೌಲ್ಯದ ನೋಟುಗಳನ್ನು ಮುದ್ರಿಸಬೇಕಾಗಿದೆ. ಆದರೆ ಸದ್ಯಕ್ಕೆ ಈ ಮುದ್ರಣ ಸಾಧ್ಯವಿಲ್ಲ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಾಜಿ ಅರ್ಥ ಸಚಿವ ಪಿ. ಚಿದಂಬರಂ ಮತ್ತು ಆರ್ಥಿಕ ತಜ್ಞ ಸೌಮಿತ್ರ ಚೌಧರಿ ಹೇಳಿದ್ದರು. ಒಟ್ಟು 21,000 ಕೋಟಿಗೂ ಹೆಚ್ಚು ನೋಟುಗಳನ್ನು ಪ್ರಿಂಟು ಮಾಡಬೇಕಾಗಿದೆ. ಶಿಫ್ಟುಗಳನ್ನು ಹೆಚ್ಚಿಸಿಯೂ ಈಗಿರುವ ಆರ್ಬಿಐ ಮತ್ತು ಹಣಕಾಸು ಇಲಾಖೆಯ ಪ್ರಿಂಟಿಂಗ್ ಪ್ರೆಸ್ಸುಗಳಲ್ಲಿ ತಿಂಗಳಿಗೆ ಕೇವಲ 3,000 ಕೋಟಿ (10, 20, 50, 100, 500, 2,000ನೋಟುಗಳು ಸೇರಿ) ನೋಟುಗಳನ್ನು ಮುದ್ರಿಸಲಾಗುತ್ತಿದೆ. ಹೀಗಾಗಿ ಎಷ್ಟೇ ಪ್ರಯತ್ನಪಟ್ಟರೂ 6-7 ತಿಂಗಳೊಳಗೆ ಬೇಡಿಕೆಗೆ ತಕ್ಕಷ್ಟು ನೋಟುಗಳನ್ನು ಮುದ್ರಿಸುವುದು ಅಸಾಧ್ಯ ಎಂದಿದ್ದರು.

ಅವರ ಮಾತುಗಳು ನಿಜವಾಗುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಒಂದು ಕಡೆ ನಗದು ಹಣದ ಅಭಾವದಿಂದ ಸಾಮಾನ್ಯ ಜನರ ಸರತಿ ಸಾಲು ಬ್ಯಾಂಕುಗಳ ಮುಂದೆ ಮುಂದುವರಿದಿದೆ. ಚಿಲ್ಲರೆ ಸಮಸ್ಯೆಯಾಗುತ್ತಿದೆ. ಅತ್ತ, ಪ್ರಧಾನಿ ಕೇಳಿದ ಗಡುವು ಅವಧಿಯೂ ಮುಗಿಯುತ್ತಿದೆ. ಹೀಗಾಗಿ ಮುಂದಿನ 24 ಗಂಟೆಗಳಲ್ಲಿ ದೇಶದಲ್ಲಿ ಮತ್ತೊಂದು ಸುತ್ತಿನ ಹೈಡ್ರಾಮಾಕ್ಕೆ ಕ್ಷಣಗಣನೆ ಆರಂಭವಾಗಿದೆ.

ENTER YOUR E-MAIL

Name
Email *
May 2017
M T W T F S S
« Apr    
1234567
891011121314
15161718192021
22232425262728
293031  

Top