An unconventional News Portal.

ಮರೀನಾ ಬೀಚ್ ಈಗ ಪ್ರತಿಭಟನೆಯ ತವರು: ಜೆಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಆಗ್ರಹ

ಮರೀನಾ ಬೀಚ್ ಈಗ ಪ್ರತಿಭಟನೆಯ ತವರು: ಜೆಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಆಗ್ರಹ

ಕಳೆದ ಮೂವತ್ತಾರು ಗಂಟೆಗಳಿಂದ ತಮಿಳುನಾಡಿನ ಮರೀನಾ ಬೀಚ್ ಪ್ರದೇಶದಲ್ಲಿ ಜಲ್ಲಿಕಟ್ಟು ಸ್ಪರ್ದೆಯ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಆಗ್ರಹಿಸಿ ಜನ ನಡೆಸುತ್ತಿರುವ ಪ್ರತಿಭಟನೆಯ ಕಾವು ಜೋರಾಗುತ್ತಲೇ ಇದೆ.

ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಆದರೆ ತಹಬಂದಿಗೆ ತರಲು ಸಾಧ್ಯವಾಗಿಲ್ಲ. ಸದ್ಯ ಚೆನ್ನೈನ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಪ್ರತಿಭಟನೆಯನ್ನು ಕೈ ಬಿಡುವಂತೆ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಮನವಿ ಮಾಡಿಕೊಂಡಿದ್ದರೂ, ಪ್ರತಿಭಟನೆಯ ಕಾವು ತಣ್ಣಗಾಗುತ್ತಿಲ್ಲ. ಸರಕಾರ ಮತ್ತು ನ್ಯಾಯಾಲಯ ತಮ್ಮ ಮನವಿಯನ್ನು ಆಲಿಸಬೇಕು ಮತ್ತು ಜಲ್ಲಿಕಟ್ಟು ಆಚರಣೆಯ ಮೇಲೆ ಹೇರಿರುವ ನಿರ್ಬಂಧವನ್ನು ತೆಗೆದು ಹಾಕಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ.

ಈ ನಡುವೆ ಗುರುವಾರ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಪ್ರಧಾನಿ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಹಿನ್ನೆಲೆ:

ಪ್ರಾಣಿ ಹಿಂಸೆಯ ಕಾರಣ ಮುಂದಿಟ್ಟು ಜಲ್ಲಿಕಟ್ಟಿಗೆ ನಿಷೇಧ ಹೇರಲಾಗಿತ್ತು. ಇದನ್ನು ಸುಪ್ರಿಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು.  2014ರಲ್ಲಿ ಮೊದಲ ಬಾರಿಗೆ ಪ್ರಾಣಿ ಹಿಂಸೆಯ ಕಾರಣ ನೀಡಿ ಸರ್ವೋಚ್ಛ ನ್ಯಾಯಾಲಯ ಜಲ್ಲಿ ಕಟ್ಟಿಗೆ ನಿಷೇಧ ಹೇರಿತ್ತು. ಕಳೆದ ವರ್ಷ ರಾಜ್ಯ ಸರಕಾರ ನಿಷೇಧ ತೆರವಿಗೆ ಸಲ್ಲಿಸಿದ್ದ ಮೇನ್ಮನವಿ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿ ತನ್ನ ಹಳೆ ಆದೇಶವನ್ನೇ ಎತ್ತಿ ಹಿಡಿದಿತ್ತು. ಈ ಬಾರಿ ಮತ್ತೆ ಜಲ್ಲಿಕಟ್ಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ಶನಿವಾರದೊಳಗೆ ಅಂತಿಮ ಆದೇಶ ನೀಡಬೇಕು ಎಂದು ಕೋರಿ ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಇನ್ನೇನು ‘ಅಂತಿಮ ಆದೇಶ ಸಿದ್ಧವಾಗುತ್ತಿದೆ, ಶನಿವಾರಕ್ಕೂ ಮೊದಲು ತೀರ್ಪು ನೀಡಲು ಸಾಧ್ಯವಿಲ್ಲ,’ ಎಂದು ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ. ಇದು ತಮಿಳುನಾಡಿನಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿದೆ.

Jallikattu 4

‘ಜಲ್ಲಿಕಟ್ಟು’ ರಾಜಕೀಯ:

ಸುಪ್ರಿಂ ಕೋರ್ಟಿನ ಈ ಆದೇಶ ಬಂದ ನಂತರವೂ ತಮಿಳುನಾಡು ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಜಲ್ಲಿಕಟ್ಟು ನಡೆದೇ ನಡೆಯುತ್ತದೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. “ಅಮ್ಮ (ಜಯಲಲಿತಾ) ಹಾಕಿಕೊಟ್ಟ ದಾರಿಯಲ್ಲೇ ಮುಂದುವರಿಯುತ್ತಿರುವ ನಾನು ಮತ್ತು ತಮಿಳುನಾಡು ಸರಕಾರ ಜಲ್ಲಿ ಕಟ್ಟು ನಡೆಯುತ್ತದೆ ಎಂಬ ಭರವಸೆ ನೀಡುತ್ತೇವೆ. ನಾವು ಸ್ವಲ್ಪವೂ ಹಿಂಜರಿಯುವ ಪ್ರಶ್ನೆಯೇ ಇಲ್ಲ. ತಮಿಳಿಗರ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎತ್ತಿಹಿಡಿಯುವ ಭರವಸೆಯನ್ನು ನೀಡಲು ನಾನು ಇಚ್ಚಿಸುತ್ತೇನೆ,” ಎಂದಿದ್ದಾರೆ.

ಈ ಕುರಿತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಪ್ರಧಾನ ಮಂತ್ರಿಗೆ ಪತ್ರವನ್ನೂ ಬರೆದಿದ್ದಾರೆ. ಪತ್ರದಲ್ಲಿ ಸುಗ್ರೀವಾಜ್ಞೆ ಹೊರಡಿಸುವಂತೆ ಅವರು ನರೇಂದ್ರ ಮೋದಿಯನ್ನು ಆಗ್ರಹಿಸಿದ್ದಾರೆ. ಇನ್ನು ತಂಬಿದುರೈ ನೇತೃತ್ವದ ನಿಯೋಗ ಪರಿಸರ ಸಚಿವ ಅನಿಲ್ ಮಾಧವ್ ಧವೆಯವರನ್ನು ಭೇಟಿಯಾಗಿದ್ದು, ಈ ಸಂದರ್ಭ ಅವರು “ಹಿಂದಿನ ಕಾಂಗ್ರೆಸ್ ಸರಕಾರ ಎತ್ತುಗಳನ್ನು ನಿಷೇಧ ಪಟ್ಟಿಯಲ್ಲಿ ಸೇರಿಸಿ ಈ ತಪ್ಪುಗಳನ್ನು ಮಾಡಿದ,” ಎಂದು ದೂರಿದ್ದಾರೆ. ಮಾತ್ರವಲ್ಲ “ಜಲ್ಲಿಕಟ್ಟಿನಲ್ಲಿ ಯಾವುದೇ ರೀತಿಯಲ್ಲೂ ಎತ್ತುಗಳಿಗೆ ಹಿಂಸೆ ನೀಡುವುದಿಲ್ಲ. ಹಾಗಾಗಿ ಸುಪ್ರಿಂ ಕೋರ್ಟ್ ಪ್ರಕರಣದ ಎಲ್ಲಾ ಆಯಾಮಗಳ ಬಗ್ಗೆ ಗಮನ ಹರಿಸುವ ಭರವಸೆ ಇದೆ,” ಎಂದಿದ್ದಾರೆ.

ಕಟಾವು ಹಬ್ಬ ಪೊಂಗಲ್ ಗೆ ಮೊದಲು ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಲು ನ್ಯಾಯಾಲಯ ನಿರಾಕರಿಸುತ್ತಿದ್ದಂತೆ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ರಾಜ್ಯಾದ್ಯಂತ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಿದೆ. ಮಾತ್ರವಲ್ಲ ಕೇಂದ್ರದ ನಿರ್ಧಾರ ದ್ವಂದ್ವದ್ದು ಎಂದು ಅವರು ಹರಿಹಾಯ್ದಿದ್ದಾರೆ.

ಏನಿದು ಜಲ್ಲಿಕಟ್ಟು?

ತೆಂಗಿನ ನಾರಿನ ಮೆತ್ತನೆ ಹಾಸು, ಸುತ್ತ ಮುತ್ತೆಲ್ಲಾ ಬೇಲಿ ಹಾಕಿ ಸಿದ್ಧವಾದ ಮೈದಾನ. ಮೈದಾನದ ತುಂಬಾ ನೂರಾರು ಕಟ್ಟು ಮಸ್ತಾದ ಸಮವಸ್ತ್ರಧಾರಿ ಯುವಕರು ನಿಂತಿದ್ದಾರೆ. ಬೇಲಿ ಹಾಕಿದ ಆವರಣದ ಮೂಲೆಯಲ್ಲಿರುವ ಕಿಂಡಿಯೊಂದರಿಂದ ಗೂಳಿಯೊಂದು ಶರವೇಗದಲ್ಲಿ ಧಾವಿಸಿ ಬರುತ್ತದೆ; ಕೊಬ್ಬಿದ ಗೂಳಿ. ಅದನ್ನು ಹಿಡಿಯಲು ನೂರಾರು ವೀರರು (ಯುವಕರು) ಮುಗಿ ಬೀಳುತ್ತಾರೆ. ಇದನ್ನೆಲ್ಲಾ ಬೇಲಿಯಾಚೆಗಿನ ಗ್ಯಾಲರಿಯಲ್ಲಿ ಕುಳಿತ ಜನ ರೆಪ್ಪೆ ಮುಚ್ಚದೆ ಕಣ್ತುಂಬಿಕೊಳ್ಳುತ್ತಾರೆ. ಈ ಹೋರಿಯನ್ನು ಒಬ್ಬನೇ ಮಣಿಸಬೇಕು. ಹೋರಿ ಪಳಗಿಸಲು ಕಾದು ಕೂತವ್ರಿಗೆ ಹೋರಿ ದಕ್ಕದೇ ಓಡಿದ್ರೆ, ಗೆಲುವು ಹೋರಿ ಮಾಲಿಕನದ್ದು. ಯಾರಾದರೂ ಹೋರಿ ಮಣಿಸಿದರು ಅಂತಿಟ್ಟುಕೊಳ್ಳಿ, ಆತನಿಗೆ ಕೈ ತುಂಬಾ ಬಹುಮಾನ.

Jallikattu

ಇದು ತಮಿಳುನಾಡಿನ ಶುದ್ಧ ದೇಸೀ ಕ್ರೀಡೆ ಜಲ್ಲಿಕಟ್ಟು. ದಕ್ಷಿಣ ತಮಿಳುನಾಡಿನ ಜನಪ್ರಿಯ ಸಾಹಸ ಕ್ರೀಡೆ ಕೂಡ. ಜಲ್ಲಿ ಎಂದರೆ ಬೆಳ್ಳಿ ಅಥವಾ ಬಂಗಾರದ ನಾಣ್ಯ. ಹೋರಿಯ ಕೊಂಬಿಗೆ ಕಟ್ಟಿದ ಇದನ್ನು ದಕ್ಕಿಸಿಕೊಳ್ಳುವುದೇ ಜಲ್ಲಿಕಟ್ಟುವಿನ ಅರ್ಥ. ಯಾರು ಹೋರಿಯ ಡುಬ್ಬ ಹಿಡಿದು ನಿಲ್ಲಿಸ್ತಾರೋ, ಅವ್ರು ಗೆದ್ದರು ಅಂತ ಅರ್ಥ. ಯಾರು ಕೊಂಬು ಹಿಡಿದು ತಡೆಯುತ್ತಾನೋ ಅವ್ನಿಗೆ ಪರಮವೀರ ಎನ್ನುವ ಬಿರುದು. ಸಾಮಾನ್ಯ ಕ್ರೀಡಾಪಟುಗಳನ್ನು ವೀರರು ಅಂತ ಕರೀತಾರೆ. ಜಲ್ಲಿಕಟ್ಟಿನಲ್ಲಿ ಗೆದ್ದವರಿಗೆ ಸಮಾಜದಲ್ಲಿ ದೊಡ್ಡ ಗೌರವವಿದೆ. ಮದುವೆ ಮಾರುಕಟ್ಟೆಯಲ್ಲಂತೂ ಇವರ ಬೇಡಿಕೆ ಇನ್ನಷ್ಟು ಹೆಚ್ಚುತ್ತದೆ.

ಈ ಕ್ರೀಡೆಯಲ್ಲಿ ಭಾಗವಹಿಸಿದವ್ರಿಗೆ ಬಹುಮಾನಗಳ ಸುರಿಮಳೆಗಳೇ ಕಾದಿರುತ್ತವೆ. ಕಿಟ್‍ಬ್ಯಾಗುಗಳು, ಪಾತ್ರೆಗಳು, ವಾಚ್, ಸೈಕಲ್, ಬೈಕ್, ಹಣ, ಚಿನ್ನದ ಪದಕಗಳನ್ನು ಅವರವರ ಸಾಧನೆಗೆ ತಕ್ಕಂತೆ ಸಿಗುತ್ತವೆ. ಈ ಹಬ್ಬದಲ್ಲಿ ಬಹುಮಾನಗಳನ್ನು ನೀಡಲು ಪ್ರಾಯೋಜಕರೂ ಕಾದು ಕುಳಿತಿರುತ್ತಾರೆ.

ತಮಿಳುನಾಡು ಕೃಷಿ ಚಟುವಟಿಕೆಯ ಸುತ್ತಾ ಜಲ್ಲಿಕಟ್ಟು ಸಂಸ್ಕೃತಿಯೇ ಬೆಳೆದು ನಿಂತಿದೆ. ಸಾವಿರಾರು ರೈತರು ಜಲ್ಲಿಕಟ್ಟಿನಲ್ಲಿ ಭಾಗವಹಿಸೋದಲ್ಲದೇ, ಈ ಜಲ್ಲಕಟ್ಟುವಿಗಾಗಿಯೇ ವಿಶೇಷ ತಳಿಯ ಹೋರಿಗಳನ್ನೂ ಸಾಕುತ್ತಾರೆ. ಮಕ್ಕಳ ಆರೈಕೆ ಮಾಡಿದಂತೆ ಈ ಹೋರಿಗಳನ್ನು ಬೆಳೆಸುತ್ತಾರೆ. ಸಾಮಾನ್ಯವಾಗಿ ಈ ಹೋರಿಗಳು ಲಕ್ಷ ಲಕ್ಷ ಬೆಲೆ ಬಾಳುತ್ತವೆ. ಕೆಲವರು ಪ್ರತಿಷ್ಠೆಯ ಕಾರಣಕ್ಕೆ ಮಾತ್ರ ಹೋರಿ ಸಾಕುತ್ತಾರೆ. ಯಾಕೆಂದರೆ ಗೆಲ್ಲುವ ಹೋರಿ ಸಾಕುವುದ ಇಲ್ಲಿ ಪ್ರತಿಷ್ಠೆಯ ವಿಚಾರ. ಇದರ ಸಾಕಣೆ ವೆಚ್ಚ ತಿಂಗಳಿಗೆ 10ರಿಂದ 15 ಸಾವಿರ ರೂಪಾಯಿ ದಾಟಿದರೂ ಮಾಲಿಕರು ಯಾವತ್ತೂ ಬೇಸರಿಸಿಕೊಳ್ಳುವುದೂ ಇಲ್ಲ. ಇವರ ಹೋರಿ ಪ್ರೀತಿ, ಪ್ರತಿಷ್ಠೆ ಎಲ್ಲಿವರೆಗೆ ಇರುತ್ತದೆ ಅಂದರೆ ಬೇಸಿಗೆಗೆ ಹೋರಿಗಳು ಬಸವಳಿಯಬಾರದು ಅನ್ನುವ ಕಾರಣಕ್ಕೆ ಹವಾನಿಯಂತ್ರಿತ ಗಾಡಿಗಳಲ್ಲಿಯೂ ಕರೆತರುವವರಿದ್ದಾರೆ.

ಐತಿಹಾಸಿಕ ಜಲ್ಲಿಕಟ್ಟು:

ಜಲ್ಲಿಕಟ್ಟಿ ಇವತ್ತು ನಿನ್ನೆ ಬಂದಿದ್ದಲ್ಲ. 500ಕ್ಕೂ ಅಧಿಕ ವರ್ಷಗಳ ಇತಿಹಾಸ ಇದಕ್ಕಿದೆ. ಇದನ್ನು ಸಾರುವ ವೀರಗಲ್ಲುಗಳು, ಪೇಟಿಂಗ್‍ಗಳು ತಮಿಳುನಾಡಿನ ತುಂಬೆಲ್ಲಾ ಹರಡಿಕೊಂಡಿವೆ. ತಮಿಳುನಾಡು ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಜಲ್ಲಿಕಟ್ಟು ರಾಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ದಂತಕಥೆಗಳ ಪ್ರಕಾರ ಅಂದಿನ ಸ್ತ್ರೀಯರು ತಮಗೆ ಬೇಕಾದ ಪರಾಕ್ರಮಿ ಪತಿಯರನ್ನು ಆರಿಸಲು ಈ ಆಟದ ಮೊರೆ ಹೋಗುತ್ತಿದ್ದರು.

ಪೊಂಗಲ್ ಅಥವಾ ನಮ್ಮ ಸಂಕ್ರಾಂತಿ ಹಬ್ಬದಂದು ಈ ಜಲ್ಲಿಕಟ್ಟನ್ನು ಆಚರಿಸಲಾಗುತ್ತದೆ. ಈ ರೋಮಾಂಚಕಾರಿ ಆಟವನ್ನು ಜನವರಿಯಿಂದ ಹಿಡಿದು ಜುಲೈ ತಿಂಗಳವರೆಗೆ ತಮಿಳುನಾಡಿನ ವಿವಿಧ ಹಳ್ಳಿಗಳಲ್ಲಿ ಆಚರಿಸಲಾಗುತ್ತದೆ. ಮೊದಲ ಜಲ್ಲಿಕಟ್ಟು ನಡೆಯುವುದು ಪಾಲಮಡುವಿನಲ್ಲಿ. ನಂತರ ಆಲಂಗೂರಿನಲ್ಲಿ ಮುಂದಿನ ಜಲ್ಲಿಕಟ್ಟು ನಡೆಯುತ್ತದೆ. ಇದು ಅತ್ಯಂತ ಪ್ರಸಿದ್ಧ ಜಲ್ಲಿಕಟ್ಟಾಗಿದ್ದು ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ದೇಶ ವಿದೇಶಗಳಿಂದ ಕ್ಯಾಮೆರಾ ಹಿಡಿದು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ತಿರುಚ್ಚಿ, ತಂಜಾವೂರು, ಸೇಲಂ, ಪುದುಚೆರಿಗಳಲ್ಲೂ ಪ್ರಮುಖ ಜಲ್ಲಿಕಟ್ಟು ಕ್ರೀಡೆಗಳು ನಡೆಯುತ್ತವೆ.

ಇತ್ತೀಚೆಗೆ ಇಲ್ಲಿನ ಜಲ್ಲಿಕಟ್ಟು ಕಾರ್ಯಕ್ರಮವನ್ನು ನಡೆಸವುದು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ. ಸ್ಥಳೀಯ ಎಲ್ಲಾ ಜನ ಪ್ರತಿನಿಧಿಗಲೂ ಈ ಸಮಿತಿಯಲ್ಲಿರುತ್ತಾರೆ. ಜನರಿಂದ ಲಕ್ಷಾಂತರ ಹಣ ಸಂಗ್ರಹಿ ಹಬ್ಬ ಮಾಡಲಾಗುತ್ತದೆ. ಜಲ್ಲಿಕಟ್ಟು ಉತ್ಸವದ ಸಂದರ್ಭ ಒಂದು ಸಾವಿರಕ್ಕಿಂತಲೂ ಹೆಚ್ಚು ಪೊಲೀಸರನ್ನು ರಕ್ಷಣೆಗಾಗಿ ನಿಯೋಜಿಸಿರುತ್ತಾರೆ. ಸುರಕ್ಷತೆಗಾಗಿ ಪಶುವೈದ್ಯರ ತಂಡ, ಅಂಬ್ಯೂಲೆನ್ಸ್‍ಗಳು ಸಿದ್ಧವಾಗಿರುತ್ತವೆ.

ಜಲ್ಲಿಕಟ್ಟಿನಲ್ಲಿ ಪ್ರಾಣಿ ಹಿಂಸೆ? ನಿಷೇಧ:

ಹಾಗೆ ನೋಡಿದರೆ ಜಲ್ಲಿಕಟ್ಟಿನಲ್ಲಿ ಪ್ರಾಣಿಗಳಿಗಿಂತ ಜಾಸ್ತಿ ಹಿಂಸೆ ಅನುಭವಿಸುವವರು ಮನುಷ್ಯರು. ವೀರರಿಗೆ ಏನೂ ಅಪಾಯಗಳಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಅದಕ್ಕೆಂದೇ ಮೈದಾನಕ್ಕೆ ತೆಂಗಿನ ನಾರುಗಳನ್ನು ಹರಡಲಾಗುತ್ತದೆ. ಹೋರಿ ದಾಳಿಯಿಂದ ರಕ್ಷಿಸಲು ನೂರಾರು ಸ್ವಯಂ ಸೇವಕರು ಸಿದ್ಧವಾಗಿರುತ್ತಾರೆ.Jalli Kattu 5

ಹೀಗಿದ್ದು ಜಲ್ಲಿಕಟ್ಟಿಗೆ ನಿಷೇಧ ಹೇರಿದ್ದೇ ಒಂದು ದೊಡ್ಡ ಕತೆ. ಹಲವು ವರ್ಷಗಳ ಹಿಂದೆಯೇ ಮನರಂಜನೆಗಾಗಿ ಪ್ರಾಣಿಗಳನ್ನು ಬಳಸುವುದಕ್ಕೆ ನಿಷೇಧ ಹೇರುವಂತೆ ಕೋರಿ ಪ್ರಾಣಿ ದಯಾ ಸಂಘಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಯುಪಿಎ ಸರಕಾರದ ಅವಧಿಯಲ್ಲಿ ಪ್ರದರ್ಶನ ಕಲೆಗಳಲ್ಲಿ ಪ್ರಾಣಿಗಳನ್ನು ಬಳಸಬಾರದು ಅಂತ ಅಧಿಸೂಚನೆ ಹೊರಡಿಸಲಾಯಿತು. ಇದರಲ್ಲಿ ಹೋರಿ ಹೆಸರೂ ಇತ್ತು. ಹೀಗಾಗಿ ಅನಿವಾರ್ಯವಾಗಿ ಕರ್ನಾಟಕದ ಕರಾವಳಿಯ ಕಂಬಳದ ಜತೆ ಜಲ್ಲಿಕಟ್ಟನ್ನೂ ನಿಲ್ಲಿಸಬೇಕಾಗಿ ಬಂತು.

ಈ ನಿಷೇಧ ಪ್ರಶ್ನಿಸಿ ಹಲವು ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವು. ಕೊನೆಗೆ ಕಳೆದ ವರ್ಷ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ, ಮೇಲ್ಮನವಿಯ ಹಿನ್ನಲೆಯಲ್ಲಿ ಷರತ್ತಿನ ಮೇಲೆ ಆಚರಣೆಗೆ ಅನುಮತಿ ನೀಡಲಾಯಿತು. ಆದರೆ ಈ ವರ್ಷ ಷರತ್ತಿನ ಮೇಲೆಯೂ ಆಚರಣೆಗೆ ಅನುಮತಿ ನೀಡಿಲ್ಲ.

ತಮಿಳುನಾಡಿನಲ್ಲಿ ಜಲ್ಲಿಕಟ್ಟಿನ ಹುಚ್ಚಿಗೆ ಬಿದ್ದ ಕೋಟ್ಯಾಂತರ ಜನರಿದ್ದಾರೆ. ಈ ಹೋರಿ-ಮನುಷ್ಯನ ಆಟ ನೋಡಲು ಸಾವಿರಾರು ಪ್ರವಾಸಿಗರು ದೇಶ ವಿದೇಶಗಳಿಂದ ತಮಿಳುನಾಡಿಗೆ ಪ್ರತಿ ವರ್ಷ ಬರುತ್ತಾರೆ. ಅವರೆಲ್ಲರ ಪಾಲಿಗೆ ಕೋರ್ಟ್ ಈಗ ವಿಲನ್ ರೀತಿಯಲ್ಲಿ ಕಾಣಿಸುತ್ತಿದೆ. ತಮಿಳುನಾಡಿನ ರಾಜಕೀಯಕ್ಕೆ ಬಲಿ ಬಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸುಗ್ರಿವಾಜ್ಞೆಯೇನಾದರೂ ಜಾರಿಗೆ ತರುತ್ತದೋ ಕಾದು ನೋಡಬೇಕು.

ಮೂರು ಪ್ರಕಾರದ ಜಲ್ಲಿಕಟ್ಟು

ಅವುಗವಡಿ ಮಂಜು ವೀರಟ್ಟು

ಇದು ಅತ್ಯಂತ ಅಪಾಯಕಾರಿ ಜಲ್ಲಿಕಟ್ಟು. ಇದರಲ್ಲಿ ಒಬ್ಬ ವ್ಯಕ್ತಿ ಮಾತ್ರ ಪುಟಿದೆದ್ದು ಬರುವ ಗೂಳಿಯ ಡುಬ್ಬದ ಮೇಲೆ ಹತ್ತಿ ಕುಳಿತುಕೊಳ್ಳಬೇಕು. ಆತ ಅದರ ಮೇಲೆ ಕುಳಿತು ಎಷ್ಟು ದೂರ ಹೋಗುತ್ತಾನೆ ಎನ್ನುವುದರ ಮೇಲೆ ಪ್ರಶಸ್ತಿ ನೀಡುತ್ತಾರೆ.

ವೇಲಿ ವಿರಟ್ಟು

ಇಲ್ಲಿ ಎತ್ತುಗಳನ್ನು ಒಂದು ಮೈದಾನದಲ್ಲಿ ಬಿಡುತ್ತಾರೆ. ಇದು ಅತ್ಯಂತ ಜನಪ್ರಿಯ ಜಲ್ಲಿಕಟ್ಟು ವಿಧಾನ. ಯಾವುದೇ ದಿಕ್ಕಿನಲ್ಲಿ, ಎತ್ತುಗಳು ಬೇಕಾಬಿಟ್ಟಿ ಓಡುತ್ತವೆ. ಇದನ್ನು ಹಿಡಿದು ನಿಲ್ಲಿಸಬೇಕು. ಇವುಗಳಲ್ಲಿ ಬಹಳಷ್ಟು ಎತ್ತುಗಳು ಮನುಷ್ಯರ ಬಳಿ ಸುಳಿಯದೇ ಇದ್ದರೂ ಕೆಲವು ದಾಳಿ ಮಾಡುತ್ತವೆ.

ವಡಿ ಮಂಜು ವೀರಟ್ಟು

ಇದು ಅತ್ಯಂತ ಸುರಕ್ಷಿತ ಜಲ್ಲಿಕಟ್ಟು. ಇದರಲ್ಲಿ ಎತ್ತನ್ನು 50 ಅಡಿ ಉದ್ದದ ಹಗ್ಗದಿಂದ ಕಟ್ಟಿರುತ್ತಾರೆ. ಈ ಎತ್ತನ್ನು ಏಳರಿಂದ 9 ಜನರಿರುವ ಗುಂಪು ಹಿಡಿದು ಮಣಿಸ್ಬೇಕು. ಇದು ಜಲ್ಲಿಕಟ್ಟಿನಲ್ಲೇ ಅತ್ಯಂತ ಸುರಕ್ಷಿತ ಕ್ರೀಡೆ.

Leave a comment

Top