An unconventional News Portal.

ಹರಿಯಾಣದ ಹಳ್ಳಿ ಹುಡುಗಿ ರಿಯೋ ಅಂಗಳದಲ್ಲಿ ‘ಸಾಧಕಿ’: ಅಜ್ಜನ ಹಾದಿಯಲ್ಲೇ ಸಾಗಿ ಬಂದಾಕೆ ಸಾಕ್ಷಿ!

ಹರಿಯಾಣದ ಹಳ್ಳಿ ಹುಡುಗಿ ರಿಯೋ ಅಂಗಳದಲ್ಲಿ ‘ಸಾಧಕಿ’: ಅಜ್ಜನ ಹಾದಿಯಲ್ಲೇ ಸಾಗಿ ಬಂದಾಕೆ ಸಾಕ್ಷಿ!

ರಿಯೋ ಒಲಂಪಿಕ್ಸಿನಲ್ಲಿ ಭಾರತದ ಹೋರಾಟ ಮುಗಿಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ತುಸು ನೆಮ್ಮದಿಯ ಸುದ್ದಿಯೊಂದು ಹೊರ ಬಿದ್ದಿದೆ. ಹರಿಯಾಣದ ಕುಸ್ತಿ ಪಟು ಸಾಕ್ಷಿ ಮಲಿಕ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಜಯಿಸುವುದರೊಂದಿಗೆ ದೇಶದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ.

ಭಾರತೀಯ ಕಾಲಮಾನ ಗುರುವಾರ ಮುಂಜಾನೆಯ ವೇಳೆ ಪೂರ್ಣಗೊಂಡ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಸಾಕ್ಷಿ ಮಲಿಕ್ 58 ಕೆಜಿ ಫ್ರೀಸ್ಟೈಲ್ ರೆಸ್ಲಿಂಗ್ ವಿಭಾಗದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡರು. ಈ ಮೂಲಕ ಕನಿಷ್ಟ ಮರ್ಯಾದೆಗಾಗಿ ಹಾತೊರೆಯುತ್ತಿದ್ದ 120 ಕೋಟಿ ಭಾರತೀಯರ ಪಾಲಿನ ‘ಹೀರೊ’ ಆಗಿ ಸಾಕ್ಷಿ ಮೂಡಿ ಬಂದಿದ್ದಾರೆ.

ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸೋಲು ಕಂಡಿದ್ದ ಸಾಕ್ಷಿ ಮುಂದಿನ ಎರಡು ಪಂದ್ಯಗಳಲ್ಲಿ ಮಂಗೋಲಿಯಾದ ಒರ್ಖೊನ್ ಪುರವ್ದಾರ್ಜ್ ಮತ್ತು ಕಜಕಿಸ್ಥಾನದ ಐಸುಲು ತೈನಿಬೆಕೋವಾ ವಿರುದ್ಧ ಜಯ ಸಾಧಿಸಿದರು.

ಕಜಕಿಸ್ಥಾನದ ಐಸುಲು ತೈನಿಬೆಕೋವಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಒಂದು ಹಂತದಲ್ಲಿ ಸೋಲಿನತ್ತ ಮುಖಮಾಡಿದ್ದ ಸಾಕ್ಷಿ ರೋಚಕವಾಗಿ 8-5ರಿಂದ ಜಯ ಸಾಧಿಸಿದರು. ಮೊದಲ ಸುತ್ತಿನಲ್ಲಿ ಐಸುಲು 5-0 ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಇದಾದ ನಂತರ ತಿರುಗಿ ಬಿದ್ದ ಸಾಕ್ಷಿ ಸತತ ಎರಡು ಬಾರಿ ಎರಡು ಪಾಯಿಂಟ್ ಗಳಿಸಿದರು.

ಆ 51 ಸೆಕೆಂಡುಗಳು:

ಪಂದ್ಯ ಮುಗಿಯಲು 51 ಸೆಕೆಂಡುಗಳಿದ್ದಾಗ ಇಬ್ಬರೂ ತಲಾ 5 ಪಾಯಿಂಟ್ಸ್‌ ಗಳಿಸಿ ಸಮಸ್ಥಿತಿಯಲ್ಲಿದ್ದರು. ಹಣಾಹಣಿ ಮುಗಿಯಲು ಇನ್ನೇನು 9 ಸೆಕೆಂಡ್‌ಗಳಷ್ಟೇ ಬಾಕಿ ಇತ್ತು.ಆ ಸಂದರ್ಭ ಮಿಂಚಿನ ಆಟವಾಡಿದ ಸಾಕ್ಷಿ ಮತ್ತೆ 2 ಪಾಯಿಂಟ್ಸ್‌ ಗಳಿಸಿದರು. ಇದನ್ನು ಎದುರಾಳಿ ಆಟಗಾರ್ತಿ ಐಸುಲು ಪ್ರಶ್ನಿಸಿದರು. ಆದರೆ ರಿವ್ಯೂ ಕಳೆದುಕೊಂಡಿದ್ದರಿಂದ ಇನ್ನೊಂದು ಅಂಕ ಖಾತೆಗೆ ಸೇರ್ಪಡೆಯಾಗಿ ಅಂತಿಮವಾಗಿ 8-5ರಿಂದ ಗೆಲುವಿನ ನಗೆ ಬೀರಿದರು.

ಇದಕ್ಕೂ ಮೊದಲು ಸೆಮಿಫೈನಲ್ ಹಣಾಹಣಿಯಲ್ಲಿ ಪದಕ ನಿರೀಕ್ಷೆ ಹೊತ್ತಿದ್ದ ವಿನೆಶ್ ಫೋಗಟ್ ಗಾಯಗೊಂಡು ಅರ್ಧದಿಂದ ನಿರ್ಗಮಿಸಿದ್ದು ಭಾರತೀಯರಿಗೆ ಭಾರೀ ನಿರಾಸೆ ಮಾಡಿಸಿತ್ತು. ಈ ಹಂತದಲ್ಲಿ ಸಾಕ್ಷಿ ಜಯ ಸಾಧಿಸುವುದರೊಂದಿಗೆ ಭಾರತೀಯರನ್ನು ಸಂಭ್ರಮದಲ್ಲಿ ತೇಲುವಂತೆ ಮಾಡಿದರು.

ಹಳ್ಳಿ ಹುಡುಗಿ ಸಾಕ್ಷಿ: 

1992 ಸೆಪ್ಟೆಂಬರ್ 3ರಂದು ಹರ್ಯಾಣದ ರೋಹ್ಟಕ್ ನಲ್ಲಿ ಸಾಕ್ಷಿ ಮಲಿಕ್ ಜನಿಸಿದರು. ಇಲ್ಲಿನ ಮೋಕ್ರಾ ಗ್ರಾಮಕ್ಕೆ ಸೇರಿದ ಸಾಕ್ಷಿ 1 ವರ್ಷದವರಿದ್ದಾಗಲೇ ಈಶ್ವರ್ ದಹಿಯಾ ಮಾರ್ಗದರ್ಶನದಲ್ಲಿ ಕುಸ್ತಿ ಅಖಾಡಕ್ಕಿಳಿದರು. ಅಖಾರಾದ ಚೋಟು ರಾಮ್ ಸ್ಟೇಡಿಯಂನಲ್ಲಿ ಚೋಟುದ್ದ ಇದ್ದ ಸಾಕ್ಷಿಯ ತರಬೇತಿ ನಡೆಯುತ್ತಿತ್ತು.

ಹರ್ಯಾಣ ವಿಪರೀತ ಲಿಂಗಾನುಪಾತ ಇರುವ ರಾಜ್ಯ. ದೇಶದಲ್ಲಿ 1000 ಪುರುಷರಿಗೆ 940 ಮಹಿಳೆಯರಿದ್ದರೆ, ಹರ್ಯಾಣದಲ್ಲಿ ಕೇವಲ 877 ಮಹಿಳೆಯರಷ್ಟೇ ಇದ್ದಾರೆ. ಎಲ್ಲಾ ಕಡೆ ನಡೆಯುವಂತೆ ಇಲ್ಲೂ ಹುಡುಗಿಯರನ್ನು ಕುಸ್ತಿ ಅಖಾಡಕ್ಕೆ ಕಳುಹಿಸುವ ಬಗ್ಗೆ ಕುಟುಂಬಸ್ಥರು ಮತ್ತು ಹುತೈಶಿಗಳಂದ ವಿರೋಧವಿತ್ತು. ವಿರೋಧ ಲೆಕ್ಕಿಸದೆ ಬೆಂಬವಾಗಿ ನಿಂತವರು ಪೋಷಕರಾದ ಸುದೇಶ್ ಮತ್ತು ಸುಖಬೀರ್. ತಂದೆ ಸುಖಬೀರ್ ಮಲಿಕ್ ದೆಹಲಿ ಸಾರಿಗೆ ಇಲಾಖೆಯಲ್ಲಿ ನೌಕರಿಯಲ್ಲಿದ್ದರು. ತಾಯಿ ಸುಖ್ವಿರ್ ಮಲಿಕ್ ಕೂಡಾ ಸರಕಾರಿ ನೌಕರರಾಗಿದ್ದರು.

ಸಾಕ್ಷಿ ಅಜ್ಜ ಕುಸ್ತಿ ಪಟುವಾಗಿದ್ದರು. ಅವರನ್ನೇ ತಮ್ಮ ಸ್ಪೂರ್ಥಿಯಾಗಿ ಸ್ವೀಕರಿಸಿ ಸಾಕ್ಷಿ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಳ್ಳತೊಡಗಿದಾಗ ವಿಚಿತ್ರವಾಗಿ ನೋಡಿದವರೇ ಜಾಸ್ತಿ. ಹರ್ಯಾಣದಲ್ಲಿ ಪುರುಷರ ಕುಸ್ತಿ ತುಂಬಾ ಜನಪ್ರಿಯವಾದರೂ ಮಹಿಳೆಯರಿಗೆ ಕ್ರೀಡೆಯಲ್ಲಿ ಆಲ್ಗೊಳ್ಳಲು ಅಘೋಷಿತ ನಿಷೇಧ ಜಾರಯಲ್ಲಿತ್ತು. ಕೋಚ್ ದಹಿಯಾ ಸಾಕ್ಷಿಯನ್ನು ತರಬೇತುಗೊಳಿಸಲು ಆಯ್ಕೆ ಮಾಡಿಕೊಂಡಾಗ ಸ್ಥಳೀಯರು ಪ್ರತಿಭನೆಯನ್ನೂ ಎದುರಿಸಬೇಕಾಯಿತು.

ಸದ್ಯ 2014ರಲ್ಲಿ ದಹಿಯಾ ಜಿಲ್ಲಾ ಕ್ರೀಡಾ ತರಬೇತುರರಾಗಿ ನಿವೃತ್ತರಾಗಿದ್ದಾರೆ.

ಆದರೆ ಸಂಕಷ್ಟಗಳನ್ನೆಲ್ಲಾ ಮೆಟ್ಟಿ ನಿಂತು ಮುಂದೆ ಬಂದ ಸಾಕ್ಷಿ ಇವತ್ತು ಒಲಂಪಿಕ್ಸ್ ಕಂಚಿನ ಪದಕ ಗೆದ್ದು ರಾಷ್ಟ್ರೀಯ ಹೀರೋ ಪಟ್ಟ ಅಲಂಕರಿಸಿದ್ದಾರೆ. ಒಲಂಪಿಕ್ಸಿನಲ್ಲಿ ಪದಕ ಗೆದ್ದ ದೇಶದ ಕೇವಲ ನಾಲ್ಕನೇ ಮಹಿಳೆ ಮತ್ತು ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಹಿರಿಮೆ ಸಾಕ್ಷಿ ಮಲಿಕ್ರದ್ದಾಗಿದೆ.

ಕೋಚ್ ಜೊತೆ ಕಂಚಿನ ಪದಕದೊಂದಿಗೆ ಸಂಭ್ರಮಿಸುತ್ತಿರುವ ಸಾಕ್ಷಿ

ಕೋಚ್ ಜೊತೆ ಕಂಚಿನ ಪದಕದೊಂದಿಗೆ ಸಂಭ್ರಮಿಸುತ್ತಿರುವ ಸಾಕ್ಷಿ

ರಿಯೋ ಮೆಟ್ಟಿಲು:

ರಿಯೋ ಒಲಂಪಿಕ್ಸ್ ಕಂಚಿನ ಪದಕ ಗೆದ್ದಿದ್ದಷ್ಟೇ ಸಾಕ್ಷಿ ಸಾಧನೆಯಲ್ಲ. ಈ ಮೊದಲೂ ಈಕೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

2010: 18 ವರ್ಷದವರಾಗಿದ್ದ ಸಾಕ್ಷಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಪದಕ ಗೆದ್ದುಕೊಂಡರು. ಜೂನಿಯರ್ ವಿಭಾಗದಲ್ಲಿ ವರ್ಲ್ಡ್ ಚಾಂಪಿಯನ್ ಶಿಪ್-2010ರಲ್ಲಿ 59 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಸಾಕ್ಷಿ ಕಂಚಿನ ಪದಕ ಗೆದ್ದುಕೊಂಡಿದ್ದರು.

2014: ದಾವೆ ಸ್ಕಲ್ಟ್ಜ್ ಇಂಟರ್ನ್ಯಾಷನಲ್ ರೆಸ್ಲಿಂಗ್ ಟೂರ್ನಮೆಂಟಿನಲ್ಲಿ 60 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಜನರಿಗೆ ಚಿರಪರಿಚಿತರಾಗಿದ್ದರು.

2014 ಆಗಸ್ಟ್: ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2014ರಲ್ಲಿ ಬೆಳ್ಳಿ ಪದಕ ಸಾಕ್ಷಿ ಪಾಲಾಗಿತ್ತು.

2014 ಸೆಪ್ಟೆಂಬರ್: ವರ್ಲ್ಡ್ ರೆಸ್ಲಿಂಗ್ ಚಾಂಪಿಯನ್ ಶಿಪ್ ಕ್ವಾರ್ಟರ್ ಪೈನಲಿಗೆ ಏರಿದರು. ಆದರೆ ವಿರೋಚಿತ ಸೋಲನುಭವಿಸಿದ್ದರು.

2015 ಮೇ: ದೋಹಾದಲ್ಲಿ ನಡೆದ ಏಷ್ಯನ್ ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಸಾಕ್ಷಿ ಕಂಚಿನ ಪದಕ ಗೆದ್ದುಕೊಂಡಿದ್ದರು.

2016 ಜುಲೈ: ಸ್ಪಾನಿಷ್ ಗ್ರಾಂಡ್ ಪ್ರಿಕ್ಸಿನ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು..

ಗುರುವಾರದ ಗೆಲುವಿನ ನಂತರ ಮಾತನಾಡಿದ ಸಾಕ್ಷಿ ಮಲಿಕ್, “ಫಲಿತಾಂಶ 12 ವರ್ಷಗಳ ಪರಿಶ್ರಮದ ಫಲ,” ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಂದೆ ಸುಖ್ವೀರ್ ಮಲಿಕ್, “ಸಾಕ್ಷಿ ಈಗ ದೇಶದಾದ್ಯಂತ ಚಿರಪರಿಚಿತಳಾಗಿದ್ದಾಳೆ. ಕಳೆದ ರಾತ್ರಿಯಿಂದ ಮನೆ ಹೊರಗೆ ಜನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ,” ಎಂದು ಪ್ರತಿಕ್ರಿಯಿಸಿದ್ದಾರೆ.

Modi sakshi malik

ಸಾಕ್ಷಿ ಮಲಿಕ್ ಪದಕ ಗೆಲ್ಲುತ್ತಿದ್ದಂತೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆ ಸಂದೇಶಗಳು ಹರಿದಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಟ್ವೀಟಿನಲ್ಲಿ ಅವರು ಸಾಕ್ಷಿಯನ್ನು “ದೇಶದ ಮಗಳು” ಎಂದು ಸಂಭೋದಿಸಿದ್ದಾರೆ.

ಕಂಚಿನ ಪದಕ ಗೆದ್ದ ಸಾಕ್ಷಿಗೆ ಹರಿಯಾಣ ರಾಜ್ಯ ಸರಕಾರ 2.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಇದಲ್ಲದೇ ರೈಲ್ವೆ ಇಲಾಖೆಯಿಂದ 50 ಲಕ್ಷ, ಭಾರತೀಯ ಒಲಿಂಪಿಕ್ ಸಂಸ್ಥೆಯಿಂದ 20 ಲಕ್ಷ, ಜೆಎಸ್’ಡಬ್ಲ್ಯೂ ಸಂಸ್ಥೆಯಿಂದ 15 ಲಕ್ಷ ರೂ. ಸೇರಿದಂತೆ ಹಲವರು ಬಹುಮಾನ ಘೋಷಿಸಿದ್ದಾರೆ.

ಚಿತ್ರ ಕೃಪೆ: ಸ್ಕ್ರಾಲ್, ಎಎಫ್ಪಿ

Leave a comment

Top