An unconventional News Portal.

‘ದಿ ಸ್ಟೋರಿ ಆಫ್ ರಾಣಾ ಜಾರ್ಜ್’: ಸಚಿವ ಕೆ. ಜೆ. ಜಾರ್ಜ್ ಸಾಮ್ರಾಜ್ಯದ ಉತ್ತರಾಧಿಕಾರಿ ಬಗ್ಗೆ ನಿಮಗೆಷ್ಟು ಗೊತ್ತು?

‘ದಿ ಸ್ಟೋರಿ ಆಫ್ ರಾಣಾ ಜಾರ್ಜ್’: ಸಚಿವ ಕೆ. ಜೆ. ಜಾರ್ಜ್ ಸಾಮ್ರಾಜ್ಯದ ಉತ್ತರಾಧಿಕಾರಿ ಬಗ್ಗೆ ನಿಮಗೆಷ್ಟು ಗೊತ್ತು?

ಬಜೆಟ್ ಮುಂದುವರಿದ ಅಧಿವೇಶನ ಶುರುವಾದಷ್ಟೆ ತಣ್ಣಗೆ ಮುಗಿದು ಹೋಗುವ ಸಾಧ್ಯತೆಗಳು ಕಾಣಿಸುತ್ತಿದೆ. ಶನಿವಾರ ಮುಂದೂಡಿರುವ ಅಧಿವೇಶನ ಸೋಮವಾರ ಮತ್ತೆ ಶುರುವಾಗಲಿದೆ. ಬೆಂಗಳೂರಿನ ಶಕ್ತಿಸೌಧ ಎನ್ನಿಸಿಕೊಂಡಿರುವ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭಾ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಾವು ಆಯ್ಕೆ ಮಾಡಿ ಕಳುಹಿಸಿರುವ ಜನಪ್ರತಿನಿಧಿಗಳು ಪರ ಮತ್ತು ವಿರೋಧ ಪಕ್ಷಗಳ ಪಾತ್ರವನ್ನು ನಿರ್ವಹಿಸಲಿವೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳನ್ನು ನಡೆಸಲು ಒಂದು ದಿನಕ್ಕೆ ಒಂದು ಕೋಟಿಗೂ ಹೆಚ್ಚು ಖರ್ಚಾಗುತ್ತದೆ ಎಂಬುದು ಮಾಹಿತಿ.

ಈ ಬಾರಿ ‘ಬೇಡಿಕೆಗಳ ಮೇಲಿನ ಚರ್ಚೆಗಾಗಿ’ ಉಭಯ ಸದನಗಳು ಕಲಾಪವನ್ನು ಆರಂಭಿಸಿದ್ದು ಜೂ. 4ರಂದು. ಅದಾದ ಮೂರು ದಿನಗಳ ಕಾಲ ಕಲಾಪ ನಡೆಯಿತು. ರಂಜಾನ್ ರಜೆ ಸಮಯದಲ್ಲಿ, ಜೂ. 7ರ ಸಂಜೆ ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಇಬ್ಬರು ಐಪಿಎಸ್ ಅಧಿಕಾರಿಗಳು ಹಾಗೂ ಓರ್ವ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದರು. ಅಲ್ಲಿಂದ ನಂತರ ರಜೆ ಕಳೆದ ನಂತರ ಕಲಾಪ ಆರಂಭವಾಯಿತಾದರೂ, ಬೆಂಗಳೂರು ಅಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಅವರ ರಾಜೀನಾಮೆಗೆ ಪಟ್ಟು ಹಿಡಿದು ಕುಳಿತಿರುವ ವಿರೋಧ ಪಕ್ಷ, ಅಷ್ಟೆ ಗಟ್ಟಿಯಾಗಿ ತಮ್ಮ ಒಬ್ಬರು ಸಹೋದ್ಯೋಗಿಯನ್ನು ಕಳೆದುಕೊಳ್ಳಲು ಇಷ್ಟಪಡದ ಸಂಪುಟ, ಮುಖ್ಯಮಂತ್ರಿಗಳ ದೆಸೆಯಿಂದಾಗಿ ಕಲಾಪದ ಉದ್ದೇಶವೇ ದಿಕ್ಕು ತಪ್ಪಿದೆ. ದಿನಕ್ಕೆ ಆಗುತ್ತಿರುವ ಖರ್ಚುವೆಚ್ಚಗಳು ಜಾರಿಯಲ್ಲಿ ಇವೆಯಾದರೂ, ಜನರ ಹಣದ ವಿನಿಯೋಗದ ಹಿಂದೆ ಸದಾಶಯ ಕೆಲಸ ಮಾಡುವ ಲಕ್ಷಣಗಳು ಕಾಣಿಸುತ್ತಿಲ್ಲ.

ಈ ಸಮಯದಲ್ಲಿಯೇ, ನಿಮ್ಮ ‘ಸಮಾಚಾರ’ ಮಡಿಕೇರಿಯ ಮಡಿಲಿನಿಂದ ಸಚಿವ ಕೆ. ಜೆ. ಜಾರ್ಜ್ ಅವರ ಶೈಕ್ಷಣಿಕ ದಿನಗಳ ಆರಂಭದಿಂದ ಶುರುವಾಗಿ ಅವರ ಯವ್ವನದ ಕಾಲದಲ್ಲಿ ರಾಜಕೀಯಕ್ಕೆ ಕಾಲಿಟ್ಟ ನಡೆಗಳನ್ನು ನಿಮ್ಮೆದುರಿಗೆ ಇಟ್ಟಿತ್ತು. ಇದೀಗ ಅದೇ ಕುಟುಂಬದ ಮತ್ತೊಂದು ತಲೆಮಾರಿನ ಕತೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇದು ಸಾರ್ವಜನಿಕ ಜೀವನಲ್ಲಿರುವ ಸಚಿವ ಕೆ. ಜೆ. ಜಾರ್ಜ್ ಪುತ್ರ, ರಾಜ್ಯ ವನ್ಯ ಜೀವಿ ಮಂಡಳಿಯ ಸದಸ್ಯ ಜೆ. ರಾಣಾ ಜಾರ್ಜ್ ಅವರ ಕತೆ. ಕೇರಳದಿಂದ ವಲಸೆ ಬಂದು ಕೊಡಗಿನಲ್ಲಿ ಮರದ ಉದ್ಯಮ ನಡೆಸುತ್ತಿದ್ದ ಕುಟುಂಬವೊಂದರ ಮೂರನೇ ತಲೆಮಾರಿನ ಸ್ಟೋರಿ. ಶ್ರೀಮಂತ ಹಿನ್ನೆಲೆ, ರಾಜಕೀಯ ಶಕ್ತಿಕೇಂದ್ರದ ಒಳಗೇ ಬೆಳೆದುಬಂದ ಯುವಕನೊಬ್ಬ ಚಿಕ್ಕ ವಯಸ್ಸಿಗೆ ದೊಡ್ಡ ಉದ್ಯಮಿಯಾದ ಬಗೆಗಿನ ಮಾಹಿತಿ.

ಸ್ಫುರದ್ರೂಪಿ ತರುಣ:

rana-george-image-search-1Land

ಗೂಗಲ್ ಸ್ಕ್ರೀನ್ ಗ್ರಾಬ್.

ನೀವು ಗೂಗಲ್ ಸರ್ಚ್ ಎಂಜಿನ್ನಲ್ಲಿ ‘ರಾಣಾ ಜಾರ್ಜ್’ ಎಂದು ಇಂಗ್ಲಿಷ್ನಲ್ಲಿ ನೀಡಿದರೆ, ಒಂದಷ್ಟು ಫೊಟೋಗಳು ಕಂಪ್ಯೂಟರ್ ಪರದೆಯನ್ನು ಅಲಂಕರಿಸುತ್ತವೆ. ಅವುಗಳಲ್ಲಿ ಪುಟ್ಟದೊಂದು ನಾಯಿ ಮರಿ ಹಿಡಿದುಕೊಂಡು ಮಗ್ಧತೆಯನ್ನು ಮುಖದ ಮೇಲೆ ಹೊದ್ದುಕೊಂಡ ಯವಕನೊಬ್ಬನ ಚಿತ್ರ ಕಾಣಿಸುತ್ತದೆ. ಅವರೇ ರಾಣಾ ಜಾರ್ಜ್; ಸನ್ ಆಫ್ ಕೆ. ಜೆ. ಜಾರ್ಜ್.

ಐದು ಬಾರಿ ಕ್ಷೇತ್ರವೊಂದನ್ನು ಶಾಸಕರಾಗಿ ಪ್ರತಿನಿಧಿಸಿಕೊಂಡು ಬಂದಿರುವ, ಸದ್ಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಜತೆಗೆ ಹೆಚ್ಚಿನ ಆಪ್ತತೆ ಹೊಂದಿರುವ, ಸಿಎಂ ಸಿದ್ದರಾಮಯ್ಯ ಅವರಿಂದ ಕಲಾಪದ ಒಳಗೆ, ಹೊರಗೆ ಬೆಂಬಲ ಪಡೆದುಕೊಳ್ಳುತ್ತಿರುವ ಸಚಿವ ಕೆ. ಜೆ. ಜಾರ್ಜ್. ಅವರಿಗೊಬ್ಬ ಮಗ ಇದ್ದಾನೆ ಎಂಬುದು ರಾಜ್ಯಮಟ್ಟದಲ್ಲಿ ಸಾರ್ವಜನಿಕ ಆಡಳಿತದ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದು ವನ್ಯಜೀವಿ ಮಂಡಳಿಗೆ ಸದಸ್ಯರ ನೇಮಕಾತಿ ಸಮಯದಲ್ಲಿ. ನಿಗಮ ಮಂಡಳಿಗಳಿಗೆ ನೇಮಕಾತಿ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ರನ್ನು ವನ್ಯ ಜೀವಿ ಮಂಡಳಿಗೆ ಸದಸ್ಯರಾಗಿ ನೇಮಕಾತಿ ಮಾಡಿ 2014ರ ಆಗಸ್ಟ್ ತಿಂಗಳಿನಲ್ಲಿ ಆದೇಶ ಹೊರಡಿಸಿದರು. ಈ ಕುರಿತು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, “ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನಿಜ ಹೇಳಬೇಕು ಎಂದರೆ, ರಾಣಾ ಜಾರ್ಜ್ ಪರಿಸರ ಸ್ನೇಹಿ. ಕಳೆದ ಮೂರು ವರ್ಷಗಳಿಂದ ಅವರು ಈ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ,” ಎಂದು ಸಮರ್ಥಿಸಿಕೊಂಡಿದ್ದರು.

ಮರದ ಉದ್ಯಮ ನಡೆಸುತ್ತಿದ್ದ ಕುಟುಂಬದಿಂದ ಬಂದ ರಾಣಾ ಜಾರ್ಜ್ ಸಹಜವಾಗಿಯೇ ಪರಿಸರ ಜತೆಯಲ್ಲಿಯೇ ಬೆಳೆದವರು. ಅವರು ವಯಸ್ಸಿಗೆ ಬರುವ ಹೊತ್ತಿಗೆ ಕುಟುಂಬ ಕೊಡಗು ಜಿಲ್ಲೆಯಿಂದ ಬೆಂಗಳೂರಿನ ಸರ್ವಜ್ಞ ನಗರದಲ್ಲಿ ಸ್ಥಳಾಂತರಗೊಂಡಿತ್ತಾದರೂ, ಹಿರಿಯರ ಅನುಭವಗಳನ್ನು ಕೇಳಿಯೇ ಅವರು ಬೆಳೆದು ಬಂದವರು.

ಆದರೆ, ರಾಣಾ ಕತೆ ಇಷ್ಟಕ್ಕೆ ಮುಗಿಯುವುದಿಲ್ಲ. ಅವರು ವನ್ಯ ಜೀವಿ ಮಂಡಳಿ ಸದಸ್ಯರಾಗಿ ನೇಮಕಗೊಳ್ಳುವ ಮುನ್ನವೇ ಹಲವು ಆರೋಪಗಳಿಗೆ ತುತ್ತಾದವರು. ವನ್ಯ ಜೀವಿ ಮಂಡಳಿಗೆ ಕಾಲಿಡುವ ಮುನ್ನವೇ ಅವರು ಚಾಮರಾಜನಗರ ಅರಣ್ಯ ಇಲಾಖೆಯ ‘ವಾರ್ಡನ್’ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ಸಾರ್ವಜನಿಕರು ಮತ್ತು ಅರಣ್ಯ ಇಲಾಖೆಯ ನಡುವೆ ಸಮನ್ವಯ ಸಾಧಿಸುವ ಮಹತ್ವದ ಹುದ್ದೆಯದು. ಈ ನೇಮಕಾತಿ ನಡೆದಾಗ, ‘ರಾಣಾ ಕಾವೇರಿ ನದಿ ತೀರದ ಕಬಿನಿ ಪ್ರದೇಶದಲ್ಲಿ ರೆಸಾರ್ಟ್ ಮಾಡಲು ಹೊರಟಿದ್ದಾರೆ. ಇದಕ್ಕೆ ಪೂರಕವಾಗಿ ಅನುಮತಿಗಳನ್ನು ಪಡೆದುಕೊಳ್ಳಲು ಅವರನ್ನು ನೇಮಕ ಮಾಡಲಾಗಿರುವ ಸಾಧ್ಯತೆಗಳಿವೆ,’ ಎಂದು ಟಿವಿ9 ವರದಿ ಮಾಡಿತ್ತು. ಇದು ಸಂಪೂರ್ಣ ಸುಳ್ಳು ಎಂದು ರಾಣಾ ಜಾರ್ಜ್ ಮತ್ತು ಕೆ. ಜೆ. ಜಾರ್ಜ್ ಅವರ ಪೇಸ್ಬುಕ್ ಖಾತೆಗಳಿಂದ ದಾಖಲೆಗಳನ್ನು ಬಿಡುಗಡೆ ಮಾಡಲಾಗಿತ್ತು. ವಿಶೇಷ ಏನೆಂದರೆ, ಹಿಂದಿನ ಬಿಜೆಪಿ ಸರಕಾರ ಇದ್ದ ಕಾಲದಲ್ಲಿಯೇ ರಾಣಾ ಜಾರ್ಜ್, ಚಿಕ್ಕಮಗಳೂರಿನಲ್ಲಿ ವೈಲ್ಡ್‌ಲೈಫ್ ವಾರ್ಡನ್ ಆಗಿ ನೇಮಕಗೊಂಡು, ಒಂದಿಷ್ಟು ಕಾಡು ಸುತ್ತಿದ್ದರು.

Rana-George1

ಆನೆ ಸವಾರಿ.

ಹಾಗೆ ಒಂದಷ್ಟು ಅನುಭವಗಳನ್ನು ಬೆನ್ನಿಗಿಟ್ಟುಕೊಂಡು ವನ್ಯಜೀವಿ ಮಂಡಳಿಗೆ ಸದಸ್ಯರಾದ ಬಳಿಕ, ರಾಣಾ ಕೋರ್ ಕಮಿಟಿಗೆ ನೇಮಕಗೊಂಡರು. ವನ್ಯಜೀವಿ ಮಂಡಳಿಯ ಹೃದಯವೆನಿಸಿದ, ಇಬ್ಬರು ಉನ್ನತ ಅಧಿಕಾರಿಗಳು ಮತ್ತು ಮೂವರು ಪರಿಸರ, ವನ್ಯಜೀವಿ ಸಂಶೋಧಕರನ್ನು ಮಾತ್ರ ನೇಮಕ ಮಾಡಲು ಅವಕಾಶವಿರುವ ಮಹತ್ವದ ಕೋರ್ ಕಮಿಟಿ (ಉಪ ಸಮಿತಿ) ಅದು.

ರಾಜ್ಯದ ಎಲ್ಲಾ ವನ್ಯಜೀವಿ ಧಾಮ, ಅರಣ್ಯಗಳ ಸಂರಕ್ಷಣೆ, ಅರಣ್ಯಗಳು ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕೈಗಾರಿಕೆಗಳು, ವಿದ್ಯುತ್, ರಸ್ತೆ ಕಾಮಗಾರಿ ಸೇರಿದಂತೆ ಎಲ್ಲಾ ರೀತಿಯ ಯೋಜನೆಗಳನ್ನು ಆರಂಭಿಸಲು ಅವಕಾಶ ನೀಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಅಧಿಕಾರಗಳನ್ನು ಹೊಂದಿರುವ ಸಮಿತಿ ಅದು. ಯೋಜನೆಗಳಿಂದ ‘ಪರಿಸರದ ಮೇಲಾಗುವ ಪರಿಣಾಮಗಳ ವರದಿ’ ನೀಡುವ ಕೆಲಸವನ್ನು ಇದು ಮಾಡುತ್ತದೆ. ಅರಣ್ಯ ಇಲಾಖೆಯ ಮಟ್ಟಿಗೆ ಇದು ಕೂಡ ಒಂದು ಆಯಕಟ್ಟಿನ ಹುದ್ದೆ ಎಂದೇ ಪರಿಗಣಿಸಲ್ಪಡುತ್ತದೆ. 

ಈ ಕಮಿಟಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ, ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಅಧಿಕಾರಿ ಸದಸ್ಯರಾಗಿದ್ದರೆ, ಪರಿಸರ ಹಾಗೂ ವನ್ಯಜೀವಿ ಕುರಿತು ದಶಕಗಳ ಅನುಭವ- ಅಪಾರ ಜ್ಞಾನ ಹೊಂದಿರುವ ಮೂವರು ಹಿರಿಯ ವನ್ಯಜೀವಿ ತಜ್ಞರು ಅಥವಾ ಸಂಶೋಧಕರು ಸದಸ್ಯರಾಗುತ್ತಾರೆ. ಇಂತಹ ಮಹತ್ವದ ಸಮಿತಿಗೆ ವಿಷಯ ತಜ್ಞರಾಗಿಲ್ಲದ ರಾಣಾ ಜಾರ್ಜ್‌ನನ್ನು ನೇಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಇದಾದ ಬಳಿಕ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ರಾಣಾ ಜಾರ್ಜ್ ಹೆಸರು ಕೇಳಿ ಬಂದಿದ್ದು 2015ರ ಫೆಬ್ರವರಿಯಲ್ಲಿ. ಬೆಳಗಾವಿಯ ಭೀಮಘಢ ಅಭಯಾರಣ್ಯದಲ್ಲಿ ನಾಗರಿಕರ ಮೇಲೆ ದಾಳಿ ಮಾಡಿದ ಹುಲಿಯನ್ನು ಕೊಂದು ಹಾಕಿದಾಗ. ಹೀಗೊಂದು ನಿರ್ಧಾರದ ಹಿಂದೆ ಇದೇ ರಾಣಾ ಜಾರ್ಜ್ ಮತ್ತು ಸಂಜಯ್ ಗುಬ್ಬಿ ಇದ್ದಾರೆ ಎಂದು ಇಬ್ಬರ ಮೇಲೂ ಆಪಾದನೆಯೂ ಕೇಳಿ ಬಂದಿದ್ದವು. ‘ಇವರಿಬ್ಬರು ಹುಲಿಯ ಮೇಲೆ ಅನುಪಯುಕ್ತ ಪ್ರಯೋಗಗಳನ್ನು ಮಾಡಿದ್ದರು’ ಎಂದು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯದರ್ಶಿ ದಶರಥ ಬಾನೋಶಿ ಎನ್ನುವವರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜೊತೆಗೆ ರಾಣಾ ಜಾರ್ಜ್ ವಿರುದ್ಧ ಖಾನಾಪುರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ದೂರು ಸ್ವೀಕರಿಸಿದ್ದ ಜೆಎಂಎಫ್‌ಸಿ ನ್ಯಾಯಾಧೀಶರು ಪ್ರಕರಣದ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ರಾಣಾ ಜಾರ್ಜ್‌ ಹೈಕೋರ್ಟ್‌ನಲ್ಲಿ ಕ್ರಿಮಿನಲ್‌ ಅರ್ಜಿ ದಾಖಲಿಸಿ ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ಅನೂರ್ಜಿತಗೊಳಿಸುವಂತೆ ಕೋರಿದ್ದರು. ಕೊನೆಗೆ ಹೈಕೋರ್ಟ್ ದೂರನ್ನು ಅನೂರ್ಜಿತಗೊಳಿಸಿ ಆದೇಶಿಸಿತ್ತು.

ಕಂಪನಿ ಮೇಲೂ ಆರೋಪ:

“ಈತ ಡೀಸೆಂಟ್ ಆಗಿರುವ ಹುಡುಗ. ಚಿಕ್ಕ ವಯಸ್ಸಿಗೆ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿರುವ ಉದ್ಯಮಿ. ಆತನ ಮೇಲೆ ಆರೋಪಗಳು ಬರುವುದು ಸಹಜ,” ಎನ್ನುತ್ತಾರೆ ರಾಣಾ ಜಾರ್ಜ್ರನ್ನು ಹತ್ತಿರದಿಂದ ಬಲ್ಲ ಹಿರಿಯ ಪತ್ರಕರ್ತರೊಬ್ಬರು.

ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮಿಯಾದ ರಾಣಾ ಜಾರ್ಜ್ ವಿರುದ್ಧ ಬಂದ ಆರೋಪಗಳಲ್ಲಿನ ವೈವಿದ್ಯತೆಯನ್ನು ಗಮನಿಸಬೇಕಿದೆ. ತಂದೆ ಗೃಹ ಸಚಿವರಾಗಿದ್ದಾಗ ರಾಣಾ ತಮ್ಮ ಪ್ರಭಾವ ಬಳಸಿ ಆರೋಪಿಗಳನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಹೋದ ಆರೋಪ ಕೇಳಿ ಬಂದಿತ್ತು. ಅರಮನೆ ಮೈದಾನದಲ್ಲಿರುವ ‘ಪೆಬೆಲ್ ಕ್ಲಬ್`ನಲ್ಲಿ ಎಂಬಸಿ ಸ್ಕ್ವೇರ್ ಸಂಸ್ಥೆಉ ಉದ್ಯಮಿ ಜೀತೂ ವೀರ್ವಾನಿ ಪುತ್ರ ಮತ್ತು ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಸ್ಥಳೀಯರ ಬೆಂಬಲದೊಂದಿಗೆ ಯುವಕರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಠಾಣೆಗೆ ಕರೆ ತಂದಿದ್ದರು. ಬಳಿಕ, ಠಾಣೆಗೆ ಬಂದ ಗೃಹ ಸಚಿವರ ಪುತ್ರ ಯುವಕರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ, ಎಂದು ಸುವರ್ಣನ್ಯೂಸ್ ವೆಬ್ ಸೈಟ್ ಪ್ರಕಟಿಸಿತ್ತು.

2013, ಜುಲೈನಲ್ಲಿ ‘ಅರಣ್ಯ ಕಾನೂನುಗಳನ್ನೆಲ್ಲಾ ಉಲ್ಲಂಘಿಸಿ, ರಾಣಾ ಮೋಜು ಮಾಡಲು ಹೊರಟ ಆರೋಪಕ್ಕೆ ಗುರಿಯಾಗಿದ್ದರು. ಇದಕ್ಕಾಗಿ ಅರಣ್ಯಾಧಿಕಾರಿಗಳೊಂದಿಗೆ ಜಗಳಕ್ಕಿಳಿದಿದ್ದು ದೊಡ್ಡ ಸುದ್ದಿಯಾಗಿತ್ತು. ರಾಣಾ ಜಾರ್ಜ್ ಮತ್ತು ತಂಡ ಬಂಡೀಪುರದ ಎನ್. ಬೇಗೂರು ಅರಣ್ಯ ವಲಯಕ್ಕೆ ಹೊಂದಿಕೊಂಡಂತಿರುವ ಆರೆಂಜ್ ಕೌಂಟಿ ರೆಸಾರ್ಟಿಗೆ ವಿಶ್ರಾಂತಿಗೆಂದು ಹೋಗಿದ್ದರು. ಬಂಡೀಪುರ ಅಭಯಾರಣ್ಯದೊಳಗಿನ ಕಲ್ಕೆರೆ ಫಾರೆಸ್ಟ್ ಗೆಸ್ಟ್‌ಹೌಸ್‌ನಲ್ಲಿ ರಾತ್ರಿ ಕಳೆಯುವ ತೀರ್ಮಾನವನ್ನೂ ಕೈಗೊಂಡಿದ್ದರು. ಈ ಸಂಬಂಧ ಸ್ಥಳೀಯ ಅರಣ್ಯಾಧಿಕಾರಿಗಳನ್ನೂ ಸಂಪರ್ಕಿಸಿ, ’ಕಲ್ಕೆರೆ ಗೆಸ್ಟ್‌ಹೌಸ್‌’ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ’ ಎಂದೂ ಸೂಚಿಸಿದ್ದರು. ಆದರೆ ಕಾಡಿನ ಒಳಗೆ ಹೋಗಲು ಅವಕಾಶ ಇರುವುದಿಲ್ಲ ಎಂದು ಅರಣ್ಯಾಧಿಕಾರಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಗಲಾಟೆ ಮಾಡಿದ್ದ ರಾಣಾ ಜಾರ್ಜ್ ಮೇಲಾಧಿಕಾರಿಗಳಿಂದ ಒತ್ತಡ ತಂದು, ರಂಪ ರಾಮಾಯಣ ಮಾಡಿದ್ದರು. ಕೊನೆಗೆ ಅಧಿಕಾರಿಗಳು ಪಟ್ಟು ಸಡಿಲಿಸದೇ ಇದ್ದುದ್ದರಿಂದ ರಾಣಾ ಮತ್ತು ಅವರ ತಂಡ ಹಿಂದಿರುಗಿತ್ತು,’ ಎಂದು ವರದಿಯಾಗಿತ್ತು.

ಮದುವೆ ಸಮಾರಂಭದಲ್ಲಿ ಜಾರ್ಜ್ ಕುಟುಂಬಸ್ಥರು

ಮದುವೆ ಸಮಾರಂಭದಲ್ಲಿ ಜಾರ್ಜ್ ಕುಟುಂಬಸ್ಥರು

ರಾಣಾ ಜಾರ್ಜ್ ಇವತ್ತಿಗೆ ಕೋಟ್ಯಾಧಿತಿ. 2013ರಲ್ಲಿ ಸರ್ವಜ್ಞನಗರದಿಂದ ವಿಧಾನಸಭಾ ಚುನಾವಣೆಗೆ ನಿಂತ ಸಂದರ್ಭ ಸ್ವತಃ ಕೆ.ಜೆ ಜಾರ್ಜ್ 31 ಕೋಟಿ ರೂಪಾಯಿಗಳ ಆಸ್ತಿ ಘೋಷಿಸಿಕೊಂಡಿದ್ದರು. ಇದರಲ್ಲಿ ತಮ್ಮ ಮಗನ ಹೆಸರಿನಲ್ಲಿ 2 ಕೋಟಿ 74 ಲಕ್ಷದ ಸ್ಥಿರಾಸ್ತಿ ಮತ್ತು ಸುಮಾರು ನಾಲ್ಕು ಲಕ್ಷ ರೂಪಾಯಿ ಚರಾಸ್ತಿ ಇದೆ ಎಂದು ಚುನಾವಣಾ ಆಯೋಗದಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. 

ಇವತ್ತಿಗೆ ಕೆ.ಜೆ ಜಾರ್ಜ್ ಸಾಮ್ರಾಜ್ಯದ ಭಾವೀ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿರುವ ರಾಣಾ, 2015ರ ಮೇನಲ್ಲಿ ವಿವಾಹವಾಗಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ಆರತಕ್ಷತೆ ಇವರ ಶ್ರೀಮಂತಿಕೆ ಹಿಡಿದ ಕೈಗನ್ನಡಿಯಾಗಿತ್ತು. ಇದರಲ್ಲಿ ಸಿನಿಮಾ ನಟರು, ರಾಜಕಾರಣಿಗಳು ಉದ್ಯಮಿಗಳೆಲ್ಲಾ ಭಾಗವಹಿಸಿದ್ದರು. ನಿ‍ಶ್ಚಿತಾರ್ಥ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿತ್ತು ಎಂಬ ಸುದ್ದಿಇದೆ. 

ಹೀಗೆ, ಐದು ದಶಕಗಳ ಅಂತದಲ್ಲಿ ತಮ್ಮದೇ ಒಂದು ರಾಜಕೀಯ ಹಾಗೂ ಔದ್ಯಮಿಕ ಸಾಮ್ರಾಜ್ಯವನ್ನು ಕಟ್ಟಿಕೊಳ್ಳಲು ಹೊರಟ ರಾಜಕಾರಣಿ ಕೆ. ಜೆ. ಜಾರ್ಜ್. ಇವತ್ತು ಅವರ ಸಾಮ್ರಾಜ್ಯ ಬೆಳೆದು ನಿಂತಿದೆ. ಅದನ್ನು ಮುಂದುವರಿಸಲು ಉತ್ತರಾಧಿಕಾರಿಯೂ ತಯಾರಾಗಿ ನಿಂತಿದೆ. ಈ ಸಮಯದಲ್ಲಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತಂದೆಯ ರಾಜೀನಾಮೆಗೆ ಆಗ್ರಹ ಹೆಚ್ಚಾಗುತ್ತಿದೆ. ಇದಕ್ಕೆಲ್ಲಾ ಮಗ ರಾಣಾ ಪ್ರತಿಕ್ರಿಯೆ ಏನಿರಬಹುದು? ಅದಕ್ಕಾಗಿ ‘ಸಮಾಚಾರ’ ನಾನಾ ಮೂಲಗಳನ್ನು ಸಂಪರ್ಕಿಸಿತಾದರೂ, ರಾಣಾ ಜಾರ್ಜ್ ದೂರವಾಣಿಗೆ ಲಭ್ಯರಾಗಲಿಲ್ಲ.

Leave a comment

Top