An unconventional News Portal.

‘ದಿ ಸ್ಟೋರಿ ಆಫ್ ಬ್ರಿಗೇಡ್ ಬ್ರದರ್ಸ್’: ಅಂದು ಇಂದು ಎಂದೆಂದಿಗೂ…

‘ದಿ ಸ್ಟೋರಿ ಆಫ್ ಬ್ರಿಗೇಡ್ ಬ್ರದರ್ಸ್’: ಅಂದು ಇಂದು ಎಂದೆಂದಿಗೂ…

ಕಷ್ಟಕಾಲದಲ್ಲೂ ಒಂದಾಗಿರುವ ನಮೋ ಬ್ರಿಗೇಡ್ ಸ್ಥಾಪಕರಾದ ನರೇಶ್ ಶೆಣೈ ಮತ್ತು ಚಕ್ರವರ್ತಿ ಸೂಲಿಬೆಲೆ ಎಂಬ ಅಪೂರ್ವ ಜೋಡಿಗಳ ಕತೆ ಇದು.

ಮಂಗಳೂರು ಮೂಲದ ಆರ್ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಮಂಗಳೂರು ಜೈಲಿನಿಂದ  ಸೋಮವಾರ ಸಂಜೆ 7:30ರ ಸುಮಾರಿಗೆ ಬಿಡುಗಡೆಯಾಗಿದ್ದಾರೆ. ಅವರನ್ನು ಜೈಲಿನ ಬಳಿಗೆ ಬಂದು ಗೆಳೆಯ ಚಕ್ರವರ್ತಿ ಸೂಲಿಬೆಲೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ನಗುಮೊಗದಲ್ಲಿ ಜೈಲಿನಿಂದ ಹೊರಬರುತ್ತಿರುವ ಗೆಳೆಯರ ಚಿತ್ರಗಳು ‘ಮಂಗಳೂರು ಟುಡೇ’ ಛಾಯಾಗ್ರಾಹಕ ರಾಮಚಂದ್ರ ಭಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದ ಇವರಿಬ್ಬರ ಸ್ನೇಹ ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಜಾಮೀನಿನ ಮೇಲೆ ನರೇಶ್ ಶೆಣೈ ಬಿಡುಗಡೆ

ನರೇಶ್ ಶೆಣೈ ಬಂಧಿಸಿ ಕರೆದೊಯ್ಯುತ್ತಿರುವ ಪೊಲೀಸರು

ನರೇಶ್ ಶೆಣೈ ಬಂಧಿಸಿ ಕರೆದೊಯ್ಯುತ್ತಿರುವ ಪೊಲೀಸರು

ಕರ್ನಾಟಕ ಹೈಕೋರ್ಟ್ ನ್ಯಾಯಪೂರ್ತಿ ಬಿ ಶ್ರೀನಿವಾಸ್ ಗೌಡ ನರೇಶ್ ಶೆಣೈಗೆ ಶನಿವಾರ ಜಾಮೀನು ಮಂಜೂರು ಮಾಡಿದ್ದರು. 2 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ವ್ಯಕ್ತಿಗಳಿಂದ ಅಷ್ಟೇ ಪ್ರಮಾಣದ ಭದ್ರತೆಯ ಆಧಾರದಲ್ಲಿ ಜಾಮೀನು ನೀಡಿದ್ದರು. ತನಿಖೆಗೆ ಸಹಕಾರ ನೀಡಬೇಕು, ಸಾಕ್ಷಿಗಳ ನಾಶ ಮಾಡಬಾರದು, ಕರೆದಾಗ ವಿಚಾರಣೆಗಾಗಿ ಕೋರ್ಟ್ ಹಾಗೂ ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಎಂಬ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ.

ಮಾರ್ಚ್ 21ರಂದು ಆರ್ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆಯಾಗಿದ್ದರು. ಪ್ರಕರಣ ಸಂಬಂಧ ಪ್ರಮುಖ ಆರೋಪಿ ನರೇಶ್ ಶೆಣೈರನ್ನು ಮಂಗಳೂರು ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಜೂನ್ 25 ರಂದು ಮೂಲ್ಕಿ ಸಮೀಪದ ಹೆಜ್ಮಾಡಿಯಲ್ಲಿ ಬಂಧಿಸಿದ್ದರು.

ಬಂಧನಕ್ಕೂ ಮೊದಲು ಶೆಣೈ ಮಂಗಳೂರು ನ್ಯಾಯಾಲಯದಲ್ಲಿ ಹಾಗೂ ಹೈಕೊರ್ಟಿನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ವಿಫಲ ಯತ್ನ ನಡೆಸಿದ್ದರು.

ಮೋದಿಗೆ ಮೋಡಿ ಮಾಡಿದ್ದ ‘ಬ್ರಿಗೇಡ್’ ಜೋಡಿ

ಜೈಲಿನ ಬಳಿಗೆ ತೆರಳಿ ಕೊಲೆ ಆರೋಪಿಯನ್ನು ಚಕ್ರವರ್ತಿ ಸೂಲಿಬೆಲೆ ಸ್ವಾಗತಿಸಿದ್ದರ ಹಿಂದೆ ಒಂದು ಸ್ವಾರಸ್ಯಕರ ಘಟನೆ ಇದೆ. ಅದು ಎರಡು ವರ್ಷ ಹಿಂದಿನ ಕತೆ.

ದೇಶದಲ್ಲಿ 2014ರ ಲೋಕಸಭೆ ಚುನಾವಣೆಯ ಕಾವು  ಜೋರಾಗಿತ್ತು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉಗ್ರ ಭಾಷಣಗಳಿಂದ ಅಬ್ಬರಿಸುತ್ತಿದ್ದರು. ಸಾರ್ವತ್ರಿಕ ಚುನಾವಣೆ ಎದುರಿಸಲು ಹೊರಟ ಮೋದಿ ಯುಪಿಎ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನೇ ಅಸ್ತ್ರ ಮಾಡಿಕೊಂಡು ಪ್ರಚಾರಕ್ಕಿಳಿದ್ದಿದ್ದರು. ‘ಭ್ರಷ್ಟಾಚಾರ ಮುಕ್ತ ಭಾರತ’ ಮೋದಿಯ ಘೋಷ ವಾಕ್ಯವಾಗಿತ್ತು. ಆದರೆ ಈ ಭ್ರಷ್ಟಾಚಾರದ ಮಾತುಗಳು ಕರ್ನಾಟಕ ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿತ್ತು.

ಅವತ್ತು ಕರ್ನಾಟಕ ಬಿಜೆಪಿ ಭ್ರಷ್ಟಾಚಾರ ಪ್ರಕರಣಗಳನ್ನು ಹೆಗಲಲ್ಲಿ ಹೊತ್ತುಕೊಂಡಿತ್ತು; ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಯಡಿಯೂರಪ್ಪ ಮತ್ತು ಜನಾರ್ಧನ ರೆಡ್ಡಿ ನೆರಳಿನಲ್ಲಿ ಗುರುತಿಸಿಕೊಂಡಿದ್ದ ಶ್ರೀರಾಮುಲು ಕಮಲ ಪಕ್ಷಕ್ಕೆ ವಾಪಾಸಾಗಿದ್ದು ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿ ಮೌನದಿಂದಿರುವಂತೆ ಮಾಡಿತ್ತು. ಆಗ ಸಿದ್ಧವಾಯ್ತು ಮಾಸ್ಟರ್ ಪ್ಲಾನ್.

ಜನ್ಮತಾಳಿದ ‘ನಮೋ (ರೇಂದ್ರ ಮೋದಿ) ಬ್ರಿಗೇಡ್’

ನರೇಂದ್ರ ಮೋದಿಯ ಚುನಾವಣಾ ಪ್ರಚಾರ ಜಾರಿಯಲ್ಲಿರುವ ಹೊತ್ತಲ್ಲೇ ಬಿಜೆಪಿಯೊಳಗೆ ಎರಡು ಗುಂಪುಗಳು ಹುಟ್ಟಿಕೊಂಡವು. ಒಂದು ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸಬೇಕು ಎನ್ನುವ ಗುಂಪು. ಇನ್ನೊಂದು ಅಡ್ವಾಣಿ ಮುಂತಾದವರ ಚಿಂತನೆಯನ್ನು ಪಾಲಿಸುವ ‘ವ್ಯಕ್ತಿಗಿಂತ ಪಕ್ಷ ಮುಖ್ಯ’ ಎಂಬ ನಿಲುವಿಗೆ ಅಂಟಿಕೊಂಡವರ ಗುಂಪು. ಹೀಗಾಗಿ ಪಕ್ಷದಲ್ಲಿದ್ದುಕೊಂಡೇ ನರೇಂದ್ರ ಮೋದಿ ಪರ ಪ್ರಚಾರ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪಕ್ಷದಿಂದ ಹೊರ ನಿಂತು ಸಂಘಟನೆ ಕಟ್ಟಲಾಯಿತು; ಅದೇ ನಮೋ ಬ್ರಿಗೇಡ್.

ಇದರ ಹಿಂದಿದ್ದವರು ಇಬ್ಬರೇ; ಒಬ್ಬರು ಜನರನ್ನು ಸೆಳೆಯುವ ಚಾಣಾಕ್ಷ ಮಾತುಗಾರ, ‘ಜಾಗೋ ಭಾರತ್’ ಕಾರ್ಯಕ್ರಮಗಳ ರೂವಾರಿ ಚಕ್ರವರ್ತಿ ಸೂಲಿಬೆಲೆ. ಇನ್ನೊಬ್ಬರು ಮಂಗಳೂರಿನ ವಿವೇಕ್ ಟ್ರೇಡರ್ಸ್ ಮಾಲಿಕ, ಸದ್ಯ ಆರ್ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಕೊಲೆಯ ಪ್ರಮುಖ ಆರೋಪಿ ನರೇಶ್ ಶೆಣೈ. ನಮೋ ಬ್ರಿಗೇಡ್ ಲಾಂಛನದ ಕೆಳಗೆ ಇಬ್ಬರೂ ಜತೆಯಾದರು.

ಎಂದೆಂದಿಗೂ..

ನರೇಂದ್ರ ಮೋದಿ ಆಶೀರ್ವಾದ

ಅದೊಂದು ರಾಜ್ಯಮಟ್ಟದ ಯುವ ಜನಾಂಗವನ್ನು ಒಳಗೊಂಡ ತಾತ್ಕಾಲಿಕ ಸಂಘಟನೆ. ಸಂಘಟನೆಯ ಒಟ್ಟು ಉದ್ದೇಶ ಇಷ್ಟೇ; ನರೇಂದ್ರ ಮೋದಿಯನ್ನು ಅಧಿಕಾರಕ್ಕೆ ತರುವುದು. ಈ ಸಂಸ್ಥಾಪಕರು ಒಬ್ಬರಿಗಿಂತ ಒಬ್ಬರು ಚಾಣಾಕ್ಷರು. ರಾತ್ರಿ ಬೆಳಗಾಗುವ ಮೊದಲ ಚಂದಾ ಎತ್ತಿ ಕೋಟಿ ತಂದು ಗುಡ್ಡೆ ಹಾಕುವ ಶಕ್ತಿ, ಪ್ರಭಾವ ನರೇಶ್ ಶೆಣೈಗಿತ್ತು. ಅದೇ ಸಮಯದಲ್ಲಿ ಒಂದೊಳ್ಳೆ ಯುವ ಸೇನೆಯನ್ನು ತಯಾರು ಮಾಡುವ ಸಂಘಟನಾ ಚತುರತೆ, ರಾಷ್ಟ್ರೀಯ ನಾಯಕರ ಜೊತೆಗಿನ ಅಮೂಲ್ಯ ಸಂಪರ್ಕಗಳ ಹಿನ್ನೆಲೆ ಚಕ್ರವರ್ತಿ ಸೂಲಿಬೆಲೆಗಿತ್ತು. ಇಬ್ಬರೂ ಸೇರಿ ರಾಜ್ಯದಾದ್ಯಂತ ನರೇಂದ್ರ ಮೋದಿ ಪರವಾಗಿ ಮತಪ್ರಚಾರ ನಡೆಸಿದರು. ಸಾಮಾಜಿಕ ಜಾಲತಾಣಗಳನ್ನು ಭರ್ಜರಿಯಾಗಿ ಬಳಸಿಕೊಂಡರು. ಕಾಲೇಜು ಯುವ ಸಮುದಾಯವನ್ನು ತಲುಪಿದರು.

ನಮೋ ಬ್ರಿಗೇಡ್ ಮಾರಾಟದ ಸರಕುಗಳು

ನಮೋ ಬ್ರಿಗೇಡ್ ಮಾರಾಟದ ಸರಕುಗಳು

ಇವರ ಕಾರ್ಯಕ್ರಮಗಳಿಗೆ ಬಿಜೆಪಿಯೇತರ ನಾಯಕರನ್ನೂ ಕರೆತರಲಾಗುತ್ತಿತ್ತು. ಸಾಹಿತಿ ಎಸ್ ಎಲ್ ಬೈರಪ್ಪ, ಕೆಲವು ಸಿನಿಮಾ ನಟರು, ನಿರ್ದೇಶಕರೆಲ್ಲಾ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಅಲ್ಲಲ್ಲಿ ಸಭೆ ನಡೆಸುತ್ತಿದ್ದರು. ನರೇಂದ್ರ ಮೋದಿ ಪರ ಪ್ರಚಾರಕ್ಕೆ ಇಳಿದವರು, ಚಂದಾ ಎತ್ತಿದ್ದಲ್ಲದೇ, “ನರೇಂದ್ರ ಮೋದಿಯ ಪೆನ್, ಕೀ ಪಂಚ್, ಟಿ ಶರ್ಟ್ ಮಾರಿ, ಅದನ್ನು ಇನ್ನೊಂದು ರೀತಿಯಲ್ಲಿ ದಂಧೆ ಮಾಡಿಕೊಂಡು ‘ಸಂಪಾದನೆ’ ಮಾಡಿದರು,” ಎಂದು ಕರ್ನಾಟಕ ಬಿಜೆಪಿಯ ಆಂತರಿಕ ಮೂಲಗಳು ದೂರುತ್ತವೆ. ಒಂದು ಹಂತಕ್ಕೆ ಸಂಘಟನೆಗೆ ಕೋಟಿ ಕೋಟಿ ಹಣ ಹರಿದು ಬರಲಾರಂಭಿಸಿತು. ಎನ್.ಜಿಒ ಒಂದರ ಹೆಸರಿನಲ್ಲಿ ಈ ಎಲ್ಲಾ ವ್ಯವಹಾರಗಳು ನಡೆಯುತ್ತಿದ್ದವು.  “ಸಂಘಟನೆಗೆ ಎಷ್ಟು ಹಣ ಬಂತು ಎಷ್ಟು ಖರ್ಚಾಯ್ತು ಎಂಬ ಲೆಕ್ಕವನ್ನು ಅವರೆಂದೂ ಸಾರ್ವಜನಿಕವಾಗಿ ಮುಂದಿಡಲಿಲ್ಲ,” ಎಂದು ಈ ಮೂಲಗಳು ಆರೋಪಿಸುತ್ತಾರೆ. ಇದರಲ್ಲೇ ಒಂದಷ್ಟು ಹಣ ಗುಳುಂ ಆಯ್ತು ಎಂಬ ಆಪಾದನೆಗಳೂ ಇವೆ.

ಇವರಿಗೆ ಕರ್ನಾಟಕ ಬಿಜೆಪಿ ಜೊತೆಗೆ ಗಾಢ ಸಂಬಂಧವೇನೂ ಇರಲಿಲ್ಲ. ಬದಲಾಗಿ ಮೋದಿಯ ಸಾರ್ವಜನಿಕ ಸಂಪರ್ಕ ತಂಡದ ಜೊತೆಗೆ ನೇರವಾದ ಸಂಪರ್ಕಗಳಿದ್ದವು. ಈ ಸಂಪರ್ಕ ಸಾಧಿಸಿದ್ದು ಸೂಲಿಬೆಲೆ ಎಂಬ ಅನುಮಾನಗಳಿವೆ. ಬಾಬಾ ರಾಮ್ದೇವ್ರ ಪತಂಜಲಿ ಕಡೆಯಿಂದ ತಮ್ಮ ಭಾರತ್ ಸ್ವಾಭಿಮಾನ್ ಟ್ರಸ್ಟಿಗೆ ಹಣ ಪಡೆಯುತ್ತಿದ್ದ ಸೂಲಿಬೆಲೆ, ರಾಮ್ದೇವ್  ಮೂಲಕವೇ ಪ್ರಧಾನಿ ಸಂಪರ್ಕ ಸಾಧಿಸಿದರು ಎನ್ನುವ ಮಾಹಿತಿಗಳಿವೆ.

ಇವರಿಬ್ಬರ ಪ್ರಚಾರ ತಂತ್ರಗಳಿಗೆ ಸ್ವತಃ ಮೋದಿಯೂ ಮರುಳಾಗಿದ್ದರು. ಮಂಗಳೂರಿಗೆ ಬಂದಿದ್ದ ನರೇಂದ್ರ ಮೋದಿ ನರೇಶ್ ಶೆಣೈರನ್ನು ಆಲಂಗಿಸಿ ಬೆನ್ನುತಟ್ಟಿ ತಮ್ಮ ಪರವಾಗಿ ಪ್ರಚಾರ ಮಾಡಿದ್ದಕ್ಕೆ ಶಭಾಷ್ ಹೇಳಿದರು.

ನಮೋ ಬ್ರಿಗೇಡ್ ಜಾಗದಲ್ಲಿ ‘ಯುವ ಬ್ರಿಗೇಡ್’

ಕೇವಲ ಪ್ರಚಾರಕ್ಕಾಗಿ ಹುಟ್ಟು ಹಾಕಿದ್ದ ಸಂಸ್ಥೆಯನ್ನು ಚುನಾವಣೆ ನಂತರ ಬರ್ಖಾಸ್ತು ಮಾಡ್ತೀವಿ ಎಂದು ಹೇಳಿಕೊಂಡೇ  ನಮೋ ಬ್ರಿಗೇಡಿಗೆ ಇವರಿಬ್ಬರು ತಳಪಾಯ ಹಾಕಿದ್ದರು. ಅಂದುಕೊಂಡಂತೆ ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿದ್ದೂ ಆಯಿತು. ಇದಾದ ನಂತರ ಸಂಘಟನೆ ವಿಸರ್ಜನೆಯೂ ನಡೆಯಿತು.

ಚುನಾವಣೆ ಮುಗಿದ ಬಳಿಕ ಬಿಜೆಪಿಯೊಳಗಿನ ಒಂದು ವಲಯ ನರೇಶ್ ಶೆಣೈ ಮುಂದಿನ ವಿಧಾನಸಭೆ ಚುನಾವಣೆಯ ಮಂಗಳೂರು ಅಭ್ಯರ್ಥಿ ಎಂಬುದಾಗಿ ಬಿಂಬಿಸಿದವು. ಆದರೆ ಈಗ ಬಿಜೆಪಿಯಾಗಲಿ ಆರ್.ಎಸ್.ಎಸ್ ಆಗಲೀ ನರೇಶ್ ಶೆಣೈ ಪರವಾಗಿಯೂ ಇಲ್ಲ, ಸೂಲಿಬೆಲೆ ಪರವಾಗಿಯೂ ಇಲ್ಲ ಎಂಬ ಮಾತುಗಳನ್ನು ಬಿಜೆಪಿಯೊಳಗಿನ ಮೂಲಗಳು ಮುಂದಿಡುತ್ತವೆ. “ಒಂದೊಮ್ಮ ಸೂಲಿಬೆಲೆ ಪರವಾಗಿ ಬಿಜೆಪಿ ನಿಂತಿದ್ದೇ ಆದರೆ ಕನಿಷ್ಠ ಆರ್.ಎಸ್.ಎಸ್ ವಕ್ತಾರ, ಎಂಎಲ್ಸಿ, ರಾಜ್ಯಸಭೆಗಾದರೂ ಕಳುಹಿಸಬೇಕಾಗಿತ್ತು. ಅದ್ಯಾವುದನ್ನು ಮಾಡಲಿಲ್ಲ,” ಎಂದು ಜಗನ್ನಾಥ ಭವನದ ಮೂಲಗಳು ಪೂರಕ ಮಾಹಿತಿ ನೀಡುತ್ತಾರೆ.

ಚುನಾವಣೆ ಮುಗಿದ ಬಳಿಕ ಭಿನ್ನಾಭಿಪ್ರಾಯದಿಂದ ಇಬ್ಬರೂ ಬೇರೆ ಬೇರೆಯಾಗಿದ್ದರು. ಆದರೆ ನಂತರ ಮತ್ತೆ ಒಂದಾದರು. “ಚುನಾವಣೆ ಮುಗಿದ ಬಳಿಕ ನಮೋ ಬ್ರಿಗೇಡನ್ನೇ ಯುವ ಬ್ರಿಗೇಡ್ ಆಗಿ ಬದಲಿಸಲಾಯಿತು,” ಎಂದು ಮೂಲಗಳು ತಿಳಿಸುತ್ತವೆ. ಮತ್ತೆ ಇಲ್ಲೂ ಇದ್ದವರೂ ಅವರಿಬ್ಬರೇ; ಆದರೆ ಸೂಲಿಬೆಲೆ ಮುಂದಾಳತ್ವದ ಯುವ ಬ್ರಿಗೇಡ್ “ಸ್ಪಷ್ಟ ಗುರಿ ಮತ್ತು ಉದ್ದೇಶ ಇಲ್ಲದ ಕಾರಣಕ್ಕೆ  ಯಶಸ್ವಿಯಾಗಲಿಲ್ಲ,”ಎಂದು ಸೂಲಿಬೆಲೆಯವರ ಒಡನಾಡಿಗಳು ಹೇಳುತ್ತಾರೆ.

ಹೀಗೆ ನಮೋ ಬ್ರಿಗೇಡಿನಿಂದ ಆರಂಭವಾದ ಸೂಲಿಬೆಲೆ ಮತ್ತು ನರೇಶ್  ಗಾಢ ಸ್ನೇಹ ಇವತ್ತು ಗೆಳೆಯ ಕೊಲೆ ಆರೋಪದಲ್ಲಿ ಸಿಲುಕಿದರೂ ಬಿಡಲಾಗದಷ್ಟು ಗಾಢವಾಗಿ ಬೆಳೆದು ನಿಂತಿದೆ.

ಈ ಲೇಖನ ಬರೆಯುವ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂಪರ್ಕಿಸಲು ‘ಸಮಾಚಾರ’ ನಿರಂತರ ಪ್ರಯತ್ನಗಳನ್ನು ನಡೆಸಿತ್ತಾದರೂ, ಉದ್ದೇಶ ಪೂರ್ವಕವಾಗಿಯೋ ಏನೋ, ಸಂಪರ್ಕ ಸಾಧ್ಯವಾಗಿರಲಿಲ್ಲ.

Leave a comment

Top