An unconventional News Portal.

ಭಾರತದಲ್ಲಿ ಆಸ್ತಿ ಹಂಚಿಕೆಯ ‘ರಿಪೋರ್ಟ್ ಕಾರ್ಡ್’: ಶ್ರಿಮಂತರಿಗೇ ಎಲ್ಲಾ, ಬಡವರ ಕೈಯಲ್ಲಿ ಏನೂ ಇಲ್ಲ!

ಭಾರತದಲ್ಲಿ ಆಸ್ತಿ ಹಂಚಿಕೆಯ ‘ರಿಪೋರ್ಟ್ ಕಾರ್ಡ್’: ಶ್ರಿಮಂತರಿಗೇ ಎಲ್ಲಾ, ಬಡವರ ಕೈಯಲ್ಲಿ ಏನೂ ಇಲ್ಲ!

ದೇಶದಲ್ಲಿರುವ ಶೇಕಡಾ 1ರಷ್ಟು ಶ್ರೀಮಂತರ ಕೈಯಲ್ಲಿ ದೇಶದ ಶೇಕಡಾ 58.4 ಆಸ್ತಿ ಇದೆ!

ಬಡವರು ಮತ್ತು ಶ್ರೀಮಂತರ ನಡುವಿನ ಕಂದಕದ ಅಗಾಧತೆ ವಿವರಿಸಲು ಇಷ್ಟು ಸಾಕು. ಈ ಅಂತರ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಲೇ ಇದೆ.

2014ರಲ್ಲಿ ಇದೇ ಶೇಕಡಾ 1 ಶ್ರೀಮಂತರ ಕೈಯಲ್ಲಿ ಶೇ. 49 ಆಸ್ತಿ ಇತ್ತು; 2015ರ ಹೊತ್ತಿಗೆ ಶೇಕಡಾ 53 ತಲುಪಿದ ಈ ಆಸ್ತಿಗಳ ಬೆಳವಣಿಗೆ ಇದೀಗ 2016ರ ಹೊತ್ತಿಗೆ, ಶೇಕಡಾ 58.4ಕ್ಕೆ ವಿಸ್ತರಣೆಯಾಗಿದೆ. ಸ್ವಿಡ್ಜರ್ಲಾಂಡ್ನ ಜೂರಿಚ್ನಲ್ಲಿರುವ ‘ಕ್ರೆಡಿಟ್ ವೆಲ್ತ್ ಸುಸ್ಸೆ ಗ್ರೂಪ್ ಎಜಿ’ ಎಂಬ ಸಂಸ್ಥೆ ತಯಾರಿಸಿರುವ ಜಾಗತಿಕ ಆಸ್ತಿ ಕುರಿತಾದ ವಾರ್ಷಿಕ ವರದಿಯಲ್ಲಿ ಈ ಅಂಶಗಳು ದಾಖಲಾಗಿವೆ. ಈ ಸಂಸ್ಥೆ 2010ರಿಂದ ಪ್ರತಿ ವರ್ಷ ಈ ರೀತಿಯ ವರದಿ ತಯಾರಿಸುತ್ತಾ ಬಂದಿದೆ.

ಮೋದಿ ಸರಕಾರದಲ್ಲಿ ಶ್ರೀಮಂತರಾದರಾ?:

ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿರುವ ವೇಗ (ಕೃಪೆ: ಲೈವ್ ಮಿಂಟ್)

ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿರುವ ವೇಗ (ಕೃಪೆ: ಲೈವ್ ಮಿಂಟ್)

ಈ ಸಮೀಕ್ಷೆಯ ದಾಖಲೆಗಳನ್ನು ನೋಡಿದರೆ ನರೇಂದ್ರ ಮೋದಿ ಸರಕಾರದಲ್ಲಿ ಮಾತ್ರವಲ್ಲ ಎಲ್ಲಾ ಸರಕಾರದಲ್ಲೂ ಶ್ರೀಮಂತರು, ಶ್ರೀಮಂತರಾಗುತ್ತಲೇ ಹೋಗಿರುವುದು ಕಂಡು ಬರುತ್ತದೆ. ಮೋದಿ ಬರುವುದಕ್ಕೂ ಮೊದಲು 2010ರಲ್ಲಿ ಇದೇ ಶ್ರೀಮಂತರ ಕೈಯಲ್ಲಿ ಶೇಕಡಾ 40.3 ರಷ್ಟು ಆಸ್ತಿ ಇತ್ತು. ಮೋದಿ ಅಧಿಕಾರಕ್ಕೆ ಬರುವ 2014ರ ಹೊತ್ತಿಗೆ ಇದು ಶೇಕಡಾ 49ಕ್ಕೆ ಏರಿಕೆಯಾಗಿತ್ತು. ಆದರೆ ಈಗ ಶ್ರೀಮಂತರ ಆಸ್ತಿ ಹೆಚ್ಚಳದ ವೇಗ ಮಾತ್ರ ಎಂದಿಗಿಂತಲೂ ಹೆಚ್ಚಾಗಿದೆ. ನದಿಯ ನೀರೆಲ್ಲಾ ಬಂದು ಸಮುದ್ರ ಸೇರುವಂತೆ ಸಕಲ ಆಸ್ತಿಗಳೂ ಕೆಲವೇ ಜನರ ಪಾಲಾಗುತ್ತಿವೆ.

ಇನ್ನು ಶೇಕಡಾ 10 ಶ್ರೀಮಂತರಲ್ಲಿ 2010ರ ಹೊತ್ತಿಗೆ ಇದ್ದ ಶೇ. ಆಸ್ತಿ 68.8 ರಿಂದ 2016ಕ್ಕೆ ಬರುವಾಗ 80.7ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿ ಹೀಗಿದ್ದರೆ, ಕೆಳ ವರ್ಗದ ಶೇಕಡಾ 50 ಜನರ ಕೈಯಲ್ಲಿ ಕೇವಲ ಶೇಕಡಾ 2.1 ಆಸ್ತಿ ಮಾತ್ರ ಇದೆ.

ಇಡೀ ದಾಖಲೆಗಳಿಂದ ಒಂದು ವಿಷಯ ಮಾತ್ರ ನಿಖರವಾಗಿ ಗೊತ್ತಾಗುತ್ತದೆ. ಶ್ರೀಮಂತ ವರ್ಗ ಭಾರತದಲ್ಲಿ ಯಾವ ಸರಕಾರ ಅಧಿಕಾರದಲ್ಲಿದ್ದಾಗಲೂ ತಮಗೆ ಬೇಕಾಗಿದ್ದನ್ನು ಪಡೆದುಕೊಂಡಿವೆ. 2000ದಲ್ಲಿ ಕೇವಲ ಶೇ. 36.8 ಆಸ್ತಿ ಹೊಂದಿದ್ದ ಇದೇ ಶೇ. 1 ಜನ ಕೇವಲ 16 ವರ್ಷಗಳ ಅಂತರದಲ್ಲಿ ಶೇಕಡಾ 58.4ಕ್ಕೆ ತಮ್ಮ ಆಸ್ತಿಪಾಸ್ತಿ ಹೆಚ್ಚಿಸಿಕೊಂಡಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿಯ ಸಮಸ್ತ ಉಪಯೋಗಗಳನ್ನು ಇದೇ ಜನ ಮೊಗೆದು ಮೊಗೆದು ಬಾಚುತ್ತಿದ್ದಾರೆ. ಇದರಿಂದ ದೇಶ ಅಭಿವೃದ್ಧಿ ಹೊಂದಿದಷ್ಟೂ ಶ್ರೀಮಂತ ಕುಳಗಳು ಕೊಬ್ಬುತ್ತಾರೆಯೇ ಹೊರತು ಬಡವರು ಉದ್ದಾರವಾಗುವುದಿಲ್ಲ.

ಬೇರೆ ಬೇರೆ ದೇಶಗಳಲ್ಲಿ ಶೇ. 1 ಶ್ರೀಮಂತರ ಕೈಯಲ್ಲಿರುವ ಆಸ್ತಿಯ ಪಾಲು (ಕೃಪೆ: ಲೈವ್ ಮಿಂಟ್)

ಬೇರೆ ಬೇರೆ ದೇಶಗಳಲ್ಲಿ ಶೇ. 1 ಶ್ರೀಮಂತರ ಕೈಯಲ್ಲಿರುವ ಆಸ್ತಿಯ ಪಾಲು (ಕೃಪೆ: ಲೈವ್ ಮಿಂಟ್)

ವಿಶ್ವದಲ್ಲೇ ಯಾವ ದೇಶವೂ ‘ಭಾರತ’ದಂತಿಲ್ಲ:

ಭಾರತದಲ್ಲಿರುವ ಸಂಪನ್ಮೂಲದ ಅಸಮರ್ಪಕ, ಸಮಾನ ಹಂಚಿಕೆಯನ್ನು ನೋಡಿದರೆ, ವಿಶ್ವದ ಯಾವ ದೇಶಗಳಲ್ಲೂ ಹೀಗಿಲ್ಲ. ಭಾರತದಲ್ಲಿ ಶೇ. 1 ಜನರಲ್ಲಿ ಶೇ. 58.4 ಆಸ್ತಿ ಇದ್ದರೆ ಈ ಪ್ರಮಾಣ ಚೀನಾದಲ್ಲಿ ಶೇ. 43.8 ಇದೆ. ಇನ್ನು ಇಂಡೋನೇಷ್ಯಾದಲ್ಲಿ ಶೇ. 49.3, ಬ್ರೆಜಿಲ್ ಶೇ. 47.9, ದಕ್ಷಿಣಾ ಆಫ್ರಿಕಾದಲ್ಲಿ ಶೇ. 41.9 ಆಸ್ತಿ ಕೇವಲ ಶೇಕಡಾ 1 ಜನರ ಕೈಯಲ್ಲಿದೆ.

ಭಾರತದ ಟಾಪ್ 10 ಸಿರಿವಂತರಿವರು: 

  1. ಮುಕೇಶ್ ಅಂಬಾನಿ: 1. 55 ಲಕ್ಷ ಕೋಟಿ ರೂ.
  2. ದಿಲೀಪ್ ಸಾಂಗ್ವಿ: 1. 15 ಸಾವಿರ ಕೋಟಿ ರೂ. 
  3. ಹಿಂದುಜಾ ಕುಟುಂಬ: 1. 4 ಸಾವಿರ ಕೋಟಿ ರೂ. 
  4. ಅಜೀಂ ಪ್ರೇಮ್ಜಿ: 1. 02 ಸಾವಿರ ಕೋಟಿ ರೂ. 
  5. ಪಲ್ಲೊಂಜಿ ಮಿಸ್ತ್ರಿ: 95 ಸಾವಿರ ಕೋಟಿ ರೂ. 
  6. ಲಕ್ಷ್ಮಿ ಮಿತ್ತಲ್: 85 ಸಾವಿರ ಕೋಟಿ ರೂ. 
  7. ಗೋದ್ರೇಜ್ ಕುಟುಂಬ: 84 ಸಾವಿರ ಕೋಟಿ ರೂ. 
  8. ಶಿವನಾಡರ್: 78 ಸಾವಿರ ಕೋಟಿ ರೂ. 
  9. ಕುಮಾರ್ ಬಿರ್ಲಾ: 60 ಸಾವಿರ ಕೋಟಿ ರೂ. 
  10. ಸೈರಸ್ ಪೂನಾವಲ್ಲಾ: 59 ಸಾವಿರ ಕೋಟಿ ರೂ.  

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top