An unconventional News Portal.

ಎಲ್ಲೆ ಮೀರಿದ ‘ಸೆಕ್ಸ್ ಟೂರಿಸಂ’ ಹಿಂದೆ ಜಾಗತಿಕ ಮಾರುಕಟ್ಟೆ!

ಎಲ್ಲೆ ಮೀರಿದ ‘ಸೆಕ್ಸ್ ಟೂರಿಸಂ’ ಹಿಂದೆ ಜಾಗತಿಕ ಮಾರುಕಟ್ಟೆ!

  • ಕ್ಷಮಾ ಭಾರದ್ವಾಜ್ ಉಜಿರೆ: 

 

ವೇಶ್ಯಾವಾಟಿಕೆ ಎಂಬುದು ಜಗತ್ತಿನ ಪುರಾನಿ ವೃತ್ತಿ ಎನ್ನುತ್ತಾರೆ. ಇದಿವತ್ತು ಹೊಸ ಮೆರಗು ಪಡೆದುಕೊಂಡಿರುವುದು ಪ್ರವಾಸೋದ್ಯಮ ಎಂಬ ಮತ್ತೊಂದು ಉದ್ಯಮದ ಜತೆ ತಳುಕು ಹಾಕಿಕೊಂಡ ಕಾರಣಕ್ಕೆ. ಮನುಷ್ಯರಿಗಿರುವ ಪ್ರವಾಸದ ಹುಚ್ಚು ಮತ್ತು ಕಾಮದೆಡೆಗಿರುವ ಕೌತುಕಗಳನ್ನು ಬೆರೆಸುವ ಮೂಲಕ ಹೊಸ ತರಹದ ಉತ್ಪನ್ನವೊಂದು ಮಾರುಕಟ್ಟೆಗೆ ಬಿಟ್ಟಿದೆ ಈ ಬಂಡವಾಳಿಗರ ಜಗತ್ತು. ಅದೇ ‘ಸೆಕ್ಸ್ ಟೂರಿಸಂ’.

ಇದರ ಮುನ್ನಲೆಯಲ್ಲಿರುವ ದೇಶ ನಮ್ಮ ಏಷಿಯಾ ಖಂಡದಲ್ಲಿರುವ ಥಾಯ್ಲೆಂಡ್.

‘ಸೆಕ್ಸ್ ಟೂರಿಸಂ’ ಎಂಬುದು ಹೊರನೋಟಕ್ಕೆ ದೊಡ್ಡ ಉದ್ಯಮವಾಗಿ ಕಾಣಿಸುತ್ತದೆ. ಆದರೆ, ಇದಕ್ಕೆ ಬಳಕೆಯಾಗುವ ಸರಕುಗಳ ಅಂತರಾಳದ ಕತೆಗಳು ಮಾತ್ರ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುತ್ತವೆ. ಥಾಯ್ಲ್ಯಾಂಡ್ ರಾಜಧಾನಿಯಿಂದ 500 ಕಿ. ಮೀ ದೂರದಲ್ಲಿ ಕೌರ್‍ನೌನ್ ಅನ್ನುವ ಪುಟ್ಟ ಗ್ರಾಮವೊಂದಿದೆ. ಸುಮಾರು 600 ಮನೆಗಳಿರುವ ಪ್ರದೇಶ ಅದು. ಕೃಷಿ ಇಲ್ಲಿನ ಜನರ ಮೂಲ ಕಸುಬು. ಭತ್ತ, ಗೋಧಿ ಸೇರಿದಂತೆ ಅನೇಕ ದ್ವಿದಳ ಧಾನ್ಯಗಳನ್ನು ಬೆಳೆಯುವ ಫಲವತ್ತಾದ ಭೂಮಿ. ಇಲ್ಲಿಯ ಒಂದು ಬಡ ಕುಟುಂಬದ 38ರ ಹರೆಯದ ಲೆಕ್ಸ್, ‘ಸೆಕ್ಸ್ ಟೂರಿಸಂ’ಗೆ ನಡೆದು ಬಂದ ಹಾದಿಯೇ ಒಂದು ದುರಂತ ಕತೆ.

ಲೆಕ್ಸ್‍ಗೆ ಹುಟ್ಟಿದಾಗಿನಿಂದ ಮೂರು ಹೊತ್ತು ಉಂಡಿದ್ದೇ ನೆನಪಿಲ್ಲ. ಕಿತ್ತು ತಿನ್ನುವ ಬಡತನ. ಒಂದು ತುತ್ತಿಗೆ ಕೈಯೊಡ್ಡುವ 6 ಕೈಗಳು. ಇದ್ದ ತುಂಡು ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಅಪ್ಪ. ಹಾಸಿಗೆ ಹಿಡಿದ ಅಮ್ಮ. ಲೆಕ್ಸ್ ಹಾಗೂ ಆಕೆಯ ಸಹೋದರ, ಸಹೋದರಿಯರು ಬದುಕಿದ್ದಾಗಲೇ ನರಕವನ್ನು ಹತ್ತಿರದಿಂದ ನೋಡಿದ್ದರು.

ಒಂದಿನ ಇದ್ದಕ್ಕಿದ್ದ ಹಾಗೆ ಮನೆ ಬಿಟ್ಟ ಲೆಕ್ಸ್ ಮದುವೆಯಾದಳು. ಆಗ ಆಕೆಗೆ 15 ವರ್ಷ. 18 ಆಗುವ ಹೊತ್ತಿಗೆ ಕಂಕಳಲ್ಲಿ ಎರಡು ಮಕ್ಕಳಿದ್ದವು. ಗಂಡ ಅಪಘಾತದಲ್ಲಿ ಸಾವನ್ನಿಪ್ಪಿಯಾಗಿತ್ತು. ಆಕೆಯ ಬದುಕಿನ ದುರಂತಗಳು ಮುಂದುವರಿದವು. ಕಷ್ಟದ ದಿನಗಳಲ್ಲಿ ಲೆಕ್ಸ್‍ಗೆ ಪರಿಚಯವಾಗಿದವಳು ಪೋಂಪಲಾ ಎಂಬ ಸೆಕ್ಸ್ ವರ್ಕರ್. ಒಂದು ಕಾಲಕ್ಕೆ ಥಾಯ್ಲೆಂಡ್‍ನಲ್ಲಿ ಬಹು ಬೇಡಿಕೆಯಲ್ಲಿದ ಮಾದಕ ಕನ್ಯೆ ಈ ಪೋಂಪಲಾ. ಲೆಕ್ಸ್ ಪರಿಸ್ಥಿತಿ ಅರಿತ ಪೋಂಪೆಲಾ ಕೆಲಸ ಕೊಡಿಸುವ ಭರವಸೆ ನೀಡಿದಳು. ಮತ್ತೊಬ್ಬ ಜೀವನ ಸಾಥಿ ಸಿಗ್ತಾನೆ ಅನ್ನೋ ಆಸೆ ಹುಟ್ಟಿಸಿದಳು. ಲೆಕ್ಸ್‍ಗೆ ಇಂಟರ್ನೆಟ್ ಮೂಲಕ ‘ಡೀಲ್’ ಕುದುರಿಸಿಕೊಟ್ಟ ಪೋಂಪೆಲಾ, ಗಿರಾಕಿಯನ್ನೂ ಫಿಕ್ಸ್ ಮಾಡಿ ಕೊಟ್ಟಳು. ನೋಡುನೋಡುತ್ತಲೇ ಲೆಕ್ಸ್ ವೇಶ್ಯಾವಾಟಿಕೆ ಜಾಲದ ಒಳಗೆ ಬಂದಾಗಿತ್ತು.

thai-sex-tour-2

ಥಾಯ್ ರಾಜಧಾನಿಯ ಗಲ್ಲಿಯೊಂದರಲ್ಲಿ ವಿದೇಶಿ ಪ್ರವಾಸಿಗರು.

ಥಾಯ್ಲೆಂಡ್‍ನಲ್ಲಿ ಇಂತಹಾ ಅನೇಕ ಯುವತಿಯರು ಅನಿವಾರ್ಯತೆಯಿಂದ ವೇಶ್ಯಾವಾಟಿಕೆ ಜಾಲಕ್ಕೆ ಬೀಳುತ್ತಿದ್ದಾರೆ. ಈ ದೇಶ ಪ್ರವಾಸಿ ತಾಣವಾಗಿ ಹೆಸರುವಾಗಿಗಿದ್ದರೂ, ಹಳ್ಳಿಗಳು ಇಂದಿಗೂ ಬಡತನದಿಂದ ಹೊರಗೆ ಬಂದಿಲ್ಲ. ಅಲ್ಲಿರೋ 30% ರಷ್ಟು ಹುಡುಗೀರು ಇಂದಿಗೂ ಪ್ರಾಸ್ಟಿಟ್ಯೂಟ್‍ಗಳಾಗಿ ಥಾಯ್‍ನ ಗಲ್ಲಿಗಲ್ಲಿಗಳಲ್ಲಿ ಕೆಲಸ ಮಾಡ್ತಿದ್ದಾರೆ. ಕೆಲವು ಅಂಕಿ ಅಂಶದ ಪ್ರಕಾರ, ಈ ದೇಶದಲ್ಲಿರುವ ಸೆಕ್ಸ್ ವರ್ಕರ್‍ಗಳ ಸಂಖ್ಯೆ10 ಸಾವಿರ ದಾಟಿದೆ.

ಸೆಕ್ಸ್ ಈಗ ಮಡಿವಂತಿಕೆ ವಿಷಯವಾಗಿ ಉಳಿದುಕೊಂಡಿಲ್ಲ. ನಾಲ್ಕು ಗೋಡೆ ಮೀರಿ ಕಮರ್ಷಿಯಲ್ ಆಯಾಮಗಳನ್ನು ಪಡೆದುಕೊಂಡ ಬಹುದೊಡ್ಡ ಉದ್ಯಮವಾಗಿ ಇದು ಬೆಳೆದಿದೆ. ‘ಸೆಕ್ಸ್ ಟೂರಿಸಂ’ ಎಂಬುದು ದೇಶದ ಒಳಗಡೆ, ದೇಶದ ಗಡಿ ಪ್ರದೇಶಗಳಲ್ಲಿ, ಅಥವಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವ ಪ್ರವಾಸದ ಮೂಲಕ ನಡೆಯುತ್ತೆ. ಇದರಲ್ಲಿ ಕೋಟ್ಯಾಂತರ ರೂಪಾಯಿ ಟರ್ನ್‍ಓವರ್ ನಡೆಯುತ್ತದೆ. ಹಲವು ದೇಶಗಳ ಆರ್ಥಿಕತೆಗೆ ಇದು ಕೊಡುಗೆ ನೀಡುತ್ತಿದೆ. ವಿಮಾನಯಾನ, ಟ್ಯಾಕ್ಸಿ, ರೆಸ್ಟೋರೆಂಟ್‍ಗಳು ಹಾಗೂ ಹೋಟೆಲ್ ಉದ್ಯಮ ಇದನ್ನು ನೆಚ್ಚಿಕೊಂಡಿವೆ.

ಕೇವಲ ಪುರುಷರು ಮಾತ್ರ ಸೆಕ್ಸ್ ಟೂರಿಸಂ ನೆಪದಲ್ಲಿ ಪ್ರವಾಸ ಮಾಡೋದಲ್ಲ. ಅನೇಕ ಮಹಿಳೆಯರೂ ಲೈಂಗಿಕ ಸುಖಕ್ಕಾಗಿ ಟೂರ್ ಹೋಗುತ್ತಾರೆ. ದಕ್ಷಿಣ ಯೂರೋಪ್, ಜಮೈಕಾ, ಟರ್ಕಿ, ಬ್ರೆಝಿಲ್ ಹೀಗೆ ಅನೇಕ ಸ್ಥಳಗಳಲ್ಲಿ ಮಹಿಳೆಯರಿಗಾಗಿ ‘ಸೆಕ್ಸ್ ಟೂರಿಸಂ’ ನಡೆಯುತ್ತೆ. ಅಮೇರಿಕಾ ಹಾಗೂ ಯೂರೋಪಿಯನ್ ದೇಶಗಳಿಂದ ಜನ ಲೈಂಗಿಕ ಸುಖವನ್ನರಸಿ ಪ್ರವಾಸ ಬರುವುದು ನಡೆದುಕೊಂಡು ಬಂದಿದೆ.

ಆಧುನಿಕತೆ ಎಲ್ಲದಕ್ಕೂ ಮಾರುಕಟ್ಟೆಯ ಚೌಕಟ್ಟು ಹಾಕುತ್ತದೆ. ಅದಕ್ಕೆ ಪುನಾತನ ವೃತ್ತಿಯೂ ಹೊರತಾಗಿಲ್ಲ. ಅದಕ್ಕೆ ಈಗ ತಂತ್ರಜ್ಞಾನದ ನೆರವೂ ಸಿಕ್ಕಿದೆ. ಲೆಕ್ಸ್ ತರದವರು, ದೇಶದ ಗಡಿಗಳನ್ನು ಮೀರಿ ತಮ್ಮ ಬದುಕಿನ ಆಸೆರೆಯನ್ನು ಅರಸುತ್ತಿದ್ದಾರೆ.

(ಲೇಖಕರು ‘ಸರಳ ಜೀವನ’ ವಾಹಿನಿಯಲ್ಲಿ ನಿರೂಪಕರು/ ಕಾರ್ಯಕ್ರಮ ನಿರ್ಮಾಪಕರು)

Top