An unconventional News Portal.

‘ಇದು ದೇವರು ಮನುಷ್ಯನ ಮೇಲೆ ಹೂಡಿದ ಯುದ್ಧ’: ಕೊಲ್ಲಂನಿಂದ ‘ನೇರಪ್ರಸಾರ’!

‘ಇದು ದೇವರು ಮನುಷ್ಯನ ಮೇಲೆ ಹೂಡಿದ ಯುದ್ಧ’: ಕೊಲ್ಲಂನಿಂದ ‘ನೇರಪ್ರಸಾರ’!

(ರವಿವಾರ ನಸುಕಿನ ಜಾವ ಕೇರಳದ ಕೊಲ್ಲಂ ಜಿಲ್ಲೆಯ ದೇವಾಲಯದಲ್ಲಿ ಸಂಭವಿಸಿದ ಘೋರ ದುರಂತ ನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಸಮಯದಲ್ಲಿ, ಕೊಲ್ಲಂನ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ನಮ್ಮ ಪ್ರತಿನಿಧಿ ಶೃತಿ ತೋಟುಪುರಂ ಕಟ್ಟಿಕೊಟ್ಟ ಚಿತ್ರಣ ಇಲ್ಲಿದೆ)

ಕೇರಳದ 14 ಜಿಲ್ಲೆಗಳ ಪೈಕಿ ಕೊಲ್ಲಂಗೆ ವಿಶಿಷ್ಟ ಸ್ಥಾನವಿದೆ. ಭಾರತದ ತುತ್ತತುದಿಯಲ್ಲಿರುವ ತಿರುವನಂತಪುರಂನಿಂದ ಕೊಂಚ ಮೇಲಕ್ಕೆ, ಹೆಚ್ಚು ಕಡಿಮೆ ಒಂದೇ ರೀತಿಯ ಬೌಗೋಳಿಕ ಪರಿಸರವನ್ನು ಹೊಂದಿರುವ ಜಿಲ್ಲೆ ಇದು. ಹೆಚ್ಚು ಕಡಿಮೆ ನಮ್ಮ ಕಡಲತಡಿಯ ಊರು ಮಂಗಳೂರಿನ ಹೋಲಿಕೆ ಇರುವ ಪ್ರದೇಶ ಮತ್ತು ವಾಣಿಜ್ಯ ಪರಿಸರ ಇಲ್ಲಿಯದು. ಇಲ್ಲೊಂದು ಬಂದರಿದೆ. ಪ್ರವಾಸೋದ್ಯಮವನ್ನ ನಂಬಿ ಬದುಕುವ ಕೇರಳದ ಮಟ್ಟಿಗೆ ಕೊಲ್ಲಂ ಹಣ ಹುಟ್ಟುವ ಜಾಗ.

ಇಲ್ಲಿನ ಸುಂದರ ಕಡಲ ಕಿನಾರೆ, ಪಾರ್ಕ್, ಹಿನ್ನೀರು, ಹಿನ್ನೀರಿಗೆ ಬಾಗಿ ನಿಂತ ಬಳುಕುವ ತೆಂಗಿನ ಮರಗಳ ಸಾಲು, ಬೋಟ್ ಹೌಸ್, ಹಾಯಿ ದೋಣಿಗಳು, ವಿಶಿಷ್ಠವಾಗಿರುವ ಹೋಟೆಲ್ಗಳು, ದೀಪಸ್ಥಂಬ, ಅಷ್ಟಮುಡಿ ಕೆರೆ ಹೀಗೆ ಕೊಲ್ಲಂ ತನ್ನೊಳಗೆ ಸೃಷ್ಟಿಸಿಕೊಂಡಿರುವ ಒಂದೊಂದು ಸ್ಥಳಗಳೂ ಭಿನ್ನ ಮತ್ತು ಆಕರ್ಷಕ. ಈ ಎಲ್ಲಾ ಅಪೂರ್ವ ಪ್ರಾಕೃತಿಕ ಸೌಂದರ್ಯದಿಂದಾಗಿ ಕೇರಳದ ಪ್ರವಾಸೋದ್ಯಮ ನಕಾಶೆಯಲ್ಲಿ ಕೊಲ್ಲಂಗೆ ವಿಶಿಷ್ಠ ಸ್ಥಾನ ಪ್ರಾಪ್ತವಾಗಿದೆ. ವರ್ಷಪೂರ್ತಿ ಇಲ್ಲಿ ಲಕ್ಷಾಂತರ ದೇಶ- ವಿದೇಶಗಳ ಪ್ರವಾಸಿಗರು ಬಂದು ನೆಲೆಸುತ್ತಾರೆ. ಹೀಗಾಗಿ, ಇಡೀ ಕೇರಳಕ್ಕೆ ಹೋಲಿಸಿದರೆ, ವಿಚಿತ್ರ ಸಂಕರಗೊಂಡ ಸಂಸ್ಕೃತಿಯೊಂದು ಕೊಲ್ಲಂನಲ್ಲಿ ಕಾಣಸಿಗುತ್ತದೆ.

ಕೊಲ್ಲಂ ದೇವಾಲಯಗಳ ತೊಟ್ಟಿಲು ಕೂಡಾ. ಇಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಆಧ್ಯಾತ್ಮಿಕವಾಗಿ ಈ ಜಾಗಕ್ಕೆ ಅದರದ್ದೇ ಆದ ಮಹತ್ವವಿದೆ. ನೀವು ಮಾತಾ ಅಮೃತಾನಂದಮಯಿ ಹೆಸರು ಕೇಳಿರಬಹುದು. ಅವರ ಜಗತ್ಪ್ರಸಿದ್ದ ಆಶ್ರಮ ಇರುವುದೂ ಇದೇ ಕೊಲ್ಲಂನಲ್ಲಿ. ಇದೇ ಕೊಲ್ಲಂಗೆ ಸೇರಿದ ಒಂದು ಪ್ರದೇಶ ಪುರವೂರ್.

ಪುರವೂರ್ ನೋಡಲು ತುಂಬಾ ಸುಂದರ ಜಾಗ. ಒಂದು ಬದಿಯಲ್ಲಿ ಬೀಚ್ ಇನ್ನೊಂದು ಬದಿಯಲ್ಲಿ ಹಿನ್ನೀರು. ಅದರ ಮಧ್ಯೆ ತುಂಬು ತೆಂಗಿನ ಸಾಲುಗಳು. ಸುಮಾರು 50 ಸಾವಿರ ಜನರಿರುವ ಸಣ್ಣ ಪಟ್ಟಣ. ಇಲ್ಲಿನ ಪುಟ್ಟಿಂಗಳ್ ಮೀನಾಭರಣಿ ಮಹೋಲ್ಲಾಸಂ ದೇವಸ್ಥಾನ ಒಂದು ರೀತಿ ಲ್ಯಾಂಡ್ ಮಾರ್ಕ್ ಇದ್ದಂತೆ.

ಈ ದೇವಸ್ಥಾನದಲ್ಲಿ ನಡೆಯುವ ವಿಶಿಷ್ಠ ಆಚರಣೆಗಳಲ್ಲಿ ಸಿಡುಮದ್ದು ಪ್ರದರ್ಶನವೂ ಒಂದು. ಎಲ್ಲಾ ದೇವಾಲಯಗಳಲ್ಲಿ ಸಿಡಿ ಮದ್ದು ಪ್ರದರ್ಶನ ನಡೆದರೆ ಇಲ್ಲಿ ಸಿಡಿಮದ್ದು ಸ್ಪರ್ಧೆ ನಡೆಯುತ್ತದೆ. ಪ್ರತಿ ವರ್ಷ ಮಲಯಾಳಂನ ಮೀನಂ ಮಾಸದ ಭರಣಿ ನಕ್ಷತ್ರದ ದಿನ ಇಲ್ಲಿ ಹಬ್ಬ ಆರಂಭವಾಗುತ್ತದೆ. ಹಬ್ಬದ ಕೊನೆಯ ದಿನ ನಡೆಯುವುದೇ ಸಿಡಿಮದ್ದು ಸ್ಪರ್ಧೆ. ಸಾಮಾನ್ಯವಾಗಿ ಏಪ್ರಿಲ್  ಅಥವಾ ಮೇ ತಿಂಗಳಿನಲ್ಲಿ ಈ ಹಬ್ಬ ನಡೆಯುತ್ತದೆ. ಬಣ್ಣ ಬಣ್ಣದ ಸಿಡಿಮದ್ದುಗಳು ಆಕಾಶದಲ್ಲಿ ಮೂಡಿಸುವ ಚಿತ್ತಾರ ವೀಕ್ಷಿಸಲು ದೂರ ದೂರದ ಊರುಗಳಿಂದ ಜನ ಸಾಗರವೇ ಈ ದೇವಸ್ಥಾನದತ್ತ ಹರಿದು ಬರುತ್ತದೆ. ನಿನ್ನೆಯೂ ಅದರಂತೆ ದೇವಸ್ಥಾನದತ್ತ 10 ಸಾವಿರಕ್ಕೂ ಅಧಿಕ ಜನ ಬಂದಿದ್ದರು.

ನಿನ್ನೆ ಎಂದಿನಂತೆ ‘ಮಲ್ಸರ ಕಂಬಂ’ ಅಂದರೆ ಸುಡುಮದ್ದು(ಸಿಡಿಮದ್ದು)  ಪ್ರದರ್ಶನಕ್ಕಾಗಿ ದೇವಸ್ಥಾನ ವಿಶೇಷವಾಗಿ ಸಿಂಗಾರಗೊಂಡಿತ್ತು. ತಳಿರು ತೋರಣಗಳು, ವಿಶೇಷ ಹೂವಿನ ಅಲಂಕಾರಗಳನ್ನು ಮಾಡಿದ್ದರು. ಸುತ್ತ ಮುತ್ತಲ ಹತ್ತೂರು ಹಳ್ಳಿಯ ಜನ ಬಣ್ಣ ಬಣ್ಣದ ಬಟ್ಟೆ ತೊಟ್ಟು, ಜಾತ್ರೆಯ ಸಂಭ್ರಮದಲ್ಲಿ ಲಗುಬಗೆಯಿಂದ ದೇವಸ್ಥಾನಕ್ಕೆ ಬಂದಿದ್ದರು. ಇನ್ನೇನು ನಾಲ್ಕು ದಿನ ಕಳೆದರೆ 14 ನೇ ತಾರೀಕು ಕೇರಳಿಗರಿಗೆ ಹೊಸ ವರ್ಷ, ವಿಷು ಹಬ್ಬ. ರಾಜ್ಯಕ್ಕೆ ರಾಜ್ಯವೇ ಹಬ್ಬದ ಸಂಭ್ರಮವನ್ನು ಎದುರುಗೊಳ್ಳುತ್ತಿತ್ತು. ವಿಷು ಹಬ್ಬ ಬಂತೆಂದರೆ ಪ್ರತಿ ಮನೆಯಲ್ಲೂ ತಯಾರಿಗಳು ಆರಂಭವಾಗುತ್ತವೆ. ಅದೇ ಖುಷಿಯನ್ನು ಬೆನ್ನಿಗೆ ಕಟ್ಟಿಕೊಂಡವರಂತೆ ನಿನ್ನೆ ರಾತ್ರಿ ‘ಮಲ್ಸರ ಕುಂಬಂ’ನಲ್ಲಿ ಜನ ಪಾಲ್ಗೊಂಡಿದ್ದರು.

ಅಂದುಕೊಂಡಂತೆ ನಡೆದಿದ್ದರೆ ಇವತ್ತು ಬೆಳಿಗ್ಗೆ ಹೊತ್ತಿಗೆ ಅಲ್ಪಸ್ವಲ್ಪ ದೇವಸ್ಥಾನದ ಸಿಂಗಾರ ಮಾತ್ರ ಬದಲಾಗಬೇಕಾಗಿತ್ತು. ಜಾತ್ರೆಯ ಸಂಭ್ರಮ ಕಳೆದು ಮನೆಗೆ ಹೋದವರು ನಿದ್ರೆಯ ಅಮಲು ಇಳಿಸಲು ಹಾಯಾಗಿ ನಿದ್ರಿಸುತ್ತಿರಬೇಕಾಗಿತ್ತು. ಆದರೆ ಆಗಿದ್ದೇ ಬೇರೆ. ಅಲ್ಲಿ ನಿನ್ನೆ ರಾತ್ರಿ ಏನು ನಡೆಯಿತು ಎನ್ನುವುದಕ್ಕೆ ಇವತ್ತು ದೃಶ್ಯಮಾಧ್ಯಮಗಳ ಪರದೆಯನ್ನು ತುಂಬಿಕೊಂಡಿರುವ ದೃಶ್ಯಗಳೇ ಸಾರಿ ಹೇಳುತ್ತಿವೆ.

ಜನರಿಂದ ತುಂಬಿ ತುಳುಕಬೇಕಾಗಿದ್ದ ದೇವಸ್ಥಾನದ ಆವರಣವೀಗ ಸಾವಿನ ಮನೆ ಸೂತಕವನ್ನು ಹೊದ್ದು ಕುಳಿತಿದೆ. ಅಳಿದುಳಿದ ದೇಹಗಳನ್ನು ಹುಡುಕಾಡುತ್ತಿದ್ದ ಪೊಲೀಸರು, ಆತಂಕವನ್ನು ಹೊದ್ದುಕೊಂಡ ಸ್ಥಳೀಯರು; ದೇವಸ್ಥಾನದ ಸಂಕೀರ್ಣದಲ್ಲಿ ಈಗ ಕಟ್ಟಿಕೊಡಲಾಗದ ಭಾವವೊಂದು ಆವರಸಿಕೊಂಡಿದೆ. ಅಷ್ಟು ವಿಶಾಲ ಹೊರಾಂಗಣದ ಮಧ್ಯದಲ್ಲೊಂದು ಮುರುಕು ಸೈಕಲ್ ಅಪರಿಚಿತನಂತೆ ನಿಂತಿದೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಚಪ್ಪಲಿಗಳು, ನೆಲಕ್ಕೊರಗಿದ ಬೈಕು, ದಾರಿಯಲ್ಲಿ ಚೆಲ್ಲಿದ ರಕ್ತದ ಕಲೆ, ಅಲ್ಲಿ ನೂಕು- ನುಗ್ಗಾಟ, ತಳ್ಳಾಟಗಳ ಸಾಕ್ಷಿಯಂತೆ ಕಣ್ಣಿಗೆ ರಾಚುತ್ತಿದೆ.

ದೂರದಲ್ಲೆಲ್ಲೋ ನಿಂತ ಕೆಂಪು ಬಣ್ಣದ ಅಗ್ನಿಶಾಮಕ ವಾಹನ, ಗಾಳಿಯಲ್ಲಿ ಬೆರೆತು ಹೋಗಿರುವ ಚರ್ಮ ಸುಟ್ಟ ವಾಸನೆ, ಘಟಿಸಿದ ಘೋರ ದುರಂತವನ್ನು ಮೆಲಕು ಹಾಕುತ್ತಿವೆ. ಕಡಲ ಕಿನಾರೆಯ ದೇವಸ್ಥಾನ, ರಾತ್ರಿ ಕಳೆದು ಬೆಳಗಾಗುವಷ್ಟರೊಳಗೆ ಬದಲಾಗಿ ಹೋಗಿದೆ. ಅಲ್ಲಿ ನಿನ್ನೆ ರಾತ್ರಿ ಯಾವ ಪರಿ ಸ್ಫೊಟಕ್ಕೆ ಸುತ್ತ ಮುತ್ತಲ ಸ್ಥಳ ತಲ್ಲಣಗೊಂಡಿದೆ ಎಂಬುದಕ್ಕೆ ದೇವಸ್ಥಾನ ಸೂರು ಕಣ್ಣೆದುರಿಗಿತ್ತು. ಬಿರುಗಾಳಿ ಬಂದು ಹಾರಸಿಕೊಂಡು ಹೋದ ಹಾಗೆ ಸೂರಿನಲ್ಲಿದ್ದ ಹಂಚೆಲ್ಲಾ ಹಾರಿ ಹೋಗಿವೆ. ಅಲ್ಲೊಂದು ಇಲ್ಲೊಂದು ಹಂಚು ಭಗ್ನ ಅವಶೇಷದಂತೆ ನೇತಾಡುತ್ತಿತ್ತು.

ಮುರಿದು ಬಿದ್ದ ಕಾಂಕ್ರೇಟ್ ಕಟ್ಟಡ ಸ್ಪೋಟದ ಭೀಕರತೆಯನ್ನು ಸಾರುತ್ತಿತ್ತು. ಊರಿನ ತುಂಬೆಲ್ಲಾ ಮಡುಗಟ್ಟಿದ ಮೌನ. ಅಲ್ಲಿ ಕೇಳಿಸುವುದು ಇಷ್ಟೇ. ಸತ್ತವರ ಸಮೀಪವರ್ತಿಗಳ ಆಕ್ರಂದನ. ಅದನ್ನೂ ಮೀರಿ ಅವಾಗವಾಗ ಮೊಳಗುವ ಆ್ಯಂಬುಲೆನ್ಸ್ ಹಾಗೂ ವಿಐಪಿ ವಾಹನಗಳ ಸೈರನ್ ಸದ್ದು. ತಮ್ಮ ಮನೆಯವರಿಗೆ, ಬಂಧುಗಳಿಗೆ ಏನು ಆಗಿಲ್ಲ ಎಂದು ಖಾತ್ರಿಗೊಂಡ ಒಂದಷ್ಟು ಜನ ಅಲ್ಲಿ ದೇವಸ್ಥಾನದ ಮುಂಭಾಗ ನೆರದಿದ್ದರು. ಪರಿಹಾರ ಕಾರ್ಯಾಚರಣೆ ಮಾಡುತ್ತಿದ್ದ ಪೊಲೀಸಿನವರ ಜೊತೆ ತಾವೂ ನಿಂತು ನಿನ್ನೆ ನಡೆದಿದ್ದೇನು ಎಂದು ಇದ್ದ ಅವಶೇಷಗಳನ್ನೇ ವಿಶ್ಲೇಷಣೆಗೆ ದೂಡುತ್ತಿದ್ದರು. ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಸ್ಪೋಟಕಗಳ ಭಾರೀ ಕಟ್ಟುಗಳು, ಬುಲ್ಡೋಜರ್ ಅಗೆದು ಬಿಟ್ಟ ಕುಸಿದ ಕಟ್ಟಡದ ಅವಶೇಷ, ಸುಟ್ಟ ಕರಕಲಾದ ಮರದ ತುಂಡುಗಳು ಅವರ ಚರ್ಚೆಯ ವಸ್ತುವಾಗಿದ್ದವು. ಆದರೆ ಆ ಚರ್ಚೆಗಳಲ್ಲಿ ಮಾತುಗಳಿಗಿಂತ ಮೌನವೇ ಹೆಚ್ಚು ಮಾತನಾಡುತ್ತಿತ್ತು.

ಮುಂಜಾನೆಯಿಂದ ಪುರವೂರ್ ರಸ್ತೆಗಳಲ್ಲಿ ಹೆಣಗಳದ್ದೇ ಮೆರವಣಿಗೆ ನಡೆಯಿತು. ಈ ರಸ್ತೆಗಳನ್ನೀಗ ಆ್ಯಂಬುಲೆನ್ಸ್ ಮತ್ತು ಪೊಲೀಸ್ ಜೀಪ್ಗಳು ಆಕ್ರಮಿಸಿಕೊಂಡಿವೆ. ಜನರ ಓಡಾಟವಿಲ್ಲ. ಗಲ್ಲಿಗಳಲ್ಲಿ ಜನರಿಲ್ಲ, ಊರಿಗೆ ಊರೆ ಖಾಲಿ. ಅತ್ತ ಕೊಲ್ಲಂನ ಆಸ್ಪತ್ರೆಗಳ ಮುಂದೆ ಜನಸಾಗರವೇ ಕಾಣಿಸುತ್ತಿದೆ. ಬಿಸಿಲ ಝಳದ ನಡುವೆ ನೋವಿನ ಆಕ್ರಂದನಗಳಿಗೆ ಆಸ್ಪತ್ರೆಯ ಪ್ರತಿ ಗೋಡೆಯೂ ಕಿವಿಯಾಗಿತ್ತಿವೆ.

ಕೊಲ್ಲಂ ಸುತ್ತ ಊರಿನ ಹಿರಿಯರೊಬ್ಬರ ಜತೆ ‘ಸಮಾಚಾರ’ದ ಸುತ್ತಾಟದಲ್ಲಿ ಕಂಡು ಬಂದ ದೃಶ್ಯಗಳ ನಿರೂಪಣೆ ಇದು. ಕೊನೆಗವರು ಹೇಳಿದ್ದು ಇಷ್ಟೆ, “ಇದು ದೇವರು ಮನುಷ್ಯರ ಮೇಲೆ ಹೂಡಿದ್ದ ಯುದ್ಧ ಕಣಮ್ಮ,” ಎಂದು. ನಿಜ, ಅಲ್ಲೀಗ ಯುದ್ಧ ಮುಗಿದ ರಣರಂಗದಲ್ಲಿ ಕಾಣಿಸುವ ದೃಶ್ಯಗಳ ಜತೆ ಸಾಮ್ಯತೆ ಕಾಣಿಸುತ್ತಿದೆ. ಇದರಿಂದ ಹೊರಬರಲು ಕೊಲ್ಲಂಗೆ ಒಂದಷ್ಟು ದಿನಗಳು ಬೇಕಾಗಬಹುದು.

Leave a comment

Top