An unconventional News Portal.

ಸಿಯಾಚಿನ್ To ಸಾಗರ: ಬೆಟ್ಟ ಇಳಿದು ಬಂದ ಯೋಧನನ್ನು ಊರ ಜನ ಮರೆಯಲಿಲ್ಲ!

ಸಿಯಾಚಿನ್ To ಸಾಗರ: ಬೆಟ್ಟ ಇಳಿದು ಬಂದ ಯೋಧನನ್ನು ಊರ ಜನ ಮರೆಯಲಿಲ್ಲ!

ಸಿಯಾಚಿನ್ ಹಾಗೂ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಎಂಬ ಹೆಸರುಗಳ ಸುತ್ತ ರಾಜ್ಯದ ಪ್ರತಿ ಮನೆಯಲ್ಲೂ ಪುಟ್ಟದೊಂದು ಭಾವನಾತ್ಮಕ ಚರ್ಚೆ ನಡೆದಿತ್ತು. ದೇಶಪ್ರೇಮ ಹಾಗೂ ಗಡಿ ಕಾಯುವ ಸೈನಿಕ ಸಂಕಷ್ಟಗಳ ಕುರಿತು ಜನ ಮಿಡಿಯುವಂತಾಗಿತ್ತು. ಎರಡು ತಿಂಗಳ ಹಿಂದೆ; ಫೆಬ್ರವರಿ ಮಧ್ಯಭಾಗದಲ್ಲಿ.

ಭಾರತೀಯ ಸೇನೆ ಹಿಮಾಲಯದ ತಪ್ಪಲಿನಲ್ಲಿ ನಡೆಸಿದ ‘ಆಪರೇಷನ್ ಮೇಘದೂತ್’ ಸಮಯದಲ್ಲಿ ನಡೆದ ನೈಸರ್ಗಿಕ ಅವಘಡದಲ್ಲಿ ರಾಜ್ಯದ ಮೂವರು ಯೋಧರು ಸೇರಿದಂತೆ ಒಟ್ಟು 10 ಜನ ಹುತಾತ್ಮರಾಗಿದ್ದರು. 1984ರಿಂದ ನಡೆದುಕೊಂಡು ಬಂದಿರುವ ಈ ಕಾರ್ಯಾಚರಣೆಯಲ್ಲಿ ಈ ವರ್ಷ ಪಾಲ್ಗೊಂಡವರ ಸಂಖ್ಯೆಯೇ ಸುಮಾರು 800. ಇದರಲ್ಲಿ 19 ಮದ್ರಾಸ್ ರೆಜಿಮೆಂಟಿಗೆ ಸೇರಿದ, ಸಾಗರ ತಾಲೂಕಿನ ಕುಗ್ವೆ ಗ್ರಾಮದ ಸುಭಾಷ್ ಚಂದ್ರ ತೇಜಸ್ವಿ ಕೂಡ ಒಬ್ಬರು.

ಮಾ. 24ರಂದು ಸಿಯಾಚಿನ್ ಇಳಿಯಲು ಶುರುಮಾಡಿದ ತೇಜಸ್ವಿ, ಏ. 8ರಂದು ಬೇಸ್ ಕ್ಯಾಂಪ್ ತಲುಪಿದ್ದರು. ಅಲ್ಲಿ ಎರಡು ದಿನಗಳ ವಿರಾಮದ ನಂತರ ಹೊರಟವರು, ಶನಿವಾರ ತಮ್ಮೂರು ಸಾಗರಕ್ಕೆ ಎರಡು ತಿಂಗಳ ರಜೆಯ ಮೇಲೆ ಬಂದಿಳಿದ್ದಾರೆ. ಸಿಯಾಚಿನ್ ಸುತ್ತ ನಡೆದ ಘಟನೆಯನ್ನು ಮರೆದ ಸಾಗರದ ಜನ, ತೇಜಸ್ವಿ ಅವರಿಗೆ ಹೃದಯಸ್ಪರ್ಶಿ ಸ್ವಾಗತವನ್ನು ಕೋರಿದ್ದಾರೆ.

ಈ ಸಮಯದಲ್ಲಿ ‘ಸಮಾಚಾರ’ದ ಜತೆ ದೂರವಾಣಿ ಮೂಲಕ ಮಾತನಾಡಿದ ಸುಭಾಷ್ ಚಂದ್ರ ತೇಜಸ್ವಿ ತಮ್ಮ ಸಿಯಾಚಿನ್ ಅನುಭವ, ಹನುಮಂತಪ್ಪ ಕೊಪ್ಪದ್ ಎಂಬ ಸ್ನೇಹಿತನನ್ನು ಕಳೆದುಕೊಂಡ ದುಃಖ ಹಾಗೂ ಭಾರತೀಯ ಸೇನೆಯ ಕಾರ್ಯಾಚರಣೆ ಕುರಿತು ವಿವರಗಳನ್ನು ಹಂಚಿಕೊಂಡರು.

ಸಮಾಚಾರ: ಹೇಗಿತ್ತು ಪ್ರಯಾಣ? ಈ ಸಮಯದಲ್ಲಿ ನಿಮಗೆ ತೊಂದರೆ ಕೊಡುತ್ತಿಲ್ಲ ತಾನೆ?

ತೇಜಸ್ವಿ: ಈಗಷ್ಟೆ ಮನೆ ಸೇರಿದೆ. ಪರವಾಗಿಲ್ಲ, ಹೇಳಿ…

ಸಮಾಚಾರ: ಸಿಯಾಚಿನ್ ಪ್ರದೇಶದಲ್ಲಿ ನಿಮ್ಮ ಕಾರ್ಯಾಚರಣೆಯಿಂದ ಶುರು ಮಾಡೋಣ. ಅಲ್ಲಿ ಭಾರತೀಯ ಸೇನೆಯ ಕೆಲಸ ಹೇಗಿರುತ್ತೆ?

ತೇಜಸ್ವಿ: ಹಿಮಾಲಯದ ತಲೆಯ ಮೇಲಿರುವ ಪ್ರದೇಶ ಸಿಯಾಚಿನ್. 1984ಕ್ಕೂ ಮುಂಚೆ ಅಲ್ಲಿಗೆ ಪಾಕಿಸ್ತಾನ ಕೆಲವು ಪರ್ವತಾರೋಹಿಗಳನ್ನು ಕಳಿಸಿತ್ತಂತೆ. ಅದಕ್ಕೂ ಮುಂಚೆ ಅಲ್ಲಿಗೆ ಹವ್ಯಾಸಿ ಪರ್ವತಾರೋಹಿಗಳು ಭೇಟಿ ನೀಡಿದ್ದರು. ಹೀಗಾಗಿ, ಮುಂದೊಂದು ದಿನ ಪಾಕಿಸ್ತಾನ ಆ ಜಾಗವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆಯನ್ನು ಸೇನೆಯ ಹಿರಿಯ ಅಧಿಕಾರಿಗಳು ಗುರುತಿಸಿದರು. ಕರ್ನಲ್ ಕುಮಾರ್ ಎಂಬುವವರ ನೇತೃತ್ವದಲ್ಲಿ ‘ಆಪರೇಷನ್ ಮೇಘದೂತ್’ ಶುರು ಮಾಡಿದರು. ಅದರ ಭಾಗವಾಗಿ ನಾವು ಅಲ್ಲಿಗೆ ಹೋಗಿದ್ದಾಗ ದುರಂತ ನಡೆಯಿತು.

ಸಮಾಚಾರ: ದುರಂತಕ್ಕೂ ಮುನ್ನ, ಯಾವಾಗ ಸಿಯಾಚಿನ್ ಪರ್ವತ ಹತ್ತೋಕೆ ಯಾವಾಗ ಶುರು ಮಾಡಿದ್ದಿರಿ. ಹುತಾತ್ಮ ಯೋಧರ ಜತೆಗಿನ ಒಡನಾಟ?

ತೇಜಸ್ವಿ: 2015ರ ಡಿ. 15ರಂದು ನಾವು ಸಿಯಾಚಿನ್ ಹತ್ತುವ ಕಾರ್ಯಾಚರಣೆ ಶುರು ಮಾಡಿದೆವು. ಹುತಾತ್ಮರಾದ ನಾಗೇಶ್ ನನ್ನ ಜತೆಗೇ ಇದ್ದರು. ಹನುಮಂತಪ್ಪ ನಮಗಿಂತ ಎರಡು ದಿನ ಮುಂಚೆ ಪರ್ವತ ಏರಿದ್ದ. ನಾವೆಲ್ಲಾ ಒಂದೇ ರೆಜಿಮೆಂಟಿಗೆ ಸೇರಿದವರು. ಒಟ್ಟು 800 ಜನ ಈ ಬಾರಿಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೆವು. ಸಿಯಾಚಿನ್ ಮೇಲೆ ನಾವು ಪ್ರತ್ಯೇಕ ಯೂನಿಟ್ಗಳಾಗಿ ಕ್ಯಾಂಪ್ ಹಾಕಿದ್ದೆವು. ನಮ್ಮದು ಆಲ್ಫಾ ಕಂಪನಿ; ಹನುಮಂತಪ್ಪ ಅವರು ನಮಗಿಂತ 20 ಕಿ.ಮೀ ಕೆಳಗೆ ಕ್ಯಾಂಪ್ ಹಾಕಿದ್ದರು. ಅದನ್ನು ಡೆಲ್ಟಾ ಕ್ಯಾಂಪ್ ಎಂದು ಕರೆಯುತ್ತಿದ್ದೆವು. ಈ ಬಾರಿ, ಸಿಯಾಚಿನ್ ಪ್ರದೇಶದಲ್ಲಿ -15ರಿಂದ -68 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಅವತ್ತು ರಾತ್ರಿ ಪ್ರಕೃತಿಯ ಅವಘಡಕ್ಕೆ ಹಿಮದ ಪರ್ವತ ಕುಸಿದು ಡೆಲ್ಟಾ ಕ್ಯಾಂಪ್ ಮೇಲೆ ಬಿತ್ತು. ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡೆ.

ಸಮಾಚಾರ: ದುರಂತ ನಡೆದ ತಕ್ಷಣ ನಿಮ್ಮ ಕ್ಯಾಂಪಿನಲ್ಲಿ ಪ್ರತಿಕ್ರಿಯೆ ಏನಿತ್ತು?

ತೇಜಸ್ವಿ: ಅವಘಡ ನಡೆದು ಹೋಯಿತು ಎಂದು ಗೊತ್ತಾಯಿತು. ತಕ್ಷಣ ಎಲ್ಲಾ ಕ್ಯಾಂಪುಗಳಿಂದ ಹತ್ತತ್ತು ಜನರನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಯಿತು. ಸುಮಾರು 40- 45 ಅಡಿ ಹಿಮದ ಅಡಿಯಲ್ಲಿ ಕ್ಯಾಂಪ್ ಸಿಲುಕಿತ್ತು. ಅದನ್ನು ತೆಗೆಯುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಅದೇ ವೇಳೆ, ಬಹುತೇಕ ಕ್ಯಾಂಪ್ಗಳು ಹೊರ ಜಗತ್ತಿನ ಜತೆ ಸಂಪರ್ಕ ಕಡಿದುಕೊಂಡಿದ್ದವು. ವಾರದ ನಂತರ ಮನೆಯವರಿಗೆ ಉಳಿದವರು ಬದುಕಿದ್ದೇವೆ ಎಂಬ ಸಂದೇಶ ಕಳುಹಿಸಿದೆವು. ಅಷ್ಟೊತ್ತಿನೊಳಗೆ ಹೊರಗೆ ಏನೆಲ್ಲಾ ನಡೆದಿತ್ತುಎಂಬುದು ಗೊತ್ತೇ ಇರಲಿಲ್ಲ.

ಸದ್ಯ ದುರಂತದ ನೆನಪುಗಳನ್ನು ಹಿಂದೆ ಬಿಟ್ಟು ಬಂದಿರುವ ತೇಜಸ್ವಿ ಎರಡು ತಿಂಗಳು ರಜೆಯನ್ನು ಕಳೆಯಲಿದ್ದಾರೆ. “ಅದು ಪ್ರಕೃತಿ ವಿಕೋಪ. ಇಲ್ಲಿಯೂ ಭೂಕಂಪ ಎಲ್ಲಾ ನಡೆಯುತ್ತಲ್ಲ, ಹಾಗೆ. ಯಾರೇನು ಮಾಡಲು ಸಾಧ್ಯ ಹೇಳಿ,” ಎಂಬುದು ಅವರ ಕೊನೆಯ, ತಣ್ಣನೆಯ ಪ್ರತಿಕ್ರಿಯೆ. tejasvi-sagara-siachin2

Top