An unconventional News Portal.

ಸ್ವಿಸ್ ಬ್ಯಾಂಕ್ ಬಿಟ್ಟು ‘ಮ್ಯಾನ್‌ಹ್ಯಾಟನ್’ ಕಡೆ ಮುಖ ಮಾಡಿರುವ ಕರ್ನಾಟಕದ ತೆರಿಗೆ ಕಳ್ಳರು!

ಸ್ವಿಸ್ ಬ್ಯಾಂಕ್ ಬಿಟ್ಟು ‘ಮ್ಯಾನ್‌ಹ್ಯಾಟನ್’ ಕಡೆ ಮುಖ ಮಾಡಿರುವ ಕರ್ನಾಟಕದ ತೆರಿಗೆ ಕಳ್ಳರು!

ಇದು ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ತೆರಿಗೆ ತಪ್ಪಿಸುವ, ಕಪ್ಪು ಹಣವನ್ನು ಮುಚ್ಚಿಡುವ ಪ್ರಯತ್ನವೊಂದರ ಅನಾವರಣ. ಕರ್ನಾಟಕದ ಹಲವು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವ ಕುಳಗಳು ಒಂದೇ ದಿಕ್ಕಿಗೆ ಹೇಗೆ ಓಡುತ್ತಿದ್ದಾರೆ ಎಂಬುದರ ‘ಇನ್ಸೈಟ್ ಸ್ಟೋರಿ’. ಒಂದು ಕಾಲದಲ್ಲಿ ಸ್ವಿಸ್ ಬ್ಯಾಂಕ್, ನಂತರದ ದಿನಗಳಲ್ಲಿ ಕೆರಿಬಿಯನ್ ದ್ವೀಪ ರಾಷ್ಟ್ರಗಳ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಮುಚ್ಚಿಡುತ್ತಾರೆ ಎಂಬುದು ನಮಗೆಲ್ಲಾ ಗೊತ್ತಾಗಿತ್ತು. ಇತ್ತಿಚೆಗಷ್ಟೆ ಹೊರಬಿದ್ದದ್ದ ‘ಪನಾಮ ಪೇಪರ್ಸ್’ ಎಂಬ ಅಂತರಾಷ್ಟ್ರೀಯ ಮಟ್ಟದ ತನಿಖಾ ವರದಿಗಳಲ್ಲಿ ತೆರಿಗೆ ಕಳ್ಳರು ಆರ್ಥಿಕ ವ್ಯವಹಾರಗಳ ಅಂತರಾಳ ಬಹಿರಂಗಗೊಂಡಿತ್ತು.

ಆದರೆ, ಇಂತಹ ತೆರಿಗೆ ಕಳ್ಳತನದ ಮಾದರಿಗಳೀಗ ಹಳತಾಗಿವೆ. ನಮ್ಮ ರಾಜಕಾರಣಿಗಳು ಹಾಗೂ ಉದ್ಯಮಿಗಳು ಈಗ ಅಮೆರಿಕಾದ ನ್ಯೂಯಾರ್ಕ್ ನಗರದ ದಕ್ಷಿಣಕ್ಕಿರುವ ಮ್ಯಾನ್ಹ್ಯಾಟನ್ ಕಡೆಗೆ ಮುಖ ಮಾಡಿದ್ದಾರೆ. ಅಲ್ಲಿನ ಭೂಮಿ ಮೇಲೆ ಹಣ ಹೂಡುತ್ತಿದ್ದಾರೆ. ಈ ಮೂಲಕ ತೆರಿಗೆ ವಿಚಾರದಲ್ಲಿ ಬಾಳಾ ಕಟ್ಟುನಿಟ್ಟು ಎನ್ನಿಸಿಕೊಂಡಿರುವ ಅಮೆರಿಕಾದ ಮೂಗಿನ ಕೆಳಗೇ ಕಪ್ಪು ಹಣವನ್ನು ಬಚ್ಚಿಡುತ್ತಿದ್ದಾರೆ.

ವೆಲ್ ಕಮ್ ಟು ನ್ಯೂ ಟಾಕ್ಸ್ ಹೆವನ್- ಮ್ಯಾನ್ಹ್ಯಾಟನ್!

ಸ್ವಿಸ್ ಬ್ಯಾಂಕ್ ಹಳೆ ಕತೆ:

ಜರ್ಮನಿ ಈ ಹಿಂದೆ ‘ಸ್ವಿಸ್’ ಬ್ಯಾಂಕಿನಲ್ಲಿದ್ದ ತನ್ನ ದೇಶದ ಜನರ ಸಂಪತ್ತನ್ನು ವಶಪಡಿಸಿಕೊಂಡಿತ್ತು. ಹಾಗೂ ಆ ನಂತರ ಹಲವು ದೇಶಗಳು ಕುಳಗಳು ಇಟ್ಟಿರುವ ಕಪ್ಪು ಹಣದ ಮಾಹಿತಿ ಕೋರಿ ಬ್ಯಾಂಕಿಗೆ ಅರ್ಜಿ ಸಲ್ಲಿಕೆಯಾಗಿದ್ದವು. ಈ ಎಲ್ಲಾ ಬೆಳವಣಿಗೆಗಳು ಕಾಳ ಧನಿಕರ ವಲಯದಲ್ಲಿ ಹೊಸ ಮಾರ್ಗದ ಅನ್ವೇಷಣೆ ಶುರುವಾಯಿತು. ಅಂತಹ ಪರ್ಯಾಯ ಕಳ್ಳ ಮಾರ್ಗದ ಹುಡುಕಾಟದಲ್ಲಿ ಸಿಕ್ಕಿರುವುದೇ ಮ್ಯಾನ್ಹ್ಯಾಟನ್ ಅಪಾರ್ಟ್ಮೆಂಟ್ಗಳು.

ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿರುವ ಮ್ಯಾನ್ಹ್ಯಾಟನ್ ಕಾಳಧನಿಕರ ಪಾಲಿಗೆ ಈಗ ಹೊಸ ‘ತೆರಿಗೆ ಸ್ವರ್ಗ’ವಾಗಿ ಬದಲಾಗಿದೆ. ಇಲ್ಲಿನ ಅಪಾರ್ಟ್‌ಮೆಂಟು, ರಿಯಲ್ ಎಸ್ಟೇಟು ವ್ಯವಹಾರಗಳಲ್ಲಿ ಕಳ್ಳ ಹಣ ಭರಪೂರವಾಗಿ ಹರಿಯುತ್ತಿದೆ. “ತೆರಿಗೆ ತಪ್ಪಿಸಲು ಎಲ್ಲಿ ಕಳ್ಳ ದಾರಿಗಳು ಇರುತ್ತವೆಯೋ ಅಲ್ಲಿ ಹಣ ಇಡಲಾಗುತ್ತದೆ,” ಎಂದು ಅಮೆರಿಕಾ ಟ್ಯಾಕ್ಸ್ ಕಾನೂನುಗಳಲ್ಲಿರುವ ಲೋಪಗಳ ಬಗ್ಗೆ ಸೂಚ್ಯವಾಗಿ ಹೇಳುತ್ತಾರೆ ಎಂಐಟಿಯ ಅಕೌಂಟಿಗ್ ಪ್ರೊಫೆಸ್ಸರ್ ಮೈಖೆಲ್ ಹಲೋನ್.

ವಿಶ್ವದ ಬೇರೆಲ್ಲಾ ದೇಶಗಳಿಂದ ತನ್ನ ದೇಶದವರು ಇಟ್ಟಿರುವ ಹಣದ ಮಾಹಿತಿ ಪಡೆಯುವ ಅಮೆರಿಕಾ, ತನ್ನ ದೇಶದೊಳಗೆ ಇಟ್ಟಿರುವ ಕಾಳ ಧನದ ಮಾಹಿತಿಯನ್ನು ನೀಡುವುದಿಲ್ಲ. ಇಲ್ಲಿನ ಕೆಲವು ರಾಜ್ಯಗಳ ಬ್ಯಾಂಕುಗಳಂತೂ ತೆರಿಗೆ ಕಳ್ಳರ ಪಾರಂಪರಿಕ ಬ್ಯಾಂಕುಗಳಿಗಿಂತ ಹೆಚ್ಚು ಗುಪ್ತವಾಗಿ ವರ್ತಿಸುತ್ತಿವೆ.

ಅಮೆರಿಕಾಗೆ ಹಣ ಹರಿದು ಹೋಗುವುದು ಹೇಗೆ? ಅಮೆರಿಕಾದ ಹೆಚ್ಚಿನ ರಾಜ್ಯಗಳಲ್ಲಿ ಅತ್ಯುನ್ನತ ಮುಕ್ತ ಆರ್ಥಿಕ ನೀತಿಯನ್ನು ಪಾಲಿಸುತ್ತಿದ್ದು, ಆರಾಮವಾಗಿ ಯಾರೂ ಬೇಕಾದರೂ ಕಂಪೆನಿ ತೆರೆಯಬಹದು. ಹೀಗೆ ಅಮೆರಿಕಾದಲ್ಲಿ ಕಂಪೆನಿ ತೆರೆದು, ಅದರ ಹೆಸರಿನಲ್ಲಿ ಅಮೆರಿಕಾದೊಳಗೆ ಹಣ ಚಲಾವಣೆಗೆ ನಡೆಸುವ ಜಾಲವೊಂದು ಸೃಷ್ಟಿಯಾಗಿದೆ. ಸದರಿ ಕಂಪನಿಗಳ ಮೂಲಕ ಕಪ್ಪು ಹಣ ನಿರ್ದಿಷ್ಟ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ವಿಶೇಷವಾಗಿ ಮ್ಯಾನ್ಹ್ಯಾಟನ್ ನಗರದ ರಿಯಲ್ ಎಸ್ಟೇಟ್ ಮೇಲೆ.

ಮ್ಯಾನ್‌ಹ್ಯಾಟನ್ ಅಪಾರ್ಟ್‌ಮೆಂಟ್‌

ಈ ‘ಮ್ಯಾನ್‌ಹಟ್ಟನ್‌ ಅಪಾರ್ಟ್‌ಮೆಂಟ್‌’ ದಂಧೆಯ ನಡೆಯುವ ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. “ಮ್ಯಾನ್‌ಹಟ್ಟನ್‌ ಅಮೆರಿಕಾದ ವಾಣಿಜ್ಯ ನಗರಿ ನ್ಯೂಯಾರ್ಕಿನ ಅತೀ ಹೆಚ್ಚು ಜನ ವಾಸಿಸುವ ಪುರಸಭೆ (boroughs). ಇಡೀ ನ್ಯೂಯಾರ್ಕಿನಲ್ಲಿ ಇಂತಹ ಐದು ಪುರಸಭೆಗಳಿವೆ. ಜನ ಹೆಚ್ಚಾಗಿ ವಾಸಿಸುವ ಕಾರಣಕ್ಕೆ ಇಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಗರಿಗೆದರಿದೆ. ತರಹೇವಾರಿ ಐಶಾರಾಮಿ ಅಪಾರ್ಟ್‌ಮೆಂಟ್‌ಗಳು, ಪೆಂಟ್ ಹೌಸ್ಗಳು ಇಲ್ಲಿ ತಲೆ ಎತ್ತಿವೆ. ಇದರ ಮಾಲೀಕರು ಯಾರು ಎಂದು ಹುಡುಕಿಕೊಂಡು ಹೊರಟರೆ ಕರ್ನಾಟಕ ಮಾಜಿ ಸಚಿವರು, ಹಾಲಿ ಅಧಿಕಾರದಲ್ಲಿರುವವರು ಹಾಗೂ ಕೆಲವು ಸ್ಥಳೀಯ ಉದ್ಯಮಿಗಳ ಕುಟುಂಬದವರ ಹೆಸರುಗಳು ಮುನ್ನೆಲೆ ಬರುತ್ತವೆ.

ಬೆಂಗಳೂರು ಮೂಲದ ರಾಜಕಾರಣಿಯೊಬ್ಬರ ಮಗಳ ಹೆಸರಿನಲ್ಲಿ ಸುಮಾರು ಐದು ಕೋಟಿ ರೂಪಾಯಿಗಳ ಅಪಾರ್ಟ್ಮೆಂಟ್ ಒಂದನ್ನು ಇಲ್ಲಿ ಖರೀದಿಸಲಾಗಿದೆ. ಚೈನಾ ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದರ ಮೂಲಕ ಇವರು ಪೆಂಟ್ ಹೌಸ್ವೊಂದನ್ನು ನಾಲ್ಕು ವರ್ಷಗಳ ಹಿಂದಷ್ಟೆ ಸ್ವಯಾರ್ಜಿತ ಮಾಡಿಕೊಂಡಿದ್ದಾರೆ. ಇಂತಹ ಹಲವರಿಗೆ ಕಪ್ಪು ಹಣವನ್ನು ಹೂಡಿಕೆ ಮಾಡಲು ಇಲ್ಲಿ ಬ್ರೋಕರುಗಳು, ಅವರಿಗೆ ಸಹಾಯ ಮಾಡಲು ವಕೀಲರು, ಸಲಹೆ ನೀಡಲು ಸಲಹೆಗಾರರು ಹೀಗೆ ಎಲ್ಲರೂ ಸಿದ್ದವಾಗಿ ನಿಂತಿದ್ದಾರೆ. ನ್ಯೂಯಾರ್ಕಿನಲ್ಲಿ ವ್ಯವಸ್ಥಿತ ಜಾಲವೊಂದು ಈ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತದೆ.

“ಮ್ಯಾನ್‌ಹ್ಯಾಟನ್ನಲ್ಲಿ ಐಶಾರಾಮಿ ಅಪಾರ್ಟ್‌ಮೆಂಟುಗಳನ್ನು ಖರೀದಿಸಿದ ಕರ್ನಾಟಕದ ಮೂಲದ ಹಲವರು ಖಾಲಿ ಬಿಟ್ಟಿದ್ದಾರೆ,” ಎಂದು ನಂಬಲಾರ್ಹ ಮೂಲಗಳು ಅಮೆರಿಕಾದಿಂದ ‘ಸಮಾಚಾರ’ಕ್ಕೆ ಖಚಿತಪಡಿಸಿವೆ.

ಈ ಹಿಂದೆ ತನಿಖಾ ವರದಿ ಪ್ರಕಟಿಸಿದ್ದ ‘ನ್ಯೂಯಾರ್ಕ್ ಮ್ಯಾಗಜಿನ್’ ಮತ್ತು ‘ಇಂಟರ್ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ಐಸಿಐಜೆ)’ ತನ್ನ ತನಿಖಾ ವರದಿಯಲ್ಲಿ ಹೇಗೆ ವಿದೇಶಿ ಕಾಳ ಧನಿಕರು ಅಮೆಕಾದ ರಿಯಲ್ ಎಸ್ಟೇಟಿನಲ್ಲಿ ಹೂಡಿಕೆ ಮಾಡುತ್ತಾರೆ ಎಂಬುದನ್ನು ದಾಖಲೆ ಸಮೇತ ಇಂಚಿಂಚಾಗಿ ವಿವರಿಸಿತ್ತು. ಅದರಲ್ಲಿ ಹಣ ಚಲಾವಣೆಗಾಗಿ ಶೆಲ್ ಕಂಪೆನಿಗಳನ್ನು ಸೃಷ್ಟಿಸುವ ತಂತ್ರ ಉಪಯೋಗಿಸಲಾಗುತ್ತಿದೆ ಎಂದು ಹೇಳಲಾಗಿತ್ತು.

ಆ ಸಂದರ್ಭ ವರದಿ ಮಾಡಿದ್ದ ‘ನ್ಯೂಯಾರ್ಕ್ ಮ್ಯಾಗಜಿನ್’ ನಗರದ ಶೇಕಡಾ 30 ಅಪಾರ್ಟ್‌ಮೆಂಟುಗಳು ವಿದೇಶಿಯರ ಕೈಯಲ್ಲಿವೆ ಎಂದಿತ್ತು. ತನ್ನ ವರದಿಯಲ್ಲಿ ನ್ಯೂಯಾರ್ಕಿನಲ್ಲೇ ಅಪಾರ್ಟ್‌ಮೆಂಟು ಕೊಳ್ಳುವುದಕ್ಕೆ ಯಾಕೆ ಕಾಳ ಧನಿಕರು ಮುಂದಾಗುತ್ತಾರೆ ಎಂಬುದಕ್ಕೆ ಅದು ಒಂದಷ್ಟು ಕಾರಣಗಳನ್ನು ಪಟ್ಟಿ ಮಾಡಿತ್ತು.

  1. ರಿಯಲ್ ಎಸ್ಟೇಟ್ ವ್ಯವಹಾರಗಳು ಹೆಚ್ಚಿನವು ತೆರೆಮರೆಯಲ್ಲೇ ನಡೆಯುತ್ತವೆ. (ಬೆಂಗಳೂರು ಸೇರದಂತೆ ವಿಶ್ವದಾದ್ಯಂತ ಈ ವ್ಯವಹಾರ ನಡೆಯುವುದೇ ಹೀಗೆ!). ಇದಕ್ಕೆ ಅಮೆರಿಕಾ ಕಾನೂನಿನಲ್ಲಿರುವ ಲೋಪದೋಷಗಳೇ ಕಾರಣ ಎಂದು ವರದಿ ಹೇಳಿತ್ತು. ಇನ್ನೊಂದು ಕಡೆ ಹೆಚ್ಚಿನ ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಹೂಡಿಕೆ ಮಾಡಲು ಬೇರೆ ವ್ಯವಹಾರಗಳು ಇರುವುದರಿಂದ ಗ್ರಾಹಕರ ಕೈಯಿಂದ ನೇರ ಹಣವನ್ನು ಪಡದು ಅಲ್ಲಿ ಹೂಡಿಕೆ ಮಾಡುತ್ತಾರೆ. ಹೀಗೆ ಮೂಲವನ್ನು ಮುಚ್ಚಿಡುತ್ತಾರೆ.
  2. ಇಲ್ಲಿನ ಲಾಯರುಗಳೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಅಸಲಿಗೆ ಅವರೇ ಕೆಲವು ಡೀಲ್ಗಳಲ್ಲಿ ಸೇರಿಕೊಂಡಿದ್ದಾರೆ ಎಂದು ಅದು ವರದಿಯಲ್ಲಿ ಆಪಾದಿಸಿತ್ತು.
  3. ಎಲ್ಲಾ ಹೂಡಿಕೆಗಳಿಗಿಂತ ರಿಯಲ್ ಎಸ್ಟೇಟ್ ಹೂಡಿಕೆ ಸ್ಥಿರತೆಯಲ್ಲಿರುವ ಹೂಡಿಕೆ ಎಂದು ಅದು ಹೂಡಿಕೆ ಮಾಡಲು ಇನ್ನೊಂದು ಪ್ರಮುಖ ಕಾರಣ ಎನ್ನುವುದು ಮ್ಯಾಗಜಿನ್ ಅಭಿಪ್ರಾಯ.
  4. ಲಂಡನ್, ಹಾಂಕಾಂಗ್ನಂತ ನಗರಗಳ ರಿಯಲ್ ಎಸ್ಟೇಟ್ ಬೆಲೆಯಲ್ಲಿ ನ್ಯೂಯಾರ್ಕಿನಲ್ಲಿ ಅದರ ಎರಡು ಪಟ್ಟು ಜಾಗ ಖರೀದಿಸಬಹುದು. ಇದೇ ದರ್ಜೆಯ ಉಳಿದ ನಗರಗಳಿಗೆ ಹೋಲಿಸಿದರೆ ನ್ಯೂಯಾರ್ಕ್ನಲ್ಲಿ ಅಪಾರ್ಟ್ಮೆಂಟ್ ಬೆಲೆಗಳೆಲ್ಲಾ ತೀರಾ ಕಡಿಮೆ.
  5. ಇನ್ನೊಂದು ಪ್ರಮುಖ ಕಾರಣ ನ್ಯೂಯಾರ್ಕ್ ನಿದ್ರಿಸದ ನಗರ. ಇದು ಶ್ರೀಮಂತರಿಗೆ ಹೆಚ್ಚು ಇಷ್ಟವಾಗುವ ಕಾರಣಕ್ಕೆ ಇಲ್ಲಿ ಹಣ ಹೂಡುತ್ತಾರೆ ಎಂದು ‘ನ್ಯೂಯಾರ್ಕ್ ಮ್ಯಾಗಜಿನ್’ ತನ್ನ ತನಿಖಾ ವರದಿಯಲ್ಲಿ ಹೇಳಿತ್ತು.

ಅವತ್ತು ನ್ಯೂಯಾರ್ಕ್ ಮ್ಯಾಗಜಿನ್ ಮತ್ತು ಐಸಿಐಜೆ ದೊಡ್ಡ ದೊಡ್ಡ ರಾಜಕಾರಣಿಗಳ ಕಳ್ಳ ವ್ಯವಹಾರಗಳನ್ನು ಬಯಲಿಗೆಳೆದಿತ್ತು. ಆದರೆ ಅದರಲ್ಲಿ ಕರ್ನಾಟಕದ ರಾಜಕಾರಣಿಗಳ ಹೆಸರು ಹೊರ ಬಂದಿರಲಿಲ್ಲ. ಇವತ್ತು ಅದೇ ವರದಿಗಳ ಜಾಡು ಹಿಡಿದುಕೊಂಡು ಹೊರಟರೆ ಕರ್ನಾಟಕ ಮೂಲದ ಹಲವು ಹೆಸರುಗಳು ಪಟ್ಟಿಯಲ್ಲಿ ಎದ್ದು ಕಾಣಿಸುತ್ತವೆ.

Photo courtesy: Click Here.

Leave a comment

Top