An unconventional News Portal.

‘ಕಾಶ್ಮೀರ ಸಂಘರ್ಷ’: ವಿಫಲವಾದ ಸರ್ವಪಕ್ಷ ನಿಯೋಗದ ಮಾತುಕತೆ ಯತ್ನ; ಉಪಯೋಗಕ್ಕೆ ಬಾರದ ‘2010 ಸೂತ್ರ’

‘ಕಾಶ್ಮೀರ ಸಂಘರ್ಷ’: ವಿಫಲವಾದ ಸರ್ವಪಕ್ಷ ನಿಯೋಗದ ಮಾತುಕತೆ ಯತ್ನ; ಉಪಯೋಗಕ್ಕೆ ಬಾರದ ‘2010 ಸೂತ್ರ’

ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸದ್ಯಕ್ಕೆ ಕಾಶ್ಮೀರ ಪ್ರತ್ಯೇಕತಾವಾದಿಗಳ ಜೊತೆಗಿನ ಮಾತುಕತೆ ವಿಫಲವಾಗಿದೆ.

ಕಾಶ್ಮೀರ ಸಂಘರ್ಷಕ್ಕೆ 2010ರ ಸೂತ್ರದಂತೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಭಾನುವಾರ ಇಡೀ ದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸರ್ವ ಪಕ್ಷ ನಿಯೋಗ ನಡೆಸಿದ ಯತ್ನ ಫಲ ನೀಡಲಿಲ್ಲ.

ಈ ಹಿಂದೆಯೇ ನಿರ್ಧರಿಸಿದಂತೆ ರಾಜನಾಥ್ ಸಿಂಗ್ ನೇತೃತ್ವದ 20 ಪಕ್ಷಗಳ 30 ಜನರ ಸರ್ವ ಪಕ್ಷ ನಿಯೋಗ ಭಾನುವಾರ ಮುಂಜಾನೆ ಕಾಶ್ಮೀರದಲ್ಲಿ ಬಂದಿಳಿದಿದೆ. ಇವರನ್ನು ತಂಡಗಳಾಗಿ ವಿಭಜನೆ ಮಾಡಿ ಪ್ರತ್ಯೇಕತಾವಾದಿಗಳಾದ ಹುರಿಯತ್ ನಾಯಕರಾದ ಸೈಯದ್ ಅಲಿ ಶಾ ಗಿಲಾನಿ, ಮಿರ್ವಾಜ್ ಉಮರ್ ಫಾರೂಖ್ ಮತ್ತು ‘ಜಮ್ಮು ಆ್ಯಂಡ್ ಕಾಶ್ಮೀರ ಲಿಬರೇಷನ್ ಫ್ರಂಟ್’ (ಜೆಕೆಎಲ್ಎಫ್) ನ ಯಾಸೀನ್ ಮಲಿಕ್ ಸೇರಿದಂತೆ ಇತರ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗುವ ಪ್ಲಾನ್ ಸಿದ್ಧಪಡಿಸಿಕೊಳ್ಳಲಾಗಿತ್ತು.

ಇವರಲ್ಲಿ ಡಿ ರಾಜ, ಯೆಚೂರಿ, ಜಯಪ್ರಕಾಶ್ ಯಾದವ್, ಮತ್ತು ಶರದ್ ಯಾದವ್ ತಂಡ ಸೈಯದ್ ಅಲಿ ಶಾ ಗಿಲಾನಿಯನ್ಜು ಸಂಜೆ ವೇಳೆಗೆ ಭೇಟಿಯಾಗುವ ಪ್ರಯತ್ನ ನಡೆಸಿತು. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಗೃಹ ಬಂಧನದಲ್ಲಿರುವ ಗಿಲಾನಿಯ ಶ್ರೀನಗರ ಹೈದರ್ಪುರ ನಿವಾಸಕ್ಕೆ ನಿಯೋಗ ತೆರಳಿತಾದರೂ ಮಾತನಾಡಲು ಗಿಲಾನಿ ನಿರಾಕರಿಸಿದರು. ಮನೆ ಹೊರಗೆ ತೀವ್ರ ಪ್ರತಿಭಟನೆಗಳು ಹಾಗೂ ಜನರ ತೀವ್ರ ಆಕ್ರೋಷದ ಘೋಷಣೆಗಳನ್ನು ಕೇಳಿಸಿಕೊಂಡು ತಂಡ ಬರಿಗೈಯಲ್ಲಿ ವಾಪಸ್ ಬರಬೇಕಾಯಿತು.

ಮತ್ತೊಂದು ತಂಡ ಸೇನೆಯ ಹುಮಾಮ ಶಿಬಿರಲ್ಲಿ ಬಂಧನದಲ್ಲಿರುವ ಜೆಕೆಎಲ್ಎಫ್ ನಾಯಕ ಯಾಸೀನ್ ಮಲಿಕ್ರನ್ನು ಭೇಟಿಯಾಗಿದೆ. ಮಿಲಕ್ ತಾವು ನವದೆಹಲಿಗೆ ಬಂದಾಗ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಚೆಶ್ಮಾಶಾಹಿ ಸಬ್ ಜೈಲಿನಲ್ಲಿ ಬಂಧನದಲ್ಲಿರುವ ಇನ್ನೊಬ್ಬ ನಾಯಕ ಮಿರ್ವಾಜ್ ಉಮರ್ ಫಾರೂಖ್ ಅಸಾದುದ್ದೀನ್ ಓವೈಸಿ ಜೊತೆ ಮಾತನಾಡಲು ನಿರಾಕರಿಸಿದರು. “ಪ್ರಮುಖ ಮೂವರು ನಾಯಕರನ್ನೂ (ಗಿಲಾನಿ, ಮಲಿಕ್, ಮಿರ್ವಾಜ್) ಒಟ್ಟಿಗೆ ಕರೆದು ಅಧಿಕೃತವಾಗಿ ಮಾತುಕತೆ ನಡೆಸಲು ಅವರು (ಮಿರ್ವಾಜ್) ಇಚ್ಚಿಸಿದ್ದಾರೆ.  ಈ ರೀತಿಯ ಮಾತುಕತೆಯಿಂದ ಏನುಪಯೋಗ?” ಎಂದು ಮಿರ್ವಾಜ್ ಸಹಾಯಕ ಹೇಳಿಕೆ ನೀಡಿದ್ದಾರೆ. ಹೀಗಿದ್ದೂ ಶರದ್ ಯಾದವ್ ಜೊತೆ ಮಾತನಾಡಿರುವ ಮಿರ್ವಾಜ್, ತಾವು ದೆಹಲಿಗೆ ಮಾತುಕತೆಗೆ ಬರುವುದಾಗಿ ಸುಳಿವು ನೀಡಿದ್ದಾರೆ.

ಇನ್ನೊಂದು ತಂಡ ಮಾಜಿ ಹುರಿಯತ್ ನಾಯಕ ಅಬ್ದುಲ್ ಘನಿಯನ್ನು ಭೇಟಿಯಾಯಿತು. ತಂಡವನ್ನು ಘನಿ ಬರಮಾಡಿಕೊಂಡರಾದರೂ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ.

ಮಾತುಕತೆಗಾಗಿ ಕಾಶ್ಮೀರ ಕಣಿವೆಗೆ ರಾಜನಾಥ್ ಸಿಂಗ್ ನೇತೃತ್ವದ ತಂಡ ಬಂದಿಳಿಯುತ್ತಿದ್ದಂತೆ ಭಾನುವಾರ ಬೆಳಿಗ್ಗೆ ಪ್ರತ್ಯೇಕತಾವಾದಿ ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿ “ಜಮ್ಮು ಮತ್ತು ಕಾಶ್ಮಿರ ಕಣಿವೆಯಲ್ಲಿ ಸ್ವ ನಿರ್ಧಾರ ತೆಗೆದುಕೊಳ್ಳುವುದು ಜನರ ಹಕ್ಕು. ಇಂಥಹ ಪ್ರಮುಖ ವಿಚಾರಗಳನ್ನೇ ಬದಿಗೊತ್ತಿ, ಪಾರದರ್ಶಕ ಅಜೆಂಡಾ ಇರುವ ಮಾತುಕತೆಗಳಲ್ಲಿ ಚರ್ಚಿಸಲು ಸಾಧ್ಯವಿಲ್ಲ,” ಎಂದು ಹೇಳಿದ್ದರು.

ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಪ್ರತ್ಯೇಕತಾವಾದಿ ನಾಯಕರಿಗೆ ಸರ್ವಪಕ್ಷ ನಿಯೋಗದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವಂತೆ ಆಹ್ವಾನಿಸಿದ್ದರು. ಪ್ರತ್ಯೇಕತಾವಾದಿಗಳನ್ನು ಮಾತುಕತೆಗೆ ಆಹ್ವಾನಿಸಿ ಬರೆದ ಪತ್ರದಲ್ಲಿ ಆಕೆ, “ಜನರು ಬೀದಿಗೆ ಬಂದು ‘ಆಝಾದಿ’ ಘೋಷಣೆ ಕೂಗುವುದು ಕೇಳಿಸಿಕೊಳ್ಳಬೇಕಾದವರಿಗೆ ಮತ್ತು ಗೋಡೆಗಳಲ್ಲಿ ಬರೆಯುವುದು, ಭಿತ್ತಿ ಪತ್ರ ಪ್ರದರ್ಶಿಸುವುದು ಯಾರು ಇದನ್ನೆಲ್ಲಾ ನೋಡಬೇಕೋ ಅವರರಿಗಾಗಿ; ಇದು ಎಲ್ಲರಿಗೂ ಗೊತ್ತು. ಆದರೆ ದೆಹಲಿಯಲ್ಲಿ ಕೂತ ಅಧಿಪತಿಗಳು ಮತ್ತು ಇದರ ಹಿಂದೆ ಕೈ ಜೋಡಿಸಿರುವವರು ತಮ್ಮ ಕೊಳಕು ಉದ್ದೇಶಗಳಿಂದ ಇವತ್ತು ಜನರನ್ನು ಮೂಗರು, ಕುರುಡರನ್ನಾಗಿ ಮಾಡಿದ್ದಾರೆ,” ಎಂದು ಹೇಳಿದ್ದರು.

ಆದರೆ ಮುಫ್ತಿ ಹೇಳಿಕೆಯನ್ನು ಟೀಕಿಸಿರುವ ಪ್ರತ್ಯೇಕತಾವಾದಿಗಳು, “ಆಕೆಯ ಮನಸ್ಥಿತಿಯ ರೋಗ ಹೊಸದೊಂದು ಕೆಳ ಮಟ್ಟವನ್ನು ಮುಟ್ಟಿದೆ. ಆಕೆ ಇತ್ತೀಚೆಗೆ ಭಾರತದ ದೌರ್ಜನ್ಯವನ್ನು ಸಮರ್ಥಿಸಿ ಮಾತನಾಡಿ, ಶಿಬಿರಗಳಿಗೆ ತೆರಳುವ ಯುವಕರು ಹಾಲು ಮತ್ತು ಬ್ರೆಡ್ಡಿನೊಂದಿಗೆ ತೆರಳುವುದಿಲ್ಲ ಎಂದು ಹೇಳಿದ್ದರು. ಇದು ಆಕೆಯ ದೆಹಲಿ ಬಾಸ್ಗಳಿಗೂ ನಾಚಿಕೆ ಉಂಟು ಮಾಡಿತ್ತು. ಜನರು ಉಗ್ರರಾಗಿದ್ದರೆ ಸೇನೆಯನ್ನು ಯಾವತ್ತೂ ಕಲ್ಲಿನಿಂದ ಎದುರಿಸುತ್ತಿರಲಿಲ್ಲ ಎಂಬುದನ್ನು ಅವರು ಮರೆಯಬಾರದು,” ಎಂದುದಾಗಿ ಹೇಳಿದ್ದಾರೆ.

ಇನ್ನು ಭೇಟಿ ವಿಫಲವಾಗಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಸೀತರಾಮ್ ಯೆಚೂರಿ “ತಮ್ಮ (ಸಿಪಿಐಎಂ) ಪಕ್ಷ ಸರಕಾರ ನಿರ್ಧರಿಸಿದ ನಿರ್ಣಯಗಳನ್ನು ಬಿಟ್ಟು ಪ್ರತ್ಯೇಕತಾವಾದಿ ನಾಯಕರನ್ನು ಭೇಟಿಯಾಗಲು ಇಚ್ಚಿಸುತ್ತದೆ,” ಎಂದಿದ್ದಾರೆ. ಅಲ್ಲದೇ “ನಿಯೋಗದಲ್ಲಿರುವ ಕೆಲವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಲೂ ಇಷ್ಟಪಡುತ್ತದೆ,” ಎಂದು ಹೇಳಿದ್ದಾರೆ.

ಆದರೆ ಈ ಸರ್ವಪಕ್ಷ ನಿಯೋಗದಿಂದ ಏನಾದರೂ ಆಗಿ ಬಿಡುತ್ತದೆ ಎಂಬ ನಂಬಿಕೆ ತಮಗೇನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಹೇಳಿದ್ದಾರೆ. “ಮಾತುಕತೆಗೆ ಬರುವವರಿಗೆ ಈ ಹಿಂದೆ ನಡೆಸಿದ ಪ್ರಯತ್ನಗಳು ಬಗ್ಗೆ ಸರಿಯಾದ ಮಾಹಿತಿಗಳ ಕೊರತೆ,” ಇದಕ್ಕೆ ಕಾರಣ ಎಂದು ಅವರು ದೂರಿದ್ದಾರೆ.

ಮುಖ್ಯಮಂತ್ರಿ ಮೆಹಾಬೂಬಾರನ್ನು ಟೀಕಿಸಿರುವ ಅಬ್ದುಲ್ಲಾ, ಆಕೆಗೆ ತಾವು ಆಡಳಿತ ಪಕ್ಷದಲ್ಲಿದ್ದೇವೋ ವಿರೋಧ ಪಕ್ಷದಲ್ಲಿದ್ದೇವೋ ಎನ್ನುವ ಸಂಶಯವಿದೆ ಎಂದು ಕಿಡಿಕಾರಿದ್ದಾರೆ. ಕಾಶ್ಮೀರ ರಾಜಕೀಯ ಸಮಸ್ಯೆಯಾಗಿದ್ದು ರಾಜಕೀಯ ಮಾರ್ಗದಲ್ಲೇ ಇದನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಒಂದೆಡೆ ಮಾತುಕತೆಗಳು ಚಾಲ್ತಿಯಲ್ಲಿದ್ದರೆ ಇತ್ತ ಕಾಶ್ಮೀರ ಕಣಿವೆಯಲ್ಲಿ ಸಂಘರ್ಷ ಮಾತ್ರ ನಿಲ್ಲುತ್ತಿಲ್ಲ. ಜುಲೈ 8ರಂದು ಬುರ್ಹಾನ್ ವನಿ ಸಾವಿನ ನಂತರ ಹುಟ್ಟಿಕೊಂಡ ಸಂಘರ್ಷದಲ್ಲಿ 57ನೇ ದಿನದಂತ್ಯಕ್ಕೆ ಸಾವನ್ನಪ್ಪಿದವರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.

ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್

Leave a comment

Top